ಭಾರತದ ಪ್ರಮುಖ ಆನ್‌ಲೈನ್ ಡೆಲಿವರಿ ಪ್ಲಾಟ್‌ಫಾರ್ಮ್, ಗ್ರಾಹಕರಿಗೆ ಸೇವೆ ಒದಗಿಸುವ ತನ್ನ ಡೆಲಿವರಿ ಪಾಲುದಾರರ ಆರ್ಥಿಕ ಮತ್ತು ಆರೋಗ್ಯ ಭದ್ರತೆಗಾಗಿ ಮಹತ್ವದ ಹೆಜ್ಜೆಯಿಟ್ಟಿದೆ. ಪ್ರಮುಖ ವಿಮಾ ಕಂಪನಿಯಾದ 'ಇಂಡಸ್‌ಇಂಡ್ ಜನರಲ್ ಇನ್ಶೂರೆನ್ಸ್' (ಹಿಂದಿನ ರಿಲಯನ್ಸ್ ಜನರಲ್ ಇನ್ಶೂರೆನ್ಸ್) ಜೊತೆಗೂಡಿ ತನ್ನ ಡೆಲಿವರಿ ಸಿಬ್ಬಂದಿಗೆ ನೀಡುತ್ತಿದ್ದ ಸಮಗ್ರ ವಿಮಾ ಯೋಜನೆಯನ್ನು ಇದೀಗ ನವೀಕರಿಸಿದೆ.
ಭಾರತದ ಗಿಗ್ ಕಾರ್ಯಪಡೆಗೆ ಸಾಮಾಜಿಕ ಮತ್ತು ಆರ್ಥಿಕ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಇದೊಂದು ದೊಡ್ಡ ಪ್ರಯತ್ನವಾಗಿದೆ. 2025-26ರ ಆರ್ಥಿಕ ವರ್ಷದಲ್ಲಿ, ಆನ್‌ಲೈನ್ ಡೆಲಿವರಿ ಕಂಪನಿಯ ಅಪಘಾತ ಮತ್ತು ಆರೋಗ್ಯ ವಿಮಾ ಯೋಜನೆಯಡಿ ಬರೋಬ್ಬರಿ 25 ಲಕ್ಷಕ್ಕೂ ಹೆಚ್ಚು ಡೆಲಿವರಿ ಪಾಲುದಾರರು ವಿಮಾ ರಕ್ಷಣೆಯ ಪ್ರಯೋಜನ ಪಡೆದಿದ್ದಾರೆ.
ಏನೆಲ್ಲಾ ಸೌಲಭ್ಯಗಳಿರಲಿವೆ?
ಹೊಸದಾಗಿ ನವೀಕರಿಸಲಾದ ಈ ವಿಮಾ ಯೋಜನೆಯು ಡೆಲಿವರಿ ಸಿಬ್ಬಂದಿಗೆ ಹಾಗೂ ಅವರ ಕುಟುಂಬಕ್ಕೆ ನೆರವಾಗಲಿದ್ದು, ದುರದೃಷ್ಟವಶಾತ್ ಅಪಘಾತದಿಂದ ಸಾವು ಸಂಭವಿಸಿದರೆ ಅಥವಾ ಸಂಪೂರ್ಣ ಅಂಗವೈಕಲ್ಯ ಉಂಟಾದರೆ 10 ಲಕ್ಷ ರೂ. ಪರಿಹಾರ, ಜೊತೆಗೆ ಮಕ್ಕಳ ಶಿಕ್ಷಣಕ್ಕೂ ಆರ್ಥಿಕ ಬೆಂಬಲ ಸಿಗಲಿದೆ. ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾದರೆ 2 ಲಕ್ಷ ರೂ.ವರೆಗೆ ಚಿಕಿತ್ಸಾ ವೆಚ್ಚ, ಡೆಲಿವರಿ ಸಿಬ್ಬಂದಿಯ ಕುಟುಂಬದ ಆರೋಗ್ಯ ರಕ್ಷಣೆಗಾಗಿ 1 ಲಕ್ಷ ರೂ. ಕವರ್ ದೊರೆಯಲಿದೆ.
ಇದನ್ನೂ ಓದಿ: Emergency Delivery: ಹೇರ್ ಕ್ಲಿಪ್, ಚಾಕು ನೆರವಿನಿಂದ ರೈಲು ಫ್ಲ್ಯಾಟ್‌ಫಾರ್ಮ್‌ನಲ್ಲಿಯೇ ಹೆರಿಗೆ ಮಾಡಿಸಿದ ಆರ್ಮಿ ಡಾಕ್ಟರ್
ಎಲ್ಲಾ ಮಹಿಳಾ ಡೆಲಿವರಿ ಪಾಲುದಾರರಿಗೆ ಹಾಗೂ ಪುರುಷ ಪಾಲುದಾರರ ಪತ್ನಿಯರಿಗೆ ಈ ವಿಮೆಯಡಿ ಹೆರಿಗೆ ಸೌಲಭ್ಯ ಒದಗಿಸಲಾಗುತ್ತದೆ. ಕಳೆದ ಬಾರಿ ಶೇ. 75ರಷ್ಟು ಪುರುಷ ಸಿಬ್ಬಂದಿಯ ಪತ್ನಿಯರು ಹಾಗೂ ಶೇ. 25ರಷ್ಟು ಮಹಿಳಾ ಸಿಬ್ಬಂದಿ ಈ ಸೌಲಭ್ಯ ಬಳಸಿಕೊಂಡಿದ್ದರು.
ಮೊದಲ ದಿನದಿಂದಲೇ ವಿಮೆ ಅನ್ವಯ
ಈ ವಿಮಾ ಪಾಲಿಸಿಯ ಬಹುದೊಡ್ಡ ವಿಶೇಷತೆಯೆಂದರೆ, ಇದರಲ್ಲಿ ಯಾವುದೇ 'ಕಾಯುವಿಕೆಯ ಅವಧಿ' ಇರುವುದಿಲ್ಲ. ಮೊದಲೇ ಇರುವ ಕಾಯಿಲೆಗಳಿಗೂ ಕೆಲಸಕ್ಕೆ ಸೇರಿದ ಮೊದಲ ದಿನದಿಂದಲೇ ವಿಮೆ ಅನ್ವಯವಾಗುತ್ತದೆ. 10,000 ರೂ.ವರೆಗೆ ಹೊರರೋಗಿ (ಒಪಿಡಿ) ಚಿಕಿತ್ಸೆ, 10,000 ರೂ.ವರೆಗಿನ ತುರ್ತು ಆಂಬ್ಯುಲೆನ್ಸ್ ಸೇವೆ, ಆಸ್ಪತ್ರೆಗೆ ದಾಖಲಾಗುವ ಮುನ್ನ ಹಾಗೂ ನಂತರದ ವೆಚ್ಚ, ಚಿಕಿತ್ಸೆ ಪಡೆಯುವಾಗ ಆಗುವ ವೇತನ ನಷ್ಟಕ್ಕೆ ಬೆಂಬಲ ಕೂಡ ಇದರಲ್ಲಿ ಸೇರಿದೆ. ಸಿಬ್ಬಂದಿಗಳು ಸ್ವಿಗ್ಗಿ ಡೆಲಿವರಿ ಪಾರ್ಟ್ನರ್ ಆ್ಯಪ್ ಮೂಲಕವೇ ಈ ಎಲ್ಲ ಪ್ರಯೋಜನಗಳನ್ನು ಸುಲಭವಾಗಿ ಕ್ಲೈಮ್ ಮಾಡಬಹುದು.
24x7 ಉಚಿತ ವೈದ್ಯಕೀಯ ಸಮಾಲೋಚನೆ
ಇಂಡಸ್‌ಇಂಡ್ ಜನರಲ್ ಇನ್ಶೂರೆನ್ಸ್ ಸಹಯೋಗದಲ್ಲಿ, ಎಲ್ಲಾ ಸ್ವಿಗ್ಗಿ ಡೆಲಿವರಿ ಪಾಲುದಾರರು ಮತ್ತು ಅವರ ಕುಟುಂಬದವರು ದಿನದ 24 ಗಂಟೆಯೂ ತಜ್ಞ ವೈದ್ಯರೊಂದಿಗೆ ಉಚಿತವಾಗಿ ಟೆಲಿ ಕನ್ಸಲ್ಟೇಶನ್ ಪಡೆಯಬಹುದು. ಅಲ್ಲದೆ, ಔಷಧಿಗಳು ಮತ್ತು ಲ್ಯಾಬ್ ಟೆಸ್ಟ್‌ಗಳ ಮೇಲೂ ರಿಯಾಯಿತಿ ಸಿಗಲಿದೆ.
ಈ ಬಗ್ಗೆ ಹೆಚ್ಚಿನ ವಿವರ ಹಂಚಿಕೊಂಡಿರುವ ಆನ್‌ಲೈನ್ ಡೆಲಿವರಿ ಕಂಪೆನಿಯ ಫುಡ್ ಮಾರ್ಕೆಟ್ ಪ್ಲೇಸ್‌ನ ಸಿಒಒ ಸೌರವ್ ಗೋಯಲ್, "ಭಾರತದ ಗಿಗ್ ಆರ್ಥಿಕತೆಯಲ್ಲಿ ನಮ್ಮ ಡೆಲಿವರಿ ಪಾರ್ಟ್ನರ್ ವಿಮಾ ಯೋಜನೆಯು ಅತ್ಯಂತ ಸಮಗ್ರ ರಕ್ಷಣಾ ಉಪಕ್ರಮವಾಗಿದೆ. ಕಳೆದ ವರ್ಷ ಲಕ್ಷಾಂತರ ಪಾಲುದಾರರು ಇದರ ಲಾಭ ಪಡೆದಿದ್ದಾರೆ. ಇದೀಗ ಹೆಚ್ಚಿನ ಪ್ರಯೋಜನಗಳೊಂದಿಗೆ ಈ ಯೋಜನೆಯನ್ನು ನವೀಕರಿಸುವ ಮೂಲಕ, ಸಿಬ್ಬಂದಿಗೆ ಅತ್ಯಂತ ಅಗತ್ಯವಿರುವ ಸಮಯದಲ್ಲಿ ನಾವು ಆರ್ಥಿಕ ಮತ್ತು ಆರೋಗ್ಯ ರಕ್ಷಣೆಯನ್ನು ಒದಗಿಸುತ್ತಿದ್ದೇವೆ. ಇಂಡಸ್‌ಇಂಡ್ ಜನರಲ್ ಇನ್ಶೂರೆನ್ಸ್ ಜೊತೆಗಿನ ನಮ್ಮ ಸಹಭಾಗಿತ್ವ ಮುಂದುವರಿದಿರುವುದು ಸಂತಸ ತಂದಿದೆ,” ಎಂದರು.
ವಿಮಾ ರಕ್ಷಣೆಯ ಜೊತೆಗೆ, ಆನ್‌ಲೈನ್ ಡೆಲಿವರಿ ಕಂಪನಿಯು ಕಳೆದ ವರ್ಷ ಹಲವು ನಗರಗಳಲ್ಲಿ ಡೆಲಿವರಿ ಸಿಬ್ಬಂದಿಗಾಗಿ ಉಚಿತ 'ಆರೋಗ್ಯ ತಪಾಸಣಾ ಶಿಬಿರ'ಗಳನ್ನು ಆಯೋಜಿಸಿತ್ತು. ಈ ವರ್ಷ ದೇಶಾದ್ಯಂತ ಮತ್ತಷ್ಟು ನಗರಗಳಿಗೆ ಈ ಶಿಬಿರಗಳನ್ನು ವಿಸ್ತರಿಸಲು ಕಂಪನಿ ನಿರ್ಧರಿಸಿದೆ.