Bengaluru News: ಬೆಂಗಳೂರಿನಲ್ಲಿ ಫೆ.7 ರಂದು 1,122 ಗಾಯಕರಿಂದ ವಚನ ಗಾನ ವೈಭವ
Bengaluru News: ರಂಗ ಸಂಸ್ಥಾನ ಬೆಂಗಳೂರು ವತಿಯಿಂದ ಫೆ.7 ರಂದು ಶುಕ್ರವಾರ ಸಂಜೆ 5.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ 1,122 ಗಾಯಕರಿಂದ ವಚನ ಗಾನ ವೈಭವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕುರಿತ ವಿವರ ಇಲ್ಲಿದೆ.
ಬೆಂಗಳೂರು: ರಂಗ ಸಂಸ್ಥಾನ ಬೆಂಗಳೂರು ವತಿಯಿಂದ ಫೆ.7 ರಂದು ಶುಕ್ರವಾರ ಸಂಜೆ 5.30 ಕ್ಕೆ ಬೆಂಗಳೂರಿನ (Bengaluru News) ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ 1,122 ಗಾಯಕರಿಂದ ವಚನ ಗಾನ ವೈಭವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ತರಳಬಾಳು ಶಾಖಾಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಶೇಷಾದ್ರಿಪುರಂ ಶಿಕ್ಷಣ ದತ್ತಿ ಗೌ.ಕಾರ್ಯದರ್ಶಿ ನಾಡೋಜ ಡಾ. ವೂಡೇ ಪಿ. ಕೃಷ್ಣ ಅಧ್ಯಕ್ಷತೆ ವಹಿಸುವರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಲೀಲಾದೇವಿ ಆರ್ ಪ್ರಸಾದ್, ರಾಣಿ ಸತೀಶ್, ಕರ್ನಾಟಕ ಜಾನಪದ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಟಿ. ತಿಮ್ಮೇಗೌಡ, ಹಿರಿಯ ಸಾಹಿತಿ ಜಾಣಗೆರೆ ವೆಂಟಕರಾಮಯ್ಯ, ಡಾ. ಶಂಕರ್ ಬಿದರಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಸಿ. ಸೋಮಶೇಖರ, ರಮಣಶ್ರೀ ಸಮೂಹ ಸಂಸ್ಥೆಗಳ ಚೇರ್‌ಮನ್ ಎಸ್. ಷಡಕ್ಷರಿ, ಡಾ.ಎಸ್.ಜಿ. ಸುಶೀಲಮ್ಮ, ಶ್ರೀರಾಮಚಂದ್ರ ಅವರು ಪಾಲ್ಗೊಳ್ಳಲಿದ್ದಾರೆ. ರಂಗಸಂಸ್ಥಾನ ಅಧ್ಯಕ್ಷ ಡಾ. ಬಂಡ್ಲಹಳ್ಳಿ ವಿಜಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಗಾಯಕರಾಗಿ ಮೇಘನಾ ಕುಮಾರ್, ಕವಿತಾ ಎಸ್ ಮಧುಕುಮಾರ್, ಸಂಸ್ಕೃತಿ, ಎಂ.ಮಂಜುಳ ಶಶಿಭೂಷಣ್, ಸಂಧ್ಯಾ, ಮನಸ್ವಿ, ವರ್ಣಿಕ ಜಿ. ಉಡುಪ, ದಿಷಾ ಪ್ರಶಾಂತ್, ಮನೋಜ್ಞ, ಪ್ರಸೀದ, ರೋಹಿಣಿ, ಸಂಯುಕ್ತ, ಭವಾನಿ, ರಮ್ಯಾ, ವನಿಕ, ರುಚಿತಾ, ಸುದೀಪ್ತ ಎಸ್. ಶಕುಂತಲ, ಪ್ರತಿಮಾ, ವೀಣಾ ಮಹೇಶ್ ಜತೆಗೆ 1,122 ಸಮೂಹ ಗಾಯಕರು ಪಾಲ್ಗೊಳ್ಳಲಿದ್ದಾರೆ.
12ನೇ ಶತಮಾನದಲ್ಲಿ ಹೊಸ ಸಮಾಜ ನಿರ್ಮಾಣ ಮಾಡುವ ಸಲುವಾಗಿ ಬಸವಣ್ಣನವರು ಶರಣ ಚಳವಳಿಯ ನೇತೃತ್ವ ವಹಿಸಿದ ಫಲವಾಗಿ ವೈವಿದ್ಯಮಯ ವಚನ ಸಾಹಿತ್ಯ ಸಂಪತ್ತು ನಮಗೆ ದೊರಕಿದೆ. ಇವರ ಜತೆಗೆ ನೂರಾರು ಕಾಯಕ ಯೋಗಿಗಳು ವಚನಗಳನ್ನು ರಚಿಸಿದರು.
ಬಸವ ಕಲ್ಯಾಣದಲ್ಲಿ ನಡೆದ ಕ್ರಾಂತಿಕಾರಕ ವಚನ ಚಳವಳಿಯಿಂದ ಸಂಶೋಧನೆ ಸೇರಿದಂತೆ ಬಗೆಬಗೆಯ ನೂರಾರು ವಚನ ವಿಶ್ಲೇಷಣಾ ಕೃತಿಗಳು ಪ್ರಕಟಗೊಳ್ಳುತ್ತಲೇ ಇವೆ. ಮುಂದುವರೆದು ವಚನ ಸಂಗೀತದಲ್ಲಿ ಮೊಟ್ಟಮೊದಲಿಗೆ ಪಂ. ಮಲ್ಲಿಕಾರ್ಜುನ ಮನ್ಸೂರ್ ಅವರು ʼಅಕ್ಕ ಕೇಳವ್ವ ನಾನೊಂದ ಕನಸ ಕಂಡೆʼ ವಚನಕ್ಕೆ ರಾಗ ಸಂಯೋಜನೆಯೊಂದಿಗೆ ಹಾಡಿ ಪ್ರಸಿದ್ಧಿಯಾಗಲು ಕಾರಣರಾದರು. ಕಾಲಾನಂತರ ನೂರಾರು ವೈವಿದ್ಯಮಯ ವಚನಗಳು ಸಂಗೀತ ಸಂಯೋಜನೆಗೊಂಡು ಜನಪ್ರಿಯತೆ ಪಡದು ಜನಮನದಲ್ಲಿ ನೆಲೆ ನಿಂತಿವೆ.
ಈ ಸುದ್ದಿಯನ್ನೂ ಓದಿ | Job Guide: ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‌ನಲ್ಲಿದೆ 246 ಹುದ್ದೆ; ಹೀಗೆ ಅಪ್ಲೈ ಮಾಡಿ
ಒಂದೇ ವೇದಿಕೆಯಲ್ಲಿ ಈಗ 1,122 ಗಾಯಕರು ʼವಚನ ಗಾನ ವೈಭವʼ ಎಂಬ ಬೃಹತ್ ಕಾರ್ಯಕ್ರಮದ ವೇದಿಕೆಯಲ್ಲಿ ಸಮಾವೇಶಗೊಂಡು ಹಾಡುತ್ತಿದ್ದಾರೆ. 12ನೇ ಶತಮಾನದಿಂದ ಇಲ್ಲಿಯವರೆಗೂ ವಚನ ಗಾಯನದ ವ್ಯಾಪ್ತಿಯಲ್ಲಿ ಸಹಸ್ರ ಕಂಠಗಳ ಮೂಲಕ ಹಾಡುತ್ತಿರುವುದು ಜಾಗತಿಕವಾಗಿ ಸೇರ್ಪಡೆಗೊಂಡು ದಾಖಲೆಯಾಗುತ್ತಿದೆ ಎಂದು ರಂಗಸಂಸ್ಥಾನ ಅಧ್ಯಕ್ಷ ಡಾ. ಬಂಡ್ಲಹಳ್ಳಿ ವಿಜಯಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.