ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

DK Shivakumar Oath Ceremony: ರಾಜ್ಯದ 25ನೇ ಸಿಎಂ ಆಗಿ ಡಿ.ಕೆ.ಶಿವಕುಮಾರ್‌ ಪ್ರಮಾಣವಚನ ಸ್ವೀಕಾರ

ಬೆಂಗಳೂರಿನ ಲೋಕಭವನದಲ್ಲಿ ನಡೆದ ಡಿ.ಕೆ.ಶಿವಕುಮಾರ್‌ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು, ವಿವಿಧ ಪಕ್ಷಗಳ ಹಿರಿಯ ರಾಜಕಾರಣಿಗಳು, ಉದ್ಯಮಿಗಳು, ಸಿನಿಮಾ ರಂಗದ ಪ್ರಮುಖರು, ವಿವಿಧ ಮಠಾಧೀಶರು, ಅಭಿಮಾನಿಗಳು ಸಾವಿರಾರು ಮಂದಿ ಸೇರಿ ಆಗಮಿಸಿದ್ದರು.

ರಾಜ್ಯದ 25ನೇ ಸಿಎಂ ಆಗಿ ಡಿ.ಕೆ.ಶಿವಕುಮಾರ್‌ ಪ್ರಮಾಣವಚನ ಸ್ವೀಕಾರ

ಸಿಎಂ ಆಗಿ ಡಿಕೆ ಶಿವಕುಮಾರ್‌ ಪ್ರಮಾಣ ವಚನ ಸ್ವೀಕಾರ -

Prabhakara R
Prabhakara R Jun 3, 2026 4:22 PM

ಬೆಂಗಳೂರು: ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ (DK Shivakumar) ಅವರು ಭಾರತದ ಸಂವಿಧಾನ ಪ್ರತಿ ಹಿಡಿದು ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಬುಧವಾರ ಪ್ರಮಾಣ ವಚನ (CM Oath Ceremony) ಸ್ವೀಕರಿಸಿದರು. ಲೋಕಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರಚಂದ್ ಗೆಹಲೋಟ್ ಅವರು ಬೋಧಿಸಿದ ಗೌಪ್ಯತಾ ಪ್ರಮಾಣ ವಚನವನ್ನು ಶಿವಕುಮಾರ್ ಅವರು ಬುಧವಾರ ಸ್ವೀಕರಿಸಿದರು.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾದ ಸಿದ್ದರಾಮಯ್ಯ, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಕೇರಳಂ ಸಿಎಂ ವಿ.ಡಿ. ಸತೀಶನ್, ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸಿಗ್ ಸುಖು, ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರು ಉಪಸ್ಥಿತರಿದ್ದರು.

CM Oath Ceremony (1)

ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸುವ ಮುನ್ನ, ವೀರ ಗಂಗಾಧರಯ್ಯ ಅಜ್ಜಯ್ಯನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನೆರೆದಿದ್ದ ಸಭಿಕರಿಗೆ ಅಡ್ಡಬಿದ್ದು ಸಾಷ್ಟಾಂಗ ನಮಸ್ಕಾರ ಅರ್ಪಿಸಿದರು. ಸಿಎಂ ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಅವರ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಡಾ.ಜಿ. ಪರಮೇಶ್ವರ್ ಅವರು, ಸಚಿವರಾಗಿ ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ ಪಾಟೀಲ್, ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಯು.ಟಿ ಖಾದರ್, ಈಶ್ವರ್ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ, ಬೈರತಿ ಸುರೇಶ್, ಶರಣಪ್ರಕಾಶ್ ಪಾಟೀಲ್ ಅವರು ಪ್ರಮಾಣವಚನ ಸ್ವೀಕರಿಸಿದರು.

DK Shivakumar (97)

ಗಾಜಿನ ಮನೆಯಲ್ಲಿ ಮಾರ್ದನಿಸಿದ ಡಿ.ಕೆ, ಡಿ.ಕೆ ಘೋಷಣೆ

ಅಭಿಮಾನಿಗಳ ಡಿ.ಕೆ, ಡಿ.ಕೆ ಉದ್ಘಾರವು ಲೋಕಭವನದ ಗಾಜಿನ ಮನೆಯಲ್ಲಿ ಮಾರ್ದನಿಸಿತು. ಎಐಸಿಸಿ ಅಧ್ಯಕ್ಷರಾದ‌ ಮಲ್ಲಿಕಾರ್ಜುನ ಖರ್ಗೆ ಅವರು, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ವಿವಿಧ ರಾಜ್ಯಗಳ ಕಾಂಗ್ರೆಸ್ ಸಂಸದರು, ಮುಖಂಡರು ಹಾಗೂ ಸರ್ವಧರ್ಮಗಳ ಗುರುಗಳು, ಸಮುದಾಯಗಳ ಸ್ವಾಮೀಜಿಗಳು ಪ್ರಮಾಣ ವಚನ ಸಮಾರಂಭಕ್ಕೆ ಸಾಕ್ಷಿಯಾದರು.

DK Shivakumar (92)

ಭೈರವ ಮಾಲೆ ಹಾಕಿದ ನಿರ್ಮಾಲಾನಂದನಾಥ ಸ್ವಾಮೀಜಿ

ಲೋಕಭವನಕ್ಕೆ ಪ್ರವೇಶ ಮಾಡಿದ ಡಿ.ಕೆ.ಶಿವಕುಮಾರ್ ಅವರು ನೇರವಾಗಿ ಧರ್ಮಗುರುಗಳ, ವಿವಿಧ ಮಠಗಳ ಸ್ವಾಮೀಜಿಗಳು ಆಸೀನರಾಗಿದ್ದ ಕಡೆ ತೆರಳಿ ಆಶೀರ್ವಾದ ಪಡೆದರು. ಆದಿ ಚುಂಚನಗಿರಿ ಮಠದ ನಿರ್ಮಾಲಾನಂದನಾಥ ಸ್ವಾಮೀಜಿ ಅವರು ಬೈರವ ಮಾಲೆಯನ್ನು ಹಾಕಿ ಅಭಿನಂದಿಸಿದರು. ಕನಕಪೀಠದ ಸ್ವಾಮೀಜಿ ನಿರಂಜನಾನಂದಪುರಿ ಕರಿ ಕಂಬಳಿ ಹೊದೆಸಿ ನಿಮ್ಮ ಹಾದಿ ಸುಗಮವಾಗಿರಲಿ ಎಂದು ಶುಭಕೋರಿದರು. ಇತರೇ ಸ್ವಾಮೀಜಿಗಳು ರುದ್ರಾಕ್ಷಿ ಸರ, ಕ್ರೈಸ್ತ ಧರ್ಮಗುರುಗಳು ಶಿಲುಬೆಯ ದಾರವನ್ನು ಕೊರಳಿಗೆ ಹಾಕಿ "ನಿಮ್ಮ ಆಡಳಿತ ಅವಧಿಯಲ್ಲಿ ಕರ್ನಾಟಕದ ಅಭಿವೃದ್ಧಿ ಇನ್ನೂ ಉತ್ತುಂಗಕ್ಕೆ ಏರಲಿ" ಎಂದು ಹಾರೈಸಿದರು. ಸಂತ ಸೇವಾಲಾಲ್ ಸ್ವಾಮೀಜಿ ಲಂಬಾಣಿ ಕುಸುರಿ ಕಲೆ ಹೊಂದಿರುವ ಶಲ್ಯವನ್ನು ನೀಡಿದರು. ಸುಬ್ರಮಣ್ಯ ಕ್ಷೇತ್ರದ ವಿದ್ಯಾಪ್ರಸನ್ನ ತೀರ್ಥರು ಸೇರಿದಂತೆ ಅನೇಕರು ಆಶೀರ್ವಾದ ಮಾಡಿದರು.

CCPA  (1)

ಹಸ್ತಾಲಾಘವ ಮಾಡಲು ಮುಗಿಬಿದ್ದ ಅಭಿಮಾನಿಗಳು

ಸಭಾಂಗಣದ ಇಕ್ಕೆಲಗಳಲ್ಲಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನೂತನ ಮುಖ್ಯಮಂತ್ರಿಗಳಿಗೆ ಹಸ್ತಾಲಾಘವ ಮಾಡಲು ಮುಗಿಬಿದ್ದರು. ಎಲ್ಲರಿಗೂ ನಗುಮುಖದಿಂದಲೇ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಅವರು ಪ್ರತಿಯೊಬ್ಬರಿಗೂ ಹಸ್ತಲಾಘವ ಮಾಡಿ ಹುರಿದುಂಬಿಸಿದರು.

CM Oath Ceremony (4)

ಕಾರ್ಯಕ್ರಮಕ್ಕೆ ಸಾಕ್ಷಿಯಾದ ಗಣ್ಯರು:

ಈ ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಮಠದ ನಿರ್ಮಾಲಾನಂದನಾಥ ಸ್ವಾಮೀಜಿ, ಕನಕಪೀಠದ ಸ್ವಾಮೀಜಿ ನಿರಂಜನಾನಂದಪುರಿ, ಸಂತ ಸೇವಾಲಾಲ್ ಸ್ವಾಮೀಜಿ, ಮಾದರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದರ ಚನ್ನಯ್ಯ ಮಹಾಸ್ವಾಮಿ, ಅರ್ಚ್ ಬಿಷಪ್ ರೆವರೆಂಡ್ ಡಾ. ಪೀಟರ್ ಮಚಾಡೋ, ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಭೋವಿ ಮಠದ ಹಿಮ್ಮಡಿ ಸಿದ್ದೇಶ್ವರ ಸ್ವಾಮೀಜಿ, ದ್ವಾರಕನಾಥ ಗುರೂಜಿ, ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಸ್ವಾಮೀಜಿ, ಗದುಗಿನ ತೋಂಟದಾರ್ಯ ಸ್ವಾಮೀಜಿ, ಸುಬ್ರಮಣ್ಯ ಕ್ಷೇತ್ರದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ವಿನಯ್ ಗುರೂಜಿ ಹಾಗೂ ಶಿವಕುಮಾರ್ ಅವರ ಧರ್ಮಪತ್ನಿ ಉಷಾ ಶಿವಕುಮಾರ್, ಪುತ್ರಿ ಐಶ್ವರ್ಯ ಡಿಕೆಎಸ್ ಹೆಗಡೆ, ಬಮೂಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್, ಸಿನಿಮಾ ತಾರೆ ಹಾಗೂ ಮಾಜಿ ಸಂಸದೆ ರಮ್ಯಾ ಹಾಗೂ ಮತ್ತಿತರ ಶಾಸಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

CM Oath Ceremony (2)



DK Shivakumar (87)

ಪದಗ್ರಹಣಕ್ಕೂ ಮುನ್ನಾ ಡಿ.ಕೆ.ಶಿವಕುಮಾರ್‌ ಅವರ ನಿವಾಸದಲ್ಲಿ ವಿಶೇಷ ಪೂಜೆ ನೆರವೇರಿತು. ಈ ವೇಳೆ ತಾಯಿ ಗೌರಮ್ಮ ಅವರ ಆಶೀರ್ವಾದವನ್ನು ಡಿಕೆಶಿ ಪಡೆದರು. ಬಳಿಕ ರಾಜ್ಯ ಹಿರಿಯ ರಾಜಕೀಯ ನಾಯಕರಾದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಸಿಎಂಗಳಾದ ಬಿ.ಎಸ್‌.ಯಡಿಯೂರಪ್ಪ, ಸಿದ್ದರಾಮಯ್ಯ ಅವರನ್ನು ಡಿ.ಕೆ.ಶಿವಕುಮಾರ್‌ ಅವರು ಭೇಟಿಯಾಗಿ ಆಶೀರ್ವಾದ ಪಡೆದರು.

ತಳಮಟ್ಟದ ಹೋರಾಟದಿಂದ ಸಿಎಂ ಚುಕ್ಕಾಣಿಯವರೆಗೆ; ಡಿಕೆಶಿ ರಾಜಕೀಯ ಜೀವನದ ಹಾದಿ ಇಲ್ಲಿದೆ

ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ನಾಯಕರಾಗಿ ರಾಜಕೀಯ ಪ್ರವೇಶ ಮಾಡಿದ್ದ ಡಿ.ಕೆ.ಶಿವಕುಮಾರ್‌ ಅವರು ಇಂದು ರಾಜ್ಯ ಸಿಎಂ ಆಗಿ ಪದಗ್ರಹಣ ಮಾಡಿದ್ದಾರೆ. 8 ಬಾರಿ ಶಾಸಕರಾಗಿ, ಸಚಿವರಾಗಿ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷರಾಗಿ ಇವರು ಕಾರ್ಯ ನಿರ್ವಹಿಸಿದ್ದಾರೆ. ತಳಮಟ್ಟದ ಹೋರಾಟದಿಂದ ಹಿಡಿದು ರಾಜ್ಯದ ಸಿಎಂ ಚುಕ್ಕಾಣಿಯವರೆಗೆ ಪಕ್ಷ, ರಾಜ್ಯ ಮತ್ತು ಜನಸಾಮಾನ್ಯರ ಏಳಿಗೆಗಾಗಿ ಸಾಗಿದ 45 ವರ್ಷಗಳ ನಿರಂತರ ಜನಸೇವೆಯ ಅದ್ವಿತೀಯ ಪಯಣ ಹೇಗಿತ್ತು ಎಂಬ ಕುರಿತ ಮಾಹಿತಿ ಇಲ್ಲಿದೆ.

ಜೀವನದ ಹಾದಿ ಮತ್ತು ಪ್ರಮುಖ ಘಟ್ಟಗಳು

1980-ರಾಜಕೀಯ ಪ್ರವೇಶ

  • ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್ಎಸ್‌ಯುಐ) ಮೂಲಕ ವಿದ್ಯಾರ್ಥಿ ನಾಯಕರಾಗಿ ರಾಜಕೀಯ ಪ್ರವೇಶ
  • ಪದವಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಮಾಜಿ ಪ್ರಧಾನಿ ಶ್ರೀ ರಾಜೀವ್ ಗಾಂಧಿ ಅವರಿಂದ ರಾಜಕೀಯ ಬೆಂಬಲ

1985-ಮೊದಲ ಚುನಾವಣಾ ಸ್ಪರ್ಧೆ

ಸಾತನೂರು ಕ್ಷೇತ್ರದಿಂದ ಹೆಚ್. ಡಿ. ದೇವೇಗೌಡರ ವಿರುದ್ಧ ಸ್ಪರ್ಧೆ

1989- ಮೊದಲ ಚುನಾವಣಾ ಗೆಲುವು

ಸಾತನೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ

1990-1992: ಸಚಿವರು, ಕಾರಾಗೃಹ ಮತ್ತು ಗೃಹ ರಕ್ಷಕ ಇಲಾಖೆ

ಜೈಲುಗಳಲ್ಲಿ ಪುನರ್ವಸತಿ ಮತ್ತು ಕೌಶಲ್ಯಾಭಿವೃದ್ಧಿ ಸುಧಾರಣೆ

1999-2004: ಸಚಿವರು, ನಗರಾಭಿವೃದ್ಧಿ

ನಗರ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ

2014-2018: ಸಚಿವರು, ಇಂಧನ

  • ಕರ್ನಾಟಕದಲ್ಲಿ 6,000 ಮೆಗಾವ್ಯಾಟ್‌ಗಿಂತ ಹೆಚ್ಚಿನ ಸೌರಶಕ್ತಿ ಉತ್ಪಾದನೆಗೆ ಒತ್ತು
  • ಪಾವಗಡ ಸೋಲಾರ್ ಪಾರ್ಕ್‌ನಿಂದ ಬಂಜರು ಭೂಮಿ ಅಭಿವೃದ್ಧಿ
  • ಸೂರ್ಯ ರೈತ ಯೋಜನೆ ಮೂಲಕ ರೈತರ ಸಬಲೀಕರಣ

2018-2019: ಸಚಿವರು, ಬೃಹತ್ ನೀರಾವರಿ ಮತ್ತು ವೈದ್ಯಕೀಯ ಶಿಕ್ಷಣ

ಬರಗಾಲ ಮತ್ತು ಸಂಕಷ್ಟದ ಸಮಯದಲ್ಲಿ ನೀರಾವರಿ ಮತ್ತು ಆರೋಗ್ಯ ರಕ್ಷಣೆಗೆ ಒತ್ತು

2019: ಪಕ್ಷ ನಿಷ್ಠೆಯ ಪರೀಕ್ಷೆ

ರಾಜಕೀಯ ಒತ್ತಡಗಳ ನಡುವೆಯೂ ಪಕ್ಷವನ್ನು ಉಳಿಸಲು ಜೈಲು ಶಿಕ್ಷೆಯನ್ನು ಅನುಭವಿಸಿದರು.

2020-ಪ್ರಸ್ತುತ: ಕೆಪಿಸಿಸಿ ಅಧ್ಯಕ್ಷರು

  • ಕರ್ನಾಟಕದ ಮೂಲೆ ಮೂಲೆಗೂ ಸಂಚರಿಸಿ ಪಕ್ಷ ಸಂಘಟನೆ
  • ಕಾಂಗ್ರೆಸ್ ಪಕ್ಷದ ಆಂತರಿಕ ಬಿಕ್ಕಟ್ಟುಗಳ ನಿವಾರಣೆ

2023; ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆಲುವು

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ

2023-ಪ್ರಸ್ತುತ: ಉಪ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ

ಡಿಸಿಎಂ ಆಗಿ ಮೂಲಸೌಕರ್ಯಗಳ ಸುಧಾರಣೆ, ನಗರ ಅಧುನೀಕರಣ ಮತ್ತು ದೀರ್ಘಾವಧಿಯ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ 5 ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಜನಪರ ಆಡಳಿತದೊಂದಿಗೆ ಕರ್ನಾಟಕವನ್ನು ಮುನ್ನಡೆಸಿದ್ದಾರೆ.

ಸಚಿವರು, ಜಲಸಂಪನ್ಮೂಲ

  • ಕಾವೇರಿ 5ನೇ ಹಂತದ ಯೋಜನೆ ಜಾರಿಗೊಳಿಸಿ, ಬೆಂಗಳೂರಿನ 110 ಹಳ್ಳಿಗಳಿಗೆ 775 ಎಂಎಲ್‌ಡಿ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದು, ಇದರಿಂದ ಸುಮಾರು 50 ಲಕ್ಷ ಜನರಿಗೆ ಅನುಕೂಲವಾಗಲಿದೆ.
  • ಕಾವೇರಿ 6ನೇ ಹಂತ, ಎತ್ತಿನಹೊಳೆ, ಮೇಕೆದಾಟು, ಮಹದಾಯಿ ಸೇರಿದಂತೆ ಪ್ರಮುಖ ನೀರಾವರಿ ವಿಸ್ತರಣಾ ಯೋಜನೆಗಳ ಮೂಲಕ ದೀರ್ಘಾವಧಿಯ ನೀರಿನ ಭದ್ರತೆ ಒದಗಿಸುವ ಗುರಿ
  • ನೀರಿನ ಅಭಾವ ಎದುರಿಸುವ ಜಿಲ್ಲೆಗಳ 76 ಲಕ್ಷ ಜನರಿಗೆ ಕುಡಿಯುವ ನೀರನ್ನು ಒದಗಿಸಲು ಎತ್ತಿನಹೊಳೆ ಯೋಜನೆ ಅನುಷ್ಠಾನ
  • ರೈತರ ನೀರಾವರಿ ಅಗತ್ಯತೆಗಳನ್ನು ಪೂರೈಸಲು ಹಾಗೂ ಜಲಾಶಯದ ಸುರಕ್ಷತೆಯನ್ನು ಬಲಪಡಿಸಲು ತುಂಗಭದ್ರಾ ಅಣೆಕಟ್ಟಿಗೆ 33 ಹೊಸ ಕ್ರಸ್ಟ್ ಗೇಟ್‌ಗಳ ಅಳವಡಿಕೆ

ಸಚಿವ, ಬೆಂಗಳೂರು ನಗರಾಭಿವೃದ್ಧಿ

  • ಇ-ಖಾತಾ ಮೂಲಕ 25 ಲಕ್ಷಕ್ಕೂ ಹೆಚ್ಚು ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ "ನಂಬಿಕೆ ನಕ್ಷೆ" ಮೂಲಕ ಅನುಮೋದನೆ ಪ್ರಕ್ರಿಯೆ
  • ಬೆಂಗಳೂರಿನ ಸಂಚಾರ ದಟ್ಟಣೆ ಹಾಗೂ ಪ್ರಯಾಣದ ಸಮಯ ಕಡಿಮೆ ಮಾಡಲು ಸುರಂಗ ರಸ್ತೆ ಯೋಜನೆ ರೂಪಿಸಲಾಗುತ್ತಿದೆ
  • BWSSB ಸ್ಮಾರ್ಟ್ ಆಡಳಿತ ಕ್ರಮಗಳ ಮೂಲಕ ಜನರಿಗೆ ಉತ್ತಮ ಸೇವೆ ಒದಗಿಸಲಾಗುತ್ತಿದೆ
  • ರಸ್ತೆ ಸುರಕ್ಷತಾ ಕ್ರಮಗಳು ಹಾಗೂ ಒಳಚರಂಡಿಗಳ ಆಧುನೀಕರಣದ ಮೂಲಕ ಮೂಲಸೌಕರ್ಯ ಉತ್ತೇಜನಕ್ಕೆ ಆದ್ಯತೆ
  • ಬೆಂಗಳೂರಿನಲ್ಲಿ 4,400ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್ಗಳಿದ್ದು, ಈ ಮೂಲಕ ಬೆಂಗಳೂರನ್ನು ಭಾರತದ ಇವಿ ರಾಜಧಾನಿಯಾಗಿಸುವ ಗುರಿ

ಪಕ್ಷ | ಅಧ್ಯಕ್ಷರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ

  • ರಾಜ್ಯಾದ್ಯಂತ ಸಂಚರಿಸಿ ಪಕ್ಷದಲ್ಲಿರುವ ಎಲ್ಲಾ ಅಂತರಿಕ ಸಮಸ್ಯೆಗಳನ್ನು ಬಗೆಹರಿಸಿ, ಕಾರ್ಯಕರ್ತರಿಗೆ ಬೆನ್ನೆಲುಬಾಗಿ ನಿಂತು ಪಕ್ಷ ಸಂಘಟಿಸಿದರು
  • 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ
  • ಜನರ ಆರ್ಥಿಕ ಸ್ಥಿತಿ ಬದಲಾಯಿಸಲು ನುಡಿದಂತೆ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ
  • ಡಿ.ಕೆ ಶಿವಕುಮಾ‌ರ್ ಅವರ ಸಾರಥ್ಯದಲ್ಲಿ ಸುರಪುರ, ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ, ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಸೇರಿದಂತೆ 6 ಉಪಚುನಾವಣೆಗಳಲ್ಲೂ ಗೆಲುವು
  • ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಎದುರಾದ ರಾಜಕೀಯ ಬಿಕ್ಕಟ್ಟಿನ ಸಮಯದಲ್ಲಿ ಪ್ರಮುಖ ಪಾತ್ರ ನಿರ್ವಹಣೆ
  • ಪ್ರಮುಖ ಚುನಾವಣೆಗಳ ಸಮಯದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕೇರಳ, ಅಸ್ಸಾಂ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಪ್ರಚಾರ
  • ತಳಮಟ್ಟದ ನಾಯಕತ್ವದ ಮೂಲಕ ಪಕ್ಷ ಸಂಘಟನೆಗೆ ಒತ್ತು