ಟಾಟಾ ಟ್ರಸ್ಟ್ ಸಹಭಾಗಿತ್ವದಲ್ಲಿ ನಡೆದ ನೊಬೆಲ್ ಪ್ರೈಜ್ ಡೈಲಾಗ್ ಇಂಡಿಯಾ 2025
ನಾವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ದಾರಿಯಲ್ಲಿದ್ದೇವೆ. ಈ ಸಂದರ್ಭದಲ್ಲಿ ನಾವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಿಚಾರದಲ್ಲಿ ಬೆಳವಣಿಗೆಯನ್ನು ಸಾಧಿಸಲು ಯುವ ಜನರನ್ನು ಸಬಲೀಕರಣಗೊಳಿಸಬೇಕಾಗಿದೆ. ವಿಶೇಷವಾಗಿ ಅಗತ್ಯ ಇರುವ ವ್ಯಕ್ತಿಗಳಿಗಾಗಿ ಹೊಸ ಆವಿಷ್ಕಾರ ಸೃಷ್ಟಿಗೆ ಪ್ರೋತ್ಸಾಹಿಸಬೇಕಾಗಿದೆ.
-
Ashok Nayak
Nov 4, 2025 6:23 PM
ವಿಜ್ಞಾನ, ಸಮಾಜ ಮತ್ತು ಯುವಜನತೆ ನಡುವಿನ ಸಂಬಂಧ ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಡೆದ ಸಂವಾದ ಕಾರ್ಯಕ್ರಮ
ಬೆಂಗಳೂರು: ಟಾಟಾ ಟ್ರಸ್ಟ್ ಸಹಭಾಗಿತ್ವದಲ್ಲಿ ಆಯೋಜಿಸಲಾದ ನೊಬೆಲ್ ಪ್ರೈಜ್ ಡೈಲಾಗ್ ಇಂಡಿಯಾ 2025 ಕಾರ್ಯಕ್ರಮದಲ್ಲಿ ನೊಬೆಲ್ ಪುರಸ್ಕೃತ ತಜ್ಞರು, ಪ್ರಮುಖ ವಿಜ್ಞಾನಿಗಳು, ಚಿಂತಕರು ಮತ್ತು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನ (Indian Institute of Science) ವಿದ್ಯಾರ್ಥಿಗಳು ಪಾಲ್ಗೊಂಡು ಸಂವಾದ ನಡೆಸಿದರು. ‘ನಾವು ಬಯಸುವ ಭವಿಷ್ಯ’ ಎಂಬ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಜ್ಞಾನ, ಒಳಗೊಳ್ಳುವಿಕೆ, ಸುಸ್ಥಿರತೆ ಮತ್ತು ಭರವಸೆ ಕುರಿತು ಗಂಭೀರ ಚರ್ಚೆಗಳು ನಡೆದವು.
ಈ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಟಾಟಾ ಟ್ರಸ್ಟ್ಸ್ ಸಿಇಓ ಸಿದ್ಧಾರ್ಥ್ ಶರ್ಮಾ ಅವರು, “ಭಾರತದ ಅತಿದೊಡ್ಡ ಸಂಪತ್ತು ಎಂದರೆ ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳಷ್ಟೇ ಅಲ್ಲ , ಇಲ್ಲಿನ ಜನರ ಶಕ್ತಿ ಮತ್ತು ಕಲಿಕಾ ಸಾಮರ್ಥ್ಯವು ಹೌದು. ಆ ಕಾರಣದಿಂದಲೇ ಟಾಟಾ ಟ್ರಸ್ಟ್ಸ್ ಸೆಂಟರ್ಸ್ ಆಫ್ ಎಕ್ಸ್ಲೆನ್ಸ್ ಕೇಂದ್ರಗಳನ್ನು ರೂಪಿಸುವ ಪರಂಪರೆಯನ್ನು ಹೊಂದಿದೆ. ಅದರ ಭಾಗವಾಗಿಯೇ ನೊಬೆಲ್ ಪ್ರೈಜ್ ಔಟ್‌ರೀಚ್ ತಂಡದ ಜೊತೆ ನಾವು ಸಹಭಾಗಿತ್ವ ಹೊಂದಿದ್ದು, ಜ್ಞಾನವನ್ನು ಮಾನವತೆಯ ಸೇವೆಗೆ ಬಳಸಿಕೊಳ್ಳಬೇಕು ಎಂಬುದನ್ನು ಪಾಲಿಸುತ್ತಿದ್ದೇವೆ.
ಇದನ್ನೂ ಓದಿ: Bangalore News: ಸಂಕೀರ್ಣ ಜಗತ್ತಿಗಾಗಿ ನಾಯಕತ್ವ ಮರುಕಲ್ಪಿಸಲು ಶ್ವೇತಪತ್ರ ಹೊರಡಿಸಿದ ಸಂಸ್ಥೆಗಳು
ನಾವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ದಾರಿಯಲ್ಲಿದ್ದೇವೆ. ಈ ಸಂದರ್ಭದಲ್ಲಿ ನಾವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಿಚಾರದಲ್ಲಿ ಬೆಳವಣಿಗೆಯನ್ನು ಸಾಧಿಸಲು ಯುವಜನರನ್ನು ಸಬಲೀಕರಣಗೊಳಿಸಬೇಕಾಗಿದೆ. ವಿಶೇಷವಾಗಿ ಅಗತ್ಯ ಇರುವ ವ್ಯಕ್ತಿಗಳಿಗಾಗಿ ಹೊಸ ಆವಿಷ್ಕಾರ ಸೃಷ್ಟಿಗೆ ಪ್ರೋತ್ಸಾಹಿಸಬೇಕಾಗಿದೆ. ಇಂದು ಈ ಕಾರ್ಯಕ್ರಮ ಆಯೋಜಿಸುವ ಮೂಲಕ ನಾವು ಈ ಬದ್ಧತೆಯನ್ನು ಸಾರಿದ್ದೇವೆ” ಎಂದು ಹೇಳಿದರು.
ನೊಬೆಲ್ ಪ್ರೈಜ್ ಪುರಸ್ಕೃತರಾದ ಡೇವಿಡ್ ಮ್ಯಾಕ್‌ಮಿಲನ್/David Macmillan (ರಸಾಯನಶಾಸ್ತ್ರ 2021), ಅವರು ಆರ್ಗನೋಕ್ಯಾಟಲಿಸಿಸ್ ಮತ್ತು ಶ್ರೇಷ್ಠ ಆಲೋಚನೆಗಳ ಶಕ್ತಿಯ ಕುರಿತು ಮಾತ ನಾಡಿ, “ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಪರಿಹರಿಸಲು ನಮಗೆ ಒಂದು ವೇಗವರ್ಧಕ ಕ್ರಿಯೆಯ ಅಗತ್ಯವಿದೆ. ಈ ರೀತಿಯ ವೈಜ್ಞಾನಿಕ ಕ್ಷೇತ್ರಗಳು ಎಷ್ಟು ಮುಖ್ಯವೆಂದು ಜಗತ್ತಿಗೆ ಅರ್ಥ ವಾಗುವಂತೆ ವಿವರಿಸಲು ನಾವು ಮತ್ತಷ್ಟು ತೀವ್ರವಾಗಿ ಕೆಲಸ ಮಾಡಬೇಕು, ಯಾಕೆಂದರೆ ಸಮಸ್ಯೆ ನಿಜವಾಗಿಯೂ ನಮಗೆ ತುಂಬಾ ಹತ್ತಿರದಲ್ಲಿದೆ. ನಾನು ಇದೇ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದೇನೆ. ಭಾರತದಲ್ಲಿ ನಿಜವಾದ ಆತ್ಮವಿಶ್ವಾಸ ಮತ್ತು ಹೊಸತನದ ಆಕಾಂಕ್ಷೆ ಕಾಣಿಸುತ್ತಿದೆ. ಮುಂದುವರಿಯುವುದಕ್ಕೆ ಇದು ಭಾರತಕ್ಕೆ ಉತ್ತಮ ಕ್ಷಣ ಮತ್ತು ಆ ವಿಚಾರ ಭಾರತಕ್ಕೆ ತಿಳಿದಿದೆ” ಎಂದು ಹೇಳಿದರು.
ಮತ್ತೊಬ್ಬ ನೊಬೆಲ್ ಪುರಸ್ಕೃತರಾದ ಜೇಮ್ಸ್ ರಾಬಿನ್ಸನ್/ James Robinson (ಎಕಾನಾಮಿಕ್ ಸೈನ್ಸಸ್, 2024) ಅವರು ಸಮೃದ್ಧಿ ಮತ್ತು ಪ್ರಗತಿಯ ನಿಟ್ಟಿನಲ್ಲಿ ಆಲೋಚಿಸಲು ಸೂಚಿಸಿದರು. ವಿವಿಧ ಸಂಸ್ಕೃತಿಗಳಲ್ಲಿ ಹಲವು ದಿಕ್ಕುಗಳಲ್ಲಿ ಐಡಿಯಾಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸಮಾಜ ಬೆಳೆಯುತ್ತವೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಮಾತನಾಡಿ, “ನೀವು ಈಗ ಅಸ್ತಿತ್ವದಲ್ಲಿರುವ ಸಂಸ್ಕೃತಿಗಳನ್ನು ನೋಡಿದರೆ, ಅವುಗಳಲ್ಲಿ ಒನ್ ವೇ ರೀತಿಯ ಅಂಶಗಳು ಕಾಣಿಸುವುದಿಲ್ಲ. ಅಲ್ಲಿ ಕೊಡು-ಕೊಳ್ಳುವಿಕೆ ಇರುತ್ತದೆ. ಅವುಗಳು ಟೂ ವೇ ರಸ್ತೆಗಳಾಗಿವೆ ಅಥವಾ ಬಹು ದಾರಿಗಳುಳ್ಳ ರಸ್ತೆಗಳಾಗಿವೆ.
ಪ್ರತಿಯೊಬ್ಬರೂ ಒಬ್ಬರಿಂದ ಒಬ್ಬರು ಸಾಲ ಪಡೆಯುತ್ತಾರೆ ಮತ್ತು ಕಲಿಯುತ್ತಾರೆ ಮತ್ತು ಬೆರೆಯುತ್ತಾರೆ ಮತ್ತು ಹೊಸ ಸೃಷ್ಟಿ ಮಾಡುತ್ತಾರೆ” ಎಂದು ಹೇಳಿದರು.
ಅರ್ಬನ್ ಎಪಿಡೆಮಿಯಾಲಜಿಸ್ಟ್ ಟೊಲುಲ್ಲಾ ಒನಿ/ Tolullah Oni, ಅವರು ‘ಭರವಸೆ’ ಕುರಿತು ಮಾತನಾಡಿದರು. ಅವರು ಭವಿಷ್ಯವನ್ನು ಮರುಕಲ್ಪಿಸಿಕೊಳ್ಳಲು ಯುವಜನತೆಗೆ ಸವಾಲೊಡ್ಡಿದರು. ಜ್ಞಾನ- ಸೃಷ್ಟಿಯ ಪ್ರಕ್ರಿಯೆಯನ್ನು ಜನಪ್ರಿಯಗೊಳಿಸಲು ಮತ್ತು ಯುವಜನರಿಗೆ ಅವರು ಬಯಸುವ ಭವಿಷ್ಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ರೂಪಿಸಲು ಕರೆ ನೀಡಿದರು.
ಭಾರತದ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷರಾದ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ, ರಾಬಿನ್ಸನ್ ಮತ್ತು ಒನಿ ಅವರನ್ನು ಒಳಗೊಂಡ ಗೋಷ್ಠಿಯಲ್ಲಿ ಜಗತ್ತಿನ ಬಹುಮುಖಿ ಅಭಿವೃದ್ಧಿ ಸವಾಲುಗಳನ್ನು ಪರಿಹರಿಸುವ ಸಂಕೀರ್ಣತೆಯ ಕುರಿತು ಚರ್ಚಿಸಲಾಯಿತು.
ಮೈಕ್ರೋಬಯಾಲಜಿಸ್ಟ್ ಗಗನ್‌ದೀಪ್ ಕಾಂಗ್/Gagandeep Kang, ಅವರು ಜಾಗತಿಕ ಆರೋಗ್ಯ ಆತಂಕಗಳು ಮತ್ತು ತಾಂತ್ರಿಕ ಪ್ರಗತಿಗಳ ಕುರಿತು ಮಾತನಾಡಿ ಲಸಿಕೆಗಳ ಅಭಿವೃದ್ಧಿ ವಿಚಾರದಲ್ಲಿ ಭಾರತದ ಕ್ರಾಂತಿಕಾರಕ ಕೆಲಸಗಳ ಕುರಿತು ಒಳನೋಟಗಳನ್ನು ಹಂಚಿಕೊಂಡರು. ಮ್ಯಾಕ್‌ಮಿಲನ್, ಕಾಂಗ್ ಮತ್ತು ಬಯೋಟೆಕ್ ಉದ್ಯಮಿ ಕುಶ್ ಪರ್ಮಾರ್/Kush Parmear ಅವರನ್ನು ಒಳಗೊಂಡ ಗೋಷ್ಠಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವು ಮಾನವತೆ ಮತ್ತು ಗ್ರಹದ ಒಳ್ಳೆಯದಕ್ಕೆ ಹೇಗೆ ಕಾರ್ಯ ಮಾಡಬಹುದು ಎಂಬ ಚರ್ಚೆಯನ್ನು ನಡೆಸಲಾಯಿತು. ಗೋಷ್ಠಿಗಳನ್ನು ನೊಬೆಲ್ ಪ್ರೈಜ್ ಔಟ್‌ರೀಚ್‌ನ ಚೀಫ್ ಇಂಪಾಕ್ಟ್ ಆಫೀಸರ್ ಒವೆನ್ ಗ್ಯಾಫ್ನಿ ಮತ್ತು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ನಿರ್ದೇಶಕ ಜಯರಾಮ್ ಚೆಂಗಲೂರ್ ನಿರ್ವಹಣೆ ಮಾಡಿದರು.
ನೊಬೆಲ್ ಫೌಂಡೇಷನ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಹನ್ನಾ ಸ್ಟ್ಜಾರ್ನೆ/ Hanna Stjärne, ಅವರು ಮಾತನಾಡಿ, “ದಿನವಿಡೀ ವಿದ್ಯಾರ್ಥಿಗಳು ಮತ್ತು ತಜ್ಞರೊಂದಿಗೆ ಬೆರೆಯುವುದು, ಅವರ ಮಾತು ಕೇಳುವುದು ಮತ್ತು ಸಂವಾದ ನಡೆಸುವುದು ನಿಜವಾಗಿಯೂ ಸ್ಫೂರ್ತಿದಾಯಕವಾಗಿತ್ತು. ಸಾಮಾನ್ಯ ಸಮಸ್ಯೆಗಳನ್ನು ಚರ್ಚಿಸುವ ಮೂಲಕ, ಹೊಸ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಮತ್ತು ಒಬ್ಬರಿಂದ ಒಬ್ಬರು ಕಲಿಯುವ ಮೂಲಕ ನಾವು ಬದಲಾವಣೆ ಉಂಟುಮಾಡುವ ಸಂವಾದ ನಡೆಸಿದ್ದೇವೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪರಾಗ್ ಆರ್ಟ್ ವಾಲ್ ಸ್ಥಾಪನೆಯು ಎಲ್ಲರ ಗಮನ ಸೆಳೆಯಿತು. ಕರ್ನಾಟಕದ ಬೆಂಗಳೂರು, ಮತ್ತು ಕೊಪ್ಪಳ ಜಿಲ್ಲೆಯ ಗ್ರಾಮೀಣ ಹಾಗೂ ಮುಂಬೈಯ ಒಂದು ಕೊಳಗೇರಿಯ ಒಟ್ಟು 200 ಮಕ್ಕಳು ಸೇರಿ ಈ ಕಲಾಕೃತಿಯನ್ನು ರಚಿಸಿದ್ದು ವಿಶೇಷವಾಗಿತ್ತು.
ಈ ಕಾರ್ಯಕ್ರಮದಲ್ಲಿ ಭಾರತದ ಪ್ರಸಿದ್ಧ ವಯೋಲಿನ್ ವಾದಕ ಡಾ.ಎಲ್.ಸುಬ್ರಹ್ಮಣ್ಯಂ ಅವರ ಆಕರ್ಷಕ ಸಂಗೀತ ಪ್ರದರ್ಶನ ನಡೆಯಿತು. ಜೊತೆಗೆ ಪ್ರಸಿದ್ಧ ಗಾಯಕಿ ಕವಿತಾ ಕೃಷ್ಣಮೂರ್ತಿ ಅವರ ಗಾಯನ ಕಾರ್ಯಕ್ರಮವಿತ್ತು. ಕಲೆ ಮತ್ತು ವಿಜ್ಞಾನ ಬೆರೆತ ವಿಶಿಷ್ಟ ಕಾರ್ಯಕ್ರಮವಾಗಿ ಇದು ಮೂಡಿಬಂತು.
ನೊಬೆಲ್ ಪ್ರೈಜ್ ಡೈಲಾಗ್ ಇಂಡಿಯಾ 2025 ಮುಂದುವರೆಯಲಿದ್ದು, ನ.5ರಂದು ಮುಂಬೈಯಲ್ಲಿ ಲೋಕೋಪಕಾರದ ಪಾತ್ರವನ್ನು ಹಾಗೂ ವಿಜ್ಞಾನ ಮತ್ತು ಸಹಾನುಭೂತಿ ಯನ್ನು ಒಳಗೊಂಡ ಭವಿಷ್ಯವಕ್ಕಾಗಿ ಸಂಸ್ಥೆಯ ನಿರ್ಮಾಣದ ಕುರಿತು ಅನ್ವೇಷಿಸಲು ಆಯ್ದ ಕಾರ್ಪೊರೇಟ್ ನಾಯಕರು ಮತ್ತು ನೀತಿ ನಿರೂಪಕರನ್ನು ಒಟ್ಟುಗೂಡಿಸಲಾಗುತ್ತಿದೆ.