ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Tunnel Road: ಎಸ್ಟೀಮ್ ಮಾಲ್‌ನಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆವರೆಗೆ 1.5 ಕಿ.ಮೀ. ಉದ್ದದ ನೂತನ ಸುರಂಗ ರಸ್ತೆ: ಡಿಕೆಶಿ

Tunnel Road: ಬೆಂಗಳೂರಿನ ಹೆಬ್ಬಾಳ ಜಂಕ್ಷನ್‌ನಲ್ಲಿ ನಿರ್ಮಾಣ ಮಾಡಿರುವ ನೂತನ ಮೇಲ್ಸೇತುವೆಯನ್ನು ಸೋಮವಾರ ಲೋಕಾರ್ಪಣೆಗೊಳಿಸಿದ ನಂತರ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ವಿಮಾನ ನಿಲ್ದಾಣದಿಂದ ಬರುವವರಿಗೆ ಸೇರಿದಂತೆ ಎಲ್ಲರೂ ಸಂಚಾರದಟ್ಟಣೆ ಅನುಭವಿಸುತ್ತಾ ಇದ್ದರು. ಇದನ್ನು ತಪ್ಪಿಸಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಡಿಕೆಶಿ ತಿಳಿಸಿದ್ದಾರೆ.

ಎಸ್ಟೀಮ್ ಮಾಲ್‌ನಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆವರೆಗೆ ನೂತನ ಟನಲ್ ರಸ್ತೆ

Prabhakara R Prabhakara R Aug 18, 2025 6:58 PM

ಬೆಂಗಳೂರು, ಆ.18: “ನಗರದ ಸಂಚಾರ ದಟ್ಟಣೆ ತಪ್ಪಿಸಲು ನಮ್ಮ ಸರ್ಕಾರ ಮುಂದಡಿಯಿಟ್ಟಿದೆ. ಎಸ್ಟೀಮ್ ಮಾಲ್‌ನಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆವರೆಗೆ 1.5 ಕಿಲೋ ಮೀಟರ್ ಉದ್ದದ ನೂತನ ಟನಲ್ (Bengaluru Tunnel Road) ರಸ್ತೆ ನಿರ್ಮಿಸಲಾಗುವುದು. ಇದರ ಸಾಧಕ- ಬಾಧಕ ಹಾಗೂ ಹಣಕಾಸಿನ ನೆರವಿನ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಹೆಬ್ಬಾಳ ಜಂಕ್ಷನ್‌ನಲ್ಲಿ ನಿರ್ಮಾಣ ಮಾಡಿರುವ ನೂತನ ಮೇಲ್ಸೇತುವೆಯನ್ನು ಸೋಮವಾರ ಲೋಕಾರ್ಪಣೆಗೊಳಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಕೆ.ಆರ್.ಪುರಂ ಕಡೆಯಿಂದ ಮೇಖ್ರಿ ಸರ್ಕಲ್ ಭಾಗದ ಲೂಪ್ ಅನ್ನು 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇನ್ನೊಂದು ಭಾಗದ ಲೂಪ್ ಅನ್ನು ನವೆಂಬರ್ ಹೊತ್ತಿಗೆ ಪೂರ್ಣಗೊಳಿಸಲಾಗುವುದು. ಒಟ್ಟು 300 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಎರಡು ಪಥಗಳು ಇರುವ ಕಡೆ ಆರು ಪಥಗಳು ಬರುವಂತೆ ಯೋಜನೆ ರೂಪಿಸಲಾಗಿದೆ” ಎಂದರು.

“17 ಸಾವಿರ ಕೋಟಿ ವೆಚ್ಚದಲ್ಲಿ 16.5 ಕಿಲೋಮೀರ್ ಉದ್ದದ ಟನಲ್ ರಸ್ತೆಗೆ ಟೆಂಡರ್ ಕರೆಯಲಾಗಿದೆ. ಹೆಬ್ಬಾಳ ಜಂಕ್ಷನ್‌ನ ಮತ್ತೊಂದು ಲೂಪ್ ನಿರ್ಮಾಣವನ್ನು ತ್ವರಿತಗೊಳಿಸಲು ಬಿಡಿಎ ಅಧ್ಯಕ್ಷರಾದ ಹ್ಯಾರಿಸ್ ಅವರು ಜವಾಬ್ದಾರಿ ಹೊತ್ತುಕೊಂಡಿದ್ದಾರೆ” ಎಂದರು.

“ವಿಮಾನ ನಿಲ್ದಾಣದಿಂದ ಬರುವವರಿಗೆ ಸೇರಿದಂತೆ ಎಲ್ಲರೂ ಸಂಚಾರದಟ್ಟಣೆ ಅನುಭವಿಸುತ್ತಾ ಇದ್ದರು. ಇದನ್ನು ತಪ್ಪಿಸಲು ನಮ್ಮ ಸರ್ಕಾರ ಬದ್ದವಾಗಿದೆ. ಹೆಬ್ಬಾಳ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಸಂಚಾರ ದಟ್ಟನೆ ನಿಯಂತ್ರಣಕ್ಕೆ ಏನೇನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳಿಗೆ ವಿವರಣೆ ನೀಡಿದ್ದೇನೆ” ಎಂದರು.

ನಮಗೆ ಹಣ ಮುಖ್ಯವಲ್ಲ

“ನಾನು ತುಂಬಾ ಪಾರದರ್ಶಕವಾಗಿದ್ದೇನೆ. ನನಗೆ ಕೆಲಸವಾಗುವುದು ಮುಖ್ಯವೇ ಹೊರತು ಹಣವಲ್ಲ. ಯುವ ಸಂಸದನೊಬ್ಬ ನಾವು ಹಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾನೆ. ನಮಗೆ ಹಣದ ಅಗತ್ಯವಿಲ್ಲ. ಅವರ (ಬಿಜೆಪಿ) ಅಧಿಕಾರಾವಧಿಯಲ್ಲಿ ಒಂದೇ ಒಂದು ಸಣ್ಣ ಕೆಲಸವನ್ನೂ ಮಾಡಿಲ್ಲ. ಅವರು ಒಂದೇ ಒಂದು ಕೆಲಸ ತೋರಿಸಲಿ. ಕೇಂದ್ರ ಸರ್ಕಾರದಿಂದ ಒಂದೇ ಒಂದು ರೂಪಾಯಿ ತರದಿರುವುದು ನಾಚಿಕೆಗೇಡಿನ ಸಂಗತಿ. ಬೆಂಗಳೂರು ಜಾಗತಿಕ ನಗರ, ಪ್ರಧಾನಿಯವರು ಕೂಡ ಇದನ್ನು ಒಪ್ಪಿಕೊಂಡಿದ್ದಾರೆ” ಎಂದು ಹೇಳಿದರು.

ನೂತನ ಮೇಲ್ಸೆತುವೆಯಿಂದ ಮೇಖ್ರಿ ಸರ್ಕಲ್ ಬಳಿ ಸಂಚಾರ ದಟ್ಟಣೆ ಹೆಚ್ಚಲಿದೆ ಎನ್ನುವ ಟೀಕೆಯ ಬಗ್ಗೆ ಕೇಳಿದಾಗ, “ಯಾರ್ಯಾರೋ ಏನೇನೋ ಮಾತನಾಡುವವರಿಗೆಲ್ಲ ನಾವು ಉತ್ತರ ನೀಡಲು ಆಗುವುದಿಲ್ಲ” ಎಂದರು.

“ಈ ಲೂಪ್ ಕಾಮಗಾರಿಯನ್ನು ಮುತುವರ್ಜಿವಹಿಸಿ ಮಾಡಲಾಗಿದೆ. ಏಕೆಂದರೆ ಒಂದು ಕಡೆ ಮೆಟ್ರೋ ಮಾರ್ಗ, ಇನ್ನೊಂದು ಕಡೆ ರೈಲ್ವೆ ಮಾರ್ಗವಿದ್ದು ಅತ್ಯಂತ ತಾಂತ್ರಿಕವಾಗಿ ಕಾಮಗಾರಿ ಪೂರ್ಣಗೊಳಿಸಲಾಗಿದೆ” ಎಂದರು.

ಈ ಸುದ್ದಿಯನ್ನೂ ಓದಿ | Dharmasthala case: ಎಫ್‌ಎಸ್‌ಎಲ್‌ ವರದಿ ಬರುವವರೆಗೆ ಧರ್ಮಸ್ಥಳದಲ್ಲಿ ಎಸ್‌ಐಟಿ ಶೋಧ ಕಾರ್ಯ ಸ್ಥಗಿತ: ಗೃಹ ಸಚಿವ ಪರಮೇಶ್ವರ್‌

ರಾಜಕೀಯಕ್ಕೆ ಧರ್ಮಸ್ಥಳ ಹೆಸರು ಬಳಕೆ

ಬಿಜೆಪಿ ಧರ್ಮಸ್ಥಳ ವಿಚಾರದಲ್ಲಿ ಟೀಕೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ರಾಜಕೀಯದಲ್ಲಿ ಧರ್ಮವಿರಬೇಕೆ ಹೊರತು ಧರ್ಮದಲ್ಲಿ ರಾಜಕಾರಣವಿರಬಾರದು. ಬಿಜೆಪಿಯವರು ಧರ್ಮದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ತಮ್ಮ ರಾಜಕೀಯಕ್ಕೆ ಧರ್ಮ ಬಳಸಿಕೊಳ್ಳುತ್ತಿದ್ದಾರೆ” ಎಂದರು.

ಎಸ್‌ಐಟಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎನ್ನುವ ಬಗ್ಗೆ ಕೇಳಿದಾಗ, “ಇದರ ಬಗ್ಗೆ ಗೃಹಸಚಿವರು ಉತ್ತರಿಸುತ್ತಾರೆ” ಎಂದರು.

ಪ್ರಮಾಣಪತ್ರ ಸಲ್ಲಿಸಿ ಎಂದು ಚುನಾವಣಾ ಆಯೋಗ ರಾಹುಲ್ ಗಾಂಧಿ ಅವರಿಗೆ ಹೇಳಿರುವ ಬಗ್ಗೆ ಕೇಳಿದಾಗ, “ಇದರ ಬಗ್ಗೆ ಪ್ರತ್ಯೇಕವಾಗಿ ಮಾಧ್ಯಮಗೋಷ್ಠಿ ನಡೆಸಲಾಗುವುದು” ಎಂದು ಹೇಳಿದರು.