ಪ್ರದೀಪ್ ಈಶ್ವರ್ ವಿರುದ್ಧ ಎಚ್‌ಡಿಕೆ ಬೆಂಬಲಿಗರ ಗದ್ದಲ, ಹೈಡ್ರಾಮಾ
ಸರಕಾರಿ ಕಾರ್ಯಕ್ರಮದಲ್ಲಿ ದೊಂಬಿ ಎಬ್ಬಿಸಿದ್ದಕ್ಕೆ ಕೈ ಕಾರ‍್ಯಕರ್ತರ ಆಕ್ಷೇಪ
ಬೆಂಗಳೂರು: ಶಾಸಕ ಪ್ರದೀಪ್ ಈಶ್ವರ್ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಡುವಿನ ಕಿತ್ತಾಟ ಇದೀಗ ಸಾರ್ವಜನಿಕ ಕಾರ್ಯಕ್ರಮಗಳಲ್ಲಿಯೂ ಮುಂದುವರಿದಿದ್ದು, ಚಿಕ್ಕಬಳ್ಳಾಪುರ ಜಿಡಳಿತ ಆಯೋಜಿಸಿದ್ದ ಕೆಂಪೇಗೌಡ ಜಯಂತಿಯಲ್ಲಿ ಜೆಡಿಎಸ್ ಕಾರ್ಯಕರ್ತರು ಗದ್ದಲ-ಗಲಾಟೆ ನಡೆಸುವ ಮೂಲಕ ಭಾರಿ ಹೈಡ್ರಾಮಾ ಸೃಷ್ಟಿಸಿದ್ದಾರೆ.
ಶನಿವಾರ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆಯೋಜಿಸಿದ್ದ ಕೆಂಪೇಗೌಡ ಜಯಂತಿಯಲ್ಲಿ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಭಾಗವಹಿಸಿದ್ದರು. ಆದರೆ ಕುಮಾರಸ್ವಾಮಿ ವಿರುದ್ಧ ಮಾತನಾಡಿರುವ ಪ್ರದೀಪ್ ಈಶ್ವರ್ ಕಾರ್ಯಕ್ರಮದಿಂದ ಹೊರನಡೆಯಬೇಕು ಎಂದು ಆಗ್ರಹಿಸಿ ಜೆಡಿಎಸ್ ಕಾರ್ಯ ಕರ್ತರು ವೇದಿಕೆ ಬಳಿಕ ಗಲಾಟೆ ನಡೆಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು.
ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು. ಈ ವೇಳೆ ಲಘು ಲಾಠಿ ಪ್ರಹಾರ ನಡೆಸಲಾಗಿದೆ ಎನ್ನಲಾಗಿದ್ದು, ಕೆಲವರನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು.
ಆದರೆ ಕಾರ್ಯಕ್ರಮದ ಬಳಿಕ ಶಾಸಕ ಪ್ರದೀಪ್ ಈಶ್ವರ್ ಅವರು ವಾಹನದಲ್ಲಿ ತೆರಳುತ್ತಿದ್ದ ವೇಳೆ ಕೆಲವರು ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಕಾರಿನತ್ತ ಚಪ್ಪಲಿ ಎಸೆದ ಘಟನೆ ನಡೆದಿದೆ. ಚಪ್ಪಲಿ ಎಸೆದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ ಕೆಲ ಆಕ್ರೋಶಿತರು ವಿರೋಧ ವ್ಯಕ್ತಪಡಿಸಿದ್ದು, ಮತ್ತೆ ತಳ್ಳಾಟ-ನೂಕಾಟ ನಡೆಯಿತು ಎಂದು ತಿಳಿದುಬಂದಿದೆ.
ಕಾರ್ಯಕರ್ತರ ನಡೆಗೆ ತೀವ್ರ ವಿರೋಧ: ಈ ನಡುವೆ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ನಡೆದುಕೊಂಡ ರೀತಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಕುಮಾರ ಸ್ವಾಮಿ, ಪ್ರದೀಪ್ ಈಶ್ವರ್ ನಡುವೆ ನಡೆದಿರುವ ವಾಕ್ಸಮರದ ಬಗ್ಗೆ ಅಕ್ಷೇಪವಿದ್ದರೆ ಅದನ್ನು ರಾಜಕೀಯ ವೇದಿಕೆಯಲ್ಲಿ ಚರ್ಚಿಸಬೇಕು, ವಿರೋಧಿಸಬೇಕು. ಆದರೆ ಜಿಲ್ಲಾಡಳಿತದಿಂದ ಆಯೋಜಿಸಿರುವ ಸರಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಇದರೊಂದಿಗೆ ಪ್ರದೀಪ್ ಈಶ್ವರ್ ಸ್ಥಳೀಯ ಶಾಸಕರಾಗಿರುವುದು ಅವರ ಅಧ್ಯಕ್ಷತೆಯಲ್ಲಿಯೇ ಸರಕಾರಿ ಕಾರ್ಯಕ್ರಮ ನಡೆಯಬೇಕು. ಇಲ್ಲದೇ ಹೋದರೆ, ಅದು ಶಿಷ್ಟಾಚಾರ ಉಲ್ಲಂಘನೆಯಾಗಲಿದೆ. ಆದ್ದರಿಂದ ಇಂತಹ ಕಾರ್ಯಕ್ರಮದಲ್ಲಿ ಪ್ರತಿಭಟನೆ ನಡೆಸಿದ್ದು ಸರಿಯಲ್ಲ ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯಪವಾಗಿದೆ.
ಇನ್ನು ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮುದಾಯದ ಮಠಾಧೀಶರು, ಸಮುದಾಯದ ನಾಯಕರು, ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲೆಯ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು. ಇಂತಹ ಕಾರ್ಯಕ್ರಮದ ಸಭಾಮರ್ಯಾದೆಯನ್ನು ಹಾಳುವ ಮಾಡುವ ಕಾರಣಕ್ಕೆ ಈ ರೀತಿಯ ಘೋಷಣೆ, ಪ್ರತಿಭಟನೆ ಮಾಡುವುದು ಉತ್ತಮ ಬೆಳವಣಿಗೆಯಲ್ಲ. ರಾಜಕೀಯವಾಗಿ ಇರುವ ಪರ-ವಿರೋಧದ ಚರ್ಚೆಗಳನ್ನು ಆದಕ್ಕಿರುವ ವೇದಿಕೆಯಲ್ಲಿಯೇ ಮಾಡಬೇಕು. ಅದನ್ನು ಬಿಟ್ಟು ಈ ರೀತಿ ಸಾರ್ವಜನಿಕ ವೇದಿಕೆಯಲ್ಲಿ ಮಾಡಿದರೆ ಮುಂದಿನ ದಿನದಲ್ಲಿ ಇದೊಂದು ಕೆಟ್ಟ ಪರಂಪರೆ ಶುರುವಾಗುವ ಆತಂಕವಿದೆ ಎನ್ನುವ ಮಾತುಗಳನ್ನು ಸಾರ್ವಜನಿಕರು ಹೇಳಿದ್ದಾರೆ.