ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Aequs Limited: ಬೆಳಗಾವಿಯ ಏಕಸ್‌ ಕಂಪನಿಯಿಂದ ತಮಿಳುನಾಡಲ್ಲಿ ಏರೋಸ್ಪೇಸ್‌ ಎಂಜಿನ್ ತಯಾರಿಕಾ ಘಟಕ; 4000 ಕೋಟಿ ಹೂಡಿಕೆ

ತಮಿಳೂನಾಡಿನ ಹೊಸೂರಿನ ಶೂಲಗಿರಿಯ ಸಿಪ್ಕಾಟ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗುವ ಏರೋಸ್ಪೇಸ್ ಮತ್ತು ಡಿಫೆನ್ಸ್ ಕ್ಲಸ್ಟರ್‌ಗೆ 4,000 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ. ಆದರೆ, ಬೆಳಗಾವಿ ಮೂಲದ ಕಂಪನಿಯು ಕರ್ನಾಟಕಕ್ಕೆ ಬದಲಾಗಿ ತಮಿಳುನಾಡಿನಲ್ಲಿ ಹೂಡಿಕೆ ಮಾಡುತ್ತಿರುವುದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

ಬೆಳಗಾವಿಯ ಏಕಸ್‌ ಕಂಪನಿಯಿಂದ ತಮಿಳುನಾಡಲ್ಲಿ 4000 ಕೋಟಿ ಹೂಡಿಕೆ

ಏಕಸ್‌ ಕಂಪನಿ. -

Prabhakara R
Prabhakara R Feb 20, 2026 6:30 PM

ಬೆಂಗಳೂರು: ಬೆಳಗಾವಿ ಮೂಲದ ಏಕಸ್ ಕಂಪನಿ (Aequs Limited) ತಮಿಳುನಾಡಿನಲ್ಲಿ ಬೃಹತ್ ಏರೋಸ್ಪೇಸ್ ಮತ್ತು ಡಿಫೆನ್ಸ್ ಕ್ಲಸ್ಟರ್​ (Aerospace and Defence manufacturing cluster) ನಿರ್ಮಿಸಲು ಮುಂದಾಗಿದೆ. ಬೆಂಗಳೂರು ಸಮೀಪದ ಹೊಸೂರಿನ ಶೂಲಗಿರಿಯ ಸಿಪ್ಕಾಟ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗುವ ಈ ಘಟಕಕ್ಕೆ 4,000 ಕೋಟಿ ರೂ ಹೂಡಿಕೆ ಆಗಲಿದೆ. ಇದರಲ್ಲಿ ಏಕಸ್ ಕಂಪನಿ 1,900 ಕೋಟಿ ರೂ. ಹೂಡಿಕೆ ಮಾಡಲಿದ್ದು, ಉಳಿದ 2,100 ಕೋಟಿ ರೂ.ಗಳನ್ನು ಇತರ ಪಾಲುದಾರ ಕಂಪನಿಗಳು ಹೂಡಿಕೆ ಮಾಡಲಿವೆ ಎಂದು ತಿಳಿದುಬಂದಿದೆ.

ಕರ್ನಾಟಕ ಮೂಲದ ಕಂಪನಿಯು ಕೃಷ್ಣಗಿರಿ ಜಿಲ್ಲೆಯಲ್ಲಿ ನಿರ್ಮಿಸುತ್ತಿರುವ ಈ ಕ್ಲಸ್ಟರ್​, ಭಾರತದ ಮೊದಲ ವರ್ಟಿಕಲಿ ಇಂಟಿಗ್ರೇಟೆಡ್‌ ಏರ್​ಕ್ರಾಫ್ಟ್ ಎಂಜಿನ್ ಮ್ಯಾನುಫ್ಯಾಕ್ಚರಿಂಗ್ ಪ್ರಾಜೆಕ್ಟ್ ಆಗಿದೆ. ಇಲ್ಲಿನ ಉತ್ಪಾದನೆ ಪ್ರಕ್ರಿಯೆಯಲ್ಲಿ ಯಾವುದೇ ಬಾಹ್ಯ ಕಂಪನಿಗಳ ಮೇಲೆ ಅವಲಂಬನೆ ಇರುವುದಿಲ್ಲ. ಈ ವ್ಯವಸ್ಥೆಯಲ್ಲಿ ಎಂಜಿನ್ ತಯಾರಿಕೆ ಆಗುತ್ತಿರುವುದು ಭಾರತದಲ್ಲಿ ಇದೇ ಮೊದಲು ಎನ್ನಲಾಗಿದೆ.

ಏಕಸ್ ಗ್ರೂಪ್ ಹೊಸೂರಿನಲ್ಲಿ ನಿರ್ಮಿಸಲಿರುವ ಏರೋಸ್ಪೇಸ್ ಮತ್ತು ಡಿಫೆನ್ಸ್ ಕ್ಲಸ್ಟರ್​ನಲ್ಲಿ ವಿಮಾನ ಎಂಜಿನ್ ಬಿಡಿಭಾಗಗಳು, ಲ್ಯಾಂಡಿಂಗ್ ಗೇರ್ ಸಿಸ್ಟಂಗಳು, ಅಲ್ಟ್ರಾ ಪ್ರಿಸಿಶನ್ ಮಷಿನಿಂಗ್, ಅಡ್ವಾನ್ಸ್ಡ್ ಏರೋಸ್ಪೇಸ್ ಸಿಸ್ಟಂ ಮತ್ತು ಸಬ್-ಅಸೆಂಬ್ಲಿಗಳ ಘಟಕಗಳು ಇರಲಿವೆ. ಈ ಪ್ರಸ್ತಾವಿತ ಕ್ಲಸ್ಟರ್ ನಿರ್ಮಾಣದಿಂದ ಜಾಗತಿಕ ಏರೋ ಎಂಜಿನ್ ಸಪ್ಲೈ ಚೈನ್​ನಲ್ಲಿ ಒಂದು ಭಾಗವಾಗಿರಲು ಸಾಧ್ಯವಾಗುತ್ತದೆ. ತಾಂತ್ರಿಕ ಪ್ರಾವೀಣ್ಯತೆ ಬೇಡುವ ಸುಮಾರು 7 ಸಾವಿರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.

ಈ ಬಗ್ಗೆ ಏಕಸ್‌ ಕಂಪನಿ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಸಿಇಒ ಅರವಿಂದ್ ಮೆಳ್ಳಿಗೇರಿ ಪ್ರತಿಕ್ರಿಯಿಸಿ, ಭಾರತದಲ್ಲಿ ಸಮಗ್ರ ಏರೋಸ್ಪೇಸ್ ಎಂಜಿನ್ ಘಟಕ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಏಕಸ್‌ ಹೂಡಿಕೆಗಳನ್ನು ಹೆಚ್ಚಿಸುತ್ತಿದೆ. ಹೊಸೂರಿನ ಸೌಲಭ್ಯವು ಮುಂದಿನ ವರ್ಷದ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದ್ದು, 2028 ರ ವೇಳೆಗೆ ಎಂಜಿನ್ ತಯಾರಿ ಪ್ರಾರಂಭಿಸಲಿದೆ ಎಂದು ತಿಳಿಸಿದ್ದಾರೆ.

ಭಾರತ- ಯುಎಸ್ ನಡುವೆ ಎಐ ಸಂಪರ್ಕ ಹೆಚ್ಚಿಸಲು ಗೂಗಲ್‌ನಿಂದ ಹೊಸ ಸಬ್‌ಸೀ ಕೇಬಲ್ ಮಾರ್ಗ ಘೋಷಿಸಿದ ಸುಂದರ್ ಪಿಚೈ

ಇದೇ ವೇಳೆ ಸುಮಾರು ಎರಡು ದಶಕಗಳಿಂದ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಕಸ್‌ ಕಂಪನಿಯು ರಾಜ್ಯದಲ್ಲಿ ತನ್ನ ಕಾರ್ಯಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಲಿದೆ. ಕಂಪನಿಯು ಬೆಳಗಾವಿ ಏರೋಸ್ಪೇಸ್ ಪಾರ್ಕ್, ಹುಬ್ಬಳ್ಳಿ ಕನ್ಸ್ಯೂಮರ್ ಡ್ಯೂರಬಲ್ ಗೂಡ್ಸ್ ಕ್ಲಸ್ಟರ್ ಮತ್ತು ಕೊಪ್ಪಳ ಆಟಿಕೆ ಕ್ಲಸ್ಟರ್ ಅನ್ನು ನಿರ್ವಹಿಸುತ್ತಿದೆ. ಹಾಗೆಯೇ ರಾಜ್ಯದಲ್ಲಿ ಇನ್ನೂ ಹೆಚ್ಚಿನ ಹೂಡಿಕೆ ಮಾಡಲು ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಹೂಡಿಕೆ ಯಾಕೆ?

ಉದ್ಯಮ ಆರಂಭಕ್ಕೆ ಬೇರೆ ರಾಜ್ಯಗಳಲ್ಲಿ ಉತ್ತಮ ಪ್ರೋತ್ಸಾಹಕಗಳು ದೊರೆತ ಹಿನ್ನೆಲೆಯಲ್ಲಿ ಕಂಪನಿಯು ಕರ್ನಾಟಕದಿಂದ ಹೊರಗೆ ಹೂಡಿಕೆ ಮಾಡಲು ಮುಂದಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅರವಿಂದ್ ಮೆಳ್ಳಿಗೇರಿ ಅವರು, ಹಾಗೇನೂ ಇಲ್ಲ, ನಮ್ಮ ಗ್ರಾಹಕರು ಮತ್ತು ದೀರ್ಘಕಾಲೀನ ಯೋಜನೆಗಳ ಕಾರ್ಯತಂತ್ರದ ಭಾಗವಾಗಿ ನಾವು ನಿರ್ಧಾರಗಳನ್ನು ಕೈಗೊಳ್ಳುತ್ತೇವೆ. ಇನ್ನು ಕರ್ನಾಟಕದಲ್ಲಿ ರಾಜ್ಯ ಸರ್ಕಾರದಿಂದಲೂ ನಮಗೆ ಉತ್ತಮ ಸಹಕಾರ ದೊರೆಯುತ್ತಿದೆ ಎಂದು ಹೇಳಿದ್ದಾರೆ.