ಬೆಂಗಳೂರು: ಬೆಂಗಳೂರು ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯು ಪಿಂಕ್ ಸ್ಟ್ರಾಂಗ್ - 3 ಕಿ.ಮೀ. ವಾಕಥಾನ್ ಪಾದಯಾತ್ರೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದು, ಸ್ತನ ಕ್ಯಾನ್ಸರ್(Breast Cancer) ಕುರಿತು ಜಾಗೃತಿ ಮೂಡಿಸಲು ಹಾಗೂ ಆರಂಭಿಕ ರೋಗಲಕ್ಷಣಗಳನ್ನು ಗುರುತಿಸುವುದು, ಸೂಕ್ತ ಪರೀಕ್ಷೆ ಮತ್ತು ಸಕಾಲಿಕ ವೈದ್ಯಕೀಯ ಮೌಲ್ಯಮಾಪನದ ಮಹತ್ವವನ್ನು ಸಾರಲು 3,000ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
ಈ ಬೃಹತ್ ಜಾಗೃತಿ ಕಾರ್ಯಕ್ರಮದಲ್ಲಿ ಸಾರ್ವಜನಿಕ ಸಮುದಾಯದ ನಾಗರಿಕರು, ಸ್ತನ ಕ್ಯಾನ್ಸರ್ ರೋಗವನ್ನು ಜಯಿಸಿ ಬಂದ ಧೀರ ಮಹಿಳೆಯರು ಮತ್ತು ಆಸ್ಪತ್ರೆಯ ವೈದ್ಯಕೀಯ ವೃತ್ತಿಪರರು ಹೆಜ್ಜೆ ಹಾಕಿದರು. ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಮಿಲನಾ ನಾಗರಾಜ್(Milana Nagaraj) ಅವರು ಈ ಮಹತ್ವದ ಜನಜಾಗೃತಿ ಅಭಿಯಾನದಲ್ಲಿ ಪ್ರಮುಖವಾಗಿ ಭಾಗವಹಿಸಿ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿ ದರು.
ಆಸ್ಪತ್ರೆಯ ಮುಂಭಾಗದಿಂದ ಆರಂಭವಾದ ಮೂರು ಕಿಲೋಮೀಟರ್ ದೂರದ ಈ ನಡಿಗೆಯು ಹುಳಿಮಾವು ಕೆರೆಯ ಕಡೆಗೆ ಸಾಗಿ, ತದನಂತರ ಮತ್ತೆ ಹೊರಟ ಸ್ಥಳಕ್ಕೇ ಹಿಂತಿರುಗಿ ಸಮಾಪ್ತಿ ಗೊಂಡಿತು. ನಡಿಗೆಯ ನಡುವೆ ಆಯೋಜಿಸಲಾಗಿದ್ದ ವಿಶೇಷ ಜುಂಬಾ ನೃತ್ಯ ಮತ್ತು ಆಕರ್ಷಕ ಸಮುದಾಯ ಚಟುವಟಿಕೆಗಳು ಸಾರ್ವಜನಿಕರ ಉತ್ಸಾಹವನ್ನು ಹೆಚ್ಚಿಸಿದ್ದಲ್ಲದೆ ಹುಮ್ಮಸ್ಸಿನಿಂದ ಪಾಲ್ಗೊಳ್ಳುವಂತೆ ಮಾಡಿದುವು ಹಾಗೂ ಸ್ತನ ಆರೋಗ್ಯಕ್ಕೆ ಸಂಬಂಧಿಸಿದ ಗಂಭೀರ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚಿಸಲು ವೇದಿಕೆ ಕಲ್ಪಿಸಿದವು.
ಇದನ್ನೂ ಓದಿ: Darling Krishna-Milana Nagaraj: ಫ್ಯಾಮಿಲಿ ಕೋರ್ಟ್ನಲ್ಲಿ ನಟ ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್; ಕಾರಣವೇನು?
ಕಾರ್ಯಕ್ರಮದಲ್ಲಿ ಕನ್ನಡ ಚಿತ್ರ ನಟಿ ಮಿಲನಾ ನಾಗರಾಜ್(Milana Nagaraj) ಮಾತನಾಡಿ, “ಮಹಿಳೆಯರ ಸ್ತನದ ಆರೋಗ್ಯಕ್ಕೆ ಸಮಾಜದಲ್ಲಿ ಅತ್ಯಂತ ಹೆಚ್ಚಿನ ಆದ್ಯತೆ ಮತ್ತು ಮುಕ್ತ ಸಂವಾದ ದ ಅವಶ್ಯಕತೆಯಿದೆ. ಮಹಿಳೆಯರು ನಿತ್ಯ ಜೀವನದಲ್ಲಿ ಕುಟುಂಬ ಮತ್ತು ವೃತ್ತಿಯ ನಾನಾ ಜವಾಬ್ದಾರಿಗಳನ್ನು ಸರಿದೂಗಿಸುತ್ತಾರೆ, ಹಾಗಾಗಿ ತಮ್ಮ ವೈಯಕ್ತಿಕ ಆರೋಗ್ಯವನ್ನು ಮೊದಲ ಆದ್ಯತೆಯಾಗಿ ಇರಿಸಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಸ್ತನ ಕ್ಯಾನ್ಸರ್ ಬಗೆಗೆ ಜಾಗೃತಿ ಮೂಡಿಸಲು ಮತ್ತು ಈ ಮಾರಕ ಕಾಯಿಲೆಯಿಂದ ಬಾಧಿತರಾದವರಿಗೆ ನೈತಿಕ ಸ್ಥೈರ್ಯ ತುಂಬಲು ಸಮುದಾಯದ ಜನರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಒಟ್ಟಾಗಿ ಸೇರಿರುವುದನ್ನು ಕಾಣುವುದು ನಿಜಕ್ಕೂ ಅತ್ಯಂತ ಸ್ಪೂರ್ತಿದಾಯಕವಾಗಿದೆ” ಎಂದರು.
ಸರ್ಜಿಕಲ್ ಆಂಕಾಲಜಿ ವಿಭಾಗದ ಪ್ರಧಾನ ನಿರ್ದೇಶಕರು ಹಾಗೂ ಫೋರ್ಟಿಸ್ ಇಂಡಿಯಾದ ಸರ್ಜಿಕಲ್ ಆಂಕಾಲಜಿ ಕೌನ್ಸಿಲ್ ಅಧ್ಯಕ್ಷ ಡಾ.ಸಿ.ರಾಮಚಂದ್ರ ಮಾತನಾಡಿ, “ಇತ್ತೀಚಿನ ದಿನ ಗಳಲ್ಲಿ ಭಾರತದಲ್ಲಿ ಸ್ತನ ಕ್ಯಾನ್ಸರ್ ಸಮಸ್ಯೆಯು ಕಿರಿಯ ವಯಸ್ಸಿನ ಯುವತಿಯರಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕ ಜಾಗೃತಿ ಮತ್ತು ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು ಹಿಂದೆಂದಿಗಿಂತಲೂ ಅತ್ಯಂತ ಮಹತ್ವದ್ದಾಗಿದೆ.
ಮಹಿಳೆಯರು ತಮ್ಮ ಸ್ತನದ ಆರೋಗ್ಯವನ್ನು ಸರಿಯಾಗಿ ತಿಳಿದುಕೊಳ್ಳಲು ಪ್ರೇರೇಪಿಸಬೇಕು. ಸ್ತನದಲ್ಲಿ ಹೊಸ ಗಡ್ಡೆ, ಸ್ತನದ ಆಕಾರ ಅಥವಾ ಚರ್ಮದ ರಚನೆಯಲ್ಲಿ ಬದಲಾವಣೆಗಳು ಅಥವಾ ಅಸಹಜ ದ್ರವ ಹೊರಸೂಸುವಿಕೆಯಂತಹ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು. ಸ್ಕ್ರೀನಿಂಗ್ ಮಾರ್ಗಸೂಚಿಗಳು ವ್ಯಕ್ತಿಯ ವಯಸ್ಸು, ವೈಯಕ್ತಿಕ ಅಪಾಯದ ಅಂಶಗಳು ಮತ್ತು ವೈದ್ಯಕೀಯ ಸಲಹೆಯನ್ನು ಆಧರಿಸಿರುತ್ತವೆ.
ರೋಗಲಕ್ಷಣಗಳನ್ನು ಅನುಭವಿಸುತ್ತಿರುವ ಮಹಿಳೆಯರು ನಿಯಮಿತ ಪರೀಕ್ಷೆಯ ದಿನಾಂಕಕ್ಕಾಗಿ ಕಾಯುತ್ತಾ ಸಮಯವನ್ನು ವ್ಯರ್ಥವಾಗಿ ಮುಂದೂಡಬಾರದು. ಆರಂಭದಲ್ಲೇ ರೋಗ ಪತ್ತೆ ಹಚ್ಚುವುದರಿಂದ ಚಿಕಿತ್ಸೆಯ ಯಶಸ್ಸಿನ ಪ್ರಮಾಣ ಗಣನೀಯವಾಗಿ ಸುಧಾರಿಸುತ್ತದೆ” ಎಂದು ಎಚ್ಚರಿಸಿದರು.
ಮೆಡಿಕಲ್ ಆಂಕಾಲಜಿ ಮತ್ತು ಹೆಮಟೊ-ಆಂಕಾಲಜಿ ವಿಭಾಗದ ಪ್ರಧಾನ ನಿರ್ದೇಶಕಿ ಡಾ. ನೀತಿ ರೈಜಾದಾ ಮಾತನಾಡಿ, “ಸ್ತನ ಕ್ಯಾನ್ಸರ್ ರೋಗಿಗಳು ಮತ್ತು ಅವರ ಇಡೀ ಕುಟುಂಬದ ಮೇಲೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ತೀವ್ರ ಪರಿಣಾಮ ಬೀರುತ್ತದೆ. ಸಕಾಲಿಕ ರೋಗ ನಿರ್ಣಯ ಹಾಗೂ ಸೂಕ್ತ ಚಿಕಿತ್ಸೆಯ ಜೊತೆಗೆ, ರೋಗದ ಬಗ್ಗೆ ಸ್ಪಷ್ಟ ಮಾಹಿತಿ ಮತ್ತು ರೋಗಿಗಳಿಗೆ ಮಾನಸಿಕ ಹಾಗೂ ಸಾಮಾಜಿಕ ಬೆಂಬಲ ಸಿಗುವುದು ಅತ್ಯಗತ್ಯ.
ಮುಕ್ತ ಸಮಾ ಲೋಚನೆಗಳು ಕ್ಯಾನ್ಸರ್ ಬಗೆಗಿನ ಸಾಮಾಜಿಕ ಕಳಂಕ ಮತ್ತು ತಪ್ಪು ಕಲ್ಪನೆಗಳನ್ನು ನಿವಾರಿಸಲು ನೆರವಾಗುತ್ತವೆ, ಇದರಿಂದ ಮಹಿಳೆಯರು ಯಾವುದೇ ಹಿಂಜರಿಕೆಯಿಲ್ಲದೆ ವೈದ್ಯರ ಸಲಹೆ ಪಡೆಯಲು ಮತ್ತು ತಮ್ಮ ಆತಂಕಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ರೋಗನಿರ್ಣಯ ಮತ್ತು ರೋಗಿಯ ವೈದ್ಯಕೀಯ ಸ್ಥಿತಿಗೆ ತಕ್ಕಂತೆ ಚಿಕಿತ್ಸೆಯ ನಿರ್ಧಾರಗಳನ್ನು ಪ್ರತ್ಯೇಕವಾಗಿ ರೂಪಿಸಬೇಕು” ಎಂದು ಅಭಿಪ್ರಾಯಪಟ್ಟರು.
ಆಸ್ಪತ್ರೆಯ ಫೆಸಿಲಿಟಿ ಡೈರೆಕ್ಟರ್ ಗೌತಮ್ ಮಾತನಾಡಿ, “ಪಿಂಕ್ಸ್ಟ್ರಾಂಗ್ ಅಭಿಯಾನವು ಸಾರ್ವಜನಿಕ ಆರೋಗ್ಯದ ಒಂದು ಪ್ರಮುಖ ಕಾಳಜಿಯ ಸುತ್ತ ಸಮುದಾಯದ ನಾಗರಿಕರು, ಕ್ಯಾನ್ಸರ್ ಗೆದ್ದು ಬದುಕಿದವರು ಮತ್ತು ಆರೋಗ್ಯ ರಕ್ಷಣಾ ವೃತ್ತಿಪರರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿದೆ.
ಈ ಮಹತ್ವದ ಜನಹಿತ ಉಪಕ್ರಮಕ್ಕೆ ಕೈಜೋಡಿಸಿ ಸ್ತನ ಆರೋಗ್ಯದ ಕುರಿತು ಸಾರ್ವಜನಿಕ ಸಂವಾದಕ್ಕೆ ದಾರಿ ಮಾಡಿಕೊಟ್ಟ ಪ್ರತಿಯೊಬ್ಬ ಭಾಗವಹಿಸುವವರಿಗೂ ನಾವು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಸಾರ್ವಜನಿಕ ಜಾಗೃತಿ, ಆರೋಗ್ಯದ ಬಗೆಗಿನ ಮಾಹಿತಿಪೂರ್ಣ ನಿರ್ಧಾರಗಳು ಮತ್ತು ಸ್ತನ ಕ್ಯಾನ್ಸರ್ನಿಂದ ಬಾಧಿತರಾದ ಜನರಿಗೆ ನಿರಂತರ ಬೆಂಬಲ ನೀಡುವುದೇ ನಮ್ಮ ಈ ಕಾರ್ಯಕ್ರಮದ ಮುಖ್ಯ ಧ್ಯೇಯವಾಗಿತ್ತು” ಎಂದು ಹೇಳಿದರು.