ಅಪರಾಧಗಳಿಗೆ ಕಡಿವಾಣ ಹಾಕಲು ಹೊಸ ಹೆಜ್ಜೆ: ರಾಜ್ಯಾದ್ಯಂತ ಆ್ಯಂಟಿ-ರೌಡಿ ಸ್ಕ್ವಾಡ್‌ಗಳ ರಚನೆ
Anti-Rowdy Squad: ರಾಜ್ಯಾದ್ಯಂತ ತಕ್ಷಣದಿಂದಲೇ ವಿಶೇಷ ಆ್ಯಂಟಿ-ರೌಡಿ ಸ್ಕ್ವಾಡ್‌ಗಳನ್ನು ಸ್ಥಾಪಿಸಲು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಆದೇಶಿಸಿದೆ. ಜೂನ್ 4ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಚರ್ಚೆಗಳ ನಂತರ ಈ ಆದೇಶ ಹೊರಡಿಸಲಾಗಿದೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ (ಸಂಗ್ರಹ ಚಿತ್ರ) -
ಬೆಂಗಳೂರು, ಜೂ. 8: ರಾಜ್ಯದಲ್ಲಿ ರೌಡಿಸಂ, ಸಂಘಟಿತ ಅಪರಾಧ ಹಾಗೂ ಸಮಾಜಘಾತುಕ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಉದ್ದೇಶದಿಂದ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ತಕ್ಷಣದಿಂದಲೇ ವಿಶೇಷ ಆ್ಯಂಟಿ-ರೌಡಿ ಸ್ಕ್ವಾಡ್‌ಗಳನ್ನು ಸ್ಥಾಪಿಸಲು ಆದೇಶಿಸಿದೆ. ಜೂನ್ 4ರಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ನೇತೃತ್ವದಲ್ಲಿ ನಡೆದ ಚರ್ಚೆಗಳ ನಂತರ ಈ ಆದೇಸ ಹೊರಡಿಸಲಾಗಿದೆ.
ರೌಡಿಗಳ ಚಟುವಟಿಕೆಗಳ ಮೇಲೆ ನಿಗಾವಹಿಸುವುದನ್ನು ಬಲಪಡಿಸುವುದು, ಅಪರಾಧ ಜಾಲಗಳನ್ನು ಭೇದಿಸುವುದು ಹಾಗೂ ತಡೆಗಟ್ಟುವ ಕಾನೂನುಗಳ ಕಟ್ಟುನಿಟ್ಟಿನ ಜಾರಿಯನ್ನು ಖಚಿತಪಡಿಸುವುದು ಈ ಕ್ರಮದ ಮುಖ್ಯ ಉದ್ದೇಶ. ಸುತ್ತೋಲೆಯ ಪ್ರಕಾರ, ಪ್ರತಿ ಪೊಲೀಸ್ ಸರ್ಕಲ್‌ನಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಅವರ ಮೇಲ್ವಿಚಾರಣೆಯಲ್ಲಿ ವಿಶೇಷ ರೌಡಿ ಸ್ಕ್ವಾಡ್ ರಚಿಸಲಾಗುತ್ತದೆ. ಜತೆಗೆ ಪೊಲೀಸ್ ಇನ್‌ಸ್ಪೆಕ್ಟರ್ ನೇತೃತ್ವದ ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಪ್ರತ್ಯೇಕ ಆ್ಯಂಟಿ-ರೌಡಿ ಸ್ಕ್ವಾಡ್‌ಗಳನ್ನು ಸ್ಥಾಪಿಸಲಾಗುತ್ತದೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು, ನಾಗರಿಕರ ಹಕ್ಕುಗಳನ್ನು ರಕ್ಷಿಸಲು ಹಾಗೂ ಶಾಂತಿಯುತ ವಾತಾವರಣವನ್ನು ಖಚಿತಪಡಿಸಲು ರೌಡಿಗಳ ಚಟುವಟಿಕೆಗಳನ್ನು ನಿಯಂತ್ರಿಸುವುದು ಅತ್ಯಗತ್ಯ ಎಂದು ತಿಳಿಸಲಾಗಿದೆ. ರೌಡಿಗಳಿಂದಾಗಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಸಾಮಾಜಿಕ ಸೌಹಾರ್ದತೆಯನ್ನು ಹಾಳಾಗುತ್ತಿದೆ. ಜತೆಗೆ ಸಮುದಾಯದ ಸುರಕ್ಷತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ.
ಮಹಿಳಾ ಸಚಿವರೇ ಇಲ್ಲದ ಸಂಪುಟ; ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾದರೂ ಏನು?
ಕರ್ನಾಟಕದಲ್ಲಿ ರೌಡಿಸಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಡಿ.ಕೆ. ಶಿವಕುಮಾರ್ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಹೊಸದಾಗಿ ರಚಿಸಲಾದ ತಂಡಗಳು ವ್ಯಕ್ತಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಪರಿಶೀಲಿಸುತ್ತವೆ.
ಸ್ಕ್ವಾಡ್‌ಗಳ ಚಟುವಟಿಕೆ
ಹೊಸದಾಗಿ ರಚಿಸಲಾದ ಸ್ಕ್ವಾಡ್‌ಗಳು ವ್ಯಕ್ತಿಗಳ ವಿರುದ್ಧ ದಾಖಲಾಗಿರುವ ಅಪರಾಧ ಪ್ರಕರಣಗಳನ್ನು ಪರಿಶೀಲಿಸಿ, ಅಗತ್ಯವಿರುವಲ್ಲಿ ಹೊಸ ರೌಡಿ ಶೀಟ್‌ಗಳನ್ನು ತೆರೆಯುವ ಪ್ರಕ್ರಿಯೆಯನ್ನು ಆರಂಭಿಸಲಿವೆ. ಈ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಅಥವಾ ಲೋಪ ಕಂಡುಬಂದರೆ, ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.
ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲ ರೌಡಿ ಶೀಟರ್‌ಗಳು ಹಾಗೂ ಸಮಾಜಘಾತುಕ ಅಂಶಗಳ ಬಗ್ಗೆ ನವೀಕೃತ ಮಾಹಿತಿಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಈ ಸ್ಕ್ವಾಡ್‌ಗಳಿಗೆ ವಹಿಸಲಾಗಿದೆ. ಕಾನೂನು ಪ್ರಕಾರ, ರೌಡಿ ಶೀಟರ್‌ಗಳ ಚಟುವಟಿಕೆಗಳು, ಸಂಚಾರ ಮತ್ತು ಸಂಪರ್ಕಗಳ ಬಗ್ಗೆ ನಿಯಮಿತ ನಿಗಾ ಹಾಗೂ ಪರಿಶೀಲನೆ ನಡೆಸಲಾಗುತ್ತದೆ. ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟುಮಾಡುವ ಪುನರಾವರ್ತಿತ ಅಪರಾಧಿಗಳ ಮೇಲೆ ನಿಗಾ ವಹಿಸಿ, ಗೂಂಡಾ ಕಾಯ್ದೆ ಹಾಗೂ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ಸೇರಿದಂತೆ ವಿವಿಧ ಕಾನೂನುಗಳ ಅಡಿಯಲ್ಲಿ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲಿವೆ.