ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ: ನಾಗಮಂಗಲದಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ಹೇಳಿಕೆ
ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಸಾರಿಗೆ ಇಲಾಖೆಯ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಇಲಾಖೆಗೆ ಒಟ್ಟು 7 ಸಾವಿರ ಕೋಟಿ ರೂಪಾಯಿ ಅನುದಾನ ನೀಡಲು ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ. ಇದಿಷ್ಟೇ ಅಲ್ಲದೇ, 1 ಸಾವಿರ ಬಸ್ ಗಳನ್ನು ಖರೀದಿ ಮಾಡಲು ಹಸಿರು ನಿಶಾನೆ ತೋರಿದ್ದು, ರಾಜ್ಯದ ಬಸ್ ನಿಲ್ದಾಣಗಳ ಉನ್ನತೀಕರಣಕ್ಕೆ ಕೇಂದ್ರ ಸರ್ಕಾರದಿಂದ 2 ಸಾವಿರ ಕೋಟಿ ರೂಪಾಯಿ ಪಡೆಯಲೂ ಸಮ್ಮತಿ ಸೂಚಿಸಿರುವುದು ಸಂತಸದ ವಿಚಾರವಾಗಿದೆ
-
ಮಂಡ್ಯ (ನಾಗಮಂಗಲ): ರಾಜ್ಯ ಸರ್ಕಾರದಿಂದ ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂಪಾಯಿ ಗಳ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್(Byrati Suresh) ತಿಳಿಸಿದ್ದಾರೆ.
ಸಮಾಜ ಸೇವಕ ಮತ್ತು ಕಾಂಗ್ರೆಸ್ ಮುಖಂಡರಾದ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಯ ಕನ್ನಾಘಟ್ಟ ಗ್ರಾಮದಲ್ಲಿ ಮಹಾಗಣಪತಿ ಪ್ರತಿಷ್ಠಾಪನಾ ಮಹೋತ್ಸವ ಮತ್ತು ನೂತನ ದೇವಾಲಯದ ಲೋಕಾರ್ಪಣ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಸಾರಿಗೆ ಇಲಾಖೆಯ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಇಲಾಖೆಗೆ ಒಟ್ಟು 7 ಸಾವಿರ ಕೋಟಿ ರೂಪಾಯಿ ಅನುದಾನ ನೀಡಲು ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ. ಇದಿಷ್ಟೇ ಅಲ್ಲದೇ, 1 ಸಾವಿರ ಬಸ್ ಗಳನ್ನು ಖರೀದಿ ಮಾಡಲು ಹಸಿರು ನಿಶಾನೆ ತೋರಿದ್ದು, ರಾಜ್ಯದ ಬಸ್ ನಿಲ್ದಾಣಗಳ ಉನ್ನತೀಕರಣಕ್ಕೆ ಕೇಂದ್ರ ಸರ್ಕಾರದಿಂದ 2 ಸಾವಿರ ಕೋಟಿ ರೂಪಾಯಿ ಪಡೆಯಲೂ ಸಮ್ಮತಿ ಸೂಚಿಸಿರುವುದು ಸಂತಸದ ವಿಚಾರವಾಗಿದೆ ಎಂದು ತಿಳಿಸಿದರು.
ಗ್ಯಾರಂಟಿಗೆ 76 ಸಾವಿರ ಕೋಟಿ
ಸಿದ್ದರಾಮಯ್ಯ ಅವರು 2023 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ತಕ್ಷಣ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾದರು ಮತ್ತು ಅದರ ಶ್ರೇಯಸ್ಸು ನಮ್ಮ ಸರ್ಕಾರಕ್ಕೆ ಸಲ್ಲುತ್ತದೆ. ಈಗಿನ ಮುಖ್ಯಮಂತ್ರಿ ಶಿವಕುಮಾರ್ ಅವರು ಯೋಜನೆಗಳನ್ನು ಮುಂದು ವರಿಸಿದ್ದು, ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ನೀಡುವ ಮತ್ತೊಂದು ಯೋಜನೆ ಪ್ರಕಟಿಸಿ ಜನಮಾನಸದಲ್ಲಿ ಉಳಿಯುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಸಾರಿಗೆ ಸಚಿವರು ಬಣ್ಣಿಸಿದರು.
ರಾಜ್ಯದಲ್ಲಿ ಸುಮಾರು 50 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತಿದೆ. ಇದಕ್ಕಾಗಿ ಸಾರಿಗೆ ಸಂಸ್ಥೆಗಳಿಗೆ ವಾರ್ಷಿಕ ಸುಮಾರು 350 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಇದು ಸಾರಿಗೆ ಸಂಸ್ಥೆಗಳಿಗೆ ಹೊರೆಯಾಗುತ್ತದೆ ಎಂಬುದನ್ನು ಮನಗಂಡಿರುವ ಮುಖ್ಯಮಂತ್ರಿಗಳು ಈ ಹಣವನ್ನು ಸರ್ಕಾರ ನೀಡಲಿದೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಉಚಿತ ಬಸ್ ಪ್ರಯಾಣದ ಶಕ್ತಿ, 10 ಕೆಜಿ ಉಚಿತ ಅಕ್ಕಿ, 2 ಸಾವಿರ ರೂಪಾಯಿ ಪ್ರೋತ್ಸಾಹಧನ ಮತ್ತು ನಿರುದ್ಯೋಗಿಗಳಿಗೆ 3 ಸಾವಿರ ರೂಪಾಯಿಗಳನ್ನು ನೀಡುತ್ತಿದ್ದೇವೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 76 ಸಾವಿರ ಕೋಟಿ ರೂಪಾಯಿಗಳನ್ನು ನೀಡುತ್ತಿದೆ. ಹೀಗೆ ಕಳೆದ 3 ವರ್ಷದಿಂದ 1 ಲಕ್ಷದ 68 ಸಾವಿರ ಕೋಟಿ ರೂಪಾಯಿಗಳನ್ನು ನಮ್ಮ ರಾಜ್ಯದ ಜನರಿಗೆ ಉಚಿತವಾಗಿ ನೀಡಿದೆ ಎಂದು ಅವರು ತಿಳಿಸಿದರು.
ಮಂಡ್ಯ ಜಿಲ್ಲೆಗೆ ನೂರು ಬಸ್
ಮಂಡ್ಯ ಜಿಲ್ಲೆಗೆ ಹೊಸದಾಗಿ 40 ಬಸ್ ಗಳನ್ನು ಮಂಜೂರು ಮಾಡುವಂತೆ ಗ್ಯಾರಂಟಿ ಸಮಿತಿ ಉಪಾ ಧ್ಯಕ್ಷರಾದ ದಿನೇಶ್ ಗೂಳಿಗೌಡ ಅವರು ಮನವಿ ಸಲ್ಲಿಸಿದ್ದಾರೆ. ಆದರೆ, ನಮ್ಮ ಕಾಂಗ್ರೆಸ್ ಸರ್ಕಾರ ಈ ಜಿಲ್ಲೆಗೆ 100 ಬಸ್ ಗಳನ್ನು ನೀಡಲಿದೆ. ಮುಂದಿನ 15-20 ದಿನಗಳೊಳಗಾಗಿ ಈ ಬಸ್ ಗಳ ಸಂಚಾರ ಆರಂಭಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
2028 ಕ್ಕೂ ನಾವೇ ಬರ್ತೀವಿ
2028 ಕ್ಕೂ ನಮ್ಮ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. 2033 ಕ್ಕೆ ನೋಡೋಣ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು. 2028 ಕ್ಕಂತೂ ನಮ್ಮದೇ ಸರ್ಕಾರ ಬರಲಿದೆ. ಆಗ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಶ್ರೀಮಠದಿಂದ ಸಮಪಾಲು ಸಮಬಾಳು
ಆದಿ ಚುಂಚನಗಿರಿ ಪುಣ್ಯಕ್ಷೇತ್ರವು ಕೇವಲ ಒಕ್ಕಲಿಗ ಸಮುದಾಯದ ಹಿತವನ್ನಷ್ಟೇ ಕಾಯುತ್ತಿಲ್ಲ. ಪ್ರತಿಯೊಂದು ಸಮುದಾಯದವರನ್ನೂ ಒಂದೇ ರೀತಿಯಲ್ಲಿ ಪರಿಗಣಿಸುತ್ತಿದೆ. ಇದರ ಪರಿಣಾಮ ವಾಗಿ ಪ್ರತಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಶ್ರೀಮಠದಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಈ ಮೂಲಕ ಶ್ರೀಮಠವು ಕುವೆಂಪುರವರು ಸಾರಿದ ಸಮಪಾಲು, ಸಮಬಾಳು, ಸರ್ವಜನಾಂಗದ ಶಾಂತಿಯ ತೋಟ ಎಂಬ ಸಂದೇಶವನ್ನು ಮಠದಲ್ಲಿ ಚಾಚೂ ತಪ್ಪದೇ ಪಾಲಿಸುತ್ತಿದೆ ಎಂದು ಬೈರತಿ ಸುರೇಶ್ ಮೆಚ್ಚುಗೆ ಸೂಚಿಸಿದರು.
ಸ್ಟಾರ್ ಚಂದ್ರು ಮತ್ತು ಪುಟ್ಟಸ್ವಾಮಿಗೌಡರು ತಮ್ಮ ಊರಷ್ಟೇ ಅಲ್ಲದೇ ಸುತ್ತಮುತ್ತಲಿನ ಪ್ರದೇಶ ಗಳ ಅಭಿವೃದ್ಧಿಗೆ ಪೂರಕವಾಗಿ ಸಾಕಷ್ಟು ಸಮಾಜಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಜೀವನ ದಲ್ಲಿ ಇಂತಹ ಪುಣ್ಯವಾದ ಕೆಲಸಗಳನ್ನು ಮಾಡುವ ಅವಕಾಶಗಳು ಕಡಿಮೆ. ಅದನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕಾದ ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.