ಭವ್ಯ ವೇದಿಕೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಸಾರಿಗೆ ಸಚಿವ ಬೈರತಿ ಸುರೇಶ್
ಇದು 114 ನೇ ದಸರಾ ಆಚರಣೆ
ಬೆಂಗಳೂರು: ರಾಜ್ಯದ ಎರಡನೇ ಮೈಸೂರು ದಸರಾವೆಂದೇ ಖ್ಯಾತಿ ಹೊಂದಿರುವ ಅದ್ಧೂರಿ ಹೆಬ್ಬಾಳ ದಸರಾ ಉತ್ಸವ(Hebbal Dasara Fest)ಕ್ಕೆ ಇದೇ ಅ.11 ರಂದು ಚಾಲನೆ ದೊರೆಯಲಿದೆ.
ಹೆಬ್ಬಾಳ ಕ್ಷೇತ್ರದ ಶಾಸಕರೂ ಆಗಿರುವ ಸಾರಿಗೆ ಸಚಿವ ಬೈರತಿ ಸುರೇಶ್(Byrati Suresh) ಅವರು ಗುರುವಾರ ಜೆ.ಸಿ.ನಗರದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಈ ದಸರಾ ಉತ್ಸವದ ವೇದಿಕೆ ಸಿದ್ಧತೆಗೆ ಭೂಮಿಪೂಜೆ ಮತ್ತು ಧ್ವಜ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಬೆಂಗಳೂರಿನಲ್ಲೇ ಅತ್ಯಂತ ಹಳೆಯ ಮತ್ತು ಐತಿಹಾಸಿಕ ಹಿನ್ನೆಲೆ ಯುಳ್ಳ ಹೆಬ್ಬಾಳ ಪ್ರದೇಶದಲ್ಲಿ ಹಲವಾರು ವರ್ಷಗಳಿಂದಲೂ ಈ ನಾಡಹಬ್ಬವನ್ನು ಸಾಂಪ್ರದಾ ಯಿಕ ಮತ್ತು ಮೈಸೂರು ದಸರಾ ಶೈಲಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಹೆಬ್ಬಾಳ ಕೆರೆಯ ಸುತ್ತಮುತ್ತಲಿನ ಪರಿಸರ ಮತ್ತು ಸಾಂಸ್ಕೃತಿಕ ಬೇರುಗಳೊಂದಿಗೆ ಈ ನಾಡಹಬ್ಬವನ್ನು ಆಚರಿಸಲಾಗುತ್ತಿದೆ ಎಂದರು.
ಇದನ್ನೂ ಓದಿ: Mysuru Dasara 2026: ಬರದ ನಡುವೆ ಶಿಸ್ತುಬದ್ಧ ದಸರಾ ಆಚರಣೆಗೆ ತೀರ್ಮಾನ: ಸಿಎಂ
ಹೆಬ್ಬಾಳ ದಸರಾ ಬೆಂಗಳೂರಿನಲ್ಲಿ ಅತ್ಯಂತ ಸಡಗರ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುವ ಪ್ರಮುಖ ಸಾಂಸ್ಕೃತಿಕ ಹಬ್ಬಗಳಲ್ಲಿ ಒಂದಾಗಿದೆ. ಇದು ಮೈಸೂರು ದಸರಾದಷ್ಟೇ ಭವ್ಯವಾಗಿ ಆಚರಿಸಲ್ಪಡುವ ಕಾರಣ ಇದನ್ನು 'ಕರ್ನಾಟಕದ ಎರಡನೇ ಮೈಸೂರು ದಸರಾ' ಎಂದೂ ಬಣ್ಣಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿ ವರ್ಷದಂತೆ ಈ ಬಾರಿಯೂ ಅ.11 ರಿಂದ 21 ರವರೆಗೆ ಪ್ರತಿದಿನ ಸಂಜೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಅಕ್ಟೋಬರ್ 11 ರಂದು ಸಂಜೆ ದಸರಾಗೆ ಅದ್ಧೂರಿ ಚಾಲನೆ ದೊರೆಯಲಿದ್ದು, 114 ನೇ ದಸರಾ ಆಚರಣೆ ಇದಾಗಿದೆ. ಹೆಬ್ಬಾಳ ಕ್ಷೇತ್ರದ ವಿವಿಧ ದೇವಸ್ಥಾನಗಳ ದೇವರ ಮೂರ್ತಿಗಳನ್ನೊಳಗೊಂಡ ಭವ್ಯ ರಥಗಳ ಮೆರವಣಿಗೆ. ತಾಯಿ ಚಾಮುಂಡೇಶ್ವರಿ ಮತ್ತು ಮೈಸೂರಿನ ಕೃಷ್ಣರಾಜ ಒಡೆಯರ್ ಅವರ ಮೂರ್ತಿಗಳನ್ನು ಅದ್ಧೂರಿ ಮೆರವಣಿಗೆ ಮೂಲಕ ಭವ್ಯ ವೇದಿಕೆಗೆ ಕರೆ ತರಲಾಗುತ್ತದೆ.
ಬೆಂಗಳೂರಿನಲ್ಲಿ ನಡೆಯುವ ವೈಭವದ ಈ ದಸರಾವನ್ನು ಹೆಬ್ಬಾಳ, ಜೆ.ಸಿ. ನಗರ, ಶಿವಾಜಿನಗರ, ಯಶವಂತಪುರ ಸೇರಿದಂತೆ ಬೆಂಗಳೂರಿನ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆ ಇದೆ. ಇದಕ್ಕಾಗಿ ಎಲ್ಲಾ ಭದ್ರತಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದೂ ಸಚಿವರು ತಿಳಿಸಿದರು.