ಸಾರ್ವಜನಿಕ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕೆಂಬ ನಿಯಮ ಜಾರಿ ರಾಜ್ಯಾದ್ಯಂತ 12 ಲಕ್ಷ , ಬೆಂಗಳೂರಿನಲ್ಲಿ 6 ಲಕ್ಷಕ್ಕೂ ಅಧಿಕ ಕ್ಯಾಮೆರಾ ಅಳವಡಿಕೆ
ರಾಜ್ಯದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯಿಂದಾಗಿ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳ ಸಂಖ್ಯೆ ಗಮನಾರ್ಹ ಇಳಿಕೆಯಾಗಿದೆ.
ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳು) ಜಾರಿ ಕಾಯಿದೆ 2017 ರಂತೆ ಸಾರ್ವಜನಿಕ ಪ್ರದೇಶಗಳಾದ ರೈಲು ನಿಲ್ದಾಣ, ಬಸ್ ನಿಲ್ದಾಣ, ವಾಣಿಜ್ಯ ಸಂಸ್ಥೆ, ಶಿಕ್ಷಣ ಸಂಸ್ಥೆ, ಬಹುಮಹಡಿ ಅಪಾರ್ಟ್‌ಮೆಂಟ್ ಸೇರಿದಂತೆ ಜನಸಂದಣಿ ಸೇರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕೆಂಬ ನಿಯಮವಿದೆ. ಈ ಕಾಯ್ದೆಯ ಅನುಷ್ಠಾನಕ್ಕೆ ವೇಗ ನೀಡಿರುವ ರಾಜ್ಯ ಪೊಲೀಸರು 12 ಲಕ್ಷ ಸಿಸಿಟಿವಿ ಅಳವಡಿಸು ವಲ್ಲಿ ಸಫಲರಾಗಿದ್ದಾರೆ.
ಮಹಿಳೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಕೇಂದ್ರದ ನಿರ್ಭಯಾ ಯೋಜನೆಯಡಿ ಬೆಂಗಳೂರು ನಗರ ಪೊಲೀಸರಿಂದ 7 ಸಾವಿರ ಸೇರಿದಂತೆ ರಾಜಧಾನಿಯಲ್ಲಿ ಸುಮಾರು 6 ಲಕ್ಷಕ್ಕಿಂತ ಅಧಿಕ ಸಿಸಿಟಿವಿ ಅಳವಡಿಕೆಯಾಗಿದೆ. 2022ರಲ್ಲಿ ರಾಜ್ಯದಲ್ಲಿ 3 ಲಕ್ಷ ಸಿಸಿಟಿವಿ ಅಳವಡಿಸಲಾಗಿತ್ತು. ಇದೀಗ ನಾಲ್ಕು ಪಟ್ಟು ಹೆಚ್ಚು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದ ಡಕಾಯಿತಿ, ದರೋಡೆ, ಸರಗಳ್ಳತನ ಹಾಗೂ ಕೊಲೆ ಪ್ರಕರಣಗಳಿಗೆ ಅಂಕುಶ ಬಿದ್ದಿದೆ. 2022ರಲ್ಲಿ 216 ಡಕಾಯಿತಿ ಪ್ರಕರಣ ದಾಖಲಾಗಿದ್ದರೆ, 2023ರಲ್ಲಿ 176, 2024ರಲ್ಲಿ 154ಕ್ಕೆ ಇಳಿದಿತ್ತು. 2025ರಲ್ಲಿ 139 ಪ್ರಕರಣ ವರದಿಯಾಗಿದ್ದರೆ, ಈ ವರ್ಷದ ಮೇ ಅಂತ್ಯಕ್ಕೆ 63ಕ್ಕೆ ಸೀಮಿತವಾಗಿದೆ.
2022ರಲ್ಲಿ 1066 ದರೋಡೆ ಪ್ರಕರಣ ದಾಖಲಾದರೆ, 2023ರಲ್ಲಿ 1240, 2024ರಲ್ಲಿ 991ಕ್ಕೆ ಇಳಿದಿತ್ತು. 2025ರಲ್ಲಿ 616 ಹಾಗೂ ಈ ವರ್ಷ ಮೇ ಅಂತ್ಯಕ್ಕೆ 291 ಪ್ರಕರಣ ದಾಖಲಾಗಿವೆ. ಸಿಸಿಟಿವಿ ಅಳವಡಿಕೆ ಪರಿಣಾಮ ಸರಗಳ್ಳತನವು 2022ರಲ್ಲಿ 669, 2023ರಲ್ಲಿ 639, 2024ರಲ್ಲಿ 618, 2025ರಲ್ಲಿ 462 ಹಾಗೂ ಈ ವರ್ಷದ ಮೊದಲ ಐದು ತಿಂಗಳಲ್ಲಿ 168 ಪ್ರಕರಣಕ್ಕೆ ಇಳಿದಿದೆ.
ಇದನ್ನೂ ಓದಿ: Hidden Camera: ಸಿನಿಮಾ ಥಿಯೇಟರ್‌ನ ಮಹಿಳಾ ಟಾಯ್ಲೆಟ್‌ನಲ್ಲಿ ಗುಪ್ತ ಕ್ಯಾಮೆರಾ ಇಟ್ಟ ವಿಕೃತಕಾಮಿ!
2022ರಲ್ಲಿ 1367 ಕೊಲೆ ಪ್ರಕರಣ ದಾಖಲಾಗಿದ್ದರೆ, 2023ರಲ್ಲಿ 1294ಕ್ಕೆ ಕಡಿಮೆಯಾಗಿದೆ. 2024ರಲ್ಲಿ 1206 ಹಾಗೂ 2025ರಲ್ಲಿ 1205 ಸರಗಳ್ಳತನ ಪ್ರಕರಣ ದಾಖಲಾಗಿವೆ. 2026ರ ಮೇ ಅಂತ್ಯಕ್ಕೆ 464 ಪ್ರಕರಣ ದಾಖಲಾಗಿದೆ.
ಸಿಸಿಟಿವಿ ಇಲ್ಲದ ಕಡೆ ಕ್ರೈಂ: ಸಿಸಿಟಿವಿ ಇಲ್ಲದಿರುವ ಕಡೆಗಳಲ್ಲಿ ಕ್ರೈಂ ಎಸಗಿ ಪರಾರಿಯಾಗುತ್ತಿದ್ದಾರೆ. ಇದಕ್ಕೆ ತಾಜಾ ನಿದರ್ಶನವೆಂದರೆ ಬೆಂಗಳೂರಿನಲ್ಲಿ ಎಟಿಎಂ ವ್ಯಾನ್ ಅಡ್ಡಗಟ್ಟಿ 7.11 ಕೋಟಿ ದರೋಡೆ ಮಾಡಿದ್ದ ಪ್ರಕರಣ. ಕಳೆದ ವರ್ಷ ನವೆಂಬರ್ 19ರಂದು ಹಣ ತುಂಬಿಸಿಕೊಂಡು ಅಶೋಕ ಪಿಲ್ಲರ್ ಬಳಿ ಬರುತ್ತಿದ್ದ ಸಿಎಂಎಸ್ ಏಜೆನ್ಸಿಗೆ ವ್ಯಾನ್ ಅಡ್ಡಗಟ್ಟಿ ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ದರೋಡೆ ನಡೆಸಿದ್ದರು. ಇಲ್ಲಿ ಗಮನಿಸಬೇಕಾದದ್ದು, ಅಶೋಕ ಪಿಲ್ಲರ್ ಸುತ್ತ ಯಾವುದೇ ಸಿಸಿಟಿವಿ ಕ್ಯಾಮೆರಾ ಇಲ್ಲದಿರುವುದನ್ನೇ ಖಾತ್ರಿಪಡಿಸಿಕೊಂಡು ದರೋಡೆಕೋರರು ಸಂಚು ರೂಪಿಸಿದ್ದರು. ಇದೇ ಮಾರ್ಗವಾಗಿ ನೆರೆರಾಜ್ಯಗಳಿಗೆ ಹೋಗುವಾಗ ಮಾರ್ಗ ಮಧ್ಯೆ ಸಿಕ್ಕ ಸಿಸಿಟಿವಿ ದೃಶ್ಯಾವಳಿ ಆಧರಿಸಿ 9 ಮಂದಿ ಆರೋಪಿಗಳನ್ನು ಬಂಧಿಸಲು ಸಿzಪುರ ಪೊಲೀಸರಿಗೆ ಅನುವಾಯಿತು.
ಬೆಂಗಳೂರಿನಲ್ಲಿ ದರೋಡೆ, ಸರಗಳ್ಳತನ ಪ್ರಕರಣ ಇಳಿಕೆ
ಎಐ ಚಿತ್ರ ಬೆಂಗಳೂರು ನಗರದಲ್ಲಿ ಪ್ರಸ್ತುತ ಸುಮಾರು 6 ಲಕ್ಷ ಸಿಸಿಟಿವಿ ಕ್ಯಾಮೆರಾಗಳಿದ್ದು, ಅವುಗಳಿಂದಾಗಿ ಕ್ರೈಂ ಪ್ರಕರಣ ಇಳಿಕೆಯಾಗಿವೆ. 2023ರಲ್ಲಿ 674 ದರೋಡೆ, 160 ಸರಗಳ್ಳತನ ಪ್ರಕರಣಗಳು, 41 ಡಕಾಯಿತಿ ಪ್ರಕರಣಗಳು ಮತ್ತು 1705 ಮನೆ ಕಳ್ಳತನ ಪ್ರಕರಣ ವರದಿಯಾಗಿವೆ. ಅದೇ ರೀತಿ 2024ರಲ್ಲಿ 559 ದರೋಡೆ, 154 ಸರಗಳ್ಳತನ, 34 ಡಕಾಯಿತಿ ಪ್ರಕರಣಗಳು ಮತ್ತು 1405 ಮನೆ ಕಳ್ಳತನ ಪ್ರಕರಣ ದಾಖಲಾಗಿವೆ. ಕಳೆದ ವರ್ಷ ಬೆಂಗಳೂರಿನಲ್ಲಿ 27 ಡಕಾಯಿತಿ, 296 ದರೋಡೆ, 73 ಸರಗಳ್ಳತನ ಪ್ರಕರಣಗಳು ಮತ್ತು 1372 ಮನೆ ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಇಲಾಖೆಯು ತಿಳಿಸಿದೆ.