‘ಪೆಟ್ಸ್ ಆನ್ ಅಕಾಸಾ’ ಸೇವೆಯಲ್ಲಿ 3,700ಕ್ಕೂ ಹೆಚ್ಚು ಪ್ರಯಾಣ; ಬೇಡಿಕೆಯಲ್ಲಿ ಶೇ.53 ಏರಿಕೆ
ಬೆಂಗಳೂರು: ಅಕಾಸಾ ಏರ್(Akash Air)ನ ‘ಪೆಟ್ಸ್ ಆನ್ ಅಕಾಸಾ’ ಸೇವೆಯಲ್ಲಿ ಬೆಂಗಳೂರು ಅತಿದೊಡ್ಡ ಸಾಕುಪ್ರಾಣಿ ಪ್ರಯಾಣ ಕೇಂದ್ರವಾಗಿ ಹೊರಹೊಮ್ಮಿದೆ. ಸೇವೆ ಆರಂಭವಾದ ಬಳಿಕ ಬೆಂಗಳೂರಿ ನಿಂದ 3,700ಕ್ಕೂ ಹೆಚ್ಚು ಸಾಕುಪ್ರಾಣಿ ಪ್ರಯಾಣಗಳು ನಡೆದಿದ್ದು, ಅಕಾಸಾ ಏರ್ ಜಾಲದಲ್ಲಿನ ಒಟ್ಟು ಸಾಕುಪ್ರಾಣಿ ಪ್ರಯಾಣಗಳಲ್ಲಿ ಶೇ.30ಕ್ಕಿಂತ ಹೆಚ್ಚು ಪಾಲು ಬೆಂಗಳೂರಿನದ್ದಾಗಿದೆ.
2024ರ ಹಣಕಾಸು ವರ್ಷದಲ್ಲಿ ಬೆಂಗಳೂರಿನಿಂದ 856 ಸಾಕುಪ್ರಾಣಿ ಪ್ರಯಾಣಗಳು ದಾಖಲಾಗಿದ್ದರೆ, 2026ರ ಹಣಕಾಸು ವರ್ಷದಲ್ಲಿ ಈ ಸಂಖ್ಯೆ 1,310ಕ್ಕೆ ಏರಿಕೆಯಾಗಿ ಶೇ.53ರಷ್ಟು ಬೆಳವಣಿಗೆ ಕಂಡಿದೆ.
ಅಕಾಸಾ ಏರ್‌ನಲ್ಲಿ ಅತಿ ಹೆಚ್ಚು ಬಾರಿ ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸುವ ಮೊದಲ 10 ಪೆಟ್ ಪೇರಂಟ್ಸ್‌ಗಳಲ್ಲಿ ಐವರು ಬೆಂಗಳೂರಿನವರಾಗಿದ್ದಾರೆ. ಬೆಂಗಳೂರು–ದೆಹಲಿ, ಬೆಂಗಳೂರು–ಕೊಲ್ಕತ್ತಾ ಮತ್ತು ಬೆಂಗಳೂರು–ಗುವಾಹಟಿ ಮಾರ್ಗಗಳು ಅತ್ಯಂತ ಜನಪ್ರಿಯ ಸಾಕುಪ್ರಾಣಿ ಪ್ರಯಾಣ ಮಾರ್ಗಗಳಲ್ಲಿ ಸೇರಿದ್ದು, ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಬೆಂಗಳೂರಿನಿಂದ ನಡೆದ ಸಾಕುಪ್ರಾಣಿ ವಿಮಾನ ಪ್ರಯಾಣಗಳಲ್ಲಿ ಶೇ.55ಕ್ಕಿಂತ ಹೆಚ್ಚು ಪಾಲು ಹೊಂದಿವೆ.
ಇದನ್ನೂ ಓದಿ: Indigo Flight Issue: ಇಂಡಿಗೋದ 4 ಫ್ಲೈಟ್ ಇನ್ಸ್‌ಪೆಕ್ಟರ್‌ಗಳ ವಜಾ; ಡಿಜಿಸಿಎ ಮಹತ್ವದ ಆದೇಶ
ಬೆಂಗಳೂರಿನ ಪೆಟ್ ಪೇರಂಟ್ಸ್ ಈಗ 16 ಗಮ್ಯಸ್ಥಾನಗಳಿಗೆ ತಮ್ಮ ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸುತ್ತಿದ್ದು, ಸೇವೆ ಆರಂಭವಾದಾಗ ಈ ಸಂಖ್ಯೆ 10 ಆಗಿತ್ತು. ದೆಹಲಿ, ಕೊಲ್ಕತ್ತಾ, ಮುಂಬೈ, ಗುವಾಹಟಿ, ಅಹಮದಾಬಾದ್ ಜೊತೆಗೆ ಭುವನೇಶ್ವರ, ಪುಣೆ, ಲಖನೌ, ಕೊಚ್ಚಿ, ವಾರಾಣಸಿ, ದರ್ಬಂಗಾ ಮತ್ತು ಕ್ಯಾಲಿಕಟ್ ಕಡೆಗೂ ಬೇಡಿಕೆ ಹೆಚ್ಚುತ್ತಿದೆ.
ಅಕಾಸಾ ಏರ್ ತನ್ನ ಜಾಲದಾದ್ಯಂತ ಇದುವರೆಗೆ 13,500ಕ್ಕೂ ಹೆಚ್ಚು ಸಾಕುಪ್ರಾಣಿಗಳನ್ನು ಸಾಗಿಸಿದೆ. ಪ್ರತಿ ವಿಮಾನದಲ್ಲಿ ಮೂರು ಸಾಕುಪ್ರಾಣಿಗಳವರೆಗೆ ಅವಕಾಶ, ಕ್ಯಾಬಿನ್‌ನಲ್ಲಿ ಕ್ಯಾರಿಯರ್ ಸೇರಿದಂತೆ 10 ಕೆ.ಜಿ. ತೂಕ ಮಿತಿ, ಸರಳ ಬುಕ್ಕಿಂಗ್ ಪ್ರಕ್ರಿಯೆ ಮತ್ತು ಹೆಚ್ಚು ಲವಚಿಕ ಆರೋಗ್ಯ ಪ್ರಮಾಣಪತ್ರ ನೀತಿಯನ್ನು ಪರಿಚಯಿಸಲಾಗಿದೆ.
ಮುಂಚಿತವಾಗಿ ಬುಕ್ ಮಾಡಿದ ವಿಂಡೋ ಸೀಟ್, ಆದ್ಯತಾ ಚೆಕ್-ಇನ್ ಮತ್ತು ಬೋರ್ಡಿಂಗ್ ಸೌಲಭ್ಯಗಳನ್ನೂ ಉಚಿತವಾಗಿ ನೀಡಲಾಗುತ್ತಿದೆ. ಸಾಕುಪ್ರಾಣಿಗಳ ಸುರಕ್ಷತೆ ಮತ್ತು ಆರೈಕೆಗೆ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿದೆ.
‘ಪೆಟ್ಸ್ ಆನ್ ಅಕಾಸಾ’ ಸೇವೆ 2022ರ ನವೆಂಬರ್ 1ರಂದು ಆರಂಭವಾಗಿದ್ದು, ಬೆಕ್ಕು ಮತ್ತು ನಾಯಿ ಗಳನ್ನು ತೂಕದ ಆಧಾರದ ಮೇಲೆ ಕ್ಯಾಬಿನ್ ಅಥವಾ ಕಾರ್ಗೋ ಮೂಲಕ ಸಾಗಿಸುವ ಸೌಲಭ್ಯವನ್ನು 28 ನಗರಗಳಲ್ಲಿ ಒದಗಿಸಲಾಗುತ್ತಿದೆ.