ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raghavendra Swamy Aradhana: ಆ.8ರಿಂದ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವ

ಕಲಿಯುಗದ ಕಾಮಧೇನು ಕಲ್ಪವೃಕ್ಷ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೇ ವರ್ಷದ ಆರಾಧನಾ ಸಪ್ತರಾತ್ರೋತ್ಸವ ಕಾರ್ಯಕ್ರಮವು ಆ.8ರಿಂದ 14 ರವರೆಗೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಶ್ರೀ ಮಠದ ಸಂಪ್ರದಾಯದಂತೆ ಅನೇಕ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಕುರಿತ ಮಾಹಿತಿ ಇಲ್ಲಿದೆ.

ಆ.8ರಿಂದ ಮಂತ್ರಾಲಯದಲ್ಲಿ ಶ್ರೀ ರಾಯರ 354ನೇ ಆರಾಧನಾ ಮಹೋತ್ಸವ

Profile Siddalinga Swamy Aug 4, 2025 5:29 PM

ರಾಯಚೂರು: ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಡಾ. ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಘನ ಅಧ್ಯಕ್ಷತೆಯಲ್ಲಿ, ಕಲಿಯುಗದ ಕಾಮಧೇನು ಕಲ್ಪವೃಕ್ಷ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೇ ವರ್ಷದ ಆರಾಧನಾ ಸಪ್ತರಾತ್ರೋತ್ಸವ ಕಾರ್ಯಕ್ರಮವು (Raghavendra Swamy Aradhana) ಆ.8ರಿಂದ 14 ರವರೆಗೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.

ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೇ ವರ್ಷದ ಆರಾಧನಾ ಸಪ್ತರಾತ್ರೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀ ಮಠದ ಸಂಪ್ರದಾಯದಂತೆ ಅನೇಕ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿನಿತ್ಯ ಶ್ರೀರಾಯರಿಗೆ ವಿಶೇಷ ಪೂಜಾರಾಧನೆಗಳು, ಪ್ರಾಕಾರದಲ್ಲಿ ಉತ್ಸವಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯಲ್ಲಿ ದಾಸವಾಣಿ, ಸಂಗೀತ, ನೃತ್ಯ, ವಾದ್ಯಸಂಗೀತ, ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೇ ಶ್ರೀಮಠದ ಪ್ರಾಕಾರದ ವೇದಿಕೆಯಲ್ಲಿ ವಿದ್ವಾಂಸರಿಂದ ಶ್ರೀ ರಾಘವೇಂದ್ರಸ್ವಾಮಿಗಳ ಮಹಿಮೆ, ಅವರ ಗ್ರಂಥಗಳ ವೈಶಿಷ್ಟ್ಯ ಮುಂತಾದ ವಿಷಯಗಳ ಬಗ್ಗೆ ಪ್ರವಚನ ನಡೆಯಲಿವೆ. ಶ್ರೀರಾಯರ ಸಮಗ್ರ ಗ್ರಂಥಗಳ ಪಾರಾಯಣ, ವಿದ್ವಾಂಸರ ಪ್ರವಚನ, ಸಾಮೂಹಿಕ ಭಜನೆ, ಗ್ರಂಥಗಳ ಪ್ರಕಾಶನ ಮೊದಲಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಪ್ರತಿವರ್ಷದಂತೆ ಈ ವರ್ಷವೂ ತಿರುಮಲ ತಿರುಪತಿ ದೇವಸ್ಥಾನದಿಂದ ಶ್ರೀರಾಯರ ಮೂಲಬೃಂದಾವನಕ್ಕೆ ಶ್ರೀ ಶ್ರೀನಿವಾಸದೇವರ ಶೇಷವಸ್ತ್ರವನ್ನು ಆ.8ರಂದು ಸಮರ್ಪಿಸಲಾಗುತ್ತದೆ, ಆ.10ರಂದು ಪೂರ್ವಾರಾಧನೆ ದಿನದಂದು ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಶ್ರೀಮಠದ ಪ್ರತಿಷ್ಠಿತ ಪ್ರಶಸ್ತಿ ʼಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿʼ ʼಗುರು ಅನುಗ್ರಹ ಪ್ರಶಸ್ತಿʼ ಪ್ರದಾನ ಸಮಾರಂಭವು ನಡೆಯಲಿದೆ. ಆ.12ರಂದು ಉತ್ತರ ಆರಾಧನೆಯ ದಿನದಂದು ಬೆಳಗ್ಗೆ 10ಗಂಟೆಗೆ ಶ್ರೀಮಠದ ಮುಂದಿನ ರಾಜಬೀದಿಯಲ್ಲಿ ಮಹಾರಥೋತ್ಸವವು ನಡೆಯಲಿದೆ.

ಇತ್ತೀಚಿನ ದಿನಗಳಲ್ಲಿ ಶ್ರೀರಾಯರ ದರ್ಶನಾನುಗ್ರಹಮ ಶ್ರೀಶ್ರೀಪಾದಂಗಳವರ ಆಶೀರ್ವಾದ ಪಡೆಯಲು ಮಂತ್ರಾಲಯ ಶ್ರೀಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಅನೂಹ್ಯವಾಗಿ ಹೆಚ್ಚುತ್ತಿದ್ದು, ಬರುವ ಭಕ್ತರ ಯಾವುದೇ ತೊಂದರೆಯಿಲ್ಲದಂತೆ ದರ್ಶನವನ್ನು ಕಲ್ಪಿಸಲು ಉತ್ತಮವಾದ ಸರದಿಸಾಲಿನ ವ್ಯವಸ್ಥೆ, ಕಂಪಾರ್ಟ್ಮೆಂಟ್‌ಗಳು, ಮೇಲ್ಸೇತುವೆ ಇತ್ಯಾದಿಗಳ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ಭಕ್ತರಿಗೆ ಅನುಕೂಲಕರವಾದ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಆರಾಧನಾ ಸಪ್ತರಾತ್ರೋತ್ಸವದ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಿರುವ ಡಾರ್ಮಿಟರಿ ಹಾಲ್‌, ಲಾಕರ್‌ ಸದುಪಾಯಗಳನ್ನು ಉದ್ಘಾಟಿಸಲಾಗುವುದು. ಅದೇ ರೀತಿ ಶ್ರೀಮಠದ ಸಮೀಪದಲ್ಲೇ ನಿರ್ಮಿಸಿರುವ ಪುಷ್ಕರಣಿ, ಶ್ರೀರಾಯರ ಮೂಲಬೃಂದಾವನದ ಮುಂದಿನ ಶಿಲಾಸ್ತಂಭಗಳಿಗೆ ಸುವರ್ಣಲೇಪಿತ ಕವಚಗಳನ್ನು ತೊಡಿಸುವಿಕೆ, ಶಿಲಾಮಂಟಪದ ದಕ್ಷಿಣ ಭಾಗಕ್ಕೆ ಸುವರ್ಣಕವಚ ಅಳವಡಿಸುವಿಕೆ ಮುಂತಾದವುಗಳ ಲೋಕಾರ್ಪಣೆ ನಡೆಯಲಿದೆ.

ಈ ಸುದ್ದಿಯನ್ನೂ ಓದಿ | CSA Recruitment 2025: ದೇಶಾದ್ಯಂತ ಬರೋಬ್ಬರಿ 10,277 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ IBPS; ಪದವಿ ಪೂರೈಸಿದವರು ಅಪ್ಲೈ ಮಾಡಿ

ಆರಾಧನಾ ಮಹೋತ್ಸವಕ್ಕೆ ಬರುವ ಭಕ್ತರಿಗಾಗಿ ಯೋಗ್ಯವಾದ ವಸತಿಗೃಹಗಳನ್ನು, ಕ್ಲಾಕ್‌ ರೂಂಗಳನ್ನು, ನದಿತೀರದಲ್ಲಿ ಸ್ನಾನ ಘಟ್ಟಗಳನ್ನು, ಸಾಮೂಹಿಕ ಶೌಚಾಲಯಗಳನ್ನು ವ್ಯವಸ್ಥೆಗೊಳಿಸಲಾಗಿದೆ. ವಿಶೇಷವಾಗಿ ನದಿಯಲ್ಲಿನ ಪ್ರವಾಹವನ್ನು ದೃಷ್ಟಿಯಲ್ಲಿರಿಸಿಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಆಂಧ್ರ ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬರುವ ಪ್ರತಿಯೊಬ್ಬ ಭಕ್ತರಿಗೆ ತೀರ್ಥಪ್ರಸಾದ ಜತೆಗೆ ಹೆಚ್ಚಿನ ಸಂಖ್ಯೆ ಪರಿಮಳ ಪ್ರಸಾದ ವಿತರಣಾ ಕೌಂಟರ್‌ಗಳನ್ನು ತೆರೆಯಲಾಗುವುದು. ಭಕ್ತರ ಆರೋಗ್ಯದ ಮುನ್ನೆಚ್ಚರಿಕೆ ದೃಷ್ಟಿಯಿಂದ ಶ್ರೀಮಠದ ಆರೋಗ್ಯಶಾಲೆಯ ಜತೆಗೆ ಮಠದ ಮುಂಭಾಗದಲ್ಲಿ ತಾತ್ಕಾಲಿಕ ಪ್ರಥಮ ಚಿಕಿತ್ಸಾ ಕೇಂದ್ರಗಳನ್ನು ತೆರಯಲಾಗುವುದು. ರಾಜ್ಯ ಪೊಲೀಸ್‌ ಇಲಾಖೆಯವರ ಸಹಯೋಗದೊಂದಿಗೆ ಅಗತ್ಯ ಭದ್ರತಾ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಶ್ರೀಮಠದ ಸಿಬ್ಬಂದಿಯ ಜತೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ, ವಿವಿಧ ಸಂಘ ಸಂಸ್ಥೆಗಳ ಸ್ವಯಂ ಸೇವಕರ ಸಹಾಯದಿಂದ, ಸ್ವಚ್ಛತೆ, ನೈರ್ಮಲ್ಯಗಳನ್ನು ಕಾಪಾಡಿ, ಭಕ್ತರಿಗೆ ಯಾವುದೇ ಅನಾನುಕೂಲವಾಗದಂತೆ ಆರಾಧನಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಎಲ್ಲಾ ವಿಧವಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.