Mysuru Dasara 2026: ಬರದ ನಡುವೆ ಶಿಸ್ತುಬದ್ಧ ದಸರಾ ಆಚರಣೆಗೆ ತೀರ್ಮಾನ: ಸಿಎಂ
ಮೈಸೂರು ದಸರಾ ಜಂಬೂ ಸವಾರಿಗೆ ಹೊಸ ರೂಪ ನೀಡಲಾಗುತ್ತಿದೆ. ಯುವ ದಸರಾಗೂ 2 ಲಕ್ಷ ಜನ ಸೇರುವ ನಿರೀಕ್ಷೆ ಇದೆ. 11 ದಿನಗಳ ಕಾರ್ಯಕ್ರಮಕ್ಕೆ 22 ಸಚಿವರ ನೇಮಕ ಮಾಡಲಾಗಿದೆ. ಒಂದು ದಿನಕ್ಕೆ ಇಬ್ಬರು ಸಚಿವರು ಉಸ್ತುವಾರಿ ವಹಿಸುತ್ತಾರೆ. ಎಲ್ಲರ ಸಲಹೆ ಪಡೆದು ಯಶಸ್ವಿಯಾಗಿ ದಸರಾ ಮಹೋತ್ಸವ ನಡೆಸಲು ತೀರ್ಮಾನ ಮಾಡಿದ್ದೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
-
ಮೈಸೂರು: ರಾಜ್ಯದಲ್ಲಿ ಬರ ಇದ್ದರೂ ನಮ್ಮ ಸಂಸ್ಕೃತಿ, ಪರಂಪರೆ ಪ್ರಕಾರ ಶಿಸ್ತುಬದ್ಧ ಮೈಸೂರು ದಸರಾ (Mysuru Dasara 2026) ಆಚರಣೆಗೆ ತೀರ್ಮಾನ ಮಾಡಲಾಗಿದೆ. ದಸರಾ ನಮ್ಮ ನಾಡಹಬ್ಬವಾಗಿದ್ದು, ಉದ್ಘಾಟನೆಗೆ ಜಾತಿ ಧರ್ಮಗಳ ಭೇದವಿಲ್ಲದೆ ಸರ್ವ ಧರ್ಮಗಳ ಗುರುಗಳು ಬರಲಿದ್ದಾರೆ, ಸರ್ವ ಧರ್ಮಗಳ ಜನರ ಉಪಸ್ಥಿತಿ ಇರಲಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ (DK Shivakumar) ತಿಳಿಸಿದರು.
ದಸರಾ ಹಬ್ಬ - 2026ರ ಪೂರ್ವಭಾವಿಯಾಗಿ ಮೈಸೂರಿನ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸಭೆ ಬಳಿಕ ಸಿಎಂ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದಸರಾ ಸಿದ್ಧತೆ ಕುರಿತು ಇಂದು ಸಭೆ ಮಾಡಿದ್ದೇವೆ. ಯಾರಿಗೆ ಏನು ಜವಾಬ್ದಾರಿ ನೀಡಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದಿದ್ದೇನೆ. ಅಕ್ಟೊಬರ್ 11ರಂದು ದಸರಾ ಉದ್ಘಾಟನೆ ಮಾಡಲು ಗವಿಸಿದ್ದೇಶ್ವರ ಸ್ವಾಮಿಗಳಿಗೆ ಆಹ್ವಾನ ನೀಡಿದ್ದೇವೆ. ಅವರು ಕೂಡ ಒಪ್ಪಿದ್ದಾರೆ. ಸುತ್ತೂರು ಮಠದಲ್ಲಿ ಸ್ವಾಮೀಜಿಗಳ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ದಸರಾ ಮೆರವಣಿಗೆಯಲ್ಲಿ ಸೇನಾ ಪರೇಡ್ ವ್ಯವಸ್ಥೆ ಮಾಡಲು ರಕ್ಷಣಾ ಸಚಿವಾಲಯಕ್ಕೆ ಮನವಿ ಮಾಡಿದ್ದೇನೆ. ಏರ್ ಶೋ ಬಗ್ಗೆಯು ಚರ್ಚಿಸಲಾಗಿದೆ. ಬೈಲುಕುಪ್ಪೆಯ ಟಿಬೇಟಿಯನ್ನರ ಪರಂಪರೆ ಕುರಿತ ಟ್ಯಾಬ್ಲೋ, ಮಂಗಳೂರು ಜಿಲ್ಲೆಯ ಟ್ಯಾಬ್ಲೋ ಹಾಗೂ ಅಕ್ಕಪಕ್ಕದ ರಾಜ್ಯದ ಟ್ಯಾಬ್ಲೋ ಮಾಡಲೂ ತಿಳಿಸಿದ್ದೇವೆ. ಸಿನಿರಂಗದ ಕುರಿತಾದ ಟ್ಯಾಬ್ಲೋ ಕೂಡ ಜಂಬೂಸವಾರಿಯಲ್ಲಿ ಇರಲಿದೆ ಎಂದು ಸಿಎಂ ಹೇಳಿದರು.
ಯಾವುದೇ ಫ್ಲೆಕ್ಸ್ ಇರಬಾರದು, ಹೋಟೆಲ್‌ನವರು ಪ್ರವಾಸಿಗರನ್ನು ಸುಲಿಗೆ ಮಾಡಬಾರದು
ದಸರಾ ಸಂದರ್ಭದಲ್ಲಿ ಮೈಸೂರಲ್ಲಿ ಯಾವುದೇ ಫ್ಲೆಕ್ಸ್ ಇರಬಾರದು ಎಂಬ ಸೂಚನೆ ಕೊಟ್ಟಿದ್ದೇನೆ. ದೀಪಾಲಂಕಾರ 21 ದಿನ ಇರಲಿದ್ದು, ಯುವ ದಸರಾ, ಕಂಬಳ ನಡೆಯುವ ಜಾಗದಲ್ಲಿ ಆಹಾರ ಮೇಳ ಆಯೋಜನೆ ಮಾಡಲಾಗುತ್ತದೆ. ಸಾರ್ವಜನಿಕರಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಹೋಟೆಲ್‌ನವರು ಪ್ರವಾಸಿಗರನ್ನು ಸುಲಿಗೆ ಮಾಡಬಾರದು. ಬೇರೆ ಬೇರೆ ದೇಶದಿಂದಲೂ ಪ್ರತಿನಿಧಿಗಳು ಆಗಮಿಸುತ್ತಾರೆ ಎಂದು ತಿಳಿಸಿದರು.
ಜಂಬೂ ಸವಾರಿಗೆ ಹೊಸ ರೂಪ ನೀಡಲಾಗುತ್ತಿದೆ. ಯುವ ದಸರಾಗೂ 2 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಅಂಬಾರಿ ಹೊರುವ ರೇಸ್‌ನಲ್ಲಿ ಐದು ಆನೆಗಳಿವೆ. ಧನಂಜಯ, ಪ್ರಶಾಂತ, ಏಕಲವ್ಯ, ಮಹೇಂದ್ರ, ಸುಗ್ರೀವಾ ಆನೆಗಳಿವೆ. 11 ದಿನ ದಸರಾ ಕಾರ್ಯಕ್ರಮಕ್ಕೆ 22 ಸಚಿವರ ನೇಮಕ ಮಾಡಲಾಗಿದೆ. ಒಂದು ದಿನಕ್ಕೆ ಇಬ್ಬರು ಸಚಿವರು ಉಸ್ತುವಾರಿ ವಹಿಸುತ್ತಾರೆ. ಎಲ್ಲರ ಸಲಹೆ ಪಡೆದು ದಸರಾ ಯಶಸ್ವಿಗೆ ತೀರ್ಮಾನ ಮಾಡಿದ್ದೇವೆ.
Mysuru Dasara 2026: ದಸರಾಗೆ ಹೊಸತನದ ಸ್ಪರ್ಶ ನೀಡಲು ಏರ್ ಶೋ, ಹೊರರಾಜ್ಯಗಳ ಕಲಾ ತಂಡಗಳ ಪ್ರದರ್ಶನಕ್ಕೂ ಅವಕಾಶ: ಸಿಎಂ
ನಗರದ ಹಲವೆಡೆ ಲೈವ್ ಸ್ಟ್ರೀಮ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತ ವತಿಯಿಂದ ಗವಿ ಸಿದ್ದೇಶ್ವರ ಸ್ವಾಮಿಗಳಿಗೆ ನಾಳೆ ಅಧಿಕೃತ ಆಹ್ವಾನ ನೀಡುತ್ತೇವೆ. ಇತರೆ ರಾಜ್ಯದ ಸಿಎಂಗಳಿಗೂ ಆಹ್ವಾನ ನೀಡಿದ್ದೇವೆ. ಜಂಬೂ ಸವಾರಿ ವೀಕ್ಷಣೆಗೆ ಬರುವ ಜನರಿಗೆ ಸೀಟ್ ನಂಬರ್ ಹಾಕುತ್ತೇವೆ. ಪಾಸ್ ವಿಚಾರದಲ್ಲಿ ಗೊಂದಲ ಆಗದೆ ಇರುವ ರೀತಿ ನೋಡಿಕೊಳ್ಳುತ್ತೇವೆ. ಸ್ಪಾನ್ಸರ್ಸ್ ಬಗ್ಗೆಯೂ ತೀರ್ಮಾನ ಮಾಡಿದ್ದೇವೆ ಎಂದು ಸಿಎಂ ಮಾಹಿತಿ ನೀಡಿದರು.