Actress Shashikala: ಬಲವಂತವಾಗಿ ನಿರ್ದೇಶಕನ ಮದುವೆಯಾಗಿ ಕಿರುಕುಳ; ಕಿರುತೆರೆ ನಟಿ ಶಶಿಕಲಾ ವಿರುದ್ಧ ಎಫ್‌ಐಆರ್
Actress Shashikala: ಕಿರುತೆರೆ ಹಿರಿಯ ನಟಿ ಶಶಿಕಲಾ ವಿರುದ್ಧ ನಿರ್ದೇಶಕ ಹರ್ಷವರ್ಧನ್ ಗಂಭೀರವಾದ ಆರೋಪ ಮಾಡಿದ್ದಾರೆ. ಬ್ಲಾಕ್ ಮೇಲ್ ಮಾಡಿ ಮದುವೆ ಆಗಿ ಈಗ ಕಿರುಕುಳ ನೀಡುತ್ತಿದ್ದಾರೆ ಅಂತ ಆರೋಪ ಮಾಡಿದ್ದಾರೆ.
ಬೆಂಗಳೂರು: ಕಿರುತೆರೆಯ ಹಿರಿಯ ನಟಿ ಶಶಿಕಲಾ (Actress Shashikala) ವಿರುದ್ಧ ಗಂಭೀರವಾದ ಆರೋಪ ಕೇಳಿ ಬಂದಿದೆ. ನಿರ್ದೇಶಕ ಹರ್ಷವರ್ಧನ್ ಅವರು ತನ್ನನ್ನು ಬ್ಲ್ಯಾಕ್‌ಮೇಲ್ ಮಾಡಿ ಮದುವೆಯಾದ ಬಳಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ನಟಿಯ ವಿರುದ್ಧ ದೂರು ನೀಡಿದ್ದಾರೆ.
ಕಿರುತೆರೆ ಹಿರಿಯ ನಟಿ ಶಶಿಕಲಾ ವಿರುದ್ಧ ನಿರ್ದೇಶಕ ಹರ್ಷವರ್ಧನ್ ಗಂಭೀರವಾದ ಆರೋಪ ಮಾಡಿದ್ದಾರೆ. ಬ್ಲಾಕ್ ಮೇಲ್ ಮಾಡಿ ಮದುವೆ ಆಗಿ ಈಗ ಕಿರುಕುಳ ನೀಡುತ್ತಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಪ್ರಜಾರಾಜ್ಯ ಸಿನಿಮಾ ನಿರ್ದೇಶನ ಮಾಡಿದ್ದ ಹರ್ಷವರ್ಧನ್ ದೂರು ನೀಡಿದ್ದಾರೆ.
ಏನಿದು ಪ್ರಕರಣ?
ನಟಿ ಶಶಿಕಲಾ, ‘ಪ್ರಜಾರಾಜ್ಯ’ ಹೆಸರಿನ ಸಿನಿಮಾದಲ್ಲಿ ನಟಿಸುವಾಗ ನಿರ್ದೇಶಕ ಡಿ.ಜೆ. ಹರ್ಷವರ್ಧನ ಅಲಿಯಾಸ್ ವಿಜಯಭಾರ್ಗವ ಎಂಬಾತನ ಪರಿಚವಾಗಿತ್ತು. ಆ ಬಳಿಕ ಇಬ್ಬರೂ ಸಹಬಾಳ್ವೆ ನಡೆಸಲು ಆರಂಭಿಸಿದ್ದರು. ಆದರೆ ನಟಿ ಹೇಳಿರುವಂತೆ ಆ ನಂತರ ಹರ್ಷವರ್ಧನಗೆ ಬೇರೆ ಮಹಿಳೆಯರ ಸಂಪರ್ಕ ಸಿಕ್ಕಿ ತನಗೆ ಕೈಕೊಟ್ಟು ಓಡಿ ಹೋಗಿದ್ದ. ಆಗ ನಟಿ ಶಶಿಕಲಾ ಪೊಲೀಸರಿಗೆ ದೂರು ನೀಡಿದ್ದರು. ನಂತರ ಅಂಗಲಾಚಿ ದೂರು ವಾಪಸ್ ತೆಗೆದುಕೊಳ್ಳುವಂತೆ ಕೋರಿದ್ದ ಹರ್ಷವರ್ಧನ್, ಇನ್ನು ಮುಂದೆ ಸರಿಯಾಗಿ ಇರುತ್ತೀನಿ ಎಂದು ಪ್ರಮಾಣ ಮಾಡಿ ಶಶಿಕಲಾ ಜತೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಆದರೆ ಈಗ ಮತ್ತೆ ಶಶಿಕಲಾಗೆ ಕೈಕೊಟ್ಟು ಹೋಗಿದ್ದಾರೆ ಎನ್ನಲಾಗಿದೆ.
ನಿರ್ದೇಶಕ ಹೇಳುವುದೇನು?
ಶಶಿಕಲಾ ಮೇಲೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಹರ್ಷವರ್ಧನ್, ನಟಿ ಶಶಿಕಲಾ ನನಗೆ ಬೆದರಿಕೆ ಹಾಕಿ ಬಲವಂತದಿಂದ ಮದುವೆ ಆಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ನಿಮ್ಮ ಸಿನಿಮಾ ನಿರ್ಮಾಣ ಮಾಡುತ್ತೇನೆ, ನನ್ನ ಜೊತೆ ಸಂಬಂಧದಲ್ಲಿರು ಎಂದು ನಟಿ ಶಶಿಕಲಾ, ಹರ್ಷವರ್ಧನ್ಗೆ ಹೇಳಿದ್ದರಂತೆ. ಅದರಂತೆ ಹರ್ಷವರ್ಧನ್, ಮದುವೆ ಆಗುವುದಿಲ್ಲ ಆದರೆ ರಿಲೇಷನ್ನಲ್ಲಿ ಇರುತ್ತೇನೆ ಎಂದು ಒಪ್ಪಿಕೊಂಡರಂತೆ. ಆ ನಂತರ ಬೆದರಿಕೆ ಹಾಕಿ ಮದುವೆ ಸಹ ಆದರಂತೆ. ಆದರೆ ಮನೆಗೆ ಆಗಾಗ್ಗೆ ನಿರ್ದೇಶಕರು, ನಿರ್ಮಾಪಕರು ಬರುತ್ತಿದ್ದರಂತೆ. ಆಗೆಲ್ಲ ನಿರ್ದೇಶಕ ಹರ್ಷ ಅನ್ನು ಹೊರಗೆ ಕಳಿಸಲಾಗುತ್ತಿಂತೆ. ಇದೆಲ್ಲ ಸರಿ ಬರದೆ ಹರ್ಷವರ್ಧನ್, ಶಶಿಕಲಾ ಅನ್ನು ತ್ಯಜಿಸಿದ್ದರಂತೆ.
ಈ ಸುದ್ದಿಯನ್ನೂ ಓದಿ | Shiva Rajkumar: ಕರುನಾಡಿಗೆ ಮರಳಿದ ಶಿವಣ್ಣನಿಗೆ ಅದ್ದೂರಿ ಸ್ವಾಗತ; ಭವ್ಯ ಮೆರವಣಿಗೆ
ಇದಾದ ಬಳಿಕ, ತಾಯಿಯೂ ತನ್ನ ಜೊತೆ ಇರುತ್ತಾಳೆ ಎಂಬ ಕಾರಣಕ್ಕೆ ಮತ್ತೆ ನಟಿ ಶಶಿಕಲಾ ಜೊತೆಗೆ ವಾಸ ಮಾಡಲು ಒಪ್ಪಿಕೊಂಡರಂತೆ ಹರ್ಷವರ್ಧನ್. ಆದರೆ 2024ರಲ್ಲಿ ಹರ್ಷವರ್ಧನ್ ಹಾಗೂ ತಾಯಿಯನ್ನು ಶಶಿಕಲಾ ಮನೆಯಿಂದ ಆಚೆ ಹಾಕಿದ್ದರು ಎನ್ನಲಾಗಿದೆ. ಅವರಿಂದ ದೂರ ಬಂದರೂ ಕರೆ ಮಾಡಿ, ಇನ್ನಿತರೆ ರೀತಿಗಳಲ್ಲಿ ತನಗೆ ಬೆದರಿಕೆ ಹಾಕುತ್ತಿದ್ದಾಳೆ ಎಂದು ಹರ್ಷವರ್ಧನ್ ದೂರು ನೀಡಿದ್ದಾರೆ. ನಟಿಯ ಜತೆಗೆ ಅರುಣ್ ಕುಮಾರ್ ಎಂಬಾತನ ಮೇಲೂ ದೂರು ನೀಡಲಾಗಿದ್ದು, ಅರುಣ್ ಕುಮಾರ್, ಯೂಟ್ಯೂಬ್ ಚಾನೆಲ್ ಮೂಲಕ ತನ್ನ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.