Bengaluru news: ಜರ್ಮನಿಯಿಂದ ಬಂದ ಯುವಕನ ಜೀವ ತೆಗೆದ ನೆಲಮಂಗಲದ ಫ್ಲೆಕ್ಸ್
Death by Flex: ಜರ್ಮನಿಯಲ್ಲಿ ಅಧ್ಯಯನ ಮಾಡುತ್ತಿದ್ದು, ಸ್ನೇಹಿತನ ಮದುವೆಯ ಸಂಭ್ರಮದಲ್ಲಿ ಭಾಗಿಯಾಗಲು ಬೆಂಗಳೂರಿನ ನೆಲಮಂಗಲಕ್ಕೆ ಬಂದಿದ್ದ ಯುವಕಮನ್ನು ಅಕ್ರಮ ಫ್ಲೆಕ್ಸ್ ಬಲಿ ಪಡೆದುಕೊಂಡಿದೆ. ನಿಯಮ ಮೀರಿ ರಾರಾಜಿಸುತ್ತಿರುವ ಫ್ಲೆಕ್ಸ್- ಬ್ಯಾನರ್‌ಗಳ ತೆರವಿಗೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಮೃತ ಯುವಕ ತೇಜಸ್ ಗೌಡ -
ನೆಲಮಂಗಲ, ನ. 21: ನಗರದಲ್ಲಿ (Bengaluru news) ಮತ್ತೆ ಮಿತಿ ಮೀರಿ ಹಬ್ಬಿರುವ ಫ್ಲೆಕ್ಸ್ (Flex Banner) ಹಾವಳಿಯ ಪರಿಣಾಮ ಮತ್ತೊಂದು ಜೀವ ಹೋಗಿದೆ. ಬೈಕ್ನಲ್ಲಿ ತೆರಳುತ್ತಿರುವಾಗ ಫ್ಲೆಕ್ಸ್ ತಗುಲಿ ಯುವಕ ರಸ್ತೆಗೆ ಬಿದ್ದಿದ್ದು, ಮೂರು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ತೇಜಸ್ ಗೌಡ (27) ಮೃತ ಯುವಕ. ಜರ್ಮನಿಯಲ್ಲಿ ಎಂ.ಎಸ್ ಓದುತ್ತಿದ್ದ ತೇಜಸ್ ಗೌಡ, ಸ್ನೇಹಿತನ ಮದುವೆಗೆ ಎಂದು ಊರಿಗೆ ಬಂದಿದ್ದ ವೇಳೆ ದುರಂತ ಸಂಭವಿಸಿದೆ.
ತೇಜಸ್ ಗೌಡ ವಿದೇಶದಲ್ಲಿ ಎಂಎಸ್ ಕೊನೆಯ ವರ್ಷದ ವಿದ್ಯಾಭ್ಯಾಸ ಮಾಡುತ್ತಿದ್ದು, ನೂರಾರು ಕನಸುಗಳನ್ನ ಕಟ್ಟಿಕೊಂಡಿದ್ದ ಯುವಕ. ಸ್ನೇಹಿತನ ಮದುವೆ ಅಂತ ಮೂರು ದಿನಗಳ ಹಿಂದೆ ಹುಟ್ಟೂರು ನೆಲಮಂಗಲಕ್ಕೆ ಬಂದಿದ್ದ. ರಿಸೆಪ್ಷನ್ ಮುಗಿಸಿ ಬೈಕ್ನಲ್ಲಿ ತೆರಳುವ ವೇಳೆ ಈ ದುರಂತ ನಡೆದು ಹೋಗಿದೆ. ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಬೆಸ್ಕಾಂ ಕಚೇರಿಯ ಮುಂದೆ ಕಳೆದ ಮೂರು ದಿನಗಳ ಹಿಂದೆ ಸಂಭವಿಸಿದೆ.
ದುರಂತದಲ್ಲಿ ಗಂಭೀರ ಗಾಯಗೊಂಡಿದ್ದ ತೇಜಸ್‌ನನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ನೆಲಮಂಗಲ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಯುವಕನ ತಂದೆ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ನಡೆಸಿಕೊಂಡು ಜೀವನ ನಡೆಸುತ್ತಿದ್ದರು. ಇದ್ದ ಒಬ್ಬ ಮಗನನ್ನ ಕಳೆದುಕೊಂಡ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಪ್ರಚಾರದ ಫ್ಲೆಕ್ಸ್, ಬ್ಯಾನರ್ಗಳು ಅತಿಕ್ರಮವಾಗಿ ರಾರಾಜಿಸುತ್ತಿವೆ. ಇದು ನಗರಸಭೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Murder Case: ಹಣ ದುಪ್ಪಟ್ಟು ಆಮಿಷಕ್ಕೆ ಬಲಿಯಾದ ಇಂಜಿನಿಯರ್, ʼದೃಶ್ಯʼ ಸಿನಿಮಾ ಮಾದರಿಯಲ್ಲಿ ಹತ್ಯೆ!
ಕಿಲ್ಲರ್ ಬಿಎಂಟಿಸಿಗೆ ವೃದ್ಧ ಜೀವ ಬಲಿ
ಬೆಂಗಳೂರು: ಬಿಎಂಟಿಸಿ ಬಸ್‌ಗೆ ಮತ್ತೊಬ್ಬರನ್ನು ಬಲಿ (BMTC Bus Accident) ಪಡೆದುಕೊಂಡಿದೆ. ಮಡಿವಾಳದ ಪೊಲೀಸ್ ಠಾಣೆ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ವೃದ್ಧರ ಮೇಲೆ ಬಸ್ ಹರಿದಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆೆ. ಮಡಿವಾಳ ನಿವಾಸಿ ವೆಂಕಟರಾಮಯ್ಯ ಮೃತ ವ್ಯಕ್ತಿ. ಘಟನೆಗೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಜನರು ಅಕ್ರೋಶ ಹೊರಹಾಕಿದ್ದಾರೆ. ವೃದ್ಧರ ತಲೆ ಮೇಲೆಯೇ ಬಸ್ ಚಕ್ರಗಳು ಹರಿದಿದ್ದು, ತಲೆ ಛಿದ್ರವಾಗಿದೆ. ಮಡಿವಾಳ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದೆಯಿಂದ ಬಂದ ಬಿಎಂಟಿಸಿ ಬಸ್ ವೃದ್ಧನಿಗೆ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.
ಕಳೆದ ತಿಂಗಳು ಬಿಎಂಟಿಸಿ ಎಲೆಕ್ಟ್ರಿಕ್ ಬಸ್ (BMTC bus accident) ಡಿಕ್ಕಿ ಹೊಡೆದು ವೃದ್ಧೆಯೊಬ್ಬರು ಸಾವಿಗೀಡಾಗಿರುವ ಘಟನೆ ಸೆಂಟ್ರಲ್ ಸಿಲ್ಕ್ ಬೋರ್ಡ್ (Silk Board) ಬಸ್ ನಿಲ್ದಾಣದ ಬಳಿ ನಡೆದಿತ್ತು. 62 ವರ್ಷದ ಹಿರಿಯ ನಾಗರಿಕರೊಬ್ಬರು ಎಲೆಕ್ಟ್ರಿಕ್ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದರು. ಬೆಂಗಳೂರಿನಲ್ಲಿ ಚಾಲಕರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಬಿಎಂಟಿಸಿ ಬಸ್ಸುಗಳಿಗೆ ಅನೇಕರು ಬಲಿಯಾಗುತ್ತಿದ್ದಾರೆ.