ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SSLC Exam 2 Result 2025: ಒಂದು ಅಂಕಕ್ಕಾಗಿ ಮತ್ತೊಮ್ಮೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಟಾಪರ್‌ ಆದ ಶಿವಮೊಗ್ಗದ ವಿದ್ಯಾರ್ಥಿನಿ!

Shivamogga News: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ವಿಜ್ಞಾನ ವಿಷಯದಲ್ಲಿ ಒಂದು ಅಂಕ ಕಡಿತವಾಗಿತ್ತು. ಹೀಗಾಗಿ ಶಿವಮೊಗ್ಗದ ಸಂಜನಾ ಎಂಬ ವಿದ್ಯಾರ್ಥಿನಿ ಮತ್ತೊಮ್ಮೆ ಪರೀಕ್ಷೆ ಬರೆದು 625 ಕ್ಕೆ 625ಕ್ಕೆ ಅಂಕ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಒಂದು ಅಂಕಕ್ಕಾಗಿ ಮತ್ತೊಮ್ಮೆ ಪರೀಕ್ಷೆ ಬರೆದು ಟಾಪರ್‌ ಆದ ವಿದ್ಯಾರ್ಥಿನಿ!

Prabhakara R Prabhakara R Jun 14, 2025 6:38 PM

ಶಿವಮೊಗ್ಗ: ಎಸ್‌ಎಸ್‌ಎಲ್‌ಸಿ ಟಾಪರ್‌ ಆಗುವ ಅವಕಾಶ ಕಳೆದುಕೊಂಡಿದ್ದ ವಿದ್ಯಾರ್ಥಿನಿಯೊಬ್ಬಳು, ಒಂದು ಅಂಕಕ್ಕಾಗಿ ಮತ್ತೊಮ್ಮೆ ಪರೀಕ್ಷೆ ಬರೆದು 625 ಕ್ಕೆ 625ಕ್ಕೆ ಅಂಕ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾಳೆ. ಶಿವಮೊಗ್ಗದ ಆದಿಚುಂಚನಗಿರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸಂಜನಾ, ಎಸ್‌ಎಸ್‌ಎಸ್‌ಎಲ್‌ಸಿ-1 ಪರೀಕ್ಷೆಯಲ್ಲಿ 624 ಅಂಕ ಪಡೆದಿದ್ದಳು. ವಿಜ್ಞಾನ ವಿಷಯದಲ್ಲಿ ಒಂದು ಅಂಕ ಕಡಿತವಾಗಿತ್ತು. ಹೀಗಾಗಿ ಎಸ್‌ಎಸ್‌ಎಸ್‌ಎಲ್‌ಸಿ-2 (SSLC Exam 2 Result 2025) ಬರೆದು 625ಕ್ಕೆ 625 ಅಂಕ ಪಡೆಯುವ ಮೂಲಕ ಟಾಪರ್‌ ಆಗಿ ಹೊರಹೊಮ್ಮಿದ್ದಾಳೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ವಿಜ್ಞಾನ ವಿಷಯದಲ್ಲಿ ಜೀವಶಾಸ್ತ್ರಕ್ಕೆ ಸಂಬಂಧಿಸಿ "ದ ಇನ್‌ಫರ್ಮೇಶನ್ ಸೋರ್ಸ್‌ ಫಾರ್ ಮೇಕಿಂಗ್ ಪ್ರೋಟೀನ್ ಇನ್ ಎ ಸೆಲ್‌ ಇಸ್" ಎಂಬ ಬಹುಆಯ್ಕೆಯ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಜೀನ್, ಕ್ರೋಮೋಜೋಮ್, ಡಿಎನ್‌ಎ, ರೈಬೊಜೋಮ್ ಎಂಬ ನಾಲ್ಕು ಆಯ್ಕೆ ಇತ್ತು. ಜೀನ್ ಸಹ ಪ್ರೋಟೀನ್‌ ಸೆಲ್ ಎಂದು ಸಂಜನಾ ಉತ್ತರ ನೀಡಿದ್ದಳು. ಆದರೆ ಸರಿಯಾದ ಉತ್ತರ ಡಿಎನ್‌ಎ ಆಗಿತ್ತು. ಹೀಗಾಗಿ ಒಂದು ಅಂಕದಿಂದ ರಾಜ್ಯಕ್ಕೆ ಟಾಪರ್ ಆಗುವ ಅವಕಾಶದಿಂದ ವಂಚಿತಳಾದ ಸಂಜನಾ ಮತ್ತೆ ವಿಜ್ಞಾನ ಪರೀಕ್ಷೆ ಬರೆದು 80ಕ್ಕೆ 80 ಅಂಕ ಪಡೆದಿದ್ದಾಳೆ. ಈ ಮೂಲಕ 625ಕ್ಕೆ 625ಕ್ಕೆ ಅಂಕ ಪಡೆದ ಸಾಧನೆ ಮಾಡಿದ್ದಾಳೆ.

ಈ ಸುದ್ದಿಯನ್ನೂ ಓದಿ | Federal Bank Recruitment 2025: ಫೆಡರಲ್‌ ಬ್ಯಾಂಕ್‌ನಲ್ಲಿದೆ ವಿವಿಧ ಹುದ್ದೆ; ಅಪ್ಲೈ ಮಾಡುವ ವಿಧಾನ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ- 2ರ ಫಲಿತಾಂಶ ಪ್ರಕಟ, 4 ಮಂದಿ ಔಟ್‌ ಆಫ್‌ ಔಟ್

ಬೆಂಗಳೂರು: ‌2024- 2025ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ (SSLC Exam- 2 Result) ಫಲಿತಾಂಶ ಪ್ರಕಟವಾಗಿದೆ. ಒಟ್ಟು 87,330 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ನಾಲ್ವರು ವಿದ್ಯಾರ್ಥಿಗಳು (Students) 625ಕ್ಕೆ 625 ಅಂಕ ಗಳಿಸಿದ್ದಾರೆ. ಈ 4 ವಿದ್ಯಾರ್ಥಿಗಳ ಪೈಕಿ ಒಬ್ಬ ವಿದ್ಯಾರ್ಥಿ ಸರ್ಕಾರಿ ಶಾಲೆಯ ವಿದ್ಯಾರ್ಥಿ ಎಂದು ಗೊತ್ತಾಗಿದೆ. ಅಂಕ ಹೆಚ್ಚಳಕ್ಕೆ ಪರೀಕ್ಷೆ ಬರೆದಿದ್ದ ನಾಲ್ವರಿಗೆ ಔಟ್‌ ಆಫ್ ಔಟ್ ಅಂಕ ಬಂದಿದೆ.​ ಕರ್ನಾಟಕದ 967 ಕೇಂದ್ರಗಳಲ್ಲಿ ಮೇ 26ರಿಂದ ಜೂನ್ 2ರವರೆಗೆ ಎಸ್​ಎಸ್​ಎಲ್​ ಪರೀಕ್ಷೆ-2 ನಡೆದಿತ್ತು.

ಸರ್ಕಾರಿ ಶಾಲೆಗಳ ಫಲಿತಾಂಶ ಉತ್ತಮಗೊಂಡಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತೀರ್ಣತಾ ಪ್ರಮಾಣ ಶೇ. 36.65 ಇದ್ದು, ಇದು ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಫಲಿತಾಂಶಕ್ಕಿಂತ ಹೆಚ್ಚಾಗಿದೆ. 2025ರ ಪರೀಕ್ಷೆ-2ರಲ್ಲಿ 11,818 ವಿದ್ಯಾರ್ಥಿಗಳು ಫಲಿತಾಂಶ ಉತ್ತಮಪಡಿಸಿಕೊಳ್ಳಲು ನೋಂದಾಯಿಸಿದ್ದು, ಅವರಲ್ಲಿ 6,635 ವಿದ್ಯಾರ್ಥಿಗಳು (ಶೇ.56.14ರಷ್ಟು ವಿದ್ಯಾರ್ಥಿಗಳು) ತಮ್ಮ ಫಲಿತಾಂಶವನ್ನು ಉತ್ತಮಪಡಿಸಿಕೊಂಡಿದ್ದಾರೆ.


ಫಲಿತಾಂಶ ಉತ್ತಮಪಡಿಸಿಕೊಂಡ ವಿದ್ಯಾರ್ಥಿಗಳಲ್ಲಿ ಪ್ರಥಮ ಭಾಷೆಯಲ್ಲಿ 82, ದ್ವಿತೀಯ ಭಾಷೆಯಲ್ಲಿ 37, ತೃತೀಯ ಭಾಷೆಯಲ್ಲಿ 55, ಗಣಿತ ವಿಷಯದಲ್ಲಿ 10, ವಿಜ್ಞಾನ ವಿಷಯದಲ್ಲಿ 32, ಸಮಾಜ ವಿಜ್ಞಾನ ವಿಷಯದಲ್ಲಿ 44 ವಿದ್ಯಾರ್ಥಿಗಳು ಶೇ.100 ರಷ್ಟು ಅಂಕಗಳನ್ನು ಪಡೆದಿದ್ದಾರೆ. 2025 ರ ಪರೀಕ್ಷೆ-1ರಲ್ಲಿ ಫಲಿತಾಂಶ ಪೂರ್ಣಗೊಳಿಸದ 2,78,355 ಶಾಲಾ ವಿದ್ಯಾರ್ಥಿಗಳು (Regular Freshers) ಪರೀಕ್ಷೆಗೆ ಹಾಜರಾಗಿದ್ದರು.


ಪ್ರತಿ ಜಿಲ್ಲೆಯಲ್ಲಿನ ಉಪನಿರ್ದೇಶಕರು, ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಮುಖ್ಯಶಿಕ್ಷಕರ ಪ್ರಯತ್ನದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ-2ಕ್ಕೆ ನೋಂದಾಯಿಸಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದರಿಂದ ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿ ಹಾಜರಾಗುವಂತೆ ಕ್ರಮ ಕೈಗೊಳ್ಳಲಾಯಿತು. ಶಾಲಾ ಹಂತದಲ್ಲಿ ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನಾ ತರಗತಿಗಳನ್ನು (Remedial classes) ಸಹ ನಡೆಸಲಾಗಿತ್ತು.

ಈ ರೀತಿ ರಿಸಲ್ಟ್ ಚೆಕ್ ಮಾಡಿಕೊಳ್ಳಿ

ಎಸ್ ಎಸ್ ಎಲ್ ಸಿ ಪರೀಕ್ಷೆ-2 ರ ಫಲಿತಾಂಶ ಚೆಕ್ ಮಾಡಲು ಬಯಸುವ ವಿದ್ಯಾರ್ಥಿಗಳು ಮೊದಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಅಧಿಕೃತ ವೆಬ್ಸೈಟ್ https://karresults.nic.in/ ಗೆ ಭೇಟಿ ನೀಡಬೇಕು.ಮುಖಪುಟದಲ್ಲಿ, KSEAB 10ನೇ SSLC ಪರೀಕ್ಷೆಯ 2 ನೇ ಫಲಿತಾಂಶಗಳು 2025 ಮೇಲೆ ಕ್ಲಿಕ್ ಮಾಡಿ. ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಸಬ್​ಮಿಟ್​ ಮಾಡಿ.ಬಳಿಕ ಪರದೆಯ ಮೇಲೆ ನಿಮ್ಮ ಫಲಿತಾಂಶ ಕಾಣಿಸಿಕೊಳ್ಳುತ್ತದೆ. ವಿದ್ಯಾರ್ಥಿಗಳು ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಪರೀಕ್ಷೆ-1ರ ಫಲಿತಾಂಶ

ಮೇ 24ರಂದು ಈ ವರ್ಷದ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿತ್ತು. ಶೇ.62.34ರಷ್ಟು ವಿದ್ಯಾರ್ಥಿಗಳು ಪಾಸ್​ ಆಗಿದ್ದರು. 8,42,173 ಮಕ್ಕಳ ಪೈಕಿ 5,24,984 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಶೇ.74ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದು, ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದರು. ಇನ್ನು, ಶೇ.91.12ರಷ್ಟು ಫಲಿತಾಂಶದ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ ಪಡೆದಿದ್ದು, ಎರಡನೇ ಸ್ಥಾನದಲ್ಲಿ ಉಡುಪಿ, 3ನೇ ಸ್ಥಾನದಲ್ಲಿ ಉತ್ತರ ಕನ್ನಡ ಜಿಲ್ಲೆ ಇತ್ತು. ಶೇಕಡ 42 ಪರ್ಸೆಂಟ್​ ಫಲಿತಾಂಶದ ಮೂಲಕ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿತ್ತು. 22ಕ್ಕೂ ಹೆಚ್ಚು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದುಕೊಳ್ಳುವ ಮೂಲಕ ಕಮಾಲ್​ ಮಾಡಿದ್ದರು.