ಬೆಂಗಳೂರು: ಶಾಸಕರೊಬ್ಬರ (Karnataka MLA) ಸೊಸೆ ಕೆಲಸಕ್ಕೆ ಹೋಗದೆ 70,000 ರೂ. ವೇತನ ಪಡೆದಿದ್ದಾರೆ. ಬಾಗಲಕೋಟೆ ಶಾಸಕ ಉಮೇಶ್ ಮೇಟಿ (Bagalkot MLA Umesh Meti) ಅವರ ಸೋದರ ಸೊಸೆ ಡಾ. ಅಂಕಿತಾ ಯರಗಲ್ (Dr Ankita Yaragal) ಅವರ ವಿರುದ್ಧ ಕರ್ತವ್ಯ ಲೋಪ ಮತ್ತು ಅನಧಿಕೃತವಾಗಿ ಏಕಕಾಲದಲ್ಲಿ ಎರಡು ಕಡೆಗಳಲ್ಲಿ ಕೆಲಸ ಮಾಡುತ್ತಿರುವ ಆರೋಪ ಕೇಳಿ ಬಂದಿದ್ದು, ವಿಚಾರಣೆಗಾಗಿ ಹಾಜರಾಗುವಂತೆ ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಿಇಒ ಗಜಾನನ ಬಾಲೆ (Bagalkot Zilla Panchayat CEO Gajanan Bale) ಅವರು ನೋಟಿಸ್ ಜಾರಿ ಮಾಡಿದ್ದಾರೆ.
ಡಾ. ಅಂಕಿತಾ ಯರಗಲ್ ಅವರು ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಅನ್ನು ಪಡೆಯುತ್ತಿರುವಾಗಲೇ ಬಾಗಲಕೋಟೆಯ 'ನಮ್ಮ ಕ್ಲಿನಿಕ್' ಒಂದರಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಅವರು ತಿಂಗಳಿಗೆ 70,000 ರೂ. ಗಿಂತ ಹೆಚ್ಚು ವೇತನ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ: ನಾಗಮಂಗಲದಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ಹೇಳಿಕೆ
ಈ ಆರೋಪಕ್ಕೆ ಸಂಬಂಧಿಸಿ ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಿಇಒ ಗಜಾನನ ಬಾಲೆ ಅವರು ವಿಚಾರಣೆಗೆ ಕರೆದಿದ್ದು, ಡಾ. ಯರಗಲ್ ಹಾಜರಾಗಿರಲಿಲ್ಲ. ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 18ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತ್ ಕಚೇರಿಯ ಕೊಠಡಿ ಸಂಖ್ಯೆ 11 ರಲ್ಲಿ ನಡೆಯಲಿದ್ದು, ಇದಕ್ಕೆ ಹಾಜರಾಗುವಂತೆ ಸಿಇಒ ನೋಟಿಸ್ ಜಾರಿ ಮಾಡಿದ್ದಾರೆ.
ಡಾ. ಅಂಕಿತಾ ಯರಗಲ್ ಅವರು ಮಾರ್ಚ್ 3 ರಿಂದ ಸೆಪ್ಟೆಂಬರ್ ಅವಧಿಯವರೆಗೆ ವಾಂಬೆ ಕಾಲೋನಿಯಲ್ಲಿರುವ 'ನಮ್ಮ ಕ್ಲಿನಿಕ್'ಗೆ ಗೈರು ಹಾಜರಾಗಿದ್ದರು. ಇದರಿಂದಾಗಿ ಕ್ಲಿನಿಕ್ ವೈದ್ಯಾಧಿಕಾರಿಯಿಲ್ಲದೆ ಕಾರ್ಯನಿರ್ವಹಿಸುವಂತಾಗಿ ಸಾರ್ವಜನಿಕರಿಗೆ ತೊಂದರೆಯುಂಟಾಗಿತ್ತು. ಇದರೊಂದಿಗೆ ಅವರು ಖಾಸಗಿ ಕಾಲೇಜಿನಲ್ಲಿ ವೈದ್ಯಕೀಯ ಸ್ನಾತಕೋತ್ತರ ಅಧ್ಯಯನವನ್ನು ಮುಂದುವರಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಇದಕ್ಕೆ ಸಂಬಂಧಿಸಿ ನೋಟಿಸ್ ನೀಡಿರುವ ಸಿಇಒ ಗಜಾನನ ಬಾಲೆ, ಡಾ. ಅಂಕಿತಾ ಅವರು ಕರ್ನಾಟಕದ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ನೋಂದಾಯಿತ ವೈದ್ಯಕೀಯ ವೃತ್ತಿಪರರಿಗೆ ಅನ್ವಯಿಸುವ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅಲ್ಲದೇ ಇದು ರಾಷ್ಟ್ರೀಯ ವೈದ್ಯಕೀಯ ಆಯೋಗದ ವೃತ್ತಿಪರ ನೈತಿಕ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದಾರೆ.
ಡಾ. ಅಂಕಿತಾ ಅವರು ತಪ್ಪಿತಸ್ಥರು ಎಂದು ಸಾಬೀತಾದರೆ ಕರ್ನಾಟಕ ವೈದ್ಯಕೀಯ ಮಂಡಳಿ ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗ ಅವರ ವಿರುದ್ಧ ಶಿಸ್ತು ಕೈಗೊಳ್ಳಲಿದೆ. ಅವರಿಗೆ ಪಾವತಿಸಲಾದ ಸಂಪೂರ್ಣ ವೇತನ ಅಥವಾ ಗೌರವಧನವನ್ನು ಅನ್ವಯವಾಗುವ ನಿಯಮಗಳ ಪ್ರಕಾರ ವಸೂಲಿ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Byrathi Suresh: ಪ್ರಜಾಪ್ರಭುತ್ವದ ಮೌಲ್ಯಗಳಿಂದ ಸಮಾಜದ ಸಮಸ್ಯೆ ಪರಿಹಾರ ಸಾಧ್ಯ
ಕಾಲೇಜಿನ ಅನುಮತಿ ಇದ್ದರೂ ಕೂಡ ಡಾ. ಅಂಕಿತಾ ಅವರು 'ನಮ್ಮ ಕ್ಲಿನಿಕ್'ನ ಕರ್ತವ್ಯಗಳಿಗೆ ಗೈರುಹಾಜರಾಗಿದ್ದರು. ಸದ್ಯ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಮುಂದಿನ ವಿಚಾರಣೆಗೆ ಹಾಜರಾಗದೇ ಇದ್ದರೆ ಏಕಪಕ್ಷೀಯ ನಿರ್ಧಾರವನ್ನು ಕೈಗೊಳ್ಳಬೇಕಾಗಬಹುದು ಎಂದು ಅವರು ತಿಳಿಸಿದ್ದಾರೆ.