ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Congress Protest: ಮತಗಳ್ಳತನ ವಿರುದ್ಧ ರಾಹುಲ್‌ ಗಾಂಧಿ ನೇತೃತ್ವದ ಪ್ರತಿಭಟನೆ ಆ.8ಕ್ಕೆ ಮುಂದೂಡಿಕೆ

Rahul Gandhi: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ಅವರ ನಿಧನಕ್ಕೆ ಮೂರು ದಿನಗಳ ಶೋಕಾಚರಣೆ ಹಿನ್ನೆಲೆಯಲ್ಲಿ ಮತಗಳ್ಳತನ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದ ಪ್ರತಿಭಟನಾ ಸಭೆಯನ್ನು ಆಗಸ್ಟ್ 8ಕ್ಕೆ ಮುಂದೂಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ರಾಹುಲ್‌ ಗಾಂಧಿ ನೇತೃತ್ವದ ಪ್ರತಿಭಟನೆ ಆ.8ಕ್ಕೆ ಮುಂದೂಡಿಕೆ

Profile Siddalinga Swamy Aug 4, 2025 3:54 PM

ಬೆಂಗಳೂರು: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ಅವರ ನಿಧನಕ್ಕೆ ಮೂರು ದಿನಗಳ ಶೋಕಾಚರಣೆ ಹಿನ್ನೆಲೆಯಲ್ಲಿ ಮತಗಳ್ಳತನ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದ ಪ್ರತಿಭಟನಾ ಸಭೆಯನ್ನು ಆಗಸ್ಟ್ 8ಕ್ಕೆ ಮುಂದೂಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಸ್ವಾತಂತ್ರ್ಯ ಉದ್ಯಾನದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಸೋಮವಾರ ಅವರು ಮಾತನಾಡಿದ್ದಾರೆ.

ಶಿಬು ಸೊರೇನ್ ಬುಡಕಟ್ಟು ಸಮುದಾಯದ ಹಿರಿಯ ನಾಯಕರು. ಕಾಂಗ್ರೆಸ್ ಪಕ್ಷದ ಬಹುಕಾಲದ ಮೈತ್ರಿ ನಾಯಕರು. ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಶಿಬು ಸೊರೇನ್ ಅವರಿಗೆ ಗೌರವ ಸಲ್ಲಿಸಬೇಕು. ಅವರ ಅಂತ್ಯಕ್ರಿಯೆ ಮಂಗಳವಾರ (ನಾಳೆ) ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆತುರದಲ್ಲಿ ಮಾಡುವುದು ಬೇಡ ಎಂಬ ಕಾರಣಕ್ಕೆ ಈ ತೀರ್ಮಾನಕ್ಕೆ ಬರಲಾಗಿದೆ. ಶೋಕಾಚರಣೆ ಆಚರಿಸುವ ದಿನ ದೇಶಕ್ಕೆ ಒಂದು ಸಂದೇಶ ನೀಡುವ ಕಾರ್ಯಕ್ರಮ ಬೇಡ ಎಂದು ನಿರ್ಧರಿಸಿದ್ದೇವೆ. ಈ ವಿಚಾರವಾಗಿ ನಮ್ಮ ನಾಯಕರ ಜತೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಮಂಗಳವಾರದ ಕಾರ್ಯಕ್ರಮಕ್ಕೆ ಮಾಡಿಕೊಂಡಿರುವ ಸಿದ್ಧತೆ ಹಾಗೇ ಮುಂದುವರಿಸಿಕೊಂಡು ಹೋಗಬೇಕು ಎಂದು ಪಕ್ಷದ ನಾಯಕರು, ಶಾಸಕರು, ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ. 8ರಂದು ಅದೇ ಸ್ಥಳದಲ್ಲಿ, ಅದೇ ಸಮಯಕ್ಕೆ ನಡೆಯಲಿದೆ. ನಮ್ಮ ಕಾರ್ಯಕರ್ತರು, ಮುಖಂಡರು ಹಾಗೂ ಮತದಾರರು ಈ ಹೋರಾಟದಲ್ಲಿ ಭಾಗವಹಿಸಲು ಬಹಳ ಉತ್ಸುಕರಾಗಿದ್ದಾರೆ. ಇಂದು ಸಂಜೆ ದೆಹಲಿಯಲ್ಲಿ ನಿಗದಿಯಾಗಿದ್ದ ರಾಹುಲ್ ಗಾಂಧಿ ಅವರ ಮಾಧ್ಯಮಗೋಷ್ಠಿಯನ್ನು ಕೂಡ ಮುಂದೂಡಲಾಗಿದ್ದು, ನಾಳೆ ಅಂತ್ಯಕ್ರಿಯೆ ನಂತರ ಇದರ ಬಗ್ಗೆ ಚರ್ಚಿಸಿ ಮಾಹಿತಿಯನ್ನು ಅವರು ತಿಳಿಸಲಿದ್ದಾರೆ ಎಂದು ತಿಳಿಸಿದರು.

ಶಿಬು ಸೊರೇನ್ ಅವರು ಕಷ್ಟ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ನಿಂತಿದ್ದಾರೆ. ನರಸಿಂಹ ರಾವ್ ಅವರ ಕಾಲ ಸೇರಿದಂತೆ ಎಲ್ಲಾ ಸಮಯದಲ್ಲೂ ಕಾಂಗ್ರೆಸ್ ಪಕ್ಷದ ಪರ ಬಂಡೆಯಂತೆ ನಿಂತಿದ್ದರು. ಪಕ್ಷದ ಸಿದ್ಧಾಂತದ ಜತೆ ನಿಂತು ನಮ್ಮ ಸರ್ಕಾರಕ್ಕೆ ಅವರು, ಅವರ ಸರ್ಕಾರಕ್ಕೆ ನಾವು ಬೆಂಬಲವಾಗಿ ನಿಂತಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದರು.

ಆಗಸ್ಟ್ 8ರಂದು ವರಮಹಾಲಕ್ಷ್ಮಿ ಹಬ್ಬವಿದ್ದರೂ ಪಕ್ಷದ ಕೆಲಸಕ್ಕೆ ಆದ್ಯತೆ ನೀಡುತ್ತಿದ್ದೇವೆ. ಹಬ್ಬದ ಪ್ರಯುಕ್ತ ಪೂಜೆ ಮಾಡಲು ಹಾಗೂ ಪ್ರಾರ್ಥನೆ ಮಾಡಲು ನಾವು ಯಾರಿಗೂ ಅಡ್ಡಿಪಡಿಸುವುದಿಲ್ಲ. ಪಕ್ಷದ ಹೋರಾಟಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮುಖಂಡರು, ಕಾರ್ಯಕರ್ತರಲ್ಲಿ ಮಾಧ್ಯಮಗಳ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ಮತ್ತೊಮ್ಮೆ ಶಾಸಕಾಂಗ ಪಕ್ಷದ ಸಭೆ ಕರೆಯಲು ನಮ್ಮ ನಾಯಕರು ಮಾರ್ಗದರ್ಶನ ನೀಡಿದ್ದು, ಸಿಎಂ ಜತೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಪ್ರತಿಭಟನೆಗೆ ಪ್ರತಿಯಾಗಿ ಬಿಜೆಪಿಯವರು ಚುನಾವಣಾ ಆಯೋಗದ ಪರವಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಕೇಳಿದಾಗ, ʼಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟಿಸುವವರು, ಟೀಕಿಸುವವರನ್ನು ಸ್ವಾಗತಿಸುತ್ತೇವೆ. ಅವರು ಏನು ಹೇಳಬೇಕೋ ಹೇಳಲಿ. ನೀವುಗಳು ಹೇಳಿದಂತೆ ಅವರು ಚುನಾವಣಾ ಆಯೋಗವನ್ನು ಸಮರ್ಥಿಸಿಕೊಂಡು ಪ್ರತಿಭಟಿಸುತ್ತಿದ್ದಾರೆ. ಚುನಾವಣಾ ಆಯೋಗ ಸರ್ಕಾರದ ಭಾಗವಾಗಿದೆ. ಹೀಗಾಗಿ ಇದನ್ನು ಮಾಡುತ್ತಿದ್ದಾರೆ. ಚುನಾವಣಾ ಆಯೋಗ ನಿಷ್ಪಕ್ಷಪಾತ ಹಾಗೂ ನ್ಯಾಯಪೀಠ ಸ್ಥಾನದಲ್ಲಿ ಇರಬೇಕು. ನ್ಯಾಯಪೀಠದಿಂದ ಅನ್ಯಾಯ ಆಗಬಾರದು. ಎಲ್ಲರಿಗೂ ನ್ಯಾಯ ಸಿಗಬೇಕು ಎಂಬುದು ನಮ್ಮ ಆಶಯ. ವಿಧಾನಸಭೆ ಚುನಾವಣೆ ಸಮಯದಲ್ಲೇ ಮಹದೇವಪುರ ಕ್ಷೇತ್ರದ ನಮ್ಮ ಅಭ್ಯರ್ಥಿ ಸೂಕ್ತ ದಾಖಲೆಯೊಂದಿಗೆ ದೂರು ನೀಡಿದ್ದರು. ಅವರ ದೂರಿಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಈ ವಿಚಾರವಾಗಿ ಅಧ್ಯಯನ ನಡೆಸಿದ ನಂತರ ಮತ್ತಷ್ಟು ಅಂಶಗಳು ಬೆಳಕಿಗೆ ಬಂದಿವೆ. ಈ ವಿಚಾರ ತಡವಾಗಿ ಬಹಿರಂಗವಾಗುತ್ತಿರಬಹುದು, ಹಾಗೆಂದು ನಾವು ಕಣ್ಣುಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ. ನಮ್ಮ ಅಧ್ಯಯನದ ಅಂಶಗಳನ್ನು ಸಾರ್ವಜನಿಕರ ಮುಂದೆ ಇಡುತ್ತೇವೆ. ನಂತರ ಯಾರು ಸರಿ, ಯಾರು ತಪ್ಪು ಎಂಬುದನ್ನು ಜನ ತೀರ್ಮಾನ ಮಾಡಲಿʼ ಎಂದು ತಿಳಿಸಿದರು.‌

ಈ ಸುದ್ದಿಯನ್ನೂ ಓದಿ | Internal Reservation: ನ್ಯಾ. ನಾಗಮೋಹನ್ ದಾಸ್ ನಿಯೋಗದಿಂದ ಸಿಎಂಗೆ ಒಳಮೀಸಲು ವರದಿ ಸಲ್ಲಿಕೆ

ಶಾಸಕಾಂಗ ಸಭೆ ಬಗ್ಗೆ ಕೇಳಿದಾಗ, ʼಈ ಕಾರ್ಯಕ್ರಮದ ಉದ್ದೇಶಕ್ಕೆ ಬೆಂಗಳೂರಿಗೆ ಆಗಮಿಸುತ್ತಿರುವ ಶಾಸಕರ ಜತೆ ಚರ್ಚೆ ಮಾಡಲು ನಮ್ಮ ನಾಯಕರು ಹೇಳಿದ್ದಾರೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಸ್ಪಷಪಡಿಸಿದರು.