ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆರೋಗ್ಯ ಇಲಾಖೆ ಕಾರ್ಯನಿರ್ವಾಹಕ ನಿರ್ದೇಶಕ ವಿಪಿನ್‌ ಸಿಂಗ್ ಭೇಟಿಯಾದ ಸಿ.ಎಸ್‌. ಷಡಾಕ್ಷರಿ; ವಿವಿಧ ವಿಷಯಗಳ ಕುರಿತು ಚರ್ಚೆ

Government Employees: ಸಿ.ಜಿ.ಎಚ್.‌ಎಸ್.‌ ದರಗಳಿಗೆ ರಾಜ್ಯ ಸರ್ಕಾರದಿಂದ ಅನುಮೋದನೆ ಆದೇಶ ಪಡೆಯುವುದು, ಕೆಎಎಸ್‌ಎಸ್‌ ಯೋಜನೆಗೆ ಸಂಬಂಧಪಟ್ಟಂತೆ ಸಹಾಯವಾಣಿ ಕೇಂದ್ರಗಳು ಹಾಗೂ ಅವುಗಳ ದೂರವಾಣಿ ಸಂಖ್ಯೆ ಒದಗಿಸುವುದು ಸೇರಿ ವಿವಿಧ ವಿಷಯಗಳ ಬಗ್ಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಅವರು, ಆರೋಗ್ಯ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕರ ಜತೆ ಚರ್ಚಿಸಿದ್ದಾರೆ.

ಬೆಂಗಳೂರು, ಅ.08: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕ ವಿಪಿನ್‌ ಸಿಂಗ್ ಅವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.‌ ಷಡಾಕ್ಷರಿ (CS Shadakshari) ಅವರು ಬುಧವಾರ ಭೇಟಿಯಾಗಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು.

ಭಾರತ ಸರ್ಕಾರ ಹೆಚ್ಚಳ ಮಾಡಿರುವ ಸಿ.ಜಿ.ಎಚ್.‌ಎಸ್.‌ ದರಗಳಿಗೆ ರಾಜ್ಯ ಸರ್ಕಾರದಿಂದ ಅನುಮೋದನೆ ಆದೇಶ ಪಡೆಯುವುದು, ನೋಂದಾಯಿಸಿಕೊಳ್ಳದೆ ಇರುವ ಪ್ರತಿಷ್ಠಿತ ಖಾಸಗಿ ಮಲ್ಟಿ ಸ್ಪೆಷಾಲಿಟಿ ಮತ್ತು ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಕೆಎಎಸ್‌ಎಸ್‌ ಯೋಜನೆಯಡಿಯಲ್ಲಿ ನೋಂದಾಯಿಸುವುದು ಹಾಗೂ ಈಗಾಗಲೇ ನೋಂದಣಿ ಮಾಡಿಕೊಂಡಿರುವ ಆಸ್ಪತ್ರೆಗಳ ದೂರವಾಣಿ ಸಂಖ್ಯೆ, ಆಸ್ಪತ್ರೆಗಳು ನೀಡುವ ಚಿಕಿತ್ಸಾ ಸೇವೆಗಳ ಮಾಹಿತಿಯನ್ನು ಪ್ರಕಟಿಸಲು ಷಡಾಕ್ಷರಿ ಮನವಿ ಮಾಡಿದರು.

ಹಾಗೆಯೇ ರಾಜ್ಯದಾದ್ಯಂತ (ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ) ಕೆಎಎಸ್‌ಎಸ್‌ ಯೋಜನೆಗೆ ಸಂಬಂಧಪಟ್ಟಂತೆ ಸಂಪರ್ಕಿಸಬೇಕಾದ ಸಹಾಯವಾಣಿ ಕೇಂದ್ರಗಳು ಹಾಗೂ ಅವುಗಳ ದೂರವಾಣಿ ಸಂಖ್ಯೆಗಳನ್ನು ಒದಗಿಸುವುದು, ಜಿಲ್ಲಾ ಮಟ್ಟದಲ್ಲಿ ಸಮನ್ವಯಾಧಿಕಾರಿಗಳನ್ನು ನೇಮಕ ಮಾಡಿ ಅವರ ವಿಳಾಸ ಹಾಗೂ ದೂರವಾಣಿ ಸಂಪರ್ಕ ಸಂಖ್ಯೆ ನೀಡಲು ಕೋರಿದ್ದಾರೆ.

ಈ ಸಂದರ್ಭದಲ್ಲಿ ನೌಕರರ ಸಂಘದ ಗೌರವಾಧ್ಯಕ್ಷ ಬಸವರಾಜು, ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಳ್ಳಾರಿ ಸೇರಿದಂತೆ ಉಪಾಧ್ಯಕ್ಷರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನೂ ಓದಿ | Dasara Holidays: ಜಾತಿ ಸಮೀಕ್ಷೆ ಹಿನ್ನೆಲೆ ಶಾಲೆಗಳ ದಸರಾ ರಜೆ 10 ದಿನ ವಿಸ್ತರಿಸಿದ ಸರ್ಕಾರ

ಗಣತಿದಾರರ ಸಮಸ್ಯೆ ಪರಿಹರಿಸಲು ಸರ್ಕಾರಿ ನೌಕರರ ಸಂಘ ಮನವಿ

Govt Employees (7)

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-2025ರ (Caste Census) ಗಣತಿ ಕಾರ್ಯ ಬೆಂಗಳೂರು ನಗರ ಜಿಲ್ಲೆಯಲ್ಲಿ ಅ.4ರಿಂದ ಆರಂಭವಾಗಿದ್ದು, ಗಣತಿ ಕಾರ್ಯದ ಪೂರ್ವ ತಯಾರಿ ಹಾಗೂ ಸೂಕ್ತ ತರಬೇತಿ ನೀಡದ ಕಾರಣ ಗಣತಿ ಕಾರ್ಯದಲ್ಲಿ ಅನೇಕ ಸಮಸ್ಯೆಗಳನ್ನು ಅಧಿಕಾರಿ/ನೌಕರರು ಎದುರಿಸುತ್ತಿದ್ದಾರೆ. ಹೀಗಾಗಿ ನ್ಯೂನತೆಗಳನ್ನು ಗಂಭೀರವಾಗಿ ಪರಿಗಣಿಸಿ ಗಣತಿ ಕಾರ್ಯದ ಯಶಸ್ವಿಗೆ ಸಹಕರಿಸಬೇಕು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (Karnataka State Govt. Employees Association) ಮನವಿ ಮಾಡಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ/ ಪಾಲಿಕೆಗಳ ಅಧಿಕಾರಿ/ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತ್‌ ರಾಜ್‌, ಕರ್ನಾಟಕ ಸರ್ಕಾರ ಸಚಿವಾಲಯದ ಅಧಿಕಾರಿ/ ನೌಕರರ ಸಂಘದ ಅಧ್ಯಕ್ಷ ರಮೇಶ್‌ ಸಂಗಾ ನೇತೃತ್ವದಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.

ಸಂಘದ ಬೇಡಿಕೆಗಳೇನು?

  1. ಕೆಲವು ಗಣತಿದಾರರಿಗೆ 250ಕ್ಕೂ ಹೆಚ್ಚು ಮನೆಗಳ ಗಣತಿ ಕಾರ್ಯ ನಿರ್ವಹಿಸಲು ಕಾರ್ಯ ಹಂಚಿಕೆ ಮಾಡಲಾಗಿದ್ದು, ಇದರ ಬದಲಾಗಿ ಪ್ರತಿ ಗಣತಿದಾರನಿಗೆ 150 ಮನೆಗಳನ್ನು ಮಾತ್ರ ಸೀಮಿತಗೊಳಿಸುವುದು.
  2. ಕುಟುಂಬದ ಒಟ್ಟು ಸದಸ್ಯರ ಪೈಕಿ ಕುಟುಂಬದ ಮುಖ್ಯಸ್ಥರು ಅಥವಾ ಲಭ್ಯವಿರುವ ಯಾರಾದರೂ ಒಬ್ಬ ಸದಸ್ಯರ ಆಧಾ‌ರ್ ಕೆವೈಸಿಯಿಂದ ಮಾತ್ರ ಓಟಿಪಿಯನ್ನು ಪಡೆಯುವಂತೆ ಸೂಚಿಸುವುದು.
  3. ವಾಸ್ತವ್ಯ ಸ್ಥಳದಿಂದ ಅಥವಾ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಿಂದ 40-50 ಕಿ.ಮೀ. ದೂರದಲ್ಲಿ ಗಣತಿ ಕಾರ್ಯನಿರ್ವಹಿಸುತ್ತಿರುವ ಗಣತಿದಾರರನ್ನು ಕನಿಷ್ಠ 10 ಕಿ.ಮೀ. ವ್ಯಾಪ್ತಿಯಲ್ಲಿಯೇ ಗಣತಿ ಕಾರ್ಯಕ್ಕೆ ನಿಯೋಜಿಸುವುದು.
  4. ಮುಖ್ಯಮಂತ್ರಿಗಳು ಸುದ್ದಿಗೋಷ್ಠಿಯಲ್ಲಿ ಒಬ್ಬ ಗಣತಿದಾರ ದಿನಕ್ಕೆ 10-15 ಕುಟುಂಬಗಳ ಸಮೀಕ್ಷೆ ಮಾಡಲು ತಿಳಿಸಿರುತ್ತಾರೆ. ಆದರೆ, ಬಿಬಿಎಂಪಿ. ನೋಡಲ್ ಅಧಿಕಾರಿಗಳು ಗಣತಿದಾರರಿಗೆ ದಿನಕ್ಕೆ 20ಕ್ಕೂ ಹೆಚ್ಚು ಕುಟುಂಬಗಳ ಸಮೀಕ್ಷೆ ನಡೆಸಲು ಎಸ್.ಎಂ.ಎಸ್. ಮುಖಾಂತರ ನೌಕರರ ಮೇಲೆ ಒತ್ತಡ ತರುತ್ತಿದ್ದಾರೆ. ಇದನ್ನು ಕೈಬಿಟ್ಟು, ಮುಖ್ಯಮಂತ್ರಿಗಳು ತಿಳಿಸಿರುವಂತೆ ಗಣತಿ ಕಾರ್ಯ ನಿರ್ವಹಿಸಲು ನಿರ್ದೇಶನ ನೀಡುವುದು.
  5. ಅನಾರೋಗ್ಯದ ಸಂಬಂಧ ವೈದ್ಯಕೀಯ ಪ್ರಮಾಣ ಪತ್ರ ಅಥವಾ ವೈದ್ಯರ ಶಿಫಾರಸ್ಸು ಪತ್ರಗಳನ್ನು ಪರಿಗಣಿಸಿ ಅಂತಹ ಅಧಿಕಾರಿ/ನೌಕರರಿಗೆ ಗಣತಿ ಕಾರ್ಯದಿಂದ ವಿನಾಯಿತಿ ನೀಡುವುದು.
  6. ತಂದೆ-ತಾಯಿ, ಪತಿ-ಪತ್ನಿ ಹಾಗೂ ಮಕ್ಕಳ ಅನಾರೋಗ್ಯ, ಆರೈಕೆಯ ನೋಡಿಕೊಳ್ಳುತ್ತಿರುವ single Parents ಅಧಿಕಾರಿ/ನೌಕರರಿಗೆ ಗಣತಿ ಕಾರ್ಯದಿಂದ ಬಿಡುಗಡೆಗೊಳಿಸುವುದು.
  7. ಗಣತಿ ಕಾರ್ಯಕ್ಕೆ ಮಾಹಿತಿ ನೀಡಲು ನಿರಾಕರಿಸುವ ಹಾಗೂ ಲಭ್ಯವಿಲ್ಲದ ಕುಟುಂಬ/ಮನೆಗಳಿಗೆ ಗಣತಿದಾರರು ಒಂದು ಬಾರಿ ಮಾತ್ರ ಪುನರ್ ಸಮೀಕ್ಷೆಗೆ ಅವಕಾಶ ಕಲ್ಪಿಸುವುದು ಹಾಗೂ ನಿರಾಕರಿಸುವ/ಲಭ್ಯವಿಲ್ಲದ ಕುಟುಂಬಗಳ ಗಣತಿ ಕಾರ್ಯದ ಗೌರವಧನವನ್ನು ಗಣತಿದಾರರಿಗೆ ನೀಡುವುದು.
  8. ಮಾಹಿತಿ ನೀಡಲು ನಿರಾಕರಿಸಿರುವ ಕುಟುಂಬಗಳ ಸಂಖ್ಯೆಯನ್ನು ಗಣತಿದಾರರ ಒಟ್ಟು ಕುಟುಂಬಗಳ ನಿಗದಿಪಡಿಸಿರುವ ಸಂಖ್ಯೆಯನ್ನು ಸಹ ಸಮೀಕ್ಷೆ ಪೂರ್ಣಗೊಂಡಿರುವ ಸಂಖ್ಯೆಗೆ Appನಲ್ಲಿಯೇ ಸೇರ್ಪಡೆಗೊಳಿಸುವುದು.
  9. ಗಣತಿ ಕಾರ್ಯಕ್ಕೆ ಕುಟುಂಬದ ಮುಖ್ಯಸ್ಥರು ಅಥವಾ ಸದಸ್ಯರು ನೀಡಬಹುದಾದ ದಾಖಲೆಗಳು ಹಾಗೂ ಮಾಹಿತಿಗಳ ಬಗ್ಗೆ ಮತ್ತು ಗಣತಿದಾರರೊಂದಿಗೆ ಸಹಕರಿಸುವಂತೆ ಸಾರ್ವಜನಿಕರಿಗೆ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುವುದು.
  10. ಬಹುಸಂಖ್ಯೆಯ ಕುಟುಂಬಗಳಿರುವ ವಸತಿ ಸಮುಚ್ಚಯಗಳಲ್ಲಿ (ಅಪಾರ್ಟ್‌ಮೆಂಟ್ಸ್) ಮಾಹಿತಿ ಪಡೆಯಲು ಕಷ್ಟವಾಗುತ್ತಿರುವುದರಿಂದ, ಅಂತಹ ವಸತಿ ಸಮುಚ್ಚಯಗಳಲ್ಲಿನ ಕುಟುಂಬಗಳಿಗೆ ಮಾಹಿತಿ ನೀಡಲು ಸ್ಥಳೀಯ ಪ್ರಾಧಿಕಾರಗಳಿಗೆ ಅವಶ್ಯ ನಿರ್ದೇಶನ ನೀಡುವುದು.
  11. ಹೊರರಾಜ್ಯ/ಹೊರ ದೇಶಗಳಿಂದ ರಾಜ್ಯದಲ್ಲಿ ವಾಸ್ತವ್ಯವಿರುವ ಕುಟುಂಬಗಳನ್ನು ಗಣತಿಗೆ ಪರಿಗಣಿಸಬೇಕೆ ಎಂಬ ಬಗ್ಗೆ ತರಬೇತಿ ಸಮಯದಲ್ಲಿ ಮಾಹಿತಿ ನೀಡಿರುವುದಿಲ್ಲ. ಆದ್ದರಿಂದ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡುವುದು.
  12. ಬಹುಮಹಡಿ ಕಟ್ಟಡಗಳು, ಸೂಕ್ಷ್ಮ ಪ್ರದೇಶಗಳಲ್ಲಿ ಗಣತಿ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ಒದಗಿಸುವುದು.
  13. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಇಲಾಖೆಗಳ ಅಧಿಕಾರಿ/ನೌಕರರರ ಸೆಪ್ಟೆಂಬರ್ ಮಾಹೆಯ ವೇತನ ಇದುವರೆಗೂ ಪಾವತಿಯಾಗಿರುವುದಿಲ್ಲ. ಆದ್ದರಿಂದ ವೇತನ ಪಾವತಿಗೆ ಖಜಾನೆ ಇಲಾಖೆಯ ಅಧಿಕಾರಿ/ನೌಕರರಿಗೆ ಗಣತಿ ಕಾರ್ಯದಿಂದ ವಿನಾಯಿತಿ ನೀಡುವುದು.
  14. ಸಾರ್ವತ್ರಿಕ ರಜಾ ದಿನಗಳಂದು ಗಣತಿ ಕಾರ್ಯ ನಿರ್ವಹಿಸುವುದನ್ನು ಕಡ್ಡಾಯಗೊಳಿಸಬಾರದು.
  15. ಮಲ್ಲೇಶ್ವರಂ ಜಿ.ಬಿ.ಎ. ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉನ್ನತ ಅಧಿಕಾರಿಗಳು ಗಣತಿದಾರರಿಗೆ ಸಹಕರಿಸುವಂತೆ ನಿರ್ದೇಶನ ನೀಡುವುದು.
  16. ಗಣತಿ ಕಾರ್ಯದ ಉಸ್ತುವಾರಿ ನೋಡಿಕೊಳ್ಳುವ ಸಿಬ್ಬಂದಿಗಳು ಎಸ್.ಎಂ.ಎಸ್/ವಾಯ್ಸ್ ಕಾಲ್ ಮುಖಾಂತರ ಗಣತಿದಾರರಿಗೆ ನಿಗದಿತ ಗುರಿ ಸಾಧಿಸದಿದ್ದಲ್ಲಿ; ಕ್ರಿಮಿನಲ್ ಪ್ರಕರಣ ದಾಖಲಿಸುವ, ಅಮಾನತ್ತುಗೊಳಿಸುವ ಅಥವಾ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಒತ್ತಡ ಹೇರುತ್ತಿರುವ ಪ್ರಸ್ತಾವನೆಯನ್ನು ಕೈಬಿಟ್ಟು ಗಣತಿದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವುದು.
  17. ಗಣತಿದಾರರು ಗಣತಿಗಾಗಿ ಬಳಸುತ್ತಿರುವ ಮೊಬೈಲ್ Appನಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವುದು.

ಈ ಸುದ್ದಿಯನ್ನೂ ಓದಿ | Caste Census: ಮುಗಿಯದ ಜಾತಿ ಗಣತಿ, ಶಿಕ್ಷಕರಿಗೆ ಬಿತ್ತು ಡಬಲ್‌ ಡ್ಯೂಟಿ