ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bengaluru Road Rage: ʼʼನಮ್ಮಲ್ಲಿರುವ ಚಿನ್ನ ತೆಗೆದುಕೊಂಡು ಬಿಟ್ಟುಬಿಡಿʼʼ: ಮಡಿಲಲ್ಲಿ 10 ತಿಂಗಳ ಮಗುವನ್ನಿಟ್ಟುಕೊಂಡು ಮಹಿಳೆ ಬೇಡಿಕೊಂಡರೂ ದಾಳಿ ನಡೆಸಿದ ದುಷ್ಕರ್ಮಿಗಳು

Bengaluru-Mysuru Expressway: ಜುಲೈ 5ರಂದು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ನಡೆದ ರೋಡ್‌ ರೇಜ್‌ಗೆ ಸಂಬಂಧಿಸಿದ ಇನ್ನಷ್ಟು ಆಘಾತಕಾರಿ ವಿವರಗಳು ಹೊರ ಬಿದ್ದಿವೆ. ಕಾರ್‌ನಲ್ಲಿದ್ದ ಪತ್ನಿ ಕೈ ಮುಗಿದು ಬೇಡಿಕೊಂಡರೂ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಸಾಗರ್‌ ಹೇಳಿದ್ದಾರೆ.

ಮಹಿಳೆ ಕೈ ಮುಗಿದು ಬೇಡಿಕೊಂಡರೂ ದಾಳಿ ನಡೆಸಿದ ದುಷ್ಕರ್ಮಿಗಳು

ಮಂಡ್ಯದ ಮದ್ದೂರಿನಲ್ಲಿ ನಡೆದ ರೋಡ್‌ ರೇಜ್‌ -

Ramesh Ballamoole
Ramesh Ballamoole Jul 9, 2026 3:41 PM

ಮಂಡ್ಯ, ಜು. 9: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬದ ಮೇಲೆ ಅಪರಿಚಿತರ ಗುಂಪೊಂದು ಹಲ್ಲೆ ಎಸಗಿರುವ ಘಟನೆ ಜುಲೈ 5ರಂದು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಬೆಚ್ಚಿ ಬೀಳಿಸುವ ವಿವರ ಹೊರ ಬಿದ್ದಿದೆ (Bengaluru Road Rage). ಕಾರ್‌ನಲ್ಲಿ ಮಹಿಳೆ ತಮ್ಮಲ್ಲಿದ್ದ ಚಿನ್ನ ತೆಗೆದುಕೊಳ್ಳುವಂತೆ ಹೇಳಿದರೂ ಆಕ್ರಮಣಕಾರರು ಸುಮ್ಮನಾಗಲಿಲ್ಲ. ಕ್ಷುಲ್ಲಕ ಕಾರಣಕ್ಕೆ ಮಹಿಳೆ, ಅವರ ಪತಿ ಮತ್ತು ಕುಟುಂಬಸ್ಥರ ಮೇಲೆ ದಾಳಿ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ರೋಡ್‌ ರೇಜ್‌ ನಡೆಸಿದ ಐವರನ್ನು ಬಂಧಿಸಲಾಗಿದ್ದು, ಸಂತ್ರಸ್ತ. ಕಾರ್‌ ಮಾಲಕ ಸಾಗರ್‌ ಕುಮಾರ್‌ ತಮಗಾದ ಭೀಕರ ಅನುಭವವನ್ನು ವಿವರಿಸಿದ್ದಾರೆ.

ಜುಲೈ 5ರ ರಾತ್ರಿ ಸುಮಾರು 10.30ರ ವೇಳೆಗೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಈ ಘಟನೆ ನಡೆದಿದ್ದು, ಹಿಂದೆ ಚಲಿಸುತ್ತಿದ್ದ ವಾಹನದ ಡ್ಯಾಶ್‌ಕ್ಯಾಮ್‌ನಲ್ಲಿ ದುಷ್ಕರ್ಮಿಗಳ ಕೃತ್ಯ ಸೆರೆಯಾಗಿದೆ.

ಸಂತ್ರಸ್ತ ಹೇಳಿದ್ದೇನು?

ಸಂತ್ರಸ್ತ ಸಾಗರ್‌ ಕುಮಾರ್‌ ಎನ್‌ಡಿಟಿವಿ ಜತೆ ಮಾತನಾಡಿ, ಸುಮಾರು 9 ಮಂದಿಯ ಗುಂಪು ತಮ್ಮ ಮೇಲೆ ದಾಳಿ ನಡೆಸಿತು ಎಂದಿದ್ದಾರೆ. ಕುಟುಂಬಸ್ಥರೊಂದಿಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಸಾಗುತ್ತಿದ್ದಾಗ ಇದ್ದಕ್ಕಿದ್ಧಂತೆ ದಾಳಿ ಗುಂಪು ದಾಳಿ ನಡೆಸಿದ್ದು, ಇದರಿಂದ ಪತ್ನಿ ಆಘಾತಕ್ಕೊಳಗಾಗಿದ್ದಾರೆ ಎಂದು ಸಾಗರ್‌ ವಿವರಿಸಿದ್ದಾರೆ. ʼʼನಾನು, ಪತ್ನಿ ಮತ್ತು 10 ತಿಂಗಳ ಮಗು ಕುಟುಂಬಸ್ಥರೊಂದಿಗೆ ಪ್ರಯಾಣಿಸುತ್ತಿದ್ದಾಗ ಅವರು ಕಾರ್‌ ಅಡ್ಡಗಟ್ಟಿ ದಾಳಿ ನಡೆಸಿದರು. ನನ್ನ ಪತ್ನಿ ಕೈ ಮುಗಿದು ಬಿಟ್ಟು ಬಿಡುವಂತೆ ಬೇಡಿಕೊಂಡರು. 10 ತಿಂಗಳ ಮಗು ಜತೆಯಲ್ಲಿದ್ದುದರಿಂದ ಅವರು ತುಂಬಾ ಗಾಬರಿಗೆ ಒಳಗಾಗಿದ್ದರು. ನಮ್ಮಲ್ಲಿರುವ ಚಿನ್ನ ಅಥವಾ ಬೇರೆ ಏನು ಬೇಕಿದ್ದರೂ ತೆಗೆದುಕೊಳ್ಳಿ. ನಮ್ಮನ್ನು ಸುಮ್ಮನೆ ಬಿಟ್ಟುಬಿಡಿ ಎಂದು ಮನವಿ ಮಾಡಿದ್ದರು. ಆದರೆ ಅವರು ತಮ್ಮ ಆಕ್ರಮಣವನ್ನು ಮುಂದುವರಿಸಿದ್ದರುʼʼ ಎಂದು ಸಾಗರ್‌ ಹೇಳಿದ್ದಾರೆ.

ಗುಂಪೊಂದು ಕೂಗಾಡುತ್ತ ಕಾರ್‌ನ ಬಾಗಿಲು ತೆರೆದು ಸಾಗರ್‌ ಮೇಲೆ ಹಲ್ಲೆ ನಡೆಸುವುದು ವಿಡಿಯೊದಲ್ಲಿ ಸೆರೆಯಾಗಿದೆ. ಕಾರ್‌ನ ಬಾಗಿಲು ಬಲವಂತದಿಂದ ತೆರೆದು ಸಾಗರ್‌ನ ಕೊರಳಪಟ್ಟಿ ಹಿಡಿದು ಎಳೆದಾಡುತ್ತಿರುವುದು ಕಂಡು ಬಂದಿದೆ. ಇದೇ ವೇಳೆ ಮತ್ತೊಂದು ವಾಹನ ಚಾಲಕ ಧಾವಿಸಿ ಗುಂಪನ್ನು ಚದುರಿಸಲು ಯತ್ನಿಸುತ್ತಿರುವುದೂ ವಿಡಿಯೊದಲ್ಲಿ ಸೆರೆಯಾಗಿದೆ.

ಬೆಂಗಳೂರಿನಲ್ಲಿ ಮತ್ತೊಂದು ರೋಡ್‌ ರೇಜ್‌; ರಸ್ತೆ ಮಧ್ಯೆಯೇ ಕಾರ್ ಅಡ್ಡಗಟ್ಟಿ ಕುಟುಂಬದ ಮೇಲೆ ಅಪರಿಚಿತರಿಂದ ಹಲ್ಲೆ

ಕಾರಣವೇನು?

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು ಘಟನೆಗೆ ಕಾರಣವಾದ ಅಂಶಗಳನ್ನು ವಿವರಿಸಿದ್ದಾರೆ. ʼʼಬೆಂಗಳೂರು ಎಕ್ಸ್‌ಪ್ರೆಸ್‌ ವೇಯಲ್ಲಿ 2 ಕಾರ್‌ಗಳು ಟಚ್‌ ಆದ ವಿಚಾರಕ್ಕೆ ಸಂಬಂಧಿಸಿ ಸಣ್ಣ ಗಲಾಟೆ ಆಗಿತ್ತು. ಅದನ್ನು ಅಷ್ಟಕ್ಕೆ ಕೈಬಿಡದ ದುಷ್ಕರ್ಮಿಗಳ ಗುಂಪು ಸಾಗರ್‌ ಮತ್ತವರ ಕುಟುಂಬಸ್ಥರು ಸಾಗುತ್ತಿದ್ದ ಕಾರ್‌ ಅಡ್ಡಗಟ್ಟಿ ಗಲಾಟೆ ಮಾಡಿದರು. ಸಾಗರ್‌ ಮತ್ತವರ ಕುಟುಂಬಸ್ಥರ ಮೇಲೆ ಕಬ್ಬಿಣದ ವೀಲ್‌ ಜಾಕ್‌ ರಾಡ್‌ನಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆʼʼ ಎಂದಿದ್ದಾರೆ.

ಘಟನೆಯಲ್ಲಿ ಸಾಗರ್‌, ಮತ್ತವರ ಪತ್ನಿ ಧನ್ಯಶ್ರೀ, ಅತ್ತೆ ಲತಾ, ಅಜ್ಜಿ ಉಮಾವತಿ ಅವರಿಗೆ ಗಾಯಗಳಾಗಿವೆ. ಈ ಬಗ್ಗೆ ಸಾಗರ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಂಗಳೂರು ನಿವಾಸಿಗಳಾದ ಸಂತೋಷ್‌, ಅರುಣ್‌ ಕುಮಾರ್‌, ಅಭಿಷೇಕ್‌, ವೆಂಕಟೇಶ್‌, ಪ್ರತಾಪ್‌ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.