Bhuvaneshwari Statue: ಕನ್ನಡಪರ ಹೋರಾಟಗಾರರ ಎಲ್ಲಾ ಕೇಸ್ ವಾಪಸ್: ಸಿಎಂ ಸಿದ್ದರಾಮಯ್ಯ ಘೋಷಣೆ
Bhuvaneshwari Statue: ಕನ್ನಡ ಭಾಷೆ, ಸಂಸ್ಕೃತಿ, ಕಲೆಯ ಬಗ್ಗೆ ರಾಜ್ಯದ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳಬೇಕು. ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕರ್ನಾಟಕ ಎನ್ನುವುದು ನಮ್ಮ ನಿಮ್ಮೆಲ್ಲರ ಅಭಿಮಾನವಾಗವಾಗಬೇಕು. ಆಗ ಮಾತ್ರ ಕನ್ನಡ ಸಾರ್ವಭೌಮ ಭಾಷೆಯಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕನ್ನಡಾಂಬೆ ಭುವನೇಶ್ವರಿ ಪ್ರತಿಮೆ ಅನಾವರಣ

ಬೆಂಗಳೂರು: ಕನ್ನಡಪರ ಹೋರಾಟಗಾರರ ಎಲ್ಲಾ ಕೇಸ್ ವಾಪಸ್ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದರು. ವಿಧಾನಸೌಧದ ಆವರಣದಲ್ಲಿ ಸೋಮವಾರ ತಾಯಿ ಭುವನೇಶ್ವರಿಯ ವೈಭವದ ಪುತ್ಥಳಿಯನ್ನು (Bhuvaneshwari Statue) ಅನಾವರಣಗೊಳಿಸಿ ಅವರು ಮಾತನಾಡಿದರು.
ನಾವು ಎಲ್ಲಾ ಭಾಷೆಗಳನ್ನು ಪ್ರೀತಿಸಬೇಕು. ಕನ್ನಡವನ್ನು ಮಾತ್ರ ಬಳಸಬೇಕು, ಬೆಳೆಸಬೇಕು, ಬೆಳಗಬೇಕು. ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ಎಂದು ನಾಮಕರಣ ಮಾಡಿದರು. 2023 ಕ್ಕೆ ಈ ನಾಮಕರಣ ಆಗಿ 50 ವರ್ಷ ತುಂಬಿದರೂ ಆಗಿನ ಬಿಜೆಪಿ ಸರ್ಕಾರ ಈ ಸುವರ್ಣೋತ್ಸವವನ್ನು ಬೇಕಂತಲೇ ಕೈಬಿಟ್ಟರು. ಆದರೆ ನಾವು ಅಧಿಕಾರಕ್ಕೆ ಬಂದು ಒಂದು ವರ್ಷ ತಡವಾದರೂ ಕರ್ನಾಟಕದ ಸುವರ್ಣೋತ್ಸವವನ್ನು ಆರಂಭಿಸಿ, ಇಡೀ ವರ್ಷ ಆಚರಿಸಲು ನಿರ್ಧರಿಸಿದೆವು. ಕನ್ನಡ ಭಾಷೆ, ಸಂಸ್ಕೃತಿ ವಿಚಾರದಲ್ಲಿ ಇದು ನಮ್ಮ ಬದ್ಧತೆ ಎಂದು ತಿಳಿಸಿದರು.
ಕನ್ನಡ ಭಾಷೆ, ಸಂಸ್ಕೃತಿ, ಕಲೆಯ ಬಗ್ಗೆ ರಾಜ್ಯದ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳಬೇಕು
ಕನ್ನಡ ಭಾಷೆ, ಸಂಸ್ಕೃತಿ, ಕಲೆಯ ಬಗ್ಗೆ ರಾಜ್ಯದ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳಬೇಕು. ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕರ್ನಾಟಕ ಎನ್ನುವುದು ನಮ್ಮ ನಿಮ್ಮೆಲ್ಲರ ಅಭಿಮಾನವಾಗವಾಗಬೇಕು. ಆಗ ಮಾತ್ರ ಕನ್ನಡ ಸಾರ್ವಭೌಮ ಭಾಷೆಯಾಗುತ್ತದೆ ಎಂದರು.
ನಾವು ಎಲ್ಲಾ ಭಾಷೆಗಳನ್ನು ಪ್ರೀತಿಸಬೇಕು. ಕನ್ನಡವನ್ನು ಬಳಸಬೇಕು, ಬೆಳೆಸಬೇಕು, ಬೆಳಗಬೇಕು. ನಾವು ನಮ್ಮ ಸಹೋದರ ಮತ್ತು ಇತರೆ ಭಾಷಿಕರ ಜತೆ ಕನ್ನಡದಲ್ಲಿ ಮಾತನಾಡುವ, ವ್ಯವಹರಿಸುವ ಸಂಸ್ಕೃತಿಯನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ಇತರೆ ಭಾಷೆಯಲ್ಲಿ ತಪ್ಪು ತಪ್ಪಾಗಿ ಮಾತನಾಡುವುದಕ್ಕಿಂತ ನಮ್ಮದೇ ಭಾಷೆಯಲ್ಲಿ ಮಾತಾಡಬೇಕು. ಅಕ್ಕ-ಪಕ್ಕದ ಎಲ್ಲಾ ರಾಜ್ಯಗಳಲ್ಲೂ ಆಯಾ ರಾಜ್ಯದ ಜನರಾಡುವ ಭಾಷೆಯೇ ಸಾರ್ವಭೌಮ. ನಮ್ಮಲ್ಲೂ ಇದನ್ನೇ ಆಚರಿಸಬೇಕು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಎಲ್ಲಾ ಸಂಸ್ಥೆಗಳಲ್ಲೂ ಕನ್ನಡ ಬಾವುಟ ಹಾರಾಟ ಕಡ್ಡಾಯ: ಡಿ.ಕೆ. ಶಿವಕುಮಾರ್
ಬೆಂಗಳೂರು, ಜ.27: ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್ಲಾ ಸಂಘ ಸಂಸ್ಥೆ (ಸರ್ಕಾರಿ ಹಾಗೂ ಖಾಸಗಿ) ಗಳಲ್ಲಿ ಕನ್ನಡ ಧ್ವಜಾರೋಹಣ ಮಾಡುವುದನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ವಿಧಾನಸೌಧದ ಆವರಣದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿರುವ ಕನ್ನಡ ತಾಯಿ ಭುವನೇಶ್ವರಿಯ ಪ್ರತಿಮೆ (Bhuvaneshwari Statue) ಅನಾವರಣ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಸೋಮವಾರ ಮಾತನಾಡಿದರು.
ನಮ್ಮ ಮಾತೃಭಾಷೆ, ಈ ನೆಲ, ಜಲ ಕಾಪಾಡಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಬೆಂಗಳೂರಿನಲ್ಲಿ 107 ಭಾಷೆ ಮಾತನಾಡುವ ಜನರಿದ್ದಾರೆ. ಕಳೆದ ವರ್ಷ ಎಲ್ಲಾ ಸಂಘ ಸಂಸ್ಥೆಗಳಲ್ಲೂ ನವೆಂಬರ್ 1 ರಂದು ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕನ್ನಡದ ಧ್ವಜ ಹಾರಿಸುವಂತೆ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದೆ. ನಾನು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ, ಆದರೆ ಮುಂದಿನ ದಿನಗಳಲ್ಲಿ ಇದನ್ನು ಕಡ್ಡಾಯ ಮಾಡುವ ಆದೇಶವನ್ನು ಹೊರಡಿಸಲಾಗುವುದು. ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಅಥವಾ ಪಾಲಿಕೆ ವತಿಯಿಂದ ಎಲ್ಲಾ ಸಂಸ್ಥೆಗಳಿಗೂ ಕನ್ನಡ ಬಾವುಟ ಪೂರೈಸುವ ಕೆಲಸ ಮಾಡುತ್ತೇವೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವದ ದಿನದಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವಂತೆ ಸೂಚಿಸಲಾಗುವುದು. ಆ ಮೂಲಕ ಸಣ್ಣ ವಯಸ್ಸಿನಿಂದಲೇ ಮಕ್ಕಳಲ್ಲಿ ಕನ್ನಡದ ವೈಭವವನ್ನು ಬಿತ್ತುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಮಕ್ಕಳಿಗೆ ಶಾಲೆಗಳಲ್ಲಿ ಕನ್ನಡವನ್ನು ದ್ವಿತೀಯ ಭಾಷೆಯಾಗಿಯಾದರೂ ವ್ಯಾಸಂಗ ಮಾಡಬೇಕು. ಇಲ್ಲದಿದ್ದರೆ ಮಕ್ಕಳು ಕನ್ನಡ ಕಲಿಯಲು ಕಷ್ಟಪಡುತ್ತಾರೆ. ಈ ನಿಟ್ಟಿನಲ್ಲಿ ನಾವು ಒಟ್ಟಾಗಿ ಕನ್ನಡವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ನಾವು ಯಾವುದಕ್ಕೂ ಜಗ್ಗದೆ ನೆಲ, ಜಲ, ಭಾಷೆ ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ. ಈ ಕಾರ್ಯವನ್ನು ಕೇವಲ ಸರ್ಕಾರ ಮಾತ್ರ ಮಾಡುತ್ತಿದೆ ಎಂದು ಹೇಳುವುದಿಲ್ಲ. ಕನ್ನಡ ಸಂಘ ಸಂಸ್ಥೆಗಳು ಈ ಭಾಷೆ ಉಳಿಯಲು ಹೋರಾಟ ಮಾಡುತ್ತಿದ್ದೀರಿ. ನಾವು ಅಧಿಕಾರದ ಆಸೆಗೆ ಹೋರಾಟ ಮಾಡಿದರೆ, ನೀವುಗಳು ಯಾವುದನ್ನು ನಿರೀಕ್ಷೆ ಮಾಡದೇ ಭಾಷೆ ಉಳಿವಿಗೆ ಶ್ರಮಿಸುತ್ತಿದ್ದೀರಿ ಎಂದರು.
ನಮ್ಮಲ್ಲಿ ಮಾತ್ರ ನಾಡಧ್ವಜ, ನಾಡಗೀತೆ
ಇಡೀ ಭೂಮಿಯನ್ನು ಕಾಪಾಡುವ ತಾಯಿ ಭುವನೇಶ್ವರಿ, ಕನ್ನಡದ ಕುಲದೇವತೆ ಭುವನೇಶ್ವರಿ. ದೇಶದ ವಿವಿಧ ರಾಜ್ಯಗಳಲ್ಲಿ ಕರ್ನಾಟಕದ ಮಾತೃಭಾಷೆ, ಕನ್ನಡ ಧ್ವಜ ಹಾಗೂ ನಾಡಗೀತೆಯ ಬಗ್ಗೆ ಸಾಕಷ್ಟು ಬಾರಿ ಚರ್ಚೆ ನಡೆದಿದೆ. ದೇಶದ ಬೇರೆ ರಾಜ್ಯಗಳಲ್ಲಿ ನಾಡಗೀತೆ, ನಾಡಧ್ವಜವಿಲ್ಲ. ಇದು ಕರ್ನಾಟಕದಲ್ಲಿ ಮಾತ್ರ ಇದೆ. 7 ಕೋಟಿ ಕನ್ನಡಿಗರನ್ನು ಕಾಪಾಡುತ್ತಿರುವ ಭುವನೇಶ್ವರಿಗೆ ನಮನ ಸಲ್ಲಿಸಲು ನಮ್ಮ ಸರ್ಕಾರ ಈ ಕಾರ್ಯಕ್ರಮ ಮಾಡಿದೆ. ಸಚಿವರಾದ ಶಿವರಾಜ ತಂಗಡಗಿ ಅವರು ತಮಗೆ ಸಿಕ್ಕ ಈ ಅವಕಾಶವನ್ನು ಸ್ಮರಿಸುತ್ತಿದ್ದರು. ನಿಮ್ಮ ಪ್ರತಿ ಮತಕ್ಕೆ ಎಷ್ಟು ಶಕ್ತಿ ಇದೆ ಎಂಬುದು ಸಾಬೀತಾಗಿದೆ. ನಿಮ್ಮ ಮತಕ್ಕೆ 5 ಗ್ಯಾರಂಟಿ ಅನುಷ್ಠಾನವಾಗಿದೆ, ನಾಮಫಲಕಗಳು ಕನ್ನಡಮಯವಾಗಿವೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ಮಧ್ಯೆ ತಾಯಿ ಭುವವನೇಶ್ವರಿ ತಾಯಿ ಪ್ರತಿಮೆ ಅನಾವರಣವಾಗಿದೆ ಎಂದು ಅವರು ತಿಳಿಸಿದರು.
ಈ ಸುದ್ದಿಯನ್ನೂ ಓದಿ | 76th Republic Day: ಗಣರಾಜ್ಯೋತ್ಸವ- 2025: ಲಕ್ಕುಂಡಿ ಸ್ತಬ್ಧಚಿತ್ರಕ್ಕೆ ವೋಟ್ ಮಾಡಲು ಹೇಮಂತ್ ನಿಂಬಾಳ್ಕರ್ ಮನವಿ
ಕನ್ನಡ ಉಳಿಸಲು ಸಿದ್ದರಾಮಯ್ಯ ಅವರಿಂದ ಅನೇಕ ಕ್ರಮ
“ಕನ್ನಡವೇ ನಮ್ಮ ತಾಯಿ, ಕನ್ನಡವೇ ನಮ್ಮ ದೇವ ಭಾಷೆ, ತುಂಗಾ, ಭದ್ರ, ಕೃಷ್ಣ, ಕಾವೇರಿ ಎಲ್ಲಾ ನದಿಗಳು ನಮ್ಮ ಪಾಲಿನ ಪುಣ್ಯ ತೀರ್ಥಗಳು. ಮನುಷ್ಯನ ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ, ಜನನ ಉಚಿತ ಮರಣ ಖಚಿತ, ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಅದು ಜೀವಂತವಾಗಿ ಉಳಿಯುತ್ತದೆ. ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದರು. ಅವತ್ತಿನಿಂದ ಕನ್ನಡದ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದಾರೆ. ಸಚಿವ ಸಂಪುಟದಲ್ಲಿ ಯಾವುದೇ ವಿಚಾರ ಪ್ರಸ್ತಾಪ ಮಾಡಬೇಕಾದರೂ ಕನ್ನಡದ ಕಡತಗಳಲ್ಲೇ ಮಂಡಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.