ಬೆಂಗಳೂರು, ಡಿ. 24: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ 21 ವರ್ಷದ ಯುವತಿಯ ಮೇಲೆ ಹಾಡಹಗಲೇ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ, ಕಿರುಕುಳ ನೀಡಿರುವ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆದಿದೆ. ತನ್ನನ್ನು ಪ್ರೀತಿಸುವಂತೆ ಆ ವ್ಯಕ್ತಿ ಯುವತಿ ಮೇಲೆ ಒತ್ತಡ ಹೇರಿದ್ದಾನೆ. ಆದರೆ ಆಕೆ ನಿರಾಕಿಸಿದ್ದಿರಂದ ನಡುರಸ್ತೆಯಲ್ಲೇ ಹಲ್ಲೆ ನಡೆಸಿದ್ದಾನೆ. ಈ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 22ರಂದು ಅಪರಾಹ್ನ 3:20ರ ಸುಮಾರಿಗೆ ಈ ಘಟನೆ ನಡೆದಿದೆ. ಆರಂಭದಲ್ಲಿ ಆನ್‌ಲೈನ್ ರೈಡ್ ಎಂದು ಹೇಳಲಾದ ಸ್ಕೂಟಿಯ ಪಕ್ಕದಲ್ಲಿ ಯುವತಿ ನಿಂತಿರುವುದನ್ನು ವಿಡಿಯೊದಲ್ಲಿ ಕಾಣ ಸಿಗುತ್ತದೆ. ಆರೋಪಿಯು ಕಾರಿನಲ್ಲಿ ಸ್ಥಳಕ್ಕೆ ಬರುತ್ತಾನೆ. ಆಕೆಯ ಪರ್ಸ್ ತೆಗೆದುಕೊಂಡು ಅದನ್ನು ಪರಿಶೀಲಿಸಿದ್ದಾನೆ. ಜತೆಗೆ ಆಕೆಯನ್ನು ಸ್ಪರ್ಶಿಸಿದ್ದಾನೆ.
ಚಾಕೋಲೆಟ್ ನೀಡಿ ಲೈಂಗಿಕ ದೌರ್ಜನ್ಯ; ಹಾಸನದಲ್ಲಿ ಮಗುವಿಗೆ ಜನ್ಮ ನೀಡಿದ 10ನೇ ತರಗತಿ ಬಾಲಕಿ
ನಂತರ ಆ ವ್ಯಕ್ತಿಯು ಯುವತಿಯ ತಲೆ ಮತ್ತು ಬೆನ್ನಿಗೆ ಪದೇ ಪದೆ ಹೊಡೆದು ರಸ್ತೆಯ ಉದ್ದಕ್ಕೂ ಎಳೆದುಕೊಂಡು ಹೋಗಿದ್ದಾನೆ. ಸ್ಥಳದಲ್ಲಿ ಎರಡರಿಂದ ಮೂರು ಜನರು ಇದ್ದರೂ ಸಂತ್ರಸ್ತೆಗೆ ಸಹಾಯ ಮಾಡಲು ಯಾರೂ ಮಧ್ಯ ಪ್ರವೇಶಿಸಲಿಲ್ಲ. ಆರೋಪಿಯನ್ನು ನವೀನ್ ಕುಮಾರ್ ಎಂದು ಗುರುತಿಸಲಾಗಿದೆ.
ಎಫ್‌ಐಆರ್ ಪ್ರಕಾರ, ನವೀನ್ ಮತ್ತು ಯುವತಿ 2024ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದರು. ಫೋನ್ ಕರೆಗಳು ಮತ್ತು ಸಂದೇಶಗಳ ಮೂಲಕ ನಿಯಮಿತವಾಗಿ ಸಂಪರ್ಕದಲ್ಲಿದ್ದರು. ಆದರೆ ಕಾಲಾನಂತರದಲ್ಲಿ ನವೀನ್ ಪ್ರೀತಿಸುವಂತೆ ಯುವತಿಯ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದನು. ಆದರೆ ಆಕೆ ಅದನ್ನು ವಿರೋಧಿಸಿದಳು.
ಡಿಸೆಂಬರ್ 22ರಂದು ನವೀನ್ ತನ್ನ ಕಾರಿನಲ್ಲಿ ಯುವತಿಯ ಪೇಯಿಂಗ್ ಗೆಸ್ಟ್ (ಪಿಜಿ) ಬಳಿಗೆ ಹೋಗಿದ್ದ ಎಂದು ವರದಿಯಾಗಿದೆ. ಪಿಜಿಯ ಹೊರಗೆ ಆಕೆ ನಿಂತಿರುವುದನ್ನು ಕಂಡ ನವೀನ್, ಆಕೆಯನ್ನು ಎಳೆದುಕೊಂಡು ಹೋಗಿ, ಸಾರ್ವಜನಿಕವಾಗಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯ ಬಟ್ಟೆಗಳನ್ನು ಹರಿದು ಹಾಕಲು ಪ್ರಯತ್ನಿಸಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಇಲ್ಲಿದೆ ವಿಡಿಯೊ:
ಪೊಲೀಸ್ ವರದಿಗಳ ಪ್ರಕಾರ, ಆರೋಪಿಯನ್ನು ಯಲಹಂಕ ತಾಲೂಕಿನ ಬಿಲ್ಲಮಾರನಹಳ್ಳಿ ಗ್ರಾಮದ ನಿವಾಸಿ ನವೀನ್ ಕುಮಾರ್ ಎನ್. (ನಾರಾಯಣಸ್ವಾಮಿ ಅವರ ಮಗ) ಎಂದು ಗುರುತಿಸಲಾಗಿದೆ. ಆರೋಪಿಯು ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಯುವತಿಯೊಂದಿಗೆ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ. ಆಕೆಯನ್ನು ಹಿಂಬಾಲಿಸಿ ಪ್ರೀತಿಸುವಂತೆ ಒತ್ತಾಯಿಸಿದ್ದ. ಆಕೆ ನಿರಾಕರಿಸಿದಾಗ, ಆಕೆಯನ್ನು ನಿಂದಿಸಿ ನಡುರಸ್ತೆಯಲ್ಲೇ ದೈಹಿಕವಾಗಿ ಹಲ್ಲೆ ನಡೆಸಿದ್ದ ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್ 22ರಂದು ಸಂತ್ರಸ್ತೆ ದೂರು ದಾಖಲಿಸಿದ ನಂತರ, ಜ್ಞಾನಭಾರತಿ ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ), 2023ರ ವಿವಿಧ ಸೆಕ್ಷನ್‌ಗಳ (74, 75, 76, 78, 79, ಮತ್ತು 351(2)) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಪೊಲೀಸ್ ತಂಡವು ತ್ವರಿತವಾಗಿ ಕಾರ್ಯನಿರ್ವಹಿಸಿ ಘಟನೆ ನಡೆದ 24 ಗಂಟೆಗಳ ಒಳಗೆ ಆರೋಪಿ ನವೀನ್ ಕುಮಾರ್‌ನನ್ನು ಬಂಧಿಸಿತು. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.