ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನೂತನ ಅಧ್ಯಕ್ಷರಾಗಿ ಸಚಿವ ಈಶ್ವರ್ ಖಂಡ್ರೆ ಆಯ್ಕೆ
ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕಪ್ಪ ಅವರ ನಿಧನದಿಂದ ತೆರವಾಗಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಹಲವು ಪ್ರಮುಖ ನಾಯಕರ ಹೆಸರು ಕೇಳಿಬಂದಿತ್ತು. ಆದರೆ ಅಂತಿಮವಾಗಿ ಕಾರ್ಯಕಾರಿ ಸಭೆಯಲ್ಲಿ ಸಚಿವ ಈಶ್ವರ್ ಖಂಡ್ರೆ ಅವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ವೀರಶೈವ ಲಿಂಗಾಯತ ಮಹಾಸಭಾ ನೂತನ ಅಧ್ಯಕ್ಷರಾದ ಸಚಿವ ಈಶ್ವರ್ ಖಂಡ್ರೆ ಅವರಿಗೆ ಸಮಾಜದ ಮುಖಂಡರಿಂದ ಅಭಿನಂದನೆ. -
ಬೆಂಗಳೂರು, ಜ.20: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (All India Veerashaiva Lingayata Mahasabha) ನೂತನ ಅಧ್ಯಕ್ಷರಾಗಿ ಸಚಿವ ಈಶ್ವರ್ ಖಂಡ್ರೆ (Eshwar Khandre) ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕಪ್ಪ ಅವರ ನಿಧನದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಹಲವು ಪ್ರಮುಖ ನಾಯಕರ ಹೆಸರು ಕೇಳಿಬಂದಿತ್ತು. ಆದರೆ ಅಂತಿಮವಾಗಿ ಬೆಂಗಳೂರಿನ ಸಂಘದ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಈಶ್ವರ್ ಖಂಡ್ರೆ ಅವರನ್ನು ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಈ ಹಿಂದೆ ಈಶ್ವರ್ ಖಂಡ್ರೆ ಅವರ ತಂದೆ ಭೀಮಣ್ಣ ಖಂಡ್ರೆ ಅವರು ಕೂಡ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿದ್ದರು. ಬೆಂಗಳೂರಿನ ಸದಾಶಿವನಗರದ ಅರಮನೆ ರಸ್ತೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಗೆ ಶಾಮನೂರು ಶಿವಶಂಕರಪ್ಪ ಅಧ್ಯಕ್ಷರಾಗಿದ್ದರು. ಅವರು ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಈಗ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಹೆಸರು ಕೂಡ ಕೇಳಿ ಬಂದಿತ್ತು. ಲಿಂಗಾಯತ ಪಂಚಪೀಠದ ಪೀಠಾಧಿಪತಿಗಳೊಬ್ಬರು ಯಡಿಯೂರಪ್ಪ ಅವರು ವೀರಶೈವ ಮಹಾಸಭಾದ ಅಧ್ಯಕ್ಷರಾದರೇ, ಸಂತೋಷ ಎಂದು ಸಹ ಹೇಳಿದ್ದರು. ಆದರೆ, ಈಗ ಭಾಲ್ಕಿ ಕ್ಷೇತ್ರದ ಶಾಸಕ, ರಾಜ್ಯದ ಅರಣ್ಯ, ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಅವರನ್ನು ಆಯ್ಕೆ ಮಾಡಲಾಗಿದೆ.
Bhimanna Khandre: ಭೀಮಣ್ಣ ಖಂಡ್ರೆ ಸಮಾಜಮುಖಿ ವ್ಯಕ್ತಿತ್ವದ ಮೇರು ಪರ್ವತ
ಕಾರ್ಯಕಾರಿ ಸಭೆಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ, ಪ್ರಭಾಕರ್ ಕೋರೆ, ವೀರಣ್ಣ ಚರಂತಿಮಠ, ಮಾಜಿ ಸಚಿವರಾದ ರಾಜಶೇಖರ್ ಪಾಟೀಲ್ ಹುಮ್ನಾಬಾದ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.