ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

BMTC Shakti scam: ಪುರುಷ ಪ್ರಯಾಣಿಕರಿಗೆ ಶಕ್ತಿ ಯೋಜನೆ ಟಿಕೆಟ್​​, ಯುಪಿಐ ಸ್ಕ್ಯಾನ್ ಹಗರಣ: ನಾಲ್ವರು ಬಿಎಂಟಿಸಿ ನೌಕರರು ಸಸ್ಪೆಂಡ್​​

ಶಕ್ತಿ ಯೋಜನೆಯ ಫ್ರೀ ಟಿಕೆಟ್ ಮೇಲೆ ಕನ್ನಡದಲ್ಲಿ ಮಾತ್ರ ಉಚಿತ ಪ್ರಯಾಣ ಎಂದು ಪ್ರಿಂಟ್ ಮಾಡಲಾಗಿದೆ. ಹೀಗಾಗಿ ಕನ್ನಡ ಓದಲು ಬಾರದ ಪ್ರಯಾಣಿಕರನ್ನೇ ಟಾರ್ಗೆಟ್​ ಮಾಡಿ ಅವರಿಗೆ ಟಿಕೆಟ್​​ ನೀಡಿ ಹಣ ಪಡೆಯಲಾಗುತ್ತಿತ್ತು. ತನಿಖೆಯಲ್ಲಿ ಕೆಲ ನಿರ್ವಾಹಕರ ಈ ಕಳ್ಳಾಟ ಬಯಲಾಗಿದ್ದು, ಅಕೌಂಟ್​​ನಲ್ಲಿ ಸಾವಿರಾರು ರೂಪಾಯಿ ಹಣವೂ ಪತ್ತೆಯಾಗಿದೆ.

ಪುರುಷರಿಗೆ ಶಕ್ತಿ ಟಿಕೆಟ್​​, ಯುಪಿಐ ಸ್ಕ್ಯಾನ್ ಹಗರಣ: 4 ನೌಕರರ ಸಸ್ಪೆಂಡ್​​

ಬಿಎಂಟಿಸಿ -

ಹರೀಶ್‌ ಕೇರ
ಹರೀಶ್‌ ಕೇರ Apr 12, 2026 7:41 AM

ಬೆಂಗಳೂರು, ಏ.​ 12: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯ ಲಾಭವನ್ನು ರಾಜ್ಯದ ಕೋಟ್ಯಾಂತರ ಹೆಣ್ಣು ಮಕ್ಕಳು ಪಡೆಯುತ್ತಿದ್ದರೆ, ಇತ್ತ ಬಿಎಂಟಿಸಿಯ (bmtc) ಕೆಲ ಕಿಲಾಡಿ ನೌಕರರು ಮಾತ್ರ ಅನ್ನ ತಿಂದ ಮನೆಗೆ ಕನ್ನ ಹಾಕುವ ಕೆಲಸ ಮಾಡಿದ್ದಾರೆ. ಕನ್ನಡ ಬಾರದ ಪುರುಷ ಪ್ರಯಾಣಿಕರಿಗೆ ಶಕ್ತಿ ಯೋಜನೆಯ (Shakti scam) ಟಿಕೆಟ್​​ ನೀಡಿ ದುಡ್ಡು ಮಾಡುತ್ತಿದ್ದಾರೆ. ಮತ್ತೊಂದೆಡೆ ಪ್ರಯಾಣಿಕರಿಗೆ ಸಹಾಯ ಆಗಲಿ ಎಂದು ಬಿಎಂಟಿಸಿ ಯುಪಿಐ ಕ್ಯೂಆರ್​ ಕೋಡ್​​ಗಳನ್ನು ಅಳವಡಿಸಿದೆ. ಇದನ್ನು ಸ್ಕ್ಯಾನ್​​ (upi scan) ಮಾಡಿ ಟಿಕೆಟ್​​ ಹಣ ಪಾವತಿಸುವಂತೆ ಪ್ರಯಾಣಿಕರಿಗೆ ಸೂಚಿಸುವ ಬದಲು, ಕೆಲ ನಿರ್ವಾಹಕರು ತಮ್ಮ ವೈಯಕ್ತಿಕ ಯುಪಿಐ ಮಾಹಿತಿ ನೀಡಿ ದುಡ್ಡು ಪೀಕುವ ಕೆಲಸಕ್ಕೂ ಇಳಿದಿದ್ದಾರೆ. ಈ ಹಿನ್ನೆಲೆ ನಿಗಮಕ್ಕೆ ಸೇರಬೇಕಿದ್ದ ಲಕ್ಷ ಲಕ್ಷ ಹಣ ತಮ್ಮ ಜೇಬಿಗೆ ಇಳಿಸಿಕೊಂಡಿದ್ದ ನಾಲ್ಕು ಜನ ಕಿಲಾಡಿ ಕಂಡಕ್ಟರ್​​ಗಳನ್ನೀಗ ಮನೆಗೆ ಕಳುಹಿಸಲಾಗಿದೆ.

ಶಕ್ತಿ ಯೋಜನೆಯ ಫ್ರೀ ಟಿಕೆಟ್ ಮೇಲೆ ಕನ್ನಡದಲ್ಲಿ ಮಾತ್ರ ಉಚಿತ ಪ್ರಯಾಣ ಎಂದು ಪ್ರಿಂಟ್ ಮಾಡಲಾಗಿದೆ. ಹೀಗಾಗಿ ಕನ್ನಡ ಓದಲು ಬಾರದ ಪ್ರಯಾಣಿಕರನ್ನೇ ಟಾರ್ಗೆಟ್​ ಮಾಡಿ ಅವರಿಗೆ ಟಿಕೆಟ್​​ ನೀಡಿ ಹಣ ಪಡೆಯಲಾಗುತ್ತಿತ್ತು. ತನಿಖೆಯಲ್ಲಿ ಕೆಲ ನಿರ್ವಾಹಕರ ಈ ಕಳ್ಳಾಟ ಬಯಲಾಗಿದ್ದು, ಅಕೌಂಟ್​​ನಲ್ಲಿ ಸಾವಿರಾರು ರೂಪಾಯಿ ಹಣವೂ ಪತ್ತೆಯಾಗಿದೆ.

ಕಂಡಕ್ಟರ್​​ಗಳು ಹೊಡೆದಿರುವ ಹಣ ಎಷ್ಟು?

ಸೂರ್ಯನಾರಾಯಣ- ಡಿಪೋ- 18, ಡ್ರೈವರ್ ಕಂ ಕಂಡಕ್ಟರ್ : 54,290 ರೂ.

ಬೊಮ್ಮಲಿಂಗೇಶ್ ಸಿ.- ಡಿಪೋ- 18, ಡ್ರೈವರ್ ಕಂ ಕಂಡಕ್ಟರ್: 16,404 ರೂ.

ಬ್ರಿಜೇಶ್ ಬಾಬು- ಡಿಪೋ- 51, ಡ್ರೈವರ್ ಕಂ ಕಂಡಕ್ಟರ್: 9,795 ರೂ.

ಮೋಹನ್- ಡಿಪೋ- 18, ಡ್ರೈವರ್ ಕಂ ಕಂಡಕ್ಟರ್: 6,117 ರೂ.

ಇನ್ನು ಈ ಕಿಲಾಡಿ ಕಂಡಕ್ಟರ್‌ಗ​​ಳು ಡಿಪೋದಿಂದ ಬಸ್​​ಗಳು ಹೊರಗೆ ಬರ್ತಿದ್ದಂತೆ ಬಿಎಂಟಿಸಿಯ ಯುಪಿಐ ಕ್ಯೂಆರ್​​ ಕೋಡ್​​ಗಳನ್ನು ಕಿತ್ತು ಇಟ್ಟುಕೊಳ್ಳುತ್ತಿದ್ದರು. ಪ್ರಯಾಣಿಕರು ಯುಪಿಐ ಪೇಮೆಂಟ್ ಮಾಡಿ ಟಿಕೆಟ್ ಖರೀದಿ ಮಾಡಬೇಕು ಎಂದು ಕೇಳಿದಾಗ, ತಮ್ಮ ಮೊಬೈಲ್​​ನಲ್ಲಿರುವ ಸ್ವಂತ ಅಕೌಂಟ್​​ನ ಕ್ಯೂಆರ್​​ ಕೋಡ್​​ ನೀಡಿ ಹಣ ಹಾಕಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆ ಬಿಎಂಟಿಸಿಯ ಸೆಕ್ಯೂರಿಟಿ ಅಧಿಕಾರಿಗಳು ತಪಾಸಣೆ ಮಾಡಿದಾಗ ಹತ್ತಕ್ಕೂ ಹೆಚ್ಚು ಕಂಡಕ್ಟರ್​​ಗಳು ಸಿಕ್ಕಿಬಿದ್ದಿದ್ದು, ಪ್ರತಿಯೊಬ್ಬರ ಅಕೌಂಟ್‌ನಲ್ಲಿ 10ರಿಂದ 50 ಸಾವಿರ ರೂಪಾಯಿವರೆಗೆ ಯುಪಿಐ ವಹಿವಾಟು ನಡೆದಿರೋದು ಬಯಲಾಗಿದೆ. ಆ ಸಂಬಂಧ ಸದ್ಯ ನಾಲ್ಕು ಜನರನ್ನು ಸಸ್ಪೆಂಡ್ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಮನೆಗೆ ಹೋಗೋದು ಫಿಕ್ಸ್​​ ಎನ್ನಲಾಗಿದೆ. ಇಂತಹುದೇ ಘಟನೆ ಸಂಬಂಧ ಈ ಹಿಂದೆಯೂ ಕೆಲವರನ್ನು ಬಿಎಂಟಿಸಿ ಅಮಾನತು ಮಾಡಿತ್ತೆಂಬುದು ಇಲ್ಲಿ ಗಮನಾರ್ಹ.