Karnataka TET: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಗುಡ್‌ನ್ಯೂಸ್; ಟಿಇಟಿ ಪರೀಕ್ಷೆಯಿಂದ ವಿನಾಯಿತಿ
1ರಿಂದ 5ನೇ ತರಗತಿವರೆಗೆ ಬೋಧನೆ ಮಾಡುವ ಶಿಕ್ಷಕರು ಅಗತ್ಯ ವಿಷಯಗಳಲ್ಲಿ ಪದವಿ ಹೊಂದಿದ್ದರೆ ಅಂಥವರಿಗೆ ಟಿಇಟಿ ಕಡ್ಡಾಯ ಎಂಬ ಷರತ್ತನ್ನು ಸಡಿಲಗೊಳಿಸಲಾಗುವುದು. ಅಂತಹ ಶಿಕ್ಷಕರಿಗೆ ಬೋಧನೆಗೆ ಅವಕಾಶ ಮಾಡಿಕೊಡಲು 2025ರ ಅ.16ರಂದು ಹೊರಡಿಸಲಾದ ಕರಡು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಸಂಬಂಧಪಟ್ಟ ವಿಷಯಗಳಲ್ಲಿ ಪದವಿ ಪಡೆದಿರುವ ಪ್ರಾಥಮಿಕ ಶಾಲಾ ಶಿಕ್ಷಕರು, 1 ರಿಂದ 5ನೇ ತರಗತಿಗಳಿಗೆ ಬೋಧನೆ ಮಾಡಲು ಟಿಇಟಿ ಪ್ರಮಾಣಪತ್ರ (Karnataka TET) ಕಡ್ಡಾಯ ಎಂಬ ಷರತ್ತಿನಿಂದ ವಿನಾಯಿತಿ ನೀಡಲಾಗಿದೆ. ಆದರೆ, 6ನೇ ಮತ್ತು 7ನೇ ತರಗತಿಗಳಿಗೆ ಹಾಗೂ ಅದಕ್ಕಿಂತ ಮುಂದುವರಿದ ತರಗತಿಗಳ ಶಿಕ್ಷಕರು ಟಿಇಟಿ ಪ್ರಮಾಣಪತ್ರ ಹೊಂದಿರುವುದು ಅಗತ್ಯವಾಗಿದೆ. ಈ ಬಗ್ಗೆ ರಾಜ್ಯ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ಟಿಇಟಿ (ಶಿಕ್ಷಕರ ಅರ್ಹತಾ ಪರೀಕ್ಷೆ) ಪ್ರಮಾಣಪತ್ರ ಹೊಂದಿರಬೇಕೆಂಬ ಷರತ್ತನ್ನು ಕೈಬಿಟ್ಟು 6 ಮತ್ತು 7ನೇ ತರಗತಿಗಳಿಗೆ ಬೋಧಿಸಲು ಅನುವಾಗುವಂತೆ ತಿದ್ದುಪಡಿ ಮಾಡಿ ಇದೇ ಅ. 16ರಂದು ಹೊರಡಿಸಿದ್ದ ವೃಂದ ಮತ್ತು ನೇಮಕಾತಿ (ತಿದ್ದುಪಡಿ) ಕರಡು ನಿಯಮಗಳಿಗೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು, 1ರಿಂದ 5ನೇ ತರಗತಿವರೆಗೆ ಬೋಧನೆ ಮಾಡುವ ಶಿಕ್ಷಕರು ಅಗತ್ಯ ವಿಷಯಗಳಲ್ಲಿ ಪದವಿ ಹೊಂದಿದ್ದರೆ ಅಂಥವರಿಗೆ ಟಿಇಟಿ ಕಡ್ಡಾಯ ಎಂಬ ಷರತ್ತನ್ನು ಸಡಿಲಗೊಳಿಸಲಾಗುವುದು. ಅಂತಹ ಶಿಕ್ಷಕರಿಗೆ ಬೋಧನೆಗೆ ಅವಕಾಶ ಮಾಡಿಕೊಡಲು 2025ರ ಅ.16ರಂದು ಹೊರಡಿಸಲಾದ ಕರಡು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಂಪುಟ ಸಭೆ ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.
544 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ನೇಮಕಾತಿ; ಹೀಗೆ ಅರ್ಜಿ ಸಲ್ಲಿಸಿ
1ರಿಂದ 5ನೇ ತರಗತಿವರೆಗೆ ಪ್ರಾಥಮಿಕ ಶಿಕ್ಷಣದಲ್ಲಿ ಬೋಧಿಸುವವರಿಗೆ ಟಿಇಟಿ ಬೇಕಿಲ್ಲ. 6 ಮತ್ತು 7ನೇ ತರಗತಿವರೆಗೆ ಹಾಗೂ ಅದರ ಮುಂದಿನ ತರಗತಿಗಳಿಗೆ ಟಿಇಟಿ ಕಡ್ಡಾಯ. ನ್ಯಾಯಾಲಯಗಳಲ್ಲಿ ಈ ಕುರಿತು ಬಂದಿರುವ ಆದೇಶಗಳನ್ನು ಪರಿಶೀಲನೆ ಮಾಡಿಯೇ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
1ರಿಂದ 5ನೇ ತರಗತಿವರೆಗೆ ಬೋಧಿಸುವ ಪ್ರಾಥಮಿಕ ಶಾಲಾ ಶಿಕ್ಷಕರು, ಟಿಇಟಿ ಕಡ್ಡಾಯ ಎಂಬ ನಿಯಮದಿಂದ ಆತಂಕಕ್ಕೆ ಒಳಗಾಗಿದ್ದರು. ಯಾಕೆಂದರೆ ಈಗಾಗಲೇ ನೇಮಕಗೊಂಡು ಹತ್ತಾರು ವರ್ಷ ಸೇವೆ ಸಲ್ಲಿಸಿದವರೂ ಟಿಇಟಿ ಅರ್ಹತೆ ಪಡೆಯಬೇಕಿತ್ತು. ಇದೇ ಕಾರಣಕ್ಕೆ ಇತ್ತೀಚೆಗೆ ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆಯಲ್ಲಿ ಕರ್ನಾಟಕ ಸೇರಿ ದೇಶದ ವಿವಿಧೆಡೆಯಿಂದ ಸಹಸ್ರಾರು ಶಿಕ್ಷಕರು ಪಾಲ್ಗೊಂಡಿದ್ದರು. ಇದೀಗ ಸರ್ಕಾರ ಕೈಗೊಂಡಿರುವ ನಿರ್ಧಾರದಿಂದ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರು ನಿರಾಳರಾಗುವಂತಾಗಿದೆ.
ಟಿಇಟಿ ಕಡ್ಡಾಯ ವಿರೋಧಿಸಿ ಪ್ರಾಥಮಿಕ ಶಾಲಾ ಶಿಕ್ಷಕರಿಂದ ನವದೆಹಲಿಯಲ್ಲಿ ಪ್ರತಿಭಟನೆ
ಸರ್ಕಾರಕ್ಕೆ ಶಿಕ್ಷಕರ ಸಂಘ ಧನ್ಯವಾದ
ಟಿಇಟಿ ಪರೀಕ್ಷೆಯನ್ನು ಕೈಬಿಟ್ಟು 6ರಿಂದ 7ಕ್ಕೆ ಪದವಿ ಪೂರೈಸಿದ ಶಿಕ್ಷಕರನ್ನು ಪರಿಗಣಿಸುವ ಐತಿಹಾಸಿಕ ತೀರ್ಮಾನವನ್ನು ಸಚಿವ ಸಂಪುಟ ಕೈಗೊಂಡಿದೆ. ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹಾಗೂ ಉಳಿದ ಸಚಿವರಿಗೆ ಧನ್ಯವಾದ ಸಲ್ಲಿಸುವುದಾಗಿ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.