Drown in River: ಯುಗಾದಿ ಹಬ್ಬದ ದಿನವೇ ದುರಂತ; ಕೃಷ್ಣಾ ನದಿಯಲ್ಲಿ ಮುಳುಗಿ ಮೂವರು ಬಾಲಕರ ಸಾವು
Drown in River: ಬಾಗಲಕೋಟೆ ತಾಲೂಕಿನ ಸೀತಿಮನಿ ಗ್ರಾಮದ ಬಳಿ ನಡೆದಿದೆ. ಮೂವರು ಬಾಲಕರ ಪೈಕಿ ಒಬ್ಬನ ಮೃತದೇಹ ಪತ್ತೆಯಾಗಿದ್ದು, ಉಳಿದ ಇಬ್ಬರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಬಾಗಲಕೋಟೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಬಾಗಲಕೋಟೆ: ಯುಗಾದಿ ಹಬ್ಬದ ದಿನವೇ ಜಿಲ್ಲೆಯಲ್ಲಿ ಘೋರ ದುರಂತವೊಂದು ನಡೆದಿದೆ. ಕೃಷ್ಣಾ ನದಿಯಲ್ಲಿ ಮುಳುಗಿ ಮೂವರು ಬಾಲಕರು ಮೃತಪಟ್ಟ ಘಟನೆ (Drown in River) ಬಾಗಲಕೋಟೆ ತಾಲೂಕಿನ ಸೀತಿಮನಿ ಗ್ರಾಮದ ಬಳಿ ನಡೆದಿದೆ. ಕೃಷ್ಣಾ ನದಿಯಲ್ಲಿ ಈಜಲು ಹೋಗಿದ್ದ ವೇಳೆ ಬಾಲಕರು ನೀರುಪಾಲಾಗಿದ್ದಾರೆ. ಮೃತ ಬಾಲಕರನ್ನು ಸೋಮಶೇಖರ್ ದೇವರಮನಿ (17), ಪರನಗೌಡ ಬೀಳಗಿ (15) ಹಾಗೂ ಮಲ್ಲಪ್ಪ ಬಗಲಿ (16) ಎಂದು ಗುರುತಿಸಲಾಗಿದೆ.
ಮೂವರು ಬಾಲಕರ ಪೈಕಿ ಸೋಮಶೇಖರ್ ಮೃತದೇಹ ಪತ್ತೆಯಾಗಿದ್ದು, ಉಳಿದ ಇಬ್ಬರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಮೃತ ಬಾಲಕರು ಬಾಗಲಕೋಟೆ ತಾಲೂಕಿನ ಇಲ್ಯಾಳ ಗ್ರಾಮದ ನಿವಾಸಿಗಳಾಗಿದ್ದು, ಬಾಗಲಕೋಟೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನಕ್ಕೆಂದು ಹೋದ ಬಾಲಕ ನೀರುಪಾಲು
ಮೈಸೂರು: ಜಿಲ್ಲೆಯಲ್ಲಿ ಯುಗಾದಿ ಹಬ್ಬದ ದಿನದಂದು ಘೋರ ದುರಂತ ನಡೆದಿದೆ. ಯುಗಾದಿ ಹಿನ್ನೆಲೆಯಲ್ಲಿ ಪುಣ್ಯ ಸ್ನಾನಕ್ಕೆಂದು ತ್ರಿವೇಣಿ ಸಂಗಮದಲ್ಲಿ ನದಿಗೆ ಇಳಿದಿದ್ದ ಬಾಲಕ ನೀರುಪಾಲಾಗಿರುವ ಘಟನೆ ಮೈಸೂರು ಜಿಲ್ಲೆಯ (Mysore News) ಟಿ.ನರಸೀಪುರದಲ್ಲಿ ನಡೆದಿದೆ. ಮೃತ ಬಾಲಕನನ್ನು ಶರಣ್ (13) ಎಂದು ಗುರುತಿಸಲಾಗಿದೆ. ಮೃತ ಶರಣ್ ಮೈಸೂರು ಜಿಲ್ಲೆಯ ಟಿ.ನರಸೀಪುರ ಪಟ್ಟಣದ ಶ್ರೀರಾಂಪುರ ನಿವಾಸಿಯಾಗಿದ್ದಾನೆ.
ಸ್ನೇಹಿತರ ಜೊತೆ ಪುಣ್ಯಸ್ನಾನಕ್ಕೆಂದು ತ್ರಿವೇಣಿ ಸಂಗಮಕ್ಕೆ ಬಂದಿದ್ದ. ಈ ವೇಳೆ ಸ್ನಾನಕ್ಕೆಂದು ನದಿಗೆ ಇಳಿದಾಗ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಶವವನ್ನು ಹೊರ ತೆಗೆದಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸುದ್ದಿಯನ್ನೂ ಓದಿ | Murder Case: ತಂಗಿಯನ್ನು ಪ್ರೀತಿಸಿದ್ದಕ್ಕೆ ಯುವಕನನ್ನು ಬರ್ಬರವಾಗಿ ಹತ್ಯೆಗೈದ ಸಹೋದರರು!
ಸೊಸೈಟಿ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ಗೆ ವೋಟು ಹಾಕಿಸಿದ್ದಕ್ಕೆ ಯುವತಿ ಮೇಲೆ ಮಾರಣಾಂತಿಕ ಹಲ್ಲೆ!
ಮಂಡ್ಯ: ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವೋಟ್ ಹಾಕಿಸಿದ್ದಕ್ಕಾಗಿ ಯುವತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ( Assault Case) ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಚೋಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಲ್ಲೆಯಿಂದ ಯುವತಿಯ ತುಟಿ ಕಟ್ ಆಗಿದ್ದು, ಹಲ್ಲುಗಳು ಮುರಿದಿವೆ. ಈ ಸಂಬಂಧ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ. ಜೆಡಿಎಸ್ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಶಾಂತ್, ಪ್ರತಾಪ್ ರಾಜು, ಪ್ರಮೋದ್ ಹಾಗೂ ಹರೀಶ್ ಎಂಬುವರ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ.
ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕಿಸಿದ್ದಕ್ಕೆ ಯುವತಿಯ ಮೇಲೆ ಜೆಡಿಎಸ್ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೆಡಿಎಸ್ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಶಾಂತ್ ಮತ್ತು ಗ್ಯಾಂಗ್ ಗೂಂಡಾಗಿರಿ ನಡೆಸಿದ್ದು, ಈ ಸಂಬಂಧ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ. ದೂರು ಕೊಟ್ಟಿದ್ದಕ್ಕೆ ರಘು ಮತ್ತು ವಿಕಾಸ್ ಕುಟುಂಬಸ್ಥರ ಮೇಲೂ ಹಲ್ಲೆ ನಡೆಸಲಾಗಿದೆ.
ಈ ಸುದ್ದಿಯನ್ನೂ ಓದಿ | Road Accident: ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ 10 ವರ್ಷದ ಬಾಲಕ ಸಾವು; ರೊಚ್ಚಿಗೆದ್ದು ಲಾರಿಗೆ ಬೆಂಕಿ ಹಚ್ಚಿದ ಜನ