ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Emergency Delivery: ಹೇರ್‌ ಕ್ಲಿಪ್‌, ಚಾಕು ನೆರವಿನಿಂದ ರೈಲು ಫ್ಲ್ಯಾಟ್‌ಫಾರ್ಮ್‌ನಲ್ಲಿಯೇ ಹೆರಿಗೆ ಮಾಡಿಸಿದ ಆರ್ಮಿ ಡಾಕ್ಟರ್‌

Viral News: ಉತ್ತರ ಪ್ರದೇಶದ ಝಾನ್ಸಿ ರೈಲು ನಿಲ್ದಾಣದಲ್ಲಿ ವೈದ್ಯರಿಬ್ಬರು ಹೆರಿಗೆ ಮಾಡಿಸಿ ಗಮನ ಸೆಳೆದಿದ್ದಾರೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಮಯ ಇಲ್ಲದ ಕಾರಣ ಅಲ್ಲೇ ಇದ್ದ ವೈದ್ಯರು ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಿ ಮತ್ತು ಮಗು ಆರೋಗ್ಯದಿಂದ ಇದ್ದಾರೆ.

ರೈಲು ಫ್ಲ್ಯಾಟ್‌ಫಾರ್ಮ್‌ನಲ್ಲಿಯೇ ಹೆರಿಗೆ ಮಾಡಿಸಿದ ಆರ್ಮಿ ಡಾಕ್ಟರ್‌

Profile Ramesh B Jul 6, 2025 9:03 PM

ಲಖನೌ: 2009ರಲ್ಲಿ ತೆರೆಕಂಡ ಆಮೀರ್‌ ಖಾನ್‌ ಅಭಿನಯದ ಬಾಲಿವುಡ್‌ನ ಸೂಪರ್‌ ಹಿಟ್‌ ಚಿತ್ರ ʼ3 ಈಡಿಯಟ್ಸ್‌ʼ ನೋಡಿದ್ದರೆ ನಿಮಗೆ ನಾಯಕ ವಾಕ್ಯೂಮ್‌ ಕ್ಲೀನರ್‌ ಸಹಾಯದಿಂದ ಹೆರಿಗೆ ಮಾಡಿಸುವ ದೃಶ್ಯ ನೆನಪಿರಬಹುದು. ಅಂತಹದ್ದೇ ರಿಯಲ್‌ ಪ್ರಸಂಗವೊಂದು ಇದೀಗ ಉತ್ತರ ಪ್ರದೇಶದಲ್ಲಿ ನಡೆದಿದೆ. ವೈದ್ಯರೊಬ್ಬರು ರೈಲು ನಿಲ್ದಾಣದಲ್ಲಿ ಹೇರ್‌ ಕ್ಲಿಪ್‌ ಮತ್ತು ಚಾಕು ಸಹಾಯದಿಂದ ಹೆರಿಗೆ ಮಾಡಿಸಿ ಗಮನ ಸೆಳೆದಿದ್ದಾರೆ. ಹೌದು, ಉತ್ತರ ಪ್ರದೇಶದ ಝಾನ್ಸಿ ರೈಲು ನಿಲ್ದಾಣ ಇಂತಹದ್ದೊಂದು ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಹೇರ್‌ ಕ್ಲಿಪ್‌, ಚಿಕ್ಕ ಚಾಕು ನೆರವಿನಿಂದ ಆರ್ಮಿ ವೈದ್ಯರೊಬ್ಬರು ಹೆರಿಗೆ ಮಾಡಿಸಿದ್ದಾರೆ (Viral News). ಆ ಮೂಲಕ ಆರೋಗ್ಯವಂತ ಹೆಣ್ಣು ಮಗು ಜನಿಸಿದೆ (Emergency Delivery). ಕನಿಷ್ಠ ಸಂಪನ್ಮೂಲಗಳನ್ನು ಬಳಸಿಕೊಂಡು ಯುವ ವೈದ್ಯರೊಬ್ಬರು ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದು ಇದಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

''ಪನ್ವೇಲ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ಕಾರಣಕ್ಕೆ ಶನಿವಾರ (ಜು. 5) ಮಧ್ಯಾಹ್ನ ಅವರನ್ನು ಝಾನ್ಸಿ ನಿಲ್ದಾಣದಲ್ಲಿ ಇಳಿಸಲಾಯಿತು. ಬಳಿಕ ಅಲ್ಲೇ ಇದ್ದ ಯುವ ವೈದ್ಯರೊಬ್ಬರು ಹೆರಿಗೆ ಮಾಡಿಸಿದರುʼʼ ಎಂದು ಉತ್ತರ ಮಧ್ಯ ರೈಲ್ವೆಯ ಝಾನ್ಸಿ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.



ಘಟನೆ ವಿವರ

ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಗಮನಿಸಿದ ಟಿಕೆಟ್ ತಪಾಸಣೆ ನಡೆಸುವ ಸಿಬ್ಬಂದಿ ನೆರವಿಗೆ ಧಾವಿಸಿದರು. ವ್ಹೀಲ್‌ಚೇರ್‌ನಲ್ಲಿ ಅವರನ್ನು ಕೂರಿಸಿ ಕರೆದೊಯ್ಯುತ್ತಿರುವುದನ್ನು ರೈಲು ನಿಲ್ದಾಣದಲ್ಲಿದ್ದ ಸೇನಾ ವೈದ್ಯಕೀಯ ದಳದ ಅಧಿಕಾರಿ ಮೇಜರ್ ಡಾ. ರೋಹಿತ್ ಬಚ್ವಾಲಾ (31) ಗಮನಿಸಿದರು. ಕೂಡಲೇ ಅವರೂ ಕಾರ್ಯ ಪ್ರವೃತ್ತರಾದರು. ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸುವಷ್ಟು ಸಮಯ ಇರಲಿಲ್ಲ. ಇದರಿಂದ ಡಾ. ರೋಹಿತ್ ಬಚ್ವಾಲಾ ರೈಲ್ವೆ ಸಿಬ್ಬಂದಿಯ ಸಹಾಯದಿಂದ ಪ್ಲಾಟ್‌ಫಾರ್ಮ್‌ನಲ್ಲಿಯೇ ಹೆರಿಗೆ ಮಾಡಿಸಲು ಮುಂದಾದರು. "ಈ ವೇಳೆ ನನ್ನ ಬಳಿ ಆಪರೇಷನ್‌ಗೆ ಅಗತ್ಯವಾದ ಉಪಕರಣ ಇರಲಿಲ್ಲ. ಹಾಗಂತ ಆಸ್ಪತ್ರೆಗೆ ಸಾಗಿಸುವಷ್ಟು ಸಮಯಾವಕಾಶವೂ ಇರಲಿಲ್ಲ. ಹೀಗಾಗಿ ಇದ್ದ ಉಪಕರಣವನ್ನೇ ಬಳಸಿ ಹೆರಿಗೆ ಮಾಡಿಸಲು ಮುಂದಾದೆʼʼ ಎಂದು ಮೇಜರ್ ಬಚ್ವಾಲಾ ಪಿಟಿಐಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Global Equality Index: ಜಾಗತಿಕ ಸಮಾನತೆ ಸೂಚ್ಯಂಕ; ಭಾರತಕ್ಕೆ ನಾಲ್ಕನೇ ಸ್ಥಾನ

"ನಾನು ನೋಡುವಾಗ ಮಹಿಳೆ ಹೆರಿಗೆ ನೋವಿನಿಂದ ಬಳಲಿ ಕುಸಿದು ಕುಳಿತಿದ್ದರು. ಈ ವೇಳೆ ಪ್ರತಿ ಕ್ಷಣವೂ ಅಮೂಲ್ಯವಾಗಿತ್ತು. ಹೀಗಾಗಿ ಅಲ್ಲೆ ಹೆರಿಗೆ ಮಾಡಿಸಲು ನಿರ್ಧರಿಸಿದೆʼʼ ಎಂದು ವಿವರಿಸಿದ್ದಾರೆ. ಹೆರಿಗೆಯ ನಂತರ, ತಾಯಿ ಮತ್ತು ಮಗುವನ್ನು ಆಂಬ್ಯುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತಾಯಿ ಮತ್ತು ಮಗು ಆರೋಗ್ಯದಿಂದ ಇದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಯಶಸ್ವಿಯಾಗಿ ಹೆರಿಗೆ ಮಾಡಿಸಿದ ಬಳಿಕ ಡಾ. ರೋಹಿತ್ ಬಚ್ವಾಲಾ ರೈಲು ಮೂಲಕ ಹೈದರಾಬಾದ್‌ಗೆ ತೆರಳಿದರು. "ವೈದ್ಯರಾಗಿ ನಾವು ಎಲ್ಲ ಸಮಯದಲ್ಲೂ ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧರಾಗಿರಬೇಕು. 2 ಜೀವಗಳನ್ನು ಉಳಿಸಲು ಸಾಧ್ಯವಾಗಿದ್ದು ನನಗೆ ಸಿಕ್ಕ ದೊಡ್ಡ ಆಶೀರ್ವಾದ ಎಂದು ಭಾವಿಸುತ್ತೇನೆ" ಎಂಬುದಾಗಿ ಹೇಳಿದ್ದಾರೆ.