ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಬೆಂಗಳೂರಿನ ಜನರ ಸಮಸ್ಯೆ ಆಲಿಸಲು ವಾರಕ್ಕೆ 2 ದಿನ ‘ಉದ್ಯಾನ ನಡಿಗೆʼ: ಡಿ.ಕೆ. ಶಿವಕುಮಾರ್

Udyana Nadige: ಬೆಂಗಳೂರು ಜನರ ಸಮಸ್ಯೆ, ಅಭಿಪ್ರಾಯಗಳನ್ನು ಆಲಿಸಲು ಪ್ರತಿ ಶನಿವಾರ ಹಾಗೂ ಭಾನುವಾರದ ಬೆಳಗ್ಗೆ ವೇಳೆ ಪಾಲಿಕೆವಾರು 'ಉದ್ಯಾನ ನಡಿಗೆ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಜಿಬಿಎ ಸಭಾಂಗಣದಲ್ಲಿ ಅವರು ಮಾತನಾಡಿದರು.

ಬೆಂಗಳೂರಿನ ಜನರ ಸಮಸ್ಯೆ ಆಲಿಸಲು ‘ಉದ್ಯಾನ ನಡಿಗೆʼ: ಡಿಕೆಶಿ

ಡಿಸಿಎಂ ಡಿ.ಕೆ. ಶಿವಕುಮಾರ್. -

Profile Siddalinga Swamy Oct 10, 2025 11:10 PM

ಬೆಂಗಳೂರು: ಬೆಂಗಳೂರಿನ ಸಾಮಾನ್ಯ ನಾಗರಿಕರ ಬಳಿ ನಾನು ಮಾತನಾಡಬೇಕು. ಅವರ ಸಮಸ್ಯೆ, ಅಭಿಪ್ರಾಯಗಳನ್ನು ಆಲಿಸಬೇಕು. ಈ ಕಾರಣಕ್ಕಾಗಿ ಪ್ರತಿ ಶನಿವಾರ ಹಾಗೂ ಭಾನುವಾರ ಬೆಳಗ್ಗೆ ಪಾಲಿಕೆವಾರು 'ಉದ್ಯಾನ ನಡಿಗೆ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಜಿಬಿಎ (GBA) ಸಭಾಂಗಣದಲ್ಲಿ ಮಾಧ್ಯಮಗಳಿಗೆ ಶುಕ್ರವಾರ ಅವರು ಪ್ರತಿಕ್ರಿಯೆ ನೀಡಿದರು.

ಪಾಲಿಕೆವಾರು ಉದ್ಯಾನಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಇದೇ ಶನಿವಾರ ಲಾಲ್‌ಬಾಗ್‌ನಲ್ಲಿ ಹಾಗೂ ಭಾನುವಾರ ಜೆ.ಪಿ. ಪಾರ್ಕ್‌ನಲ್ಲಿ ಈ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಇದೇ ರೀತಿ ಮೊದಲ ಹಂತದಲ್ಲಿ 10 ದಿನ 10 ಉದ್ಯಾನಗಳಲ್ಲಿ ಈ ಕಾರ್ಯಕ್ರಮ ಮಾಡಲಿದ್ದೇನೆ. ಸಾರ್ವಜನಿಕರ ಅಭಿಪ್ರಾಯ, ಸಲಹೆ ಪಡೆದು ಅಗತ್ಯ ಬದಲಾವಣೆ ತಿದ್ದುಪಡಿ ಮಾಡಿಕೊಳ್ಳಲು ಈ ಕಾರ್ಯಕ್ರಮ. ನಡಿಗೆಯ ಅವಧಿ ಒಂದು ಗಂಟೆಯಿರುತ್ತದೆ. ಈ ವೇಳೆ ಜನ ಸಾಮಾನ್ಯರ ಬಳಿ ವಿಚಾರಗಳ ವಿನಿಮಯ ಹಾಗೂ ಚರ್ಚೆ ನಡೆಸಲಾಗುವುದು. ಏಕೆಂದರೆ ನಾಯಕರೇ ಒಂದು ಹೇಳುತ್ತಾರೆ. ಜನಸಾಮಾನ್ಯರೇ ಒಂದಷ್ಟು ಹೇಳುತ್ತಾರೆ. ಜನರ ಸಮಸ್ಯೆ ಏನಿದೆ ಎಂದು ಅವರಿಂದಲೇ ತಿಳಿದುಕೊಳ್ಳಬೇಕು. ಈ ದೃಷ್ಟಿಯಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಲಾಲ್ ಬಾಗ್ ಹಾಳು ಮಾಡಿದರೆ ನನ್ನ ತಲೆ ಒಡೆದು ಹಾಕುತ್ತಾರೆ

ಟನಲ್ ರಸ್ತೆಯಿಂದ ಲಾಲ್ ಬಾಗ್‌ಗೆ ಹಾನಿಯಾಗಲಿದೆ ಎಂದು ಕೇಳಿದಾಗ ಟನಲ್ ರಸ್ತೆಯಿಂದ ಲಾಲ್ ಬಾಗ್ ಹಾಳಾಗುತ್ತದೆ ಎಂದು ಹೇಳಲಾಗುತ್ತಿದೆ. ಲಾಲ್ ಬಾಗ್ ಹಾಳಾಗುವುದಿಲ್ಲ. ಅದನ್ನು ಹಾಳು ಮಾಡಿದರೆ ನನ್ನ ತಲೆ ಒಡೆದು ಹಾಕುತ್ತಾರೆ ಎಂಬುದು ನನಗೆ ಗೊತ್ತಿದೆ. ಒಂದು ಮೂಲೆಯಲ್ಲಿ ಭೂಗರ್ಭದಲ್ಲಿ ಹೋಗುತ್ತದೆ. ಲಾಲ್ ಬಾಗ್‌ಗೆ ಯಾವುದೇ ತೊಂದರೆಯಾಗುವುದಿಲ್ಲ, ತೊಂದರೆ ಮಾಡಲು ಆಗುವುದಿಲ್ಲ ಎಂದರು.‌

ಈ ಸುದ್ದಿಯನ್ನೂ ಓದಿ | DK Shivakumar: ಜಿಬಿಎ ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ: ಡಿ.ಕೆ. ಶಿವಕುಮಾರ್‌ ಸವಾಲು

ಉದ್ಯಾನದ ಒಂದು ಮೂಲೆಯಲ್ಲಿ ಕಲ್ಲು ಬಂಡೆಯಿದ್ದು ಅಲ್ಲಿ ಟನಲ್ ರಸ್ತೆಗೆ ಪ್ರವೇಶ ಕಲ್ಪಿಸುವಂತೆ ಯೋಜಿಸಲಾಗಿದೆ. ಆ ಪ್ರದೇಶವನ್ನು ನಾನು ವೀಕ್ಷಣೆ ಮಾಡುತ್ತೇನೆ. ಏನಾದರೂ ತೊಂದರೆಗಳು, ಬದಲಾವಣೆಗಳಿದ್ದರೆ ಅದನ್ನು ಮಾಡಿಕೊಳ್ಳೋಣ. ಐತಿಹಾಸಿಕ ಲಾಲ್ ಬಾಗ್ ಅನ್ನು ಹಾಳು ಮಾಡಲು ಆಗುತ್ತದೆಯೇ? ಅಧಿಕಾರಿಗಳು ವರದಿ ನೀಡಿದ್ದಾರೆ‌. ಆದರೆ ನಾನೇ ಕಣ್ಣಾರೆ ನೋಡಿ ತಿಳಿದುಕೊಳ್ಳುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.