ಬೆಂಗಳೂರು, ಜೂ. 15: ಸಿಲಿಕಾನ್ ಸಿಟಿ ಬೆಂಗಳೂರು ಆಧುನಿಕ ಲೈಪ್ ಸ್ಟೈಲ್ ಅನ್ನು ಜನ ಇಷ್ಟ ಪಟ್ಟರೂ ಇಲ್ಲಿನ ಟ್ರಾಫಿಕ್ ಅನ್ನೋದು ದೊಡ್ಡ ತಲೆನೋವು ಆಗಿ ಬದಲಾಗಿದೆ. ಇಲ್ಲಿನ ಅರ್ಧ ಜೀವನವನ್ನು ಟ್ರಾಫಿಕ್‌ನಲ್ಲೇ ಕಳೆದಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅನೇಕ ಜನರಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿ 4 ಕಿ.ಮೀ. ದೂರ ಕ್ರಮಿಸಲು 35 ನಿಮಿಷಗಳನ್ನು ತೆಗೆದುಕೊಂಡೆ ಎಂದು ಯುವಕನೊಬ್ಬ ಪೋಸ್ಟ್ ಶೇರ್ (Viral News) ಮಾಡಿದ್ದಾನೆ. ಇದು ಬೆಂಗಳೂರಿನ ಟ್ರಾಫಿಕ್ ಬಗೆಗಿನ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ದಿನ ನಿತ್ಯ ದೂರುಗಳು ಕೇಳಿ ಬರುತ್ತಲೇ ಇರುತ್ತವೆ. ಇದೀಗ ಯುವಕನೊಬ್ಬ ಬೆಂಗಳೂರಿನಲ್ಲಿ ಕೇವಲ 4 ಕಿಲೋ ಮೀಟರ್ ದೂರ ಕ್ರಮಿಸಲು 35 ನಿಮಿಷ ತೆಗೆದುಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಹೇಳಿದ್ದಾನೆ. ʼʼಇದು ನಾವು ವಾಕಿಂಗ್ ಹೋಗುವ ವೇಗದ ಸಮಯಕ್ಕಿಂತಲೂ ಕಡಿಮೆʼʼ ಎಂದು ಉಲ್ಲೇಖಿಸಿದ್ದಾನೆ.
ʼʼಬೆಂಗಳೂರಿನ ಅತಿ ದೊಡ್ಡ ಸಮಸ್ಯೆ ಈಗ ಟ್ರಾಫಿಕ್ ಅಲ್ಲ. ಬದಲಿಗೆ ಜನರು ಅದರೊಂದಿಗೆ ಬದುಕಲು ಕಲಿತುಕೊಂಡಿದ್ದಾರೆ. ಜನರು ಟ್ರಾಫಿಕ್ ಅನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದಾರೆ ಎಂಬುದಕ್ಕೆ ಇದೇ ಘಟನೆ ಸಾಕ್ಷಿ. ನಗರವು ಇಷ್ಟು ನಿಧಾನವಾಗಿ ಚಲಿಸುತ್ತಿರುವುದನ್ನು ಪ್ರಶ್ನಿಸುವ ಬದಲು ಜನರು ತಮ್ಮ ದೈನಂದಿನ ವೇಳಾಪಟ್ಟಿಯನ್ನೇ ಬದಲಾಯಿಸಿಕೊಳ್ಳುತ್ತಿದ್ದಾರೆ. ಜನರು 50 ನಿಮಿಷಗಳ ಮುಂಚಿತವಾಗಿ ಹೊರಡುವುದು ಇದಕ್ಕಿರುವ ಪರಿಹಾರ ಮಾರ್ಗʼʼ ಎಂದು ವ್ಯಂಗ್ಯವಾಡಿದ್ದಾನೆ.
ಲಂಡನ್‌ನ ಕಟ್ಟಡದ ಮೇಲಿಂದ ಬಿದ್ದ ಮಗುವನ್ನು 'ಕ್ಯಾಚ್' ಹಿಡಿದು ಜೀವ ಉಳಿಸಿದ ಭಾರತೀಯ
ಬೆಂಗಳೂರಿನ ಉತ್ಸಾಹವು ಸ್ಟಾಕ್‌ಹೋಮ್ ಸಿಂಡ್ರೋಮ್‌ಗೆ ಹತ್ತಿರವಾಗಿದೆ. ಜನರು ನಿಧಾನಗತಿಯ ಸಂಚಾರಕ್ಕೆ ಎಷ್ಟು ಆಳವಾಗಿ ಹೊಂದಿಕೊಂಡಿದ್ದಾರೆಂದರೆ ಯಾವುದೇ ಪ್ರತಿಭಟನೆಯಿಲ್ಲದೆ ಈ ಟ್ರಾಫಿಕ್‌ಗೆ ಹೊಂದಿಕೊಂಡಿದ್ದಾರೆ. 4 ಕಿ.ಮೀ. ಪ್ರಯಾಣಕ್ಕೆ ಅರ್ಧ ಗಂಟೆ ಬೇಕಾಗುವುದು ಕೇವಲ ಅಂಕಿ-ಅಂಶವಲ್ಲ, ಇದು ನಗರವು ಟ್ರಾಫಿಕ್ ಅನ್ನು ಹೇಗೆ ಸಹಜವಾಗಿಸಿಕೊಂಡಿದೆ ಎಂಬುದಕ್ಕೆ ಸಾಕ್ಷಿʼʼ ಎಂದು ಅನೇಕರು ತಿಳಿಸಿದ್ದಾರೆ.
ಸದ್ಯ ಈ ಪೋಸ್ಟ್‌ಗೆ ನೆಟ್ಟಿಗರಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನೆಟ್ಟಿಗರೊಬ್ಬರು, ʼʼಬೆಂಗಳೂರಿನ ಮೂಲಭೂತ ಕೊರತೆಯೇ ಈ ಟ್ರಾಫಿಕ್ ಸಮಸ್ಯೆಗೆ ಕಾರಣʼʼ ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಬೆಂಗಳೂರಿನ ಈ ಸಮಸ್ಯೆ ಪರಿಹಾರ ಆಗಲು ಸಾಧ್ಯವಿಲ್ಲʼʼ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.