#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

India Post Recruitment 2025: ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್‌; ಅಂಚೆ ಇಲಾಖೆಯ 21,413 ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿದವರು ಅಪ್ಲೈ ಮಾಡಿ

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ನ್ಯೂಸ್‌ ಹೊರ ಬಿದ್ದಿದ್ದು, ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಬರೋಬ್ಬರಿ 21,413 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮೀಣ ಡಕ್‌ ಸೇವಕ್‌ ಬಿಪಿಎ/ಎಬಿಪಿಎಂ ಹುದ್ದೆ ಇದಾಗಿದ್ದು, 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮಾ. 3.

ಅಂಚೆ ಇಲಾಖೆಯ 21,413 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

ಸಾಂದರ್ಭಿಕ ಚಿತ್ರ.

Profile Ramesh B Feb 11, 2025 3:52 PM

ಬೆಂಗಳೂರು: ಸರ್ಕಾರಿ ಉದ್ಯೋಗ ಹೊಂದಬೇಕು ಎನ್ನುವವರಿಗೆ ಅಂಚೆ ಇಲಾಖೆ ಭರ್ಜರಿ ಗುಡ್‌ನ್ಯೂಸ್‌ ನೀಡಿದೆ. ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 21,413 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ (India Post Recruitment 2025). ಗ್ರಾಮೀಣ ಡಕ್‌ ಸೇವಕ್‌ (Gramin Dak Sevak) ಬಿಪಿಎ/ಎಬಿಪಿಎಂ ಹುದ್ದೆ ಇದಾಗಿದ್ದು, 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರು. ಕರ್ನಾಟಕದಲ್ಲಿ 1,135 ಹುದ್ದೆಗಳಿವೆ. ಅಭ್ಯರ್ಥಿಗಳು ಯಾವುದೇ ಪರೀಕ್ಷೆ ಬರೆಯಬೇಕಾಗಿಲ್ಲ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮಾ. 3 (Job Guide).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಗ್ರಾಮೀಣ ಡಕ್‌ ಸೇವಕ್‌ (ಬ್ರ್ಯಾಂಚ್‌ ಪೋಸ್ಟ್‌ಮಾಸ್ಟರ್‌) ಮತ್ತು ಗ್ರಾಮೀಣ ಡಕ್‌ ಸೇವಕ್‌ (ಅಸಿಸ್ಟಂಟ್‌ ಬ್ರ್ಯಾಂಚ್‌ ಪೋಸ್ಟ್‌ಮಾಸ್ಟರ್‌/ಡಕ್‌ ಸೇವಕ್‌) ಹುದ್ದೆ ಇದಾಗಿದ್ದು, ದೇಶದ ಯಾವುದೇ ಅಂಗೀಕೃತ ಶಿಕ್ಷಣ ಮಂಡಳಿ/ ವಿಶ್ವವಿದ್ಯಾನಿಲಯದಿಂದ 10ನೇ ತರಗತಿ ತೇರ್ಗಡೆಯಾದವರು, ಕಂಪ್ಯೂಟ್‌ ಜ್ಞಾನ ಹೊಂದಿದವರು ಅರ್ಜಿ ಸಲ್ಲಿಸಬಹುದು. ಜತೆಗೆ ಸೈಕಲ್‌ ಓಡಿಸಲು ತಿಳಿದಿರಬೇಕು.

ವಯೋಮಿತಿ

ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 40 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿ/ಮಹಿಳಾ/ತೃತೀಯ ಲಿಂಗಿ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಉಳಿದೆಲ್ಲ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ 100 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಮೆರಿಟ್‌ ಲಿಸ್ಟ್‌, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಆಯ್ಕೆಯಾದ ಗ್ರಾಮೀಣ ಡಕ್‌ ಸೇವಕ್‌ (ಬ್ರ್ಯಾಂಚ್‌ ಪೋಸ್ಟ್‌ಮಾಸ್ಟರ್‌) ಹುದ್ದೆಗೆ 12,000 ರೂ. - 29,380 ರೂ. ಮತ್ತು ಗ್ರಾಮೀಣ ಡಕ್‌ ಸೇವಕ್‌ (ಅಸಿಸ್ಟಂಟ್‌ ಬ್ರ್ಯಾಂಚ್‌ ಪೋಸ್ಟ್‌ಮಾಸ್ಟರ್‌/ಡಕ್‌ ಸೇವಕ್‌) ಹುದ್ದೆಗೆ 10,000 ರೂ.-24,470 ರೂ. ಮಾಸಿಕ ವೇತನ ದೊರೆಯಲಿದೆ.

India Post Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಈ ಸುದ್ದಿಯನ್ನೂ ಓದಿ: Job Guide: ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಲಿಮಿಟೆಡ್‌ನಲ್ಲಿದೆ 246 ಹುದ್ದೆ; ಹೀಗೆ ಅಪ್ಲೈ ಮಾಡಿ

ಅರ್ಜಿ ಸಲ್ಲಿಸುವ ವಿಧಾನ

* ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ
(https://indiapostgdsonline.gov.in/)

* ಹೆಸರು ನೋಂದಾಯಿಸಿ.

* ನೋಂದಣಿ ಸಂಖ್ಯೆ ನಮೂದಿಸಿ ಲಾಗಿನ್‌ ಆಗಿ.

* ಈಗ ಕಂಡುಬರುವ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.

* ಅಗತ್ಯ ಡಾಕ್ಯುಮೆಂಟ್‌ ಅಪ್‌ಲೋಡ್‌ ಮಾಡಿ.

* ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).

* ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.

* ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.

ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್‌ ವಿಳಾಸ: indiapostgdsonline.gov.inಗೆ ಭೇಟಿ ನೀಡಿ.