ಬೆಂಗಳೂರು: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎನ್‌ಸಿಬಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 50 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ (Drug Smuggling) ಮಾಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 45 ಕೆ ಜಿ ಹೈಡ್ರೋಗಾಂಜಾ, 6 ಕೆಜಿ ಸೈಲೋಸಿಬಿನ್ ಅಣಬೆಯನ್ನು ವಶಕ್ಕೆ ಪಡೆಯಲಾಗಿದೆ.
ಮೊದಲಿಗೆ ಥೈಲ್ಯಾಂಡ್‌ನಿಂದ ಡ್ರಗ್ಸ್ ಸಾಗಾಟ ಮಾಡುತ್ತಿರುವುದಾಗಿ ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು ಕೊಲಂಬೋದಿಂದ ಬರ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರಿಂದ 31 ಕೆಜಿ ಹೈಡ್ರೋಗಾಂಜಾ, 4 ಕೆಜಿ ಸೈಲೋಸಿಬಿನ್ ಅಣಬೆ ಜಪ್ತಿ ಮಾಡಿದ್ದರು. ಇವರಿಬ್ಬರ ವಿಚಾರಣೆ ವೇಳೆ ಮುಂದಿನ ಫ್ಲೈಟ್‌ನಲ್ಲಿ ಮತ್ತೊಬ್ಬ ಆರೋಪಿ ಶ್ರೀಲಂಕಾದಿಂದ ಬರುವ ಮಾಹಿತಿ ಸಿಕ್ಕಿತ್ತು. ಅದರಂತೆ ಕಾದು ಕುಳಿತಿದ್ದ ಅಧಿಕಾರಿಗಳು ಶ್ರೀಲಂಕಾದ ಪ್ರಜೆಯನ್ನೂ ಬಂಧಿಸಿ, ಆತನ ಬಳಿಯಿದ್ದ 14 ಕೆ ಜಿ ಹೈಡ್ರೋಗಾಂಜಾ, 2 ಕೆಜಿ ಅಣಬೆಯನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳು ಒಟ್ಟು 250 ಫುಡ್ ಟಿನ್‌ಗಳಲ್ಲಿ ಡ್ರಗ್ಸ್ ಸೀಲ್ ಮಾಡಿಕೊಂಡು ಬಂದಿದ್ದರು.
ಜೈಲಿಗೆ ಗಾಂಜಾ ಕೊಂಡೊಯ್ಯಲು ಯತ್ನ; ಇಬ್ಬರ ಬಂಧನ
ಶಿವಮೊಗ್ಗ: ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗೆ ಬಿಸ್ಕೆಟ್ ಪ್ಯಾಕೆಟ್‌ಗಳಲ್ಲಿ ಅಕ್ರಮವಾಗಿ ಗಾಂಜಾ ಮತ್ತು ಸಿಗರೇಟ್ ಕೊಂಡೊಯ್ಯಲು ಯತ್ನಿಸಿದ ಇಬ್ಬರು ಯುವಕರನ್ನು ಜೈಲು ಸಿಬ್ಬಂದಿ ಬಂದಿಸಿದ್ದಾರೆ. ಭದ್ರಾವತಿ ನಗರದ ನಿವಾಸಿಗಳಾದ ರಾಹಿಲ್ (19) ಹಾಗೂ ತಸೀರುಲ್ಲಾ (19) ಬಂಧಿತ ಆರೋಪಿಗಳು.
ಶನಿವಾರ ಸಂಜೆ 4.30ರ ಸುಮಾರಿಗೆ ಕೈದಿ ಮೊಹಮ್ಮದ್ ಗೌಸ್ ಅಲಿಯಾಸ್ ಜಂಗ್ಲಿ ಎಂಬಾತನ ಸಂದರ್ಶನಕ್ಕೆಂದು ಆಗಮಿಸಿದ್ದ ಈ ಇಬ್ಬರು ಮೂರು ವೀಟಾ ಮಾರಿ ಗೋಲ್ಡ್ ಬಿಸ್ಕೆಟ್ ಪ್ಯಾಕೆಟ್‌ಗಳನ್ನು ತಂದಿದ್ದರು. ಅನುಮಾನಗೊಂಡ ಜೈಲು ಸಿಬ್ಬಂದಿ ಅವನ್ನು ಪರಿಶೀಲಿಸಿದಾಗ, ಕಪ್ಪು ಗಮ್ ಟೇಪ್‌ನಲ್ಲಿ ಸುತ್ತಿದ ನಿಷಿದ್ಧ ವಸ್ತುಗಳು ಪತ್ತೆಯಾದವು. ಅವುಗಳಲ್ಲಿ 1 ಗಾಂಜಾ ಪ್ಯಾಕೆಟ್ ಮತ್ತು 2 ಸಿಗರೇಟ್ ಪ್ಯಾಕೆಟ್‌ಗಳು ಇರುವುದು ದೃಢಪಟ್ಟಿತು.
ಈ ಸುದ್ದಿಯನ್ನೂ ಓದಿ | Viral Video: ಕುಡಿದ ಮತ್ತಿನಲ್ಲಿ ಯುವಕ-ಯುವತಿಯ ಬೀದಿ ರಂಪಾಟ! ಈ ವಿಡಿಯೊ ನೋಡಿ
ನಿಷೇಧಿತ ವಸ್ತುಗಳನ್ನು ಜಪ್ತಿ ಮಾಡಿದ ಜೈಲು ಸಿಬ್ಬಂದಿ ಆರೋಪಿಗಳನ್ನು ತುಂಗಾನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಕೇಂದ್ರ ಜೈಲು ಅಧೀಕ್ಷಕ ಡಾ. ರಂಗನಾಥ್ ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬಂಧಿತ ಯುವಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.