Doctor Murder Case: ನಿನಗಾಗಿ ನನ್ನ ಹೆಂಡ್ತಿಯನ್ನು ಕೊಂದೆ; ಪತ್ನಿ ಕೊಲೆ ಬಳಿಕ ನಾಲ್ಕೈದು ಮಹಿಳೆಯರಿಗೆ ಮೆಸೇಜ್ ಕಳುಹಿಸಿದ್ದ ವೈದ್ಯ!
Dr Kritika Reddy Murder Case: ಪತ್ನಿ ಕೃತಿಕಾ ಕೊಲೆ ಬಳಿಕ ವೈದ್ಯ ಮಹೇಂದ್ರ ರೆಡ್ಡಿ, ತನ್ನ ಪ್ರಪೋಸಲ್ ತಿರಸ್ಕರಿಸಿದ್ದ ಮಹಿಳೆಯರಿಗೆ ಮೆಸೇಜ್ ಕಳುಹಿಸಿದ್ದ ಎನ್ನುವುದು ತಿಳಿದುಬಂದಿದೆ. ಪೊಲೀಸರು ವಶಪಡಿಸಿಕೊಂಡ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ನಲ್ಲಿದ್ದ ಡೇಟಾವನ್ನು ಪರಿಶೀಲಿಸಿದಾಗ ವೈದ್ಯನ ಕುರಿತ ಹಲವು ವಿಚಾರ ಬೆಳಕಿಗೆ ಬಂದಿದೆ.
-
Prabhakara R
Nov 4, 2025 6:41 PM
ಬೆಂಗಳೂರು, ನ.4: ಬೆಂಗಳೂರಿನ ವೈದ್ಯೆ ಕೃತಿಕಾ ರೆಡ್ಡಿ ಹತ್ಯೆ ಪ್ರಕರಣದಲ್ಲಿ (Doctor Murder Case) ಪತಿ ಡಾ. ಮಹೇಂದ್ರ ರೆಡ್ಡಿ ಜಿ.ಎಸ್. ಸದ್ಯ ಜೈಲು ಸೇರಿದ್ದಾನೆ. ಚರ್ಮರೋಗ ತಜ್ಞೆಯಾಗಿದ್ದ ಪತ್ನಿಯನ್ನೇ ವೈದ್ಯ ಮಹೇಂದ್ರ ರೆಡ್ಡಿ ಕೊಲೆ ಮಾಡಿದ್ದ. ಇದಾದ ಕೆಲ ದಿನಗಳ ಬಳಿಕ ನಾಲ್ಕೈದು ಮಹಿಳೆಯರಿಗೆ "ನಾನು ನಿಮಗಾಗಿ ನನ್ನ ಹೆಂಡತಿಯನ್ನು ಕೊಂದಿದ್ದೇನೆ" ಎಂಬ ಸಂದೇಶವನ್ನು ವೈದ್ಯ ಕಳುಹಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿದ್ದ ಆರೋಪಿ ಮಹೇಂದ್ರ ರೆಡ್ಡಿ, ವಾಟ್ಸ್‌ಆಪ್ ಅಥವಾ ಇತರ ಮೆಸೆಂಜರ್ ಬಳಸುವ ಬದಲಿಗೆ ಫೋನ್‌ಪೇ ಮೂಲಕ ಮಹಿಳೆಯರಿಗೆ ಸಂದೇಶ ಕಳುಹಿಸಿದ್ದಾನೆ.
ಈ ಹಿಂದೆ ಈತನ ಪ್ರಪೋಸಲ್ ತಿರಸ್ಕರಿಸಿದ್ದ ಮಹಿಳೆಯರಿಗೆ ವೈದ್ಯ ಮೆಸೇಜ್ ಕಳುಹಿಸಿದ್ದ ಎನ್ನುವುದು ತಿಳಿದುಬಂದಿದೆ. ಪೊಲೀಸರು ವಶಪಡಿಸಿಕೊಂಡ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ನಲ್ಲಿದ್ದ ಡೇಟಾವನ್ನು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಿದಾಗ ಸಂದೇಶಗಳು ಬಯಲಾಗಿದೆ. ತನಿಖಾಧಿಕಾರಿಗಳ ಪ್ರಕಾರ, ಮಹೇಂದ್ರ ತನ್ನ ಹೆಂಡತಿಯ ಮರಣದ ನಂತರ ಹಳೆಯ ಸಂಬಂಧಗಳನ್ನು ಪುನಃಸ್ಥಾಪಿಸಲು ಪ್ರಯತ್ನಿಸಿದಂತೆ ಕಂಡುಬಂದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿ ಕೃತಿಕಾ ಗೌಡಗೆ ಅನಸ್ತೇಶಿಯಾ ಓವರ್‌ಡೋಸ್ ನೀಡಿ ಕೊಂದಿದ್ದ ವೈದ್ಯ ಮಹೇಂದ್ರ ರೆಡ್ಡಿಯನ್ನು ಅಕ್ಟೋಬರ್‌ನಲ್ಲಿ ಪೊಲೀಸರು ಬಂಧಿಸಿದ್ದರು. ಪತ್ನಿ ಕೊಂದ ಬಳಿಕ ಆಕೆಯದ್ದು ಸಹಜ ಸಾವು ಎಂದು ವೈದ್ಯ ಬಿಂಬಿಸಿದ್ದ. ಆದರೆ, ವೈದ್ಯೆ ಕುಟುಂಬಸ್ಥರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿದ್ದರು. ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಜನರಲ್ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದ ಮಹೇಂದ್ರ ರೆಡ್ಡಿ, ಕೊಲೆ ಪ್ರಕರಣ ನಡೆದ ಆರು ತಿಂಗಳ ಬಳಿಕ ಸಿಕ್ಕಿಬಿದ್ದಿದ್ದ.

ಮೃತ ವೈದ್ಯೆ ಕೃತಿಕಾ ಅವರ ಸಹೋದರಿ ಡಾ. ನಿಕಿತಾ ಎಂ ರೆಡ್ಡಿ ಪ್ರಕರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸೂಕ್ತ ತನಿಖೆ ನಡೆಸಲು ಕೋರಿದ್ದರು. ಆರು ತಿಂಗಳ ನಂತರ, ಎಫ್‌ಎಸ್‌ಎಲ್ ವರದಿಯು ದೇಹದಲ್ಲಿ ಅನಸ್ತೇಶಿಯಾ ಇರುವಿಕೆಯನ್ನು ದೃಢಪಡಿಸಿತ್ತು. ನಂತರ ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) 2023 ರ ಸೆಕ್ಷನ್ 103 ರ ಅಡಿಯಲ್ಲಿ ಕೊಲೆ ಎಂದು ಮರು ವರ್ಗೀಕರಿಸಿ ವೈದ್ಯ ಮಹೇಂದ್ರನನ್ನು ಉಡುಪಿಯ ಮಣಿಪಾಲದಿಂದ ಬಂಧಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ | Murder Case: ಆನೇಕಲ್‌ನಲ್ಲಿ ಪ್ರಾವಿಜನ್ ಸ್ಟೋರ್ ಮಾಲಿಕನ ಕತ್ತು ಕೊಯ್ದು ಹತ್ಯೆ
ವೈದ್ಯನ ಕುಟುಂಬಸ್ಥರಿಗೆ ಕ್ರಿಮಿನಲ್ ಹಿನ್ನೆಲೆ
ಮಹೇಂದ್ರ ಕುಟುಂಬ ಕ್ರಿಮಿನಲ್ ಪ್ರಕರಣಗಳ ಇತಿಹಾಸವನ್ನು ಹೊಂದಿದೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಅವರ ಸಹೋದರ ಡಾ. ನಾಗೇಂದ್ರ ರೆಡ್ಡಿ .ಜಿ.ಎಸ್. 2018 ರಲ್ಲಿ ಹಲವಾರು ವಂಚನೆ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸಿದ್ದರು. ಇನ್ನು ಮಹೇಂದ್ರ ಮತ್ತು ಇನ್ನೊಬ್ಬ ಸಹೋದರ ರಾಘವ ರೆಡ್ಡಿಯನ್ನು 2023 ರ ಬೆದರಿಕೆ ಪ್ರಕರಣದಲ್ಲಿ ಸಹ-ಆರೋಪಿಗಳಾಗಿದ್ದರು. ಮದುವೆ ಸಮಯದಲ್ಲಿ ಈ ವಿವರಗಳನ್ನು ಮುಚ್ಚಿಡಲಾಗಿದೆ ಎಂದು ಕೃತಿಕಾ ಅವರ ಕುಟುಂಬ ಹೇಳಿದೆ.