ಬೆಂಗಳೂರು, ಮೇ 1: ಓದುವ ಸಂಸ್ಕೃತಿಗೆ ಹೆಸರಾದ ಬೆಂಗಳೂರಿನಲ್ಲಿ ಮಳೆಗೆ ಹಾನಿಯಾದ ಪುಸ್ತಕಗಳ ಪ್ರತಿ ಪುಟವೂ ಇಂದು ಹೊಸ ಅರ್ಥವನ್ನು ಕಂಡುಕೊಳ್ಳುತ್ತಿದೆ. ಚರ್ಚ್ ಸ್ಟ್ರೀಟ್‌ನಲ್ಲಿರುವ (Church Street) ಐತಿಹಾಸಿಕ 'ಬುಕ್‌ವರ್ಮ್' (Bookworm) ಪುಸ್ತಕದ ಅಂಗಡಿಯು ಇತ್ತೀಚಿನ ಭಾರಿ ಮಳೆಗೆ ಜಲಾವೃತಗೊಂಡ ಬೆನ್ನಲ್ಲೇ, ಬೆಂಗಳೂರಿಗರು ನೆನೆದ ಮತ್ತು ಮಣ್ಣಾದ ಪುಸ್ತಕಗಳನ್ನು ಖರೀದಿಸುವ ಮೂಲಕ ಅಂಗಡಿಯ ಚೇತರಿಕೆಗೆ ವಿಶಿಷ್ಟ ರೀತಿಯಲ್ಲಿ ಸಾಥ್ ನೀಡುತ್ತಿದ್ದಾರೆ.
ಇದರ ಫಲವಾಗಿ 'ವೆಟ್ ಬುಕ್ ಫೇರ್ʼ (wet book fair) ಅಥವಾ 'ಒದ್ದೆ ಪುಸ್ತಕಗಳ ಮೇಳ' ಎಂಬ ಪರಿಕಲ್ಪನೆ ಜನ್ಮ ತಾಳಿದೆ. ಮಳೆಯಲ್ಲಿ ಸಿಲುಕಿ ಪುಟಗಳು ಮುದುಡಿದ್ದರೂ ಮತ್ತು ಕವರ್‌ಗಳು ಕಲೆಗಳಿಂದ ಕೂಡಿದ್ದರೂ, ಓದುಗರು ಈ ಪುಸ್ತಕಗಳನ್ನು ಖರೀದಿಸಲು ಮುಗಿ ಬೀಳುತ್ತಿದ್ದಾರೆ. ಈ ವಾರದ ಆರಂಭದಲ್ಲಿ ಸುರಿದ ಮಳೆಯಿಂದಾಗಿ ಸುಮಾರು 4,000ದಿಂದ 5,000 ಪುಸ್ತಕಗಳು ಹಾನಿಗೊಳಗಾಗಿದ್ದು, ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ. ಜನಪ್ರಿಯ ಮಕ್ಕಳ ಕಾದಂಬರಿಗಳು, ಕಾಮಿಕ್ಸ್ ಮತ್ತು ಕಾಲ್ಪನಿಕವಲ್ಲದ ಗಂಭೀರ ಕೃತಿಗಳು ಮಳೆನೀರಿನಲ್ಲಿ ನೆನೆದು ಹೋಗಿದ್ದವು. ಈ ನಷ್ಟವು ಕೇವಲ ಆರ್ಥಿಕವಾಗಿರದೆ, ಪುಸ್ತಕ ಪ್ರೇಮಿಗಳಿಗೆ ಭಾವನಾತ್ಮಕವಾಗಿಯೂ ನೋವುಂಟು ಮಾಡಿತ್ತು.
ಬುಕ್‌ವರ್ಮ್ ಪುಸ್ತಕ ಮಳಿಗೆಯ ಪೋಸ್ಟ್:
ಆದರೆ ಈ ಘಟನೆಯ ನಂತರ ನಗರದ ಓದುಗ ಸಮುದಾಯ ತೋರಿದ ಬೆಂಬಲ ಅದ್ಭುತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಂಗಡಿಯ ಪರಿಸ್ಥಿತಿಯನ್ನು ಕಂಡು ಸಾವಿರಾರು ಜನರು ನೆರವಿಗೆ ಧಾವಿಸಿದ್ದಾರೆ. ಹಾನಿಗೊಳಗಾದ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ 'ಒದ್ದೆ ಪುಸ್ತಕಗಳ ಮೇಳ' ಆಯೋಜಿಸಲು ಜನರು ಸಲಹೆ ನೀಡಿದರು. ಮಣ್ಣಾದ ಪುಸ್ತಕವನ್ನು ಖರೀದಿಸುವುದು ಅಂಗಡಿಗೆ ಆರ್ಥಿಕ ನೆರವು ನೀಡುವುದಲ್ಲದೆ, ಆ ಪುಸ್ತಕಕ್ಕೆ ಮರುಜೀವ ನೀಡಿದಂತೆ ಎಂಬ ಭಾವನೆ ಎಲ್ಲೆಡೆ ವ್ಯಕ್ತವಾಯಿತು.
ಬೆಂಗಳೂರಿನ ಪ್ರಸಿದ್ಧ ಪುಸ್ತಕ ಮಳಿಗೆ ದಿ ಬುಕ್‌ವರ್ಮ್‌ಗೆ ನುಗ್ಗಿದ ಮಳೆ ನೀರು: 5,000ಕ್ಕೂ ಹೆಚ್ಚು ಪುಸ್ತಕ ನಾಶ
ಬುಕ್‌ವರ್ಮ್ ಮಾಲಕ ಕೃಷ್ಣ ಗೌಡ ಜನರ ಈ ಅಭೂತಪೂರ್ವ ಬೆಂಬಲ ಕಂಡು ಭಾವುಕರಾಗಿದ್ದಾರೆ. "ನಗರದ ಜನರು ತೋರುತ್ತಿರುವ ಪ್ರೀತಿ ಅತೀವವಾಗಿದೆ, ಶೀಘ್ರದಲ್ಲೇ ಇಂತಹ ಮೇಳವನ್ನು ಆಯೋಜಿಸುವ ಬಗ್ಗೆ ಚಿಂತಿಸುತ್ತಿದ್ದೇವೆ" ಎಂದು ಅವರು ತಿಳಿಸಿದ್ದಾರೆ. ಈ ಅಂಗಡಿಯು ಕೇವಲ ವ್ಯಾಪಾರ ಕೇಂದ್ರವಾಗಿರದೆ, ಬೆಂಗಳೂರಿನ ಸಾಂಸ್ಕೃತಿಕ ಕೇಂದ್ರದಂತೆ ಕಾರ್ಯನಿರ್ವಹಿಸುತ್ತಿದೆ. ಆನ್‌ಲೈನ್ ಮಾರುಕಟ್ಟೆಗಳನ್ನು ಬಿಟ್ಟು ಇಂತಹ ಸ್ಥಳೀಯ ಪುಸ್ತಕದ ಅಂಗಡಿಗಳನ್ನು ಉಳಿಸಿಕೊಳ್ಳಬೇಕು ಎಂದು ನಗರದ ಪ್ರಜ್ಞಾವಂತ ನಾಗರಿಕರು ಕರೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಎಂತಹ ಪ್ರವಾಹ ಬಂದರೂ ಪುಸ್ತಕಗಳ ಮೇಲಿನ ಪ್ರೀತಿಯನ್ನು ಕೊಚ್ಚಿ ಹಾಕಲು ಸಾಧ್ಯವಿಲ್ಲ ಎಂಬುದು ಈ ಮೂಲಕ ಸಾಬೀತಾಗಿದೆ.