ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎಸ್‌ಐಆರ್‌ ಅಕ್ರಮ; ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವರ ಮೌನ ಪ್ರಶ್ನಿಸಿದ ಎಚ್.ಡಿ.ಕುಮಾರಸ್ವಾಮಿ

HD Kumaraswamy: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ಯಾವುದೇ ಅರ್ಥವಿಲ್ಲ. ಈಗಾಗಲೇ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಕೇಂದ್ರ ಚುನಾವಣಾ ಆಯುಕ್ತರಿಗೆ ಕೂಡ ದೂರು ಕಳಿಸಿದ್ದೇವೆ. ಇದುವರೆಗೂ ಆಗಿರುವ ಪರಿಷ್ಕರಣೆಯನ್ನು ಸಂಪೂರ್ಣವಾಗಿ ರದ್ದು ಮಾಡಬೇಕು ಎಂಬುದು ನಮ್ಮ ಪಕ್ಷದ ಆಗ್ರಹವಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಈವರೆಗಿನ ಎಸ್‌ಐಆರ್‌ ಸಂಪೂರ್ಣ ರದ್ದು ಮಾಡಿ: ಎಚ್‌ಡಿಕೆ ಆಗ್ರಹ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (ಸಂಗ್ರಹ ಚಿತ್ರ). -

Profile
Siddalinga Swamy Jul 4, 2026 9:53 PM

ಬೆಂಗಳೂರು, ಜು.4: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಇಷ್ಟೆಲ್ಲಾ ಅಕ್ರಮ, ಅನ್ಯಾಯಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಈ ದಿನದವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರತೀ ಸಣ್ಣ ವಿಷಯಕ್ಕೂ ದೊಡ್ಡ ದನಿಯಲ್ಲಿ ಮಾತನಾಡುವ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಎಲ್ಲಿ ಮಾಯವಾದರು? ಪ್ರತಿ ಸಣ್ಣ ವಿಷಯಕ್ಕೂ ಕುಟುಕಿ ಕುಟುಕಿ ಪ್ರಶ್ನೆ ಮಾಡುವ ಗೃಹ ಸಚಿವರು ಏಕೆ ಮೌನವಾಗಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಪ್ರಶ್ನಿಸಿದ್ದಾರೆ.

ಬೆಂಗಳೂರಿನ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪಾಪ.. ಆ ಕಾಂಗ್ರೆಸ್ ಅಧ್ಯಕ್ಷರು ಎಲ್ಲಿ ಹೋದರೋ ಗೊತ್ತಿಲ್ಲ. ಇಷ್ಟೆಲ್ಲಾ ಅಧ್ವಾನ ನಡೆಯುತ್ತಿದ್ದರೂ ಅವರು ಪತ್ತೆ ಇಲ್ಲ. ದಿನವೂ ಪ್ರತೀ ವಿಷಯಕ್ಕೂ ಕಾಮೆಂಟ್ ಮಾಡ್ತಾರೆ. ಇನ್ನೂ ಈ ರಾಜ್ಯದ ಗೃಹ ಸಚಿವರು ಕೂಡ ನಿತ್ಯವೂ ಎಲ್ಲಾ ವಿಷಯದ ಬಗ್ಗೆಯೂ ಹೇಳಿಕೆ ನೀಡ್ತಾರೆ. ಎಸ್‌ಐಆರ್ ಅಕ್ರಮಗಳ ಬಗ್ಗೆ ಅವರು ಮಾತಾಡಬೇಕಲ್ಲವೇ? ಬಹಳ ಶಿಸ್ತು, ಸಂಯಮ ಎಂದು ಊರಿಗೆಲ್ಲ ಬೋಧನೆ ಮಾಡುವವರು ಇದರ ಬಗ್ಗೆಯೂ ಚರ್ಚೆ ಮಾಡಬೇಕಲ್ಲವೇ? ಎಂದು ಕೇಂದ್ರ ಸಚಿವರು, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದರು.

ಬುದ್ಧಿ ಹೇಳುವವರು ಇವರು. ಎಸ್‌ಐಆರ್ ಬಗ್ಗೆ ರಾಜ್ಯದ ಹಾದಿಬೀದಿಯಲ್ಲಿ ಚರ್ಚೆ ನಡೆಯುತ್ತಿದೆ. ಅದರ ಬಗ್ಗೆ ಗೃಹ ಸಚಿವರು ಮತ್ತು ಕೆಪಿಸಿಸಿ ಅಧ್ಯಕ್ಷರ ಮೌನ ನನಗೆ ಆಶ್ಚರ್ಯ ಉಂಟು ಮಾಡಿದೆ ಎಂದು ಹೇಳಿದರು.

ಈ ಸರ್ಕಾರಕ್ಕೆ ಮಾನ ಮರ್ಯಾದೆ ಎನ್ನುವುದು ಇದ್ದರೆ ಇಂತಹ ತಪ್ಪುಗಳನ್ನು ಮಾಡುವುದು ನಿಲ್ಲಿಸಬೇಕು. ತನ್ನ ಅಧೀನದಲ್ಲಿ ಕೆಲಸ ಮಾಡುವ ಅಧಿಕಾರಿಗಳ ದುರ್ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ತಮ್ಮ ಪಕ್ಷದ ಸರ್ಕಾರ ಇಷ್ಟೆಲ್ಲ ಅನರ್ಥಗಳನ್ನು ಮಾಡುತ್ತಿದ್ದರು ಕೆಪಿಸಿಸಿ ಅಧ್ಯಕ್ಷರು ಪ್ರಶ್ನೆ ಮಾಡಬೇಕಿತ್ತು ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಈವರೆಗಿನ ಎಸ್‌ಐಆರ್ ರದ್ದುಮಾಡಿ

ರಾಜ್ಯದಲ್ಲಿ ಇವರಿಗೂ ಆಗಿರುವ ಮತದಾರ ಪಟ್ಟಿಯ ಸಮಗ್ರ ಪರಿಷ್ಕರಣೆಯ ಎಲ್ಲಾ ಪ್ರಕ್ರಿಯೆಗಳನ್ನು ರದ್ದು ಮಾಡಬೇಕು ಹಾಗೂ ಹೊರ ರಾಜ್ಯದ ದಕ್ಷ ಅಧಿಕಾರಿಯನ್ನು ರಾಜ್ಯದ ಎಸ್‌ಐಆರ್ ಉಸ್ತುವಾರಿಯನ್ನಾಗಿ ನೇಮಕ ಮಾಡಬೇಕು ಎಂದು ಅವರು ಕೇಂದ್ರ ಚುನಾವಣಾ ಆಯೋಗವನ್ನು ಒತ್ತಾಯಿಸಿದರು. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ರಾಜ್ಯದಲ್ಲಿ ಮಿತಿಮೀರಿದ ಅಕ್ರಮಗಳು ನಡೆಯುತ್ತಿವೆ. ಅದಕ್ಕೆ ರಾಜ್ಯ ಸರ್ಕಾರ ಇಡೀ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ಯಾವುದೇ ಅರ್ಥವಿಲ್ಲ. ಈಗಾಗಲೇ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಕೇಂದ್ರ ಚುನಾವಣಾ ಆಯುಕ್ತರಿಗೆ ಕೂಡ ದೂರು ಕಳಿಸಿದ್ದೇವೆ. ಅಲ್ಲಿಂದ ಏನು ನಿರ್ದೇಶನ ಬರುತ್ತದೆಯೋ ಅದೇ ರೀತಿಯಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ರಾಜ್ಯ ಆಯುಕ್ತರು ಹೇಳಿದ್ದಾರೆ. ಇದುವರೆಗೂ ಆಗಿರುವ ಪರಿಷ್ಕರಣೆಯನ್ನು ಸಂಪೂರ್ಣವಾಗಿ ರದ್ದು ಮಾಡಬೇಕು ಎಂಬುದು ನಮ್ಮ ಪಕ್ಷದ ಆಗ್ರಹವಾಗಿದೆ ಎಂದು ಸಚಿವರು ಹೇಳಿದರು.

ಸೋಮವಾರ ನಾನು ನವದೆಹಲಿಗೆ ತೆರಳಲಿದ್ದೇನೆ. ಅಂದು ಕೇಂದ್ರ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ದೂರು ನೀಡಲಾಗುವುದು. ಇಲ್ಲಿ ನಡೆದಿರುವ ಅಕ್ರಮಗಳನ್ನು ಆಯೋಗದ ಗಮನಕ್ಕೆ ತರುತ್ತೇವೆ. ಕೂಡಲೇ ರಾಜ್ಯದಲ್ಲಿ ಆಗಿರುವ ಎಲ್ಲಾ ಪ್ರಕ್ರಿಯೆಗಳನ್ನು ನಿಲ್ಲಿಸಿ ಹೊಸದಾಗಿ ಎಸ್‌ಐಆರ್ ನಡೆಸಬೇಕು ಎಂದು ಮನವಿ ಮಾಡುತ್ತೇವೆ ಎಂದು ತಿಳಿಸಿದರು.

ಫುಟ್ಪಾತ್ ತೆರವು ಮಾಡಿದ್ದೀರಿ; ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ

ಬೀದಿ ಬದಿ ವ್ಯಾಪಾರದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಒಪ್ಪಿಕೊಳ್ಳೋಣ. ಆದರೆ ಇವರು ಫುಟ್ಪಾತ್‌ಗಳನ್ನು ತೆರವು ಮಾಡಿ ಬೀದಿಬದಿಯಲ್ಲಿ ಬದುಕು ಕಟ್ಟಿಕೊಂಡವರನ್ನು ಪುನಃ ಬೀದಿಗೆ ತಳ್ಳುತ್ತಿದ್ದಾರೆ. ಕೊನೆ ಪಕ್ಷ ಅವರ ಬದುಕಿಗೆ ಏನಾದರೂ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕಿತ್ತು ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿ ಲಕ್ಷಾಂತರ ಕುಟುಂಬಗಳು ಬೀದಿ ಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿವೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತೆರವುಗೊಳಿಸಿ, ಆದರೆ ಮಾನವೀಯ ದೃಷ್ಟಿಯಿಂದ ಜನರ ಪ್ರಾಣ ಉಳಿಸುವುದು ಸರ್ಕಾರದ ಕರ್ತವ್ಯ ಅಲ್ಲವೇ? ಅವರ ಮುಂದಿನ ಬದುಕಿಗೆ ದಾರಿಯೇನು? ಅವರಿಗಾಗಿ ಏನಾದ್ರು ಒಂದು ಪರಿಹಾರೋಪಾಯ ರೂಪಿಸುವುದು ಸರ್ಕಾರದ ಜವಾಬ್ದಾರಿ. ಬಡ ಜನರ ಬದುಕನ್ನು ಕಿತ್ತುಕೊಂಡು ಅವರನ್ನು ಎಲ್ಲಿಗೆ ಕಳಿಸುತ್ತೀರಿ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

ಒಂದು ತಿಂಗಳು ಪೂರ್ಣ; ಜಾರಿ ಅಪೂರ್ಣ

ಹೊಸ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆದಿದೆಯಲ್ಲ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಂದು ತಿಂಗಳಲ್ಲಿ ಏನು ಸಾಧನೆಯಾಗಿದೆ, ಬರೀ ಘೋಷಣೆ ಮಾಡಿದ್ದಾರೆ ಅಷ್ಟೇ. 76,000 ನೇಮಕಾತಿಗಳನ್ನು ಭರ್ತಿ ಮಾಡುತ್ತೇವೆ ಎಂದರು, ಎಲ್ಲಿ ಮಾಡಿದ್ದಾರೆ, ಈವರೆಗೂ ಅದರ ಪ್ರಕ್ರಿಯೆಗಳೇ ಆರಂಭವಾಗಿಲ್ಲ. ಘೋಷಣೆ ಮಾಡಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಯಾವುದೂ ಕೂಡ ಅನುಷ್ಠಾನಕ್ಕೆ ಬಂದಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.