ಬೆಂಗಳೂರು: ಮನೆ ಮುಂದೆ ಆಟವಾಡುತ್ತಿದ್ದ 5 ವರ್ಷದ ಬಾಲಕನಿಗೆ ಕಾಲಿನಿಂದ ಒದ್ದು (Bengaluru Child Assault) ವ್ಯಕ್ತಿಯೊಬ್ಬ ವಿಕೃತಿ ಮೆರೆದಿರುವುದು ಬೆಂಗಳೂರಿನ ತ್ಯಾಗರಾಜ ನಗರದ ಪೋಸ್ಟ್ ಆಫೀಸ್ ರಸ್ತೆಯಲ್ಲಿ ನಡೆದಿದೆ. ಮಗು ಮೇಲೆ ಹಲ್ಲೆ ಪ್ರಕರಣ ಸಂಬಂಧ ಪೋಷಕರು ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಂಜನ್ ಎಂಬಾತ ಬಾಲಕನ ಮೇಲೆ ಹಲ್ಲೆ ನಡೆಸಿರುವ ಆರೋಪಿ.
ದೀಪಿಕಾ ಜೈನ್ ಎಂಬುವವರು ತನ್ನ ಐದು ವರ್ಷದ ಮಗನ ಜತೆ ಸಹೋದರನ ಮನೆಗೆ ಹೋಗಿದ್ದರು. ಮಗುವನ್ನು ಮನೆ ಮುಂದಿನ ರಸ್ತೆಯಲ್ಲಿ ಆಟವಾಡಲು ಬಿಟ್ಟಿದ್ದರು. ಈ ವೇಳೆ ಪಕ್ಕದ ಮನೆ ನಿವಾಸಿ ರಂಜನ್ ಎಂಬಾತ ಹಿಂದಿನಿಂದ ಓಡಿಬಂದು ಮಗುವನ್ನು ಫುಟ್‌ಬಾಲ್‌ನಂತೆ ಕಾಲಿನಿಂದ ಜೋರಾಗಿ ಒದ್ದಿದ್ದಾನೆ. ಈ ವೇಳೆ ಬಾಲಕ ನೀವ್ ಜೈನ್ ಹಾರಿ ಮುಗ್ಗರಸಿ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ಮಗುವಿನ ಹಣೆ, ಕಣ್ಣಿನ ಭಾಗ, ಕೈ-ಕಾಲುಗಳಿಗೆ ಗಾಯಗಾಗಿ, ರಕ್ತ ಬಂದಿದೆ.
ಹಲ್ಲೆ ಸಂಬಂಧ ಪೋಷಕರು ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ರಸ್ತೆಯಲ್ಲಿನ ಸಿಸಿಟಿವಿ ಚೆಕ್ ಮಾಡಿದ್ದಾರೆ. ಈ ವೇಳೆ ಸೈಕೋ ರಂಜನ್ ಮಕ್ಕಳ ಮೇಲೆ ನಡೆಸಿರೋ ವಿಕೃತಿಗಳು ಬೆಳಕಿಗೆ ಬಂದಿವೆ. ಇಂತಹ ಕೃತ್ಯ ಇದೇ ಮೊದಲಲ್ಲ, ಈ ಹಿಂದೆಯೂ ಹಲವರಿಗೆ ಈ ಸೈಕೋ ರಂಜಿತ್ ಕಿರುಕುಳ ಕೊಟ್ಟಿದ್ದಾನೆ ಎಂಬುವುದು ತಿಳಿದುಬಂದಿದೆ.
ಬಾಲಕನ ಮೇಲೆ ಹಲ್ಲೆಯ ವಿಡಿಯೋ
ಸೈಕಲ್‌ನಲ್ಲಿ ಹೋಗುತ್ತಿದ್ದ ಬಾಲಕನ ತಲೆಗೂದಲು ಹಿಡಿದು ಗರಗರನೇ ತಿರುಗಿಸಿ ಹಲ್ಲೆ ನಡೆಸಿದ್ದ. ಹೀಗೆ ಒಂದು ವಾರದ ಅಂತರದಲ್ಲಿ ನಾಲ್ಕು ಮಕ್ಕಳಿಗೆ ಹಲ್ಲೆ ಮಾಡಿ ಕಿರುಕುಳ ನೀಡಿದ್ದಾನೆ. ವಿಪರ್ಯಾಸ ಅಂದರೆ ಇಷ್ಟೆಲ್ಲಾ ಘಟನೆಗಳು ನಡೆದಿದ್ದರೂ ಯಾವುದೇ ಮಕ್ಕಳ ಪೋಷಕರು, ಯಾವುದೇ ದೂರು ನೀಡಿರಲಿಲ್ಲ.
ಈ ಜಿಮ್ ಟ್ರೈನರ್‌ಗೆ ದಾರಿಹೋಕರಿಗೆ ಅನಗತ್ಯವಾಗಿ ಬೈಯುವುದು ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸುವುದು ಚಾಳಿಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಬಾಲಕನ ತಾಯಿ ನೀಡಿದ ದೂರಿನ ಮೇರೆಗೆ ಬನಶಂಕರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರೂ, ಸದ್ಯ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ ಎನ್ನಲಾಗಿದೆ.
ಗಾಂಜಾ ಬಗ್ಗೆ ದೂರು ನೀಡಿದ್ದಕ್ಕೆ ಮಕ್ಕಳ ಮೇಲೆ ಹಲ್ಲೆ ನಡೆಸಿದ ಅಪ್ರಾಪ್ತ ಬಾಲಕರು
ಈ ಕುರಿತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಪ್ರತಿಕ್ರಿಯಿಸಿ, ಈ ಘಟನೆಯು ಅತ್ಯಂತ ಖಂಡನೀಯ. ಮಕ್ಕಳಿಗೆ 18 ವರ್ಷ ತುಂಬುವವರೆಗೆ ಅವರು ಗೌರವಯುತವಾಗಿ ಬದುಕಲು ಸಮಾಜದಲ್ಲಿ ಅವಕಾಶ ನೀಡಬೇಕು. ಪದೇ ಪದೇ ಇಂತಹ ಘಟನೆಗಳು ನಡೆಯುವುದು ಆರೋಗ್ಯಕರ ಬೆಳವಣಿಗೆಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.