ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ ಹೊರಬಿದ್ದಿದೆ. (Education Department) ಸರ್ಕಾರಿ ಕಾರ್ಯಕ್ರಮಗಳು, ರಾಷ್ಟ್ರೀಯ ಹಬ್ಬಗಳ ಆಚರಣೆ ವೇಳೆ ಶಾಲಾ-ಕಾಲೇಜುಗಳ ಇತರೆ ಸಾಂಸ್ಕೃತಿಕ, ಆಡಳಿತಾತ್ಮಕ ಕಾರ್ಯಕ್ರಮ ಆಯೋಜನೆ ವೇಳೆ ವಿದ್ಯಾರ್ಥಿಗಳ ರಕ್ಷಣೆಗೆ ಕ್ರಮಕ್ಕೆ ಆದೇಶ ಹೊರಡಿಸಲಾಗಿದೆ. ಹಲವು ಅಂಶಗಳ ಮಾರ್ಗಸೂಚಿ ಪ್ರಕಟ ಮಾಡಿರುವ ಶಿಕ್ಷಣ ಇಲಾಖೆ, ಈ ಆದೇಶಗಳನ್ನು ಎಲ್ಲಾ ಶಾಲಾ-ಕಾಲೇಜು ಕಡ್ಡಾಯವಾಗಿ ಮಾರ್ಗಸೂಚಿ ಪಾಲನೆಗೆ ಸೂಚಿಸಿದೆ.
ಸೂಚನೆಯಲ್ಲೇನಿದೆ?
- ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಧ್ವಜಾರೋಹಣ ಕಂಬದ ಬಳಿ ವಿದ್ಯುತ್ ತಂತಿಗಳು ಹಾದುಹೋಗದಂತೆ ಕ್ರಮ ವಹಿಸುವುದು.
- ಧ್ವಜಾರೋಹಣ ಕಂಬಕ್ಕೆ, ಧ್ವಜವನ್ನು ಏರಿಸುವ & ಇಳಿಸುವ ಕಾರ್ಯಗಳಿಗೆ ಮಕ್ಕಳನ್ನು ಬಳಸಿಕೊಳ್ಳಬಾರದು.
- ಧ್ವಜಾರೋಹಣಾ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಧ್ವಜ ಸಿಕ್ಕಿಕೊಂಡಲ್ಲಿ ಮಕ್ಕಳನ್ನು ಧ್ವಜಕಂಬಕ್ಕೆ ಹತ್ತಿಸಬಾರದು.
- ಮಕ್ಕಳ ಕವಾಯತು ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆ, ಮಕ್ಕಳು ಕುಳಿತುಕೊಳ್ಳುವ ಸ್ಥಳಗಳು ಸುರಕ್ಷಿತವಾಗಿರುವ ಬಗ್ಗೆ ಆಗಿಂದಾಗ್ಗೆ ಪರಿಶೀಲಿಸುವುದು.
- ಮಕ್ಕಳನ್ನು ಕಾರ್ಯಕ್ರಮ/ಸ್ಪರ್ಧೆಗಳಿಗೆ ಕರೆದುಕೊಂಡು ಹೋಗುವ ಮತ್ತು ಹಿಂದಿರುಗಿ ಕರೆತರುವ ವಾಹನಗಳ ಬಗ್ಗೆ ಪರಿಶೀಲಿಸುವುದು.
- ವಾಹನ ಚಾಲಕರು ವೇಗಮಿತಿಯಲ್ಲಿ ಚಲಿಸುವಂತೆ ಸೂಚನೆ ನೀಡುವುದು.
- ಪ್ರಮುಖವಾಗಿ ಚಾಲಕರು ಮದ್ಯಪಾನ ಮಾಡಿರದ ಬಗ್ಗೆ ಖಚಿತಪಡಿಸಿಕೊಳ್ಳುವುದು.
- ವಾಹನದ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಕರೆದೊಯ್ಯಬಾರದು.
- ಕಾರ್ಯಕ್ರಮ ನಡೆಸುವ ಸ್ಥಳಗಳಲ್ಲಿ ವಿದ್ಯುತ್ ತಂತಿಯಿಂದ ವಿದ್ಯುತ್ ಪ್ರವಹಿಸದಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು.
- ಮಕ್ಕಳು ಸೇರಿದಂತೆ ಸಾರ್ವಜನಿಕರ ಸಂಪರ್ಕಕ್ಕೆ ಬಾರದಂತೆ ವಿದ್ಯುತ್ ತಂತಿಗಳನ್ನು ಅಳವಡಿಸಲು ತಂತ್ರಜ್ಞರಿಗೆ ಸೂಚನೆ ನೀಡುವುದು.
- ವಿದ್ಯುತ್ ತಂತಿಗಳು ಇರುವಲ್ಲಿ ಮಳೆ ನೀರು ಸೋರದಂತೆ & ಇತರೆ ಯಾವುದೇ ಮೂಲದಿಂದ ನೀರು ಹರಿಯದಿರುವ ಬಗ್ಗೆ, ಖಚಿತಪಡಿಸಿಕೊಳ್ಳುವುದು.
- ಮಕ್ಕಳಿಗೆ ನೀಡುವ ನೀರು, ಪಾನೀಯ, ಆಹಾರದ ಶುಚಿತ್ವದ ಬಗ್ಗೆ ಪರಿಶೀಲಿಸುವುದು.
- ಆಹಾರ ತಯಾರಿಸುವ ಸ್ಥಳಗಳಿಗೆ ಮಕ್ಕಳ ಪ್ರವೇಶವನ್ನು ನಿರ್ಬಂಧಿಸುವುದು.
- ಯಾವುದೇ ರೀತಿ ಬೆಂಕಿ ಅವಘಡವಾಗದಂತೆ ಕ್ರಮವಹಿಸುವುದು.
- ಗ್ಯಾಸ್ ಹಾಗೂ ಒಲೆಗಳು ಸಮರ್ಪಕವಾಗಿರುವ ಬಗ್ಗೆ ಪರಿಶೀಲಿಸಿ ನಿಗಾ ವಹಿಸುವುದು.
- ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಸಮರ್ಪಕವಾಗಿ ವಾಹನ ನಿಲುಗಡೆ ಮಾಡಲು ಸೂಚನಾ ಫಲಕಗಳನ್ನು ಅಳವಡಿಸುವುದು.
- ಕಾರ್ಯಕ್ರಮದ ಸ್ಥಳದಿಂದ ಕನಿಷ್ಠ 100 ಮೀಟರ್ ದೂರದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವುದು.
- ಅನಿರೀಕ್ಷಿತವಾಗಿ ಸಂಭವಿಸಬಹುದಾದ ಸನ್ನಿವೇಶಗಳನ್ನು ಎದುರಿಸುವ ಕುರಿತು ಮಕ್ಕಳಿಗೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು.
- ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಹಿರಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡುವುದು.
- ಸ್ಥಳೀಯ ಆಡಳಿತಗಳು ಮಕ್ಕಳ ಸುರಕ್ಷತೆ ಕುರಿತು ಗಮನ ಹರಿಸುವುದು.
- ಎಲ್ಲಾ ಕಾರ್ಯಕ್ರಮಗಳ ಆಯೋಜಕರು, ಸ್ಥಳೀಯ ಪೊಲೀಸ್, ವೈದ್ಯಕೀಯ ವ್ಯವಸ್ಥೆ, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಆಡಳಿತಕ್ಕೆ ಮಕ್ಕಳ ಕಾರ್ಯಕ್ರಮದ ಕುರಿತು ಕಡ್ಡಾಯವಾಗಿ ಮಾಹಿತಿ ಒದಗಿಸುವುದು.
- ಯಾವುದೇ ತುರ್ತು ಸಂದರ್ಭದಲ್ಲಿ ಪ್ರತಿಕ್ರಿಯಿಸಲು ಸದಾ ಸನ್ನದ್ಧ ಸ್ಥಿತಿಯಲ್ಲಿರುವಂತೆ ತಿಳಿಸುವುದು.