ಬೆಂಗಳೂರು, ಡಿ. 3: ಮುಖ್ಯಮಂತ್ರಿ ಸಿದ್ದರಾಮಯ್ಯ ಯಾರೊಂದಿಗೋ ಮಾತನಾಡುವಾಗ ಆಡಿರುವ ಮಾತುಗಳಿಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ. ಆ ಬಗ್ಗೆ ಹೆಚ್ಚಿನ ವಿಶ್ಲೇಷಣೆಯೂ ಅನಗತ್ಯ ಎಂದು ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ (DK Suresh) ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಅವರು ಪ್ರತಿಕ್ರಿಯೆ ನೀಡಿದರು. ರಾಜಕೀಯ ಯಾರಿಗೂ ಶಾಶ್ವತವಲ್ಲ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಕೇಳಿದಾಗ ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು.
ರಾಜ್ಯಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆಗಮಿಸಿರುವ ಬಗ್ಗೆ ಕೇಳಿದಾಗ, ಮಂಗಳೂರಿನಲ್ಲಿ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಅವರು ಆಗಮಿಸಿದ್ದಾರೆ. ಕಾರ್ಯಕ್ರಮ ಮುಗಿದ ನಂತರ ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಇರುವ ಕಾರಣ ಅಲ್ಲಿಗೆ ತೆರಳಲಿದ್ದಾರೆ ಎಂದು ತಿಳಿಸಿದರು.
ಡಿ.ಕೆ. ಸುರೇಶ್ ಹೇಳಿಕೆ:
ಮಂಗಳೂರಿನಲ್ಲಿ ವೇಣುಗೋಪಾಲ್ ಅವರಿಗೆ ಡಿ.ಕೆ. ಶಿವಕುಮಾರ್ ಅಭಿಮಾನಿಗಳು ಡಿ.ಕೆ., ಡಿ.ಕೆ. ಎಂದು ಕೂಗಿರುವ ಬಗ್ಗೆ ಕೇಳಿದಾಗ, ಅಭಿಮಾನದಿಂದ ಕೆಲವರು ಕೂಗಿರುತ್ತಾರೆ. ಆದರೆ ಅವರು ಯಾರಿಗೂ ಮುತ್ತಿಗೆ ಹಾಕಿಲ್ಲ ಎಂದರು.
ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಗುಪ್ತಚರ ಇಲಾಖೆ ಹೈಅಲರ್ಟ್
ಸಿಎಂ ಜತೆ ಬ್ರೇಕ್‌ಫಾಸ್ಟ್ ಮೀಟಿಂಗ್; ಅಧಿವೇಶನದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ಎಂದ ಡಿ.ಕೆ. ಶಿವಕುಮಾರ್
ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಾಹಾರ ಕೂಟದಲ್ಲಿ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ, ದೆಹಲಿಯಲ್ಲಿ ಸರ್ವಪಕ್ಷ ಸಂಸದರ ಸಭೆ, ವಿಧಾನಸಭೆ ಚಳಿಗಾಲದ ಅಧಿವೇಶನದ ಕಾರ್ಯತಂತ್ರಗಳು ಸೇರಿದಂತೆ ಪಕ್ಷ, ಸರ್ಕಾರ ಹಾಗೂ ರಾಜಕೀಯ ವಿಚಾರಗಳ ಕುರಿತು ಉಪಹಾರ ಕೂಟದಲ್ಲಿ ಚರ್ಚೆ ಮಾಡಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಸದಾಶಿವನಗರ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಜತೆ ಉಪಾಹಾರ ಕೂಟದ ಬಳಿಕ ಮಂಗಳವಾರ ಮಾಧ್ಯಮಗಳ ಜತೆ ಅವರು ಮಾತನಾಡಿದರು.
ನಾನು ಮುಖ್ಯಮಂತ್ರಿಯನ್ನು ಉಪಾಹಾರ ಕೂಟಕ್ಕೆ ಬರುವಂತೆ ಮೊದಲು ಕರೆದಿದ್ದೆ. ಅವರು ಮೊದಲು ನೀವೇ ನಮ್ಮ ಮನೆಗೆ ಬನ್ನಿ, ಆಮೇಲೆ ಬರುತ್ತೇನೆ ಎಂದಿದ್ದರು. ಅದರಂತೆ ನಾನು ಅವರ ಮನೆಗೆ ಹೋಗಿದ್ದೆ. ಇಂದು ನಮ್ಮ ಮನೆಗೆ ಆಹ್ವಾನಿಸಿದ್ದೆ. ನಾವಿಬ್ಬರೂ ಬಹಳ ಸಂತೋಷದಿಂದ ಉಪಹಾರ ಸೇವಿಸಿದ್ದೇವೆ. ಈ ವೇಳೆ ರಾಜಕೀಯವಾಗಿಯೂ ಚರ್ಚೆ ಮಾಡಿದ್ದೇವೆ. ಪದವೀಧರ ಹಾಗೂ ಶಿಕ್ಷಕರ ನಾಲ್ಕು ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಗೆ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕಿದೆ. ಈ ವಿಚಾರವಾಗಿ ನಾವಿಬ್ಬರೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರೊಂದಿಗೆ ಚರ್ಚೆ ಮಾಡಿದ್ದೇವೆ. ಪಕ್ಷ ಹಾಗೂ ಸರ್ಕಾರದ ವಿಚಾರವನ್ನು ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ಅಧಿವೇಶನದಲ್ಲಿ ಯಾವ ರೀತಿ ಹೋರಾಟ ಮಾಡಬೇಕು, ಶಾಸಕರಿಗೆ ನೀಡಬೇಕಾದ ಸಂದೇಶಗಳು, ವಿರೋಧ ಪಕ್ಷಗಳು ಯಾವೆಲ್ಲ ವಿಚಾರ ಪ್ರಸ್ತಾಪಿಸಬಹುದು ಎಂದು ಚರ್ಚೆ ಮಾಡಿದ್ದೇವೆ. ವಿರೋಧ ಪಕ್ಷಗಳು ಯಾವುದೇ ವಿಚಾರ ಪ್ರಸ್ತಾಪಿಸಿದರು, ನಾವು ಒಂದೇ ಧ್ವನಿಯಲ್ಲಿ ಎದುರಿಸಲು ಸಿದ್ಧರಿದ್ದೇವೆ ಎಂದರು.
ಮೊಬೈಲ್‌ನಲ್ಲಿ ಸುರಕ್ಷತಾ ಎಚ್ಚರಿಕೆ ವ್ಯವಸ್ಥೆ; ರಿಲಯನ್ಸ್ ಜಿಯೋ ಜತೆ ಎನ್ಎಚ್ಎಐ ಒಪ್ಪಂದ
ಡಿ. 8ರಂದು ದೆಹಲಿಗೆ
ಇನ್ನು ದೆಹಲಿಗೆ ಹೋಗಿ ಸರ್ವಪಕ್ಷ ಸಂಸದರ ಸಭೆ ನಡೆಸುವ ಬಗ್ಗೆ ಚರ್ಚೆ ಮಾಡಿದ್ದು, ಡಿ. 8ರಂದು ದೆಹಲಿಗೆ ಹೋಗಿ ವಾಪಸ್ಸಾಗಬೇಕು ಎಂದು ತೀರ್ಮಾನಿಸಿದ್ದೇವೆ. ಮೇಕೆದಾಟು ವಿಚಾರವಾಗಿ ನ್ಯಾಯಾಲಯದ ತೀರ್ಪು ಬಂದಿದ್ದು, ಮೆಕ್ಕೆಜೋಳ ದರ ವಿಚಾರ, ಕೇಂದ್ರ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ನೀರಾವರಿ ಯೋಜನೆಗಳಿಗೆ ಅನುದಾನ ಬಾರದಿರುವ ವಿಚಾರವಾಗಿ ಸಂಸದರ ಜತೆ ಚರ್ಚೆ ಮಾಡಿ ಅವರಿಗೆ ಜವಾಬ್ದಾರಿ ನೀಡಬೇಕಾಗಿದೆ. ಈ ಸಭೆಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನು ಹಾಗೂ ಜೆಡಿಎಸ್ ನಾಯಕರನ್ನು ಕರೆದುಕೊಂಡು ಹೋಗಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.