ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Private Hospital Charges: ಖಾಸಗಿ ಆಸ್ಪತ್ರೆಗಳ ವಿಪರೀತ ಶುಲ್ಕ ವಸೂಲಿಗೆ ಬ್ರೇಕ್; ಚಿಕಿತ್ಸಾ ದರಪಟ್ಟಿ ಪ್ರದರ್ಶನಕ್ಕೆ ಸಚಿವ ಯು.ಟಿ.ಖಾದರ್‌ ಸೂಚನೆ

ಜನರ ಮೇಲಿನ ವೈದ್ಯಕೀಯ ವೆಚ್ಚದ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಗುರುವಾರ ಆರೋಗ್ಯ ಸೌಧದಲ್ಲಿ ಖಾಸಗಿ ಆಸ್ಪತ್ರೆಗಳ ಸಂಘದೊಂದಿಗೆ ಆರೋಗ್ಯ ಸಚಿವ ಯು.ಟಿ.ಖಾದರ್‌ ಅವರು ಮಹತ್ವದ ಸಭೆ ನಡೆಸಿದ್ದಾರೆ. ಜನಸಾಮಾನ್ಯರ ಹಿತವೇ ನಮ್ಮ ಮೊದಲ ಆದ್ಯತೆ. ಯಾವುದೇ ಕಾರಣಕ್ಕೂ ರೋಗಿಗಳ ಮೇಲೆ ವಿಪರೀತ ಶುಲ್ಕದ ಹೊರೆ ಬೀಳಬಾರದು ಎಂದು ಆಸ್ಪತ್ರೆಗಳಿಗೆ ಸಚಿವರು ಸೂಚಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿ ಪ್ರದರ್ಶನ ಕಡ್ಡಾಯ

-

Prabhakara R
Prabhakara R Oct 22, 2026 9:11 PM

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ವಿಪರೀತ ಶುಲ್ಕ ವಸೂಲಿಗೆ (Private Hospital Charges) ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಖಾಸಗಿ ಆಸ್ಪತ್ರೆಗಳ ಸಂಘದೊಂದಿಗೆ ಆರೋಗ್ಯ ಸಚಿವ ಯು.ಟಿ.ಖಾದರ್‌ ಅವರು ಸಭೆ ನಡೆಸಿದ್ದು, ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ಕಾಯಿದೆಯನ್ವಯ ತನ್ನ ಆವರಣದಲ್ಲಿ ಚಿಕಿತ್ಸಾ ದರಪಟ್ಟಿಯನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ.

ಖಾಸಗಿ ಆಸ್ಪತ್ರೆಗಳ ಸಂಘ ವಿರೋಧ

ಚಿಕಿತ್ಸಾ ದರಪಟ್ಟಿ ಪ್ರದರ್ಶನಕ್ಕೆ ಖಾಸಗಿ ಆಸ್ಪತ್ರೆಗಳ ಸಂಘ ವಿರೋಧ ವ್ಯಕ್ತಪಡಿಸಿದ್ದು, ಸದ್ಯಕ್ಕೆ ಆಗುವುದಿಲ್ಲ. ಕನಿಷ್ಠ ಆರು ತಿಂಗಳು ಸಮಯ ಬೇಕು ಎಂದಿವೆ. ಈ ಮನವಿಯನ್ನು ಖಾದರ್‌ ನೇರವಾಗಿ ನಿರಾಕರಿಸಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಎಷ್ಟು ಸಮಯಾವಕಾಶ ನೀಡಬೇಕೆಂದು ತೀರ್ಮಾನಿಸುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಬಾಕಿ ಬಿಲ್ ಪಾವತಿ ಆಗಿಲ್ಲ ಎಂದು ಮೃತದೇಹ ತಡೆಯಬಾರದು

ಸಭೆಯಲ್ಲಿ ಮಾತನಾಡಿದ ಸಚಿವರು, ಬಾಕಿ ಬಿಲ್ ಪಾವತಿ ಆಗಿಲ್ಲ ಎಂಬ ಕಾರಣಕ್ಕೆ ಯಾವುದೇ ಆಸ್ಪತ್ರೆ ಮೃತದೇಹವನ್ನು ತಡೆಹಿಡಿಯಬಾರದು. ಈ ಬಗ್ಗೆ ಸ್ಪಷ್ಟ ನೀತಿ ರೂಪಿಸಲಾಗುವುದು. ಕ್ಯಾನ್ಸರ್, ಹೃದಯ, ಕಿಡ್ನಿ ಸೇರಿದಂತೆ ದುಬಾರಿ ಜೀವರಕ್ಷಕ ಔಷಧಗಳ ದರ ಕಡಿಮೆ ಮಾಡುವ ಮತ್ತು ಅನಧಿಕೃತ ಎಂಆರ್‌ಪಿ ಹೆಚ್ಚಳಕ್ಕೆ ಕಡಿವಾಣ ಹಾಕುವ ಕುರಿತು ಚರ್ಚಿಸಲಾಯಿತು. ಮುಂದಿನ ದಿನಗಳಲ್ಲಿ ಔಷಧ ತಯಾರಕರು ಮತ್ತು ವಿತರಕರ ಜೊತೆಯೂ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಆರೋಗ್ಯ ವಿಮೆ ಹೊಂದಿರುವ ರೋಗಿಗಳಿಗೆ ಹೆಚ್ಚುವರಿ ಶುಲ್ಕ ವಿಧಿಸುವುದನ್ನು ತಡೆಯಲು ಮತ್ತು ಕ್ಲೇಮ್ ಪ್ರಕ್ರಿಯೆ ಸರಳಗೊಳಿಸಲು ವಿಮಾ ಕಂಪನಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು. ಅಗ್ನಿಶಾಮಕ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೆಪಿಎಂಇ ಕಾಯ್ದೆಗೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವಿ ಸ್ವೀಕರಿಸಿ ಚರ್ಚಿಸಲಾಯಿತು. ಇವುಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು.

ಖಾಸಗಿ ಆಸ್ಪತ್ರೆಗಳ ವಿಪರೀತ ಶುಲ್ಕ ವಸೂಲಿ ಬಗ್ಗೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ರೋಗಿಗಳಿಗೆ ತೊಂದರೆಯಾಗದಂತೆ ಮತ್ತು ಜನರಿಗೆ ಮೋಸವಾಗದಂತೆ ಪಾರದರ್ಶಕ ವ್ಯವಸ್ಥೆ ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ಯು.ಟಿ.ಖಾದರ್‌ ಹೇಳಿದ್ದಾರೆ.