Honey trap Case: ಬೆಂಗಳೂರಲ್ಲಿ 68ರ ವೃದ್ಧನಿಗೆ ಯುವತಿ ಹನಿ ಟ್ರ್ಯಾಪ್; 2 ಕೋಟಿ ನೀಡುವಂತೆ ಬೇಡಿಕೆ!
Honey trap Case: ಇಬ್ಬರು ಯುವಕರ ಮೂಲಕ ಯುವತಿ 2 ಕೋಟಿ ರೂ.ಗೆ ಡಿಮ್ಯಾಂಡ್ ಮಾಡಿದ್ದಾಳೆ. ದುಡ್ಡು ನೀಡದಿದ್ದರೇ ಖಾಸಗಿ ವಿಡಿಯೊಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಗೆ ವೃದ್ಧ ದೂರು ನೀಡಿದ್ದಾರೆ.


ಬೆಂಗಳೂರು: ರಾಜ್ಯದಲ್ಲಿ ಹನಿ ಟ್ರ್ಯಾಪ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಪ್ರೀಸ್ಕೂಲ್‌ಗೆ ಬರುತ್ತಿದ್ದ ಮಗುವಿನ ತಂದೆಗೆ ಶಿಕ್ಷಕಿಯೇ ಹನಿ ಟ್ರ್ಯಾಪ್ ಮಾಡಿದ್ದ ಘಟನೆ (Honey trap Case) ಬೆನ್ನಲ್ಲೇ 68ರ ವೃದ್ಧನಿಗೆ 25ರ ಚೆಲುವೆ ಹನಿ ಟ್ರ್ಯಾಪ್ ಮಾಡಿರುವುದು ನಗರದಲ್ಲಿ ಬೆಳಕಿಗೆ ಬಂದಿದೆ. 2 ಕೋಟಿ ರೂ. ಡಿಮ್ಯಾಂಡ್ ಮಾಡಿರುವ ಯುವತಿ, ದುಡ್ಡು ನೀಡದಿದ್ದರೆ ಖಾಸಗಿ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಗೆ ವೃದ್ಧ ದೂರು ನೀಡಿದ್ದಾರೆ.
ಇಬ್ಬರು ಯುವಕರ ಮೂಲಕ ಯುವತಿ 2 ಕೋಟಿ ರೂ.ಗೆ ಡಿಮ್ಯಾಂಡ್ ಮಾಡಿದ್ದಾಳೆ. 2 ಕೋಟಿ ರೂ. ನೀಡದಿದ್ದರೇ ಖಾಸಗಿ ವಿಡಿಯೊಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಆರೋಪಿಸಿ ಅಜಯ್, ಅಭಿ ಎಂಬುವವರ ವಿರುದ್ಧ 68ರ ವೃದ್ಧ ಕೋರಮಂಗಲ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಕೋರಮಂಗಲದ ಕಾಫಿ ಬಾರ್ ಒಂದರಲ್ಲಿ ಖಾಸಗಿ ವಿಡಿಯೊಗಳನ್ನು ತೋರಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಖಾಸಗಿ ವಿಡಿಯೊಗಳನ್ನು ಚಿತ್ರೀಕರಣ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬಳಿಕ ಆರೋಪಿಗಳಿಬ್ಬರು 2 ಕೋಟಿ ರೂ.ಗೆ ಬೇಡಿಕೆ ಇಟ್ಟು, 40 ಲಕ್ಷಕ್ಕೆ ಡೀಲ್ ಕುದುರಿಸಿದ್ದರು. 2-3 ದಿನಗಳ ಒಳಗೆ ಹಣ ನೀಡದಿದ್ದರೇ ವಿಡಿಯೊ ಹರಿಬಿಡುವುದಾಗಿ ಹೆದರಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಸದ್ಯ ಈ ಬಗ್ಗೆ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖಾಸಗಿ ವಿಡಿಯೊಗಳನ್ನು ಎಡಿಟ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಈ ಸುದ್ದಿಯನ್ನೂ ಓದಿ | Self Harming: ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆಗೆ ಶರಣು
400 ರೂ. ಐಸ್ ಕ್ರೀಮ್‌ಗಾಗಿ 40 ಸಾವಿರ ಕಳೆದುಕೊಂಡ ಮಹಿಳೆ
ಬೆಂಗಳೂರು: ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಐಸ್ ಕ್ರೀಮ್ ಖರೀದಿಸಲು ಹೋಗಿ 40 ಸಾವಿರ ರೂ. ಕಳೆದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಮಾ.28ರಂದು ಬಿಗ್ ಬಾಸ್ಕೆಟ್ ಆ್ಯಪ್‌ನಲ್ಲಿ 2 ಕೆ.ಜಿ. ಕಿತ್ತಲೆ ಹಣ್ಣು, 250 ಗ್ರಾಂ ಕೊತ್ತಂಬರಿ ಸೊಪ್ಪು ಹಾಗೂ 1 ಕೆ.ಜಿ. ಐಸ್ ಕ್ರೀಮ್ ಅನ್ನು ಮಹಿಳೆ ಆರ್ಡರ್ ಮಾಡಿ, ಹಣವನ್ನೂ ಪಾವತಿಸಿದ್ದರು. ಆದರೆ, ಡೆಲಿವರಿ ಬಾಯ್ ಐಸ್ ಕ್ರೀಮ್ ಹೊರತುಪಡಿಸಿ ಉಳಿದೆಲ್ಲಾ ವಸ್ತುಗಳನ್ನು ತಂದುಕೊಟ್ಟಿದ್ದ. ಹೀಗಾಗಿ ಗೂಗಲ್‌ನಲ್ಲಿ ಬಿಗ್ ಬಾಸ್ಕೆಟ್ ಕಸ್ಟಮರ್ ಕೇರ್ ಸಂಖ್ಯೆ ಪಡೆದು ಕರೆ ಮಾಡಿದ ವೇಳೆ, ಸೈಬರ್ ವಂಚಕರು ಖಾತೆಯಿಂದ 40 ಸಾವಿರ ರೂ. ಎಗರಿಸಿದ್ದಾರೆ.
ಅಲಿ ಅಸ್ಕರ್ ರಸ್ತೆಯ ನಿವಾಸಿ ಸುನೀತಾ ಖುರನಾ ಮೋಸ ಹೋದವರು. ಇವರು ನೀಡಿದ ದೂರಿನ ಮೇರೆಗೆ ವಿಧಾನಸೌಧ ಪೊಲೀಸ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿ, ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
ಸುನೀತಾ ಅವರು ಮಾ.28ರಂದು ಬಿಗ್ ಬಾಸ್ಕೆಟ್ ಆ್ಯಪ್‌ನಲ್ಲಿ 2 ಕೆ.ಜಿ. ಕಿತ್ತಳೆ ಹಣ್ಣು, 250 ಗ್ರಾಂ ಕೊತ್ತಂಬರಿ ಸೊಪ್ಪು ಹಾಗೂ 1 ಕೆ.ಜಿ. ಐಸ್‌ಕ್ರೀಮ್ ಆರ್ಡರ್ ಮಾಡಿದ್ದರು. ಅದರಂತೆ 2 ಕೆ.ಜಿ.ಕಿತ್ತಲೆ ಹಣ್ಣು ಹಾಗೂ 250 ಗ್ರಾಂ ಕೊತ್ತಂಬರಿ ಸೊಪ್ಪು ಮನೆಗೆ ಡೆಲಿವರಿ ಆಗಿದೆ. ಆದರೆ, ಐಸ್‌ಕ್ರೀಮ್ ಬಾರದ ಕಾರಣ ಗೂಗಲ್‌ನಲ್ಲಿ ಬಿಗ್ ಬಾಸ್ಕೆಟ್ ಕಸ್ಟಮರ್ ಕೇರ್ ಸಂಖ್ಯೆ ಪಡೆದು ಕರೆ ಮಾಡಿದಾಗ, ಆ ಸಂಖ್ಯೆ ಚಾಲ್ತಿಯಲ್ಲಿ ಇಲ್ಲ ಎಂಬ ಮಾಹಿತಿ ಬಂದಿದೆ.
ಈ ಸುದ್ದಿಯನ್ನೂ ಓದಿ | MP Tragedy: 8 ಜನರನ್ನು ಕ್ಷಣಾರ್ಧದಲ್ಲಿ ಬಲಿ ಪಡೆದ 150 ವರ್ಷ ಹಳೆಯ ಬಾವಿ; ಅಷ್ಟಕ್ಕೂ ಆಗಿದ್ದೇನು?
ಸುನೀತಾ ಅವರು ಮತ್ತೆ ಗೂಗಲ್ ಸರ್ಚ್ ಮಾಡಿ ಬೇರೆ ಸಂಖ್ಯೆಗೆ ಕರೆ ಮಾಡಿದಾಗ, ಕರೆ ಸ್ವೀಕರಿಸಿದ ವ್ಯಕ್ತಿ ಇದು ಬಿಗ್ ಬಾಸ್ಕೆಟ್ ಎಂದು ಹೇಳಿದ್ದಾನೆ. ಸುನೀತಾ ಅವರ ಆರ್ಡರ್ ಬಗ್ಗೆ ಮಾಹಿತಿ ಪಡೆದು 1 ಕೆ.ಜಿ. ಐಸ್ ಕ್ರೀಮ್ 400 ಹಣ ವಾಪಾಸ್ ನೀಡುವುದಾಗಿ ಹೇಳಿದ್ದಾನೆ. ಅದರಂತೆ ಮೊಬೈಲ್‌ನಲ್ಲಿ ಕೆಲವು ಅಯ್ಕೆಗಳನ್ನು ಕ್ಲಿಕ್ ಮಾಡುವಂತೆ ಸೂಚಿಸಿದ್ದಾನೆ. ಕ್ಲಿಕ್ ಮಾಡಿದ ಬಳಿಕ ಸುನೀತಾ ಅವರ ಬ್ಯಾಂಕ್ ಖಾತೆಯಿಂದ 40 ಸಾವಿರ ರೂ. ಹಣ ಕಡಿತವಾಗಿದೆ. ಈ ವೇಳೆ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದು ಸುನೀತಾ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.