ಬೆಂಗಳೂರು, ಅ. 24: ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಪೋಸ್ಟ್ಗಳು ಅಥವಾ ಅಭಿಪ್ರಾಯಗಳ ಆಧಾರದಲ್ಲಿ ಪೊಲೀಸರು ಯಾಂತ್ರಿಕವಾಗಿ ಪ್ರಕರಣ ದಾಖಲಿಸಬಾರದು. ಎಫ್ಐಆರ್ ದಾಖಲಾದ ಮಾತ್ರಕ್ಕೆ ಆರೋಪಿಯನ್ನು ಸ್ವಯಂಚಾಲಿತವಾಗಿ ಬಂಧಿಸಬಾರದು ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಮಹತ್ವದ ಮಾರ್ಗಸೂಚಿಗಳನ್ನು ನೀಡಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಅಕ್ಟೋಬರ್ 16ರಂದು ನೀಡಿದ ಆದೇಶದಲ್ಲಿ ಒಂದೇ ಘಟನೆಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳನ್ನು ದಾಖಲಿಸುವುದನ್ನು ತಡೆಯಬೇಕು ಹಾಗೂ ಪೊಲೀಸ್ ಅಧಿಕಾರ ದುರುಪಯೋಗವಾಗದಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದೆ.
ಟೀಕೆಯನ್ನು ಬೆದರಿಕೆಯೆಂದು ಪರಿಗಣಿಸಬಾರದು
“ಪದಗಳ ಪರಿಣಾಮವನ್ನು ಸಮಂಜಸವಾದ, ದೃಢ ಮನಸ್ಸಿನ ಮತ್ತು ಧೈರ್ಯಶಾಲಿ ವ್ಯಕ್ತಿಗಳ ಮಾನದಂಡದಲ್ಲಿ ಅಳೆಯಬೇಕು. ಪ್ರತಿಯೊಂದು ಟೀಕೆಯನ್ನೂ ಬೆದರಿಕೆಯೆಂದು ಭಾವಿಸುವವರ ದೃಷ್ಟಿಕೋನದಿಂದ ಅಳೆಯಬಾರದು” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವರದಿಯೊಂದನ್ನು ಮರುಹಂಚಿಕೊಂಡಿದ್ದ ಸಂದೀಪ್ ಕುಮಾರ್ ಎಂಬವವರ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಆರು ಯುವಕರು ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾದ ಘಟನೆಯ ಸುದ್ದಿಯನ್ನು ಅವರು ಎಕ್ಸ್ನಲ್ಲಿ ಮರುಹಂಚಿಕೊಂಡಿದ್ದರು. ಜತೆಗೆ, “ಕಾನೂನು ಮತ್ತು ಸುವ್ಯವಸ್ಥೆ ಅಪಾಯದಲ್ಲಿದೆ” ಎಂಬರ್ಥದ ಅಭಿಪ್ರಾಯವನ್ನೂ ಪ್ರಕಟಿಸಿದ್ದರು.
ಈ ಹಿನ್ನೆಲೆಯಲ್ಲಿ, ಇಂತಹ ಘಟನೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವರದಿ ಮಾಡಬಾರದೇ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಎಫ್ಐಆರ್ಗೂ ಮುನ್ನ ಆರೋಪಗಳ ಪರಿಶೀಲನೆ ಕಡ್ಡಾಯ
ಸಾಮಾಜಿಕ ಜಾಲತಾಣದ ಪೋಸ್ಟ್, ಹೇಳಿಕೆ ಅಥವಾ ಅಭಿವ್ಯಕ್ತಿಗೆ ಸಂಬಂಧಿಸಿದಂತೆ ದೂರು ಬಂದಾಗ, ಆರೋಪಿತ ಕೃತ್ಯವು ಸಂಬಂಧಪಟ್ಟ ಅಪರಾಧದ ಅಗತ್ಯ ಅಂಶಗಳನ್ನು ಒಳಗೊಂಡಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಕಾನೂನಿನ ಸೆಕ್ಷನ್ಗಳನ್ನು ಉಲ್ಲೇಖಿಸುವುದಷ್ಟೇ ಪ್ರಕರಣ ದಾಖಲಿಸಲು ಸಾಕಾಗುವುದಿಲ್ಲ, ಆರೋಪಕ್ಕೆ ಪೂರಕವಾದ ವಾಸ್ತವಾಂಶಗಳಿರಬೇಕು ಎಂದು ಸ್ಪಷ್ಟಪಡಿಸಿದೆ.
ಅದೇ ಘಟನೆಯ ಕುರಿತು ಈಗಾಗಲೇ ಪ್ರಕರಣ ದಾಖಲಾಗಿದೆಯೇ ಅಥವಾ ಅದೇ ರೀತಿಯ ಪೋಸ್ಟ್ಗೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣ ಇದೆಯೇ ಎಂಬುದನ್ನೂ ಪರಿಶೀಲಿಸಬೇಕು. ಕಾನೂನು ಅನುಮತಿಸುವ ಸಂದರ್ಭಗಳಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 173(3) ಅಡಿಯಲ್ಲಿ ಪ್ರಾಥಮಿಕ ವಿಚಾರಣೆ ನಡೆಸುವಂತೆ ನಿರ್ದೇಶಿಸಿದೆ.
ಸಮುದಾಯಗಳ ನಡುವೆ ದ್ವೇಷವನ್ನು ಹರಡುವ ಉದ್ದೇಶದಿಂದ ಸುಳ್ಳು ಮಾಹಿತಿ ಅಥವಾ ವದಂತಿಗಳನ್ನು ಪ್ರಸಾರ ಮಾಡುವುದಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 353(2) ಅನ್ವಯಿಸುವಾಗ, ಅದರಲ್ಲಿನ ನಿರ್ದಿಷ್ಟ ಕಾನೂನು ಅಂಶಗಳು ಹಾಗೂ ಆರೋಪಿಯ ಉದ್ದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ರಕ್ಷಣೆ
ಭಾರತೀಯ ಸಂವಿಧಾನದ ಅನುಚ್ಛೇದ 19(1)(a) ಅಡಿಯಲ್ಲಿ ಟೀಕೆ ಮತ್ತು ಪ್ರತಿಭಟನೆಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ಒಳಪಡುತ್ತವೆ ಎಂಬುದನ್ನು ಸುಪ್ರೀಂ ಕೋರ್ಟ್ ತನ್ನ ಹಿಂದಿನ ತೀರ್ಪುಗಳಲ್ಲಿ ಗುರುತಿಸಿದೆ ಎಂದು ಹೈಕೋರ್ಟ್ ಉಲ್ಲೇಖಿಸಿದೆ.
ಈ ಮಾರ್ಗಸೂಚಿಗಳನ್ನು ರಾಜ್ಯದ ಎಲ್ಲಾ ಪೊಲೀಸ್ ಘಟಕಗಳಿಗೆ ತಲುಪಿಸಿ, ಅವುಗಳ ಪಾಲನೆಯಾಗುವಂತೆ ನೋಡಿಕೊಳ್ಳಲು ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರಿಗೆ (DGP & IGP) ನ್ಯಾಯಾಲಯ ನಿರ್ದೇಶನ ನೀಡಿದೆ.