ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಕಲಿ ಔಷಧಿ ದಂಧೆ ಕಿಂಗ್‌ಪಿನ್‌ ಪ್ರಶಾಂತ್ ಬಾಬು ದೆಹಲಿ ಪೊಲೀಸರ ಕಸ್ಟಡಿಗೆ; ಬಯಲಾಯ್ತು ಇನ್ನಷ್ಟು ಸತ್ಯ

ದೇಶಾದ್ಯಂತ ಸಂಚಲನ ಮೂಡಿಸಿದ್ದ ನಕಲಿ ಕ್ಯಾನ್ಸರ್ ಔಷಧಿ ತಯಾರಿಕೆ ಮತ್ತು ಮಾರಾಟ ಜಾಲದ ಪ್ರಮುಖ ಸೂತ್ರಧಾರ ಆರ್. ಪ್ರಶಾಂತ್ ಬಾಬು ಎಂಬಾತನನ್ನು ದೆಹಲಿ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಔಷಧಿ ಪೂರೈಸುವುದಾಗಿ ನಂಬಿಸಿ ದೆಹಲಿ ಮೂಲದ ಉದ್ಯಮಿಯೊಬ್ಬರಿಗೆ 2 ಕೋಟಿ ರೂ. ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ.

ಸಂಗ್ರಹ ಚಿತ್ರ

ಬೆಂಗಳೂರು: ದೇಶಾದ್ಯಂತ ಸಂಚಲನ ಮೂಡಿಸಿದ್ದ ನಕಲಿ ಕ್ಯಾನ್ಸರ್ ಔಷಧಿ ತಯಾರಿಕೆ (Fake medicine racket) ಮತ್ತು ಮಾರಾಟ ಜಾಲದ ಪ್ರಮುಖ ಸೂತ್ರಧಾರ ಆರ್. ಪ್ರಶಾಂತ್ ಬಾಬು ಎಂಬಾತನನ್ನು ದೆಹಲಿ ಪೊಲೀಸರು (Delhi Police) ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಔಷಧಿ ಪೂರೈಸುವುದಾಗಿ ನಂಬಿಸಿ ದೆಹಲಿ ಮೂಲದ ಉದ್ಯಮಿಯೊಬ್ಬರಿಗೆ 2 ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ಆತನನ್ನು ದೆಹಲಿಗೆ ಕರೆದೊಯ್ಯಲಾಗಿದೆ.

ದೆಹಲಿಯ ಮೋತಿಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ಬಾಬು ವಿರುದ್ಧ 2 ಕೋಟಿ ರೂ. ವಂಚನೆ ಕುರಿತು ಎಫ್‌ಐಆರ್ ದಾಖಲಾಗಿತ್ತು. ಔಷಧಿಗಳನ್ನು ಪೂರೈಕೆ ಮಾಡುವುದಾಗಿ ಒಪ್ಪಂದ ಮಾಡಿಕೊಂಡು ಹಣ ಪಡೆದಿದ್ದ ಪ್ರಶಾಂತ್, ನಂತರ ಔಷಧಿಯನ್ನೂ ನೀಡದೆ, ಹಣವನ್ನೂ ವಾಪಸ್ ಕೊಡದೆ ವಂಚಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಪ್ರಕರಣದ ಬೆನ್ನುಹತ್ತಿದ್ದ ದೆಹಲಿ ಪೊಲೀಸರಿಗೆ, ಆರೋಪಿ ಪ್ರಶಾಂತ್ ಈಗಾಗಲೇ ಕರ್ನಾಟಕ ಪೊಲೀಸರ ಬಂಧನದಲ್ಲಿದ್ದು, ನ್ಯಾಯಾಂಗ ಬಂಧನದಲ್ಲಿರುವ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿ ಪಡೆದ ದೆಹಲಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನಲ್ಲಿ ಬಯಲಾಗಿದ್ದ ಬೃಹತ್ ದಂಧೆ

ಪ್ರಶಾಂತ್ ಬಾಬು ಬೆಂಗಳೂರಿನ ಹೊರವಲಯದ ತಾವರೆಕೆರೆ ಹಾಗೂ ಬಿಡದಿ ಸಮೀಪದ ಫಾರ್ಮ್‌ಹೌಸ್ ಒಂದರಲ್ಲಿ ಯಾವುದೇ ಸರ್ಕಾರಿ ಪರವಾನಗಿ ಇಲ್ಲದೆ ಅಕ್ರಮವಾಗಿ ಔಷಧಿ ತಯಾರಿಕಾ ಘಟಕವನ್ನು ನಡೆಸುತ್ತಿದ್ದ. ಇಲ್ಲಿ ತಯಾರಾಗುತ್ತಿದ್ದ ಕಳಪೆ ಮತ್ತು ನಕಲಿ ಔಷಧಿಗಳಿಗೆ ಪ್ರತಿಷ್ಠಿತ ಕಂಪನಿಗಳ ಅಸಲಿ ಲೇಬಲ್‌ಗಳನ್ನು ಅಂಟಿಸಿ ಮಾರುಕಟ್ಟೆಗೆ ಬಿಡಲಾಗುತ್ತಿತ್ತು.

ಈ ಅಕ್ರಮದ ಕುರಿತು ಖಚಿತ ಮಾಹಿತಿ ಪಡೆದಿದ್ದ ಕರ್ನಾಟಕದ ವಿಶೇಷ ತನಿಖಾ ದಳ (SIT) ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಕಳೆದ ಆಗಸ್ಟ್ ತಿಂಗಳಲ್ಲಿ ದಾಳಿ ನಡೆಸಿ ಬೃಹತ್ ಜಾಲವನ್ನು ಭೇದಿಸಿದ್ದರು. ದಾಳಿಯ ಸುಳಿವು ಸಿಗುತ್ತಿದ್ದಂತೆ ಆರೋಪಿ ಪ್ರಶಾಂತ್ ವಿದೇಶಕ್ಕೆ (ಅಜರ್‌ಬೈಜಾನ್) ಪರಾರಿಯಾಗಿದ್ದ. ಆತನ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಆತ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿದ ತಕ್ಷಣ ಪೊಲೀಸರು ಬಂಧಿಸಿದ್ದರು.

ಆರೋಪಿ ಖಾತೆಯಲ್ಲಿದ್ದ 9 ಲಕ್ಷ ರು. ಸ್ಥಗಿತ: ನಕಲಿ ಔಷಧಿ ಜಾಲ: 5 ಕಡೆ ಇ.ಡಿ ಶೋಧ

ತನಿಖೆಯ ವೇಳೆ ನಕಲಿ ಔಷಧಿ ಜಾಲದ ವಂಚನೆಯ ವಿಧಾನ ಬಯಲಾಗಿದೆ. ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಎರಡು ಕ್ಯಾನ್ಸರ್ ಇಂಜೆಕ್ಷನ್‌ಗಳನ್ನು ಖರೀದಿಸಿದರೆ ಕಂಪನಿಯು ಒಂದು ಇಂಜೆಕ್ಷನ್ ಉಚಿತವಾಗಿ ನೀಡುತ್ತಿತ್ತು. ಆದರೆ ಈ ಮಾಹಿತಿಯನ್ನು ರೋಗಿಗಳಿಗೆ ತಿಳಿಸದೆ ಕಿಂಗ್‌ಪಿನ್ ಪ್ರಶಾಂತ್ ಬಾಬು ಉಚಿತವಾಗಿ ಸಿಗುತ್ತಿದ್ದ ಇಂಜೆಕ್ಷನ್‌ಗಳನ್ನೂ ಹಣ ಪಡೆದು ಮಾರಾಟ ಮಾಡುತ್ತಿದ್ದ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಒಟ್ಟು ಆರು ರಾಜ್ಯಗಳಲ್ಲಿ ಈ ಔಷಧಿ ಜಾಲ ಕಾರ್ಯನಿರ್ವಹಿಸುತ್ತಿತ್ತು ಎನ್ನಲಾಗಿದೆ. ಸದ್ಯ ದೆಹಲಿ ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ದೆಹಲಿ ಹಾಗೂ ಉತ್ತರ ಭಾರತದ ರಾಜ್ಯಗಳಲ್ಲಿ ಈತನ ಜಾಲಕ್ಕೆ ಯಾರೆಲ್ಲಾ ಸಹಕರಿಸಿದ್ದಾರೆ ಎಂಬುದರ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

Vishakha Bhat Heggar

View all posts by this author