ಬೆಂಗಳೂರು: ದೇಶದ ಭದ್ರತೆ ಮತ್ತು ನಗರದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಇಲಾಖೆ ಮಹತ್ವದ ಕಾರ್ಯಾಚರಣೆಯೊಂದನ್ನು ಕೈಗೊಂಡಿದೆ. ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿ ಪ್ರಜೆಗಳನ್ನು ಪತ್ತೆ ಹಚ್ಚಿ, ಅವರನ್ನು ಅವರ ತಾಯ್ನಾಡಿಗೆ ಗಡೀಪಾರು ಮಾಡುವ ಆಪರೇ ಷನ್ ಮುಕ್ತ ಅಭಿಯಾನ ವನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಇದರ ಭಾಗವಾಗಿ ಎಲೆಕ್ಟ್ರಾನಿಕ್ ಸಿಟಿ ವಿಭಾಗದ 10 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪತ್ತೆಯಾದ 31 ಅಕ್ರಮ ವಲಸಿಗರನ್ನು ಪ.ಬಂಗಾಳದ ಗಡಿಗೆ ರವಾನಿಸಲಾಗಿದೆ.
ಬೆಂಗಳೂರು ನಗರದಾದ್ಯಂತ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚುವ ಉದ್ದೇಶದಿಂದ ಆ. 9ರಂದು ಪೊಲೀಸರು ಆಪರೇಷನ್ ಮುಕ್ತ ಎಂಬ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದರು. ಈ ಕಾರ್ಯಾಚರಣೆಯು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗದೆ, ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿಯಂತಹ ಜನನಿಬಿಡ ಪ್ರದೇಶಗಳಲ್ಲೂ ತೀವ್ರವಾಗಿ ನಡೆಯಿತು. ಈ ಅವಧಿಯಲ್ಲಿ ಸುಮಾರು 2944ಕ್ಕೂ ಹೆಚ್ಚು ಶಂಕಿತರ ದಾಖಲೆಗಳನ್ನು ಪೊಲೀಸರು ಸೂಕ್ಷ್ಮವಾಗಿ ಪರಿಶೀಲಿಸಿದರು. ಈ ತಪಾಸಣೆಯ ಫಲವಾಗಿ ಒಟ್ಟು 105 ಅಕ್ರಮ ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ಗುರುತಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: Indian Migrants: ಪಂಜಾಬ್ ಏರ್‌ಪೋರ್ಟ್‌ಗೆ ಬಂದಿಳಿದ ಅಮೆರಿಕದಿಂದ ಗಡಿಪಾರಾದ 205 ಭಾರತೀಯರು
ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಿಶೇಷ ತಪಾಸಣೆ: ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ. ನಾರಾಯಣ್ ಅವರ ನೇತೃತ್ವದಲ್ಲಿ 23ಕ್ಕೂ ಹೆಚ್ಚು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಒಟ್ಟು 1909 ವ್ಯಕ್ತಿಗಳನ್ನು ಗುರುತಿಸಿ ವಿಚಾರಣೆಗೆ ಒಳಪಡಿಸಿದ್ದವು. ತಪಾಸಣೆಯ ನಂತರ ಇವರಲ್ಲಿ 43 ಮಂದಿ ಬಾಂಗ್ಲಾದೇಶಿ ಪ್ರಜೆಗಳು ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಅಕ್ರಮವಾಗಿ ವಾಸಿಸುತ್ತಿರುವುದು ದೃಢಪಟ್ಟಿತು. ಈ ಬಗ್ಗೆ ಸಂಪೂರ್ಣ ವರದಿಯನ್ನು ಸಿದ್ಧಪಡಿಸಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ ಸಲ್ಲಿಸಲಾಯಿತು.
ಎಫ್ಆರ್‌ಆರ್‌ಒ ನೀಡಿದ ಆದೇಶ ಮತ್ತು ಮಾಹಿತಿ ಆಧರಿಸಿ, ಸದ್ಯ 31 ಜನರನ್ನು ಗಡಿಪಾರು ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ ಕಳೆದ ಹಲವು ವರ್ಷಗಳಿಂದ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ಪತ್ತೆ ಕಾರ್ಯ ಸತತವಾಗಿ ನಡೆಯುತ್ತಿದೆ. ಕಳೆದ ಒಂದು ತಿಂಗಳಿಂದ ಈ ಕಾರ್ಯಾಚರಣೆ ತೀವ್ರಗೊಂಡಿದ್ದು, ಮುಂದಿನ 10 ರಿಂದ 15 ದಿನಗಳ ಕಾಲವೂ ಈ ಪ್ರಕ್ರಿಯೆ ಮುಂದುವರಿಸಲು ನಿರ್ಧರಿಸಲಾಗಿದೆ. ಉಳಿದ ಬಾಂಗ್ಲಾದೇಶಿ ಪ್ರಜೆಗಳನ್ನು ಕೂಡ ಹಂತ ಹಂತವಾಗಿ ಅವರ ತಾಯ್ನಾಡಿಗೆ ಕಳುಹಿಸಿಕೊಡುವ ಕೆಲಸವನ್ನು ಇಲಾಖೆ ಮಾಡಲಿದೆ
ಬಿಎಸ್‌ಎಫ್ ಅಧಿಕಾರಿಗಳಿಗೆ ಹಸ್ತಾಂತರ
ಬೆಂಗಳೂರಿನಿಂದ ಪಶ್ಚಿಮ ಬಂಗಾಳದ ಮಾಲ್ಡಾ ನಿಲ್ದಾಣದವರೆಗೆ ಈ 31 ಮಂದಿಯನ್ನು ಕರೆ ದೊಯ್ಯಲು ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ರೈಲು ನಿಲ್ದಾಣದಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಪೊಲೀಸ್ ತಂಡವು ರೈಲಿನಲ್ಲಿ ವಿಶೇಷ ಬೋಗಿಯನ್ನು ಮೀಸಲಿರಿಸಿ, ಸುರಕ್ಷತೆಯ ದೃಷ್ಟಿಯಿಂದ 20 ಮಂದಿ ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು ಬೆಂಗಾವಲಾಗಿ ಕಳುಹಿಸಿದೆ. ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಈ ತಂಡ ಮಾಲ್ಡಾ ತಲುಪಲಿದ್ದು, ಅಲ್ಲಿನ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಬಿಎಸ್‌ಎಫ್ʼಗೆ ಹಸ್ತಾಂತರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ