Nandini Ghee Export: ಮೂರು ದೇಶಗಳಿಗೆ ನಂದಿನಿ ತುಪ್ಪ ರಫ್ತು; ಸಿಎಂ ಸಿದ್ದರಾಮಯ್ಯ ಚಾಲನೆ
CM Siddaramaiah: ನಂದಿನಿ ತುಪ್ಪದ ಬೇಡಿಕೆ ಹೆಚ್ಚಾಗುತ್ತಿದ್ದು, ವಿದೇಶಗಳಿಗೂ ಕರ್ನಾಟಕದ ನಂದಿನಿ ತುಪ್ಪ ರಫ್ತಾಗುತ್ತಿದೆ. ಇದೀಗ ಆಸ್ಟ್ರೇಲಿಯಾ, ಅಮೆರಿಕ ಹಾಗೂ ಸೌದಿ ಅರೇಬಿಯಾ ದೇಶಗಳಿಗೆ ತುಪ್ಪ ರಫ್ತು ಮಾಡಲು ಕೆಎಂಎಫ್ ಮುಂದಾಗಿದ್ದು, ಸಿಎಂ ಸಿದ್ದರಾಮಯ್ಯ ಶುಭಹಾರೈಸಿದ್ದಾರೆ.
ನಂದಿನಿ ತುಪ್ಪ ರಫ್ತು ವಾಹನಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ. -
ಬೆಂಗಳೂರು, ನ.25: ಆಸ್ಟ್ರೇಲಿಯಾ, ಅಮೆರಿಕ ಹಾಗೂ ಸೌದಿ ಅರೇಬಿಯಾ ದೇಶಗಳಿಗೆ ಕರ್ನಾಟಕದ ನಂದಿನಿ ತುಪ್ಪವನ್ನು ರಫ್ತು ಮಾಡಲಾಗುತ್ತಿದೆ. ತುಪ್ಪದ ಬೇಡಿಕೆ ಹೆಚ್ಚಾಗುತ್ತಿದ್ದು, ದೇಶ ವಿದೇಶಗಳಲ್ಲಿಯೂ ಕರ್ನಾಟಕದ ನಂದಿನಿ ತುಪ್ಪಕ್ಕೆ (Nandini Ghee Export) ಬೇಡಿಕೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಕಾವೇರಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂಲತಃ ಮೈಸೂರು ಜಿಲ್ಲೆಯವರಾದ ಕುಮಾರ ಎಂಬುವರು ಅಮೆರಿಕದಲ್ಲಿ ನೆಲೆಸಿದ್ದು, ಇದರ ಏಜೆನ್ಸಿ ಪಡೆದಿದ್ದಾರೆ. ಕೆಎಂಎಫ್ ಹಾಗೂ ಕುಮಾರ ಅವರಿಗೆ ಶುಭವಾಗಲಿ ಎಂದು ಹಾರೈಸಿದರು.
ಹೈಕಮಾಂಡ್ ತೀರ್ಮಾನದಿಂದ ಎಲ್ಲಾ ಗೊಂದಲಗಳಿಗೆ ಮುಕ್ತಿ
ಶಾಸಕರ ಮತ್ತೊಂದು ತಂಡ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿರುವ ಬಗ್ಗೆ ಮಾತನಾಡಿದ ಸಿಎಂ, ಶಾಸಕರಿಗೆ ಅವರ ಅಭಿಪ್ರಾಯ ತಿಳಿಸುವ ಸ್ವಾತಂತ್ರ್ಯ ಇದೆ. ಪಕ್ಷರ ವರಿಷ್ಠರು ಏನು ಹೇಳುತ್ತಾರೆ ಎಂದು ನೋಡೋಣ. ಅಂತಿಮವಾಗಿ ಈ ಎಲ್ಲಾ ಗೊಂದಲಗಳಿಗೆ ಮುಕ್ತಾಯ ಹಾಡಲು ಹೈಕಮಾಂಡ್ ತೀರ್ಮಾನಿಸಬೇಕು ಎಂದರು.
ರಾಹುಲ್ ಗಾಂಧಿ ಭೇಟಿ ಸದ್ಯಕ್ಕಿಲ್ಲ
ಸಚಿವ ಸಂಪುಟ ವಿಸ್ತರಣೆಯನ್ನು ಪಕ್ಷದ ವರಿಷ್ಠರು ಸೂಚನೆ ನೀಡಿದಾಗ ಕೈಗೊಳ್ಳಲಾಗುವುದು. ರಾಹುಲ್ ಗಾಂಧಿಯವರನ್ನು ಭೇಟಿ ಮಾಡುವ ಇರಾದೆ ಸದ್ಯಕ್ಕಿಲ್ಲ ಎಂದು ತಿಳಿಸಿದರು.
ಹೈಕಮಾಂಡ್ ನಿರ್ಧಾರವನ್ನು ನಾನು, ಡಿ.ಕೆ.ಶಿವಕುಮಾರ್ ಒಪ್ಪಬೇಕು: ಸಿಎಂ
ನಂದಿನಿ ತುಪ್ಪದ ದರ ಪ್ರತಿ ಲೀಟರ್ಗೆ 90 ರೂಪಾಯಿ ಏರಿಕೆ
ರಾಜ್ಯದ ಜನತೆಗೆ ಕೆಎಂಎಫ್ ಇತ್ತೀಚೆಗೆ ದರ ಏರಿಕೆ ಶಾಕ್ ನೀಡಿತ್ತು. ಜಿಎಸ್‌ಟಿ ಕಡಿತದ ಬಳಿಕ ಗುಡ್ನ್ಯೂಸ್ ನೀಡಿದ್ದ ಕೆಎಂಎಫ್, ನಂದಿನಿ ತುಪ್ಪಕ್ಕೆ (Nandini Ghee Price) ಬೇಡಿಕೆ ಹೆಚ್ಚಾಗುತ್ತಿದ್ದಂತೆ ದಿಢೀರ್ ದರ ಏರಿಕೆ ಮಾಡಿತ್ತು. ನಂದಿನಿ ತುಪ್ಪದ ದರವನ್ನು ಪ್ರತಿ ಲೀಟರ್ಗೆ 90 ರೂ.ಗಳನ್ನು ಏರಿಕೆ ಮಾಡಲಾಗಿತ್ತು. ಒಂದು ಲೀಟರ್ ನಂದಿನಿ ತುಪ್ಪಕ್ಕೆ 700 ರೂಪಾಯಿ ನಿಗದಿ ಮಾಡಲಾಗಿದ್ದು, ಈ ಮೊದಲು 610 ರೂ.ಗೆ ಲೀಟರ್ ತುಪ್ಪ ಮಾರಾಟ ಮಾಡಲಾಗುತ್ತಿತ್ತು. ಜಿಎಸ್‌ಟಿ ಸುಧಾರಣೆ ಬಳಿಕ 40 ರೂಪಾಯಿ ಇಳಿಕೆ ಮಾಡಲಾಗಿತ್ತು. ಆದರೆ, ನ.5ರಿಂ ನಂದಿನಿ ತುಪ್ಪದ ದರದಲ್ಲಿ ಮತ್ತೆ ಏರಿಕೆ ಮಾಡಲಾಗಿತ್ತು.
ನಂದಿನಿ ತುಪ್ಪದ ಬೆಲೆ (ರೂ.ಗಳಲ್ಲಿ)
- 50 ಮಿ.ಲೀ – 47
- 100 ಮಿ.ಲೀ. – 75
- 200 ಮಿ.ಲೀ. – 155–165
- 500 ಮಿ.ಲೀ. – 350–360
- 1 ಲೀಟರ್ – 700–720
2017 ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಲಾಗಿತ್ತು. ಕೇಂದ್ರ ಸರ್ಕಾರವು ಸೆಪ್ಟೆಂಬರ್ನಲ್ಲಿ ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಶೇ.12ರಿಂದ 5ಕ್ಕೆ ಇಳಿಕೆ ಮಾಡಿತ್ತು. ಈ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಬೇಕು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿತ್ತು. ಆ ಬಳಿಕ ರಾಜ್ಯದಲ್ಲಿ ಹಾಲಿನ ಉತ್ಪನ್ನಗಳ ಬೆಲೆ ಇಳಿಕೆ ಮಾಡಲಾಗಿತ್ತು. ಆದರೆ, ಇತ್ತೀಚೆಗೆ ತುಪ್ಪದ ದರ ಮತ್ತೆ ಏರಿಕೆಯಾಗಿತ್ತು.