ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Robbery Case: ಬುರ್ಖಾ ಧರಿಸಿ 80 ಲಕ್ಷ ರುಪಾಯಿ ಮೌಲ್ಯದ ಕಂಪ್ಯೂಟರ್‌ ಬಿಡಿಭಾಗಗಳನ್ನು ಕದ್ದ ಅಪ್ಪ-ಮಗ

Bengaluru News: ಬುರ್ಖಾ ಧರಿಸಿ ಅಪ್ಪ-ಮಗನ ಜೋಡಿ ಬರೋಬ್ಬರಿ 80 ಲಕ್ಷ ರುಪಾಯಿ ಮೌಲ್ಯದ ಕಂಪ್ಯೂಟರ್‌ ಬಿಡಿ ಭಾಗಗಳನ್ನು ಕದ್ದ ಘಟನೆ ನಡೆದಿದೆ. ಸದ್ಯ ಇವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ನಾಗಾವರದಲ್ಲಿ ಈ ಘಟನೆ ನಡೆದಿದೆ.

ಮೆಟಾ ಎಐ ಚಿತ್ರ.

ಬೆಂಗಳೂರು, ಮಾ. 19: ಸಿಲಿಕಾನ್‌ ಸಿಟಿ ಬೆಂಗಳೂರು ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಟ್ರಾಫಿಕ್‌ ಜಾಮ್‌ನಿಂದ ಹಿಡಿದು, ಭೂಗತ ಲೋಕದ ಅಪರಾಧ, ಚಿತ್ರ ವಿಚಿತ್ರ ದರೋಡೆ ಪ್ರಕರಣಗಳು ದೇಶ ಮಟ್ಟದಲ್ಲಿ ಸುದ್ದಿಯಾಗುತ್ತಿರುತ್ತವೆ (Bengaluru News). ಅದೇ ರೀತಿಯ ಮತ್ತೊಂದು ಪ್ರಕರಣ ಇದೀಗ ವರದಿಯಾಗಿದೆ. ಬುರ್ಖಾ ಧರಿಸಿ ಅಪ್ಪ-ಮಗನ ಜೋಡಿ ಬರೋಬ್ಬರಿ 80 ಲಕ್ಷ ರುಪಾಯಿ ಮೌಲ್ಯದ ಕಂಪ್ಯೂಟರ್‌ ಬಿಡಿ ಭಾಗಗಳನ್ನು ಕದ್ದು (Robbery Case) ಪೊಲೀಸರ ಕೈಗೆ ಸಿಕ್ಕಿ ಬಿದ್ದಿದೆ.

ಸದ್ಯ ಪೊಲೀಸರು ದರೋಡೆಕೋರ ಅಪ್ಪ-ಮಗನನ್ನು ಬಂಧಿಸಿ ಕದ್ದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣದ ವಿವರ

ನಾಗಾವರ ನಿವಾಸಿ ದೂರು ದಾಖಲಿಸುವುದರೊಂದಿಗೆ ಪ್ರಕರಣದ ಎಳೆ ಬಿಚ್ಚತೊಡಗಿತು. ಮಾರ್ಚ್‌ 13ರಂದು ಅವರು ತಮ್ಮ ಕಂಪ್ಯೂಟರ್‌ ಬಿಡಿ ಭಾಗಗಳ ಅಂಗಡಿ ಮುಚ್ಚಿ ಮನೆಗೆ ತೆರಳಿದ್ದರು. ಎಂದಿನಂತೆ ಮರುದಿನ ಬೆಳಗ್ಗೆ 11 ಗಂಟೆಗೆ ಅಂಗಡಿ ಬಾಗಿಲು ತೆರೆಯಲು ಮುಂದಾದ ಅವರಿಗೆ ಆಘಾತ ಎದುರಾಗಿತ್ತು. ಆಗ ಬೀಗ ಒಡೆದಿರುವುದು ಅವರ ಗಮನಕ್ಕೆ ಬಂತು. ಶಾಕ್‌ನಿಂದಲೇ ಅಂಗಡಿ ಒಳ ಪ್ರವೇಶಿಸಿದವರಿಗೆ 80 ಲಕ್ಷ ರುಪಾಯಿಗಿಂತ ಅಧಿಕ ಮೌಲ್ಯದ ಸಾಮಗ್ರಿ ಕಳುವಾಗಿರುವುದು ಗೊತ್ತಾಯಿತು.

444 ಡಿಡಿಆರ್‌4 ರ‍್ಯಾಮ್‌, 279 ಎಸ್‌ಎಸ್‌ಡಿ ಮತ್ತು 2.4 ಲಕ್ಷ ರುಪಾಯಿ ನಗದು ನಾಪತ್ತೆಯಾಗಿತ್ತು. ಇದರ ಒಟ್ಟು ಮೌಲ್ಯ 80 ರುಪಾಯಿ ಎಂದು ಅವರು ದೂರು ದಾಖಲಿಸಿದರು. ಪ್ರಕರಣ ದಾಖಲಿಸಿಕೊಂಡ ಗೋವಿಂದಪುರ ಪೊಲೀಸ್‌ ಠಾಣೆ ತನಿಖೆ ಕೈಗೆತ್ತಿಕೊಂಡರು. ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ ಪೊಲೀಸರಿಗೆ ಕೃತ್ಯದ ಹಿಂದೆ ಇಬ್ಬರ ಕೈವಾಡವಿದೆ ಎನ್ನುವುದು ಗೊತ್ತಾಯ್ತು.

ಚಿನ್ನದ ವ್ಯಾಪಾರಿಯ ದರೋಡೆ ಮಾಡಿದ ಇಬ್ಬರು ಪಿಎಸ್‌ಐಗಳು ಸೇವೆಯಿಂದ ವಜಾ

ಬುರ್ಖಾ ಧರಿಸಿ ಕೃತ್ಯ

ಗುರುತನ್ನು ಮರೆಮಾಚಲು ಇಬ್ಬರು ಬುರ್ಖಾಧಾರಿ ಪುರುಷರು ಅಂಗಡಿ ಬಾಗಿಲನ್ನು ಒಡೆದು ವಸ್ತುಗಳನ್ನು ದೋಚುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಆದರೆ ಕಳ್ಳರ ಮುಖ ಕಾಣಿಸದೇ ಇದ್ದುದು ತನಿಖೆಗೆ ಸವಾಲು ಒಡ್ಡಿತ್ತು. ಹೀಗಾಗಿ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾದ ಮೊರೆ ಹೋದರು. ಕೊನೆಗೂ ಮಾರ್ಚ್‌ 15ರಂದು ಪೊಲೀಸರು ಓರ್ವ ಆರೋಪಿಯನ್ನು ನಾಗಾವರದ ಹೋಟೆಲ್‌ ಬಳಿ ಬಂಧಿಸಿ ಕೃತ್ಯಕ್ಕೆ ಬಳಸಿದ ಟೂ ವ್ಹೀಲರ್‌ ವಶಪಡಿಸಿಕೊಂಡರು. ವಿಚಾರಣೆ ವೇಳೆ ಆತ ತಂದೆಯೊಂದಿಗೆ ಸೇರಿ ಕಳವು ಮಾಡಿದ್ದನ್ನು ಒಪ್ಪಿಕೊಂಡ. ಕೊನೆಗೆ ಆತನ ತಂದೆಯನ್ನೂ ಬಂಧಿಸಲಾಯಿತು. ಟಿ. ಚನ್ನಯ್ಯ ಲೇಔಟ್‌ನಲ್ಲಿ ಸಂಗ್ರಹಿಸಿಟ್ಟಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು.

ಹಿಂದೆಯೂ ನಡೆದಿತ್ತು

ಬುರ್ಖಾ ಧರಿಸಿ ಕಳವು ನಡೆಸಿದ ಪ್ರಕರಣ ಹಿಂದೆಯೂ ಬೆಂಗಳೂರಿನಲ್ಲಿ ನಡೆದಿದೆ. ಬುರ್ಖಾ ಧರಿಸಿ ಪ್ರಯಾಣಿಕರ ಸೋಗಿನಲ್ಲಿ ಬಸ್‌ಗಳಲ್ಲಿ ಪ್ರಯಾಣಿಕರ ಬ್ಯಾಗ್‌ಗಳಿಂದ ಚಿನ್ನಾಭರಣ ಕಳವು ಮಾಡುತ್ತಿದ್ದ ಮೂವರು ಮಹಿಳೆಯರನ್ನು ಕಳೆದ ವರ್ಷ ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದರು. ಕಲಬುರಗಿ ಜಿಲೆಲಯ ಅನು, ಪ್ರಾರ್ಥನಾ ಮತ್ತು ಪದ್ಮಾ ಬಂಧಿತರು. ಅವರಿಂದ 16 ಲಕ್ಷ ರುಪಾಯಿ ಮೌಲ್ಯದ 190 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿತ್ತು.

ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author