ಬೆಂಗಳೂರಿನ ಪ್ರಸಿದ್ಧ ಪುಸ್ತಕ ಮಳಿಗೆ ದಿ ಬುಕ್‌ವರ್ಮ್‌ಗೆ ನುಗ್ಗಿದ ಮಳೆ ನೀರು: 5,000ಕ್ಕೂ ಹೆಚ್ಚು ಪುಸ್ತಕ ನಾಶ
Books Destroyed: ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯು ನಗರದ ಪ್ರತಿಷ್ಠಿತ ಪುಸ್ತಕ ಮಳಿಗೆಗಳಲ್ಲಿ ಒಂದನ್ನು ಸಂಪೂರ್ಣವಾಗಿ ನಾಶ ಮಾಡಿದೆ. ಚರ್ಚ್ ಸ್ಟ್ರೀಟ್‌ನಲ್ಲಿರುವ 'ದಿ ಬುಕ್‌ವರ್ಮ್' ಪತ್ರಿಕೆಯು ನೀರಿನಲ್ಲಿ ತೇಲುತ್ತಿರುವ ಪುಸ್ತಕಗಳೊಂದಿಗೆ ಪ್ರವಾಹಕ್ಕೆ ಸಿಲುಕಿದ ಅಂಗಡಿಯ ಸರಣಿ ಚಿತ್ರಗಳನ್ನು ಹಂಚಿಕೊಂಡಿದೆ.
ಬೆಂಗಳೂರಿನ ಅಕಾಲಿಕ ಮಳೆಗೆ ತುತ್ತಾದ ಪುಸ್ತಕ ಮಳಿಗೆ -
ಬೆಂಗಳೂರು, ಏ. 30: ಬುಧವಾರ (ಏ. 29) ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯು (Bengaluru heavy rain) ನಗರದ ಪ್ರತಿಷ್ಠಿತ ಪುಸ್ತಕ ಮಳಿಗೆಗಳಲ್ಲಿ ಒಂದನ್ನು ಸಂಪೂರ್ಣವಾಗಿ ನಾಶ ಮಾಡಿದೆ. ಚರ್ಚ್ ಸ್ಟ್ರೀಟ್‌ನಲ್ಲಿರುವ 'ದಿ ಬುಕ್‌ವರ್ಮ್' (The Bookworm) ಪುಸ್ತಕ ಮಳಿಗೆ ನೀರಿನಲ್ಲಿ ತೇಲುತ್ತಿರುವ ಪುಸ್ತಕಗಳ ಸರಣಿ ಚಿತ್ರಗಳನ್ನು ಹಂಚಿಕೊಂಡಿದೆ. ʼʼಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ನಾವು 4,000ರಿಂದ 5,000 ಪುಸ್ತಕಗಳನ್ನು ಕಳೆದುಕೊಂಡಿದ್ದೇವೆʼʼ ಎಂದು ಪುಸ್ತಕದಂಗಡಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದಿದೆ.
ಮೊದಲ ಚಿತ್ರವು ಅಂಗಡಿಯ ಹೊರಗೆ ಬಹುಶಃ ಆಲಿಕಲ್ಲು ಮಳೆಯಿಂದ ಆವೃತವಾದ ದೃಶ್ಯವನ್ನು ತೋರಿಸುತ್ತದೆ. ಉಳಿದ ಚಿತ್ರಗಳು ಅಂಗಡಿಗೆ ನುಗ್ಗಿದ ಮಳೆನೀರಿನಲ್ಲಿ ಪುಸ್ತಕಗಳು ಮುಳುಗಿರುವುದನ್ನು, ತೇಲುತ್ತಿರುವುದನ್ನು ತೋರಿಸುತ್ತವೆ. ಅನೇಕರು ಪರಿಸ್ಥಿತಿಯ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದರೆ, ಕೆಲವರು ಸಹಾಯ ಮಾಡಲು ಮುಂದಾಗಿದ್ದಾರೆ. ಜತೆಗೆ ಇತರ ಪುಸ್ತಕ ಪ್ರೇಮಿಗಳು ಸಹ ಸಹಾಯಕ್ಕೆ ಧಾವಿಸುವಂತೆ ಆಗ್ರಹಿಸಿದರು.
'ದಿ ಬುಕ್‌ವರ್ಮ್' ಪುಸ್ತಕ ಮಳಿಗೆಯ ಪೋಸ್ಟ್:
ನಾಶವಾಗಿರುವ ಪುಸ್ತಕದ ಮೌಲ್ಯ 14 ಲಕ್ಷ ರುಪಾಯಿ ಎಂದು ಅಂದಾಜಿಸಲಾಗಿದೆ. ʼಬುಕ್ ಮ್ಯಾನ್ ಆಫ್ ಬೆಂಗಳೂರುʼ ಎಂದೇ ಖ್ಯಾತಿ ಪಡೆದಿರುವ ಈ ಪುಸ್ತಕದ ಮಳಿಗೆ 28 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಇದೀಗ ಸಾವಿರಾರು ಪುಸ್ತಕಗಳು ನಾಶವಾಗಿರುವುದರಿಂದ ಪುಸ್ತಕ ಪ್ರೇಮಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ನಿನ್ನೆ ಸುರಿದ ಮಳೆಗೆ ಬೆಂಗಳೂರಿನಲ್ಲಿ 10 ಬಲಿ; ಇಂದೂ ಅಬ್ಬರಿಸಲಿದ್ದಾನೆ ವರುಣ
ಕಳೆದ ವರ್ಷ ಕೋಲ್ಕತ್ತಾದ ಕಾಲೇಜು ಬೀದಿಯಲ್ಲಿ ಈ ಪುಸ್ತಕ ಮಳಿಗೆ 'ವೆಟ್ ಬುಕ್ ಫೇರ್' ಆಯೋಜಿಸಿತ್ತು. ಇದಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ʼʼನಾನು ಕಳೆದ ವರ್ಷ ಈ ಪುಸ್ತಕದಂಗಡಿಗೆ ಭೇಟಿ ನೀಡಿ, ತುಂಬಾ ಪುಸ್ತಕಗಳನ್ನು ಖರೀದಿಸಿದ್ದೆ. ಹೇಗೆ ಸಹಾಯ ಮಾಡಬಹುದು ಎಂದು ನಮಗೆ ತಿಳಿಸಿʼʼ ಎಂದು ವ್ಯಕ್ತಿಯೊಬ್ಬರು ಬರೆದಿದ್ದಾರೆ.
ʼಡೆಕ್ಕನ್ ಹೆರಾಲ್ಡ್ʼ ಪ್ರಕಟಿಸಿದ ವರದಿ ಪ್ರಕಾರ, ಕೆಲವು ದಿನಗಳ ಹಿಂದೆಯಷ್ಟೇ ಅಂಗಡಿಗೆ ಹೊಸ ಪುಸ್ತಕಗಳ ಸ್ಟಾಕ್ ಬಂದಿತ್ತು. ʼʼಬೇಸಗೆ ರಜಾದಿನಗಳಲ್ಲಿ ವ್ಯಾಪಾರ ಹೆಚ್ಚಾದ ಕಾರಣ ನಾವು ಹೆಚ್ಚುವರಿ ಸ್ಟಾಕ್ ತರಿಸಿದ್ದೇವೆ. ಆದರೆ, ಅನೇಕ ಪುಸ್ತಕಗಳು ಹಾನಿಗೊಳಗಾಗಿವೆʼʼ ಎಂದು ಪುಸ್ತಕ ಮಳಿಗೆ ಮಾಲಕ ಕೃಷ್ಣ ಹೇಳಿದ್ದಾರೆ.
ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಲು ಚಿಂತನೆ
ಕೆಲವು ಪುಸ್ತಕಗಳನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡುವ ಯೋಜನೆಯಲ್ಲಿದ್ದಾರೆ ಸಿಬ್ಬಂದಿ. ಆದರೆ, ಕೆಲವು ಪುಸ್ತಕಗಳು ತುಂಬಾ ಹಾನಿಗೊಳಗಾಗಿರುವುದರಿಂದ ಅವುಗಳನ್ನು ಎಸೆಯಬೇಕಾಗುತ್ತದೆ ಎಂದು ಮಾಲಕರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರಕಾಶಕರು ಮರುಬಳಕೆಯ ಕಾಗದವನ್ನು ಹೆಚ್ಚಾಗಿ ಬಳಸುತ್ತಾರೆ. ಆದ್ದರಿಂದ ಹೆಚ್ಚಿನ ಪುಸ್ತಕಗಳು ಹಾನಿಗೊಳಗಾಗಿವೆ. ಆಸ್ಟರಿಕ್ಸ್ ಮತ್ತು ಒಬೆಲಿಕ್ಸ್‌ನಂತಹ ಕಾಮಿಕ್ಸ್‌ಗಳು ಎಣ್ಣೆ ಕಾಗದದಿಂದ ತಯಾರಿಸಲ್ಪಟ್ಟಿರುವುದರಿಂದ ಅವು ಹಾನಿಗೊಳಾಗುತ್ತವೆ, ಅದನ್ನು ಸರಿಮಾಡುವುದು ಬಹಳ ಕಷ್ಟ ಎಂದು ಕೃಷ್ಣ ಮಾಧ್ಯಮಕ್ಕೆ ತಿಳಿಸಿದರು.