Film Shooting: ಇನ್ಮುಂದೆ ಅರಣ್ಯದಲ್ಲಿ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಕಡ್ಡಾಯ!
Film Shooting: ರಾಜ್ಯದ ಯಾವುದೇ ಅರಣ್ಯ ಪ್ರದೇಶದಲ್ಲಿ ಯಾವುದೇ ಬಗೆಯ ಚಿತ್ರೀಕರಣಕ್ಕೆ ಕಡ್ಡಾಯವಾಗಿ ಸರ್ಕಾರದ ವತಿಯಿಂದ ಅನುಮತಿ ಪಡೆಯಲು ಸೂಕ್ತ ಆದೇಶ ಹೊರಡಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.


ಬೆಂಗಳೂರು: ಟಾಕ್ಸಿಕ್ ಹಾಗೂ ‘ಕಾಂತಾರ ಚಾಪ್ಟರ್ 1’ ಸಿನಿಮಾಗಳ ಶೂಟಿಂಗ್‌ಗಾಗಿ ಅರಣ್ಯ ನಾಶ ಮಾಡಿರುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ಮಾಡಲು ಕೆಲ ಕಠಿಣ ನಿಯಮಗಳನ್ನು ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಅರಣ್ಯ ಪ್ರದೇಶದಲ್ಲಿ ಸಿನಿಮಾ, ಧಾರಾವಾಹಿ, ಸಾಕ್ಷ್ಯಚಿತ್ರ ಸೇರಿ ಇನ್ನಿತರ ಯಾವುದೇ ಚಿತ್ರೀಕರಣಕ್ಕೆ (Film Shooting) ಸರ್ಕಾರದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.
ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಸ್ಪಷ್ಟ ಸೂಚನೆ ನೀಡಿರುವ ಸಚಿವರು, ಚಲನಚಿತ್ರ, ದೂರದರ್ಶನ ಸಾಕ್ಷ್ಯಚಿತ್ರ, ಧಾರಾವಾಹಿ ಇತ್ಯಾದಿ ಚಿತ್ರೀಕರಣಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ನಿಗದಿತ ಶುಲ್ಕ ಕಟ್ಟಿಸಿಕೊಂಡು ಅನುಮತಿ ನೀಡುತ್ತಿದ್ದಾರೆ. ಇದಲ್ಲದೆ ಸ್ಥಳೀಯ ಮಟ್ಟದಲ್ಲೂ ಅಧಿಕಾರಿಗಳು ಅನುಮತಿ ನೀಡುತ್ತಿರುವುದರಿಂದ ಅರಣ್ಯ ಪ್ರದೇಶದ ಗೌಪ್ಯ ಮಾಹಿತಿ ಹೊರ ಜಗತ್ತಿಗೆ ಲಭಿಸುವ ಸಂಭವ ಇರುತ್ತದೆ. ಇದು ಪರಿಸರ ಹಾಗೂ ಜೀವವೈವಿಧ್ಯಕ್ಕೂ ಧಕ್ಕೆ ತರುತ್ತದೆ ಎಂದು ತಿಳಿಸಿದ್ದಾರೆ.
ಅರಣ್ಯ ಹಾಗೂ ವನ್ಯ ಜೀವಿಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ಪ್ರಕೃತಿ ಹಸ್ತಾಂತರಿಸುವ ನಿಟ್ಟಿನಲ್ಲಿ ರಾಜ್ಯದ ಯಾವುದೇ ಅರಣ್ಯ ಪ್ರದೇಶದಲ್ಲಿ ಯಾವುದೇ ಬಗೆಯ ಚಿತ್ರೀಕರಣಕ್ಕೆ ಕಡ್ಡಾಯವಾಗಿ ಸರ್ಕಾರದ ವತಿಯಿಂದ ಅನುಮತಿ ಪಡೆಯಲು ಸೂಕ್ತ ಆದೇಶ ಹೊರಡಿಸುವಂತೆ ಸಚಿವರು ಸೂಚಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Bengaluru International Airport: ಬೆಂಗಳೂರು ವಿಮಾನ ನಿಲ್ದಾಣಕ್ಕೆ ‘ಎಸಿಐ’ನಿಂದ ಪ್ರತಿಷ್ಠಿತ ಮಾನ್ಯತೆ, ಇದನ್ನು ಪಡೆದ ದೇಶದ ಮೊದಲ ಏರ್‌ಪೋರ್ಟ್
ದರ್ಶನ್ ಸೇರಿ 7 ಆರೋಪಿಗಳ ಜಾಮೀನು ರದ್ದತಿಗೆ ಸುಪ್ರೀಂ ನಕಾರ; ಪ್ರತಿವಾದಿಗಳಿಗೆ ನೋಟಿಸ್

ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy murder case) ಆರೋಪಿಗಳಾದ ನಟ ದರ್ಶನ್ (Actor Darshan), ಪವಿತ್ರಾಗೌಡ ಸೇರಿ ಏಳು ಆರೋಪಿಗಳ ಜಾಮೀನು ರದ್ದತಿ ಸೂಕ್ತವಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದ್ದು, ಇದೇ ವೇಳೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ವಿಶೇಷ ಮೇಲ್ಮನವಿಯನ್ನು ಸುಪ್ರೀಂ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಆರ್ ಮಹದೇವನ್ ಅವರ ವಿಭಾಗೀಯ ಪೀಠವು ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ಅವರು, ರೇಣುಕಾಸ್ವಾಮಿ ಕೊಲೆಯು ಆಘಾತಕಾರಿ ಪ್ರಕರಣವಾಗಿದ್ದು, ಹೈಕೋರ್ಟ್ ಇಡೀ ಪ್ರಕರಣವನ್ನು ಮರೆಮಾಚಲು ಪ್ರಯತ್ನಿಸಿದೆ. ರೇಣುಕಾಸ್ವಾಮಿಯನ್ನು ಅಪಹರಿಸಿ ಚಿತ್ರ ಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಪ್ರಕರಣದಲ್ಲಿನ ಸಹ ಆರೋಪಿಗಳು ಹೈಕೋರ್ಟ್‌ನ ತೀರ್ಮಾನಗಳನ್ನು ಆಧಾರವಾಗಿಸಿಕೊಂಡು ಜಾಮೀನು ಪಡೆಯಲು ಅನುಮತಿಸಬಾರದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಹೈಕೋರ್ಟ್ ಆದೇಶದಲ್ಲಿ ದಾಖಲಿಸಿರುವ ತೀರ್ಮಾನಗಳನ್ನು ಬಳಕೆ ಮಾಡಿಕೊಂಡು ಇತರೆ ಆರೋಪಿಗಳು ಜಾಮೀನು ಪಡೆಯಲು ಅನುಮತಿಸಬಾರದು ಎಂದು ರಾಜ್ಯ ಸರ್ಕಾರ ಕೋರಿದೆ. ರಾಜ್ಯ ಸರ್ಕಾರವು ಜಾಮೀನು ರದ್ದತಿ ಕೋರುತ್ತಿರುವುದರಿಂದ ಆಕ್ಷೇಪಾರ್ಹವಾದ ಆದೇಶಕ್ಕೆ ತಡೆ ನೀಡುವುದು ಸೂಕ್ತವಲ್ಲ. ಪ್ರಾಸಿಕ್ಯೂಷನ್ ಹಿತಾಸಕ್ತಿ ರಕ್ಷಿಸುವ ನಿಟ್ಟಿನಲ್ಲಿ ಪ್ರಕರಣದಲ್ಲಿ ಬೇರೆ ಯಾವುದೇ ಆರೋಪಿ ಜಾಮೀನು ಕೋರಿದರೆ ಸಕ್ಷಮ ನ್ಯಾಯಾಲಯವು ಹೈಕೋರ್ಟ್‌ನ ಆಕ್ಷೇಪಾರ್ಹ ಆದೇಶವನ್ನು ಆಧರಿಸಬಾರದು. ಪ್ರಕರಣದಲ್ಲಿನ ಬೇರೆ ಯಾವುದೇ ಆರೋಪಿಯು ಭವಿಷ್ಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದರೆ ಅದನ್ನು ಮೆರಿಟ್ ಮೇಲೆ ನಿರ್ಧರಿಸಬೇಕು ಎಂದು ಆದೇಶಿಸಿ, ವಿಚಾರಣೆ ಮುಂದೂಡಿತು.
2024ರ ಡಿಸೆಂಬರ್ 13ರಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠವು ಆರೋಪಿಗಳಾಗಿರುವ ಪವಿತ್ರಾ ಗೌಡ (ಎ 1), ದರ್ಶನ್ (ಎ 2) ಜಗದೀಶ್ ಜಗ್ಗ ಅಲಿಯಾಸ್ ಜಗ್ಗ (ಎ 6), ಅನುಕುಮಾರ್ ಅಲಿಯಾಸ್ ಅನು (ಎ 7), ಆರ್ ನಾಗರಾಜು (ಎ 11), ಎಂ ಲಕ್ಷ್ಮಣ್ (ಎ 12), ಪ್ರದೋಶ್ ಎಸ್. ರಾವ್ (ಎ 14) ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಇದನ್ನು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್, ಪವಿತ್ರ ಗೌಡ ಸೇರಿ ಇತರೇ ಆರೋಪಿಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಹೈಕೋರ್ಟ್ ದರ್ಶನ್ ಸೇರಿದಂತೆ ಇತರೇ 7 ಆರೋಪಿಗಳಿಗೆ ಮಂಜೂರು ಮಾಡಿದ್ದ ಜಾಮೀನು ರದ್ದು ಕೋರಿ ಬೆಂಗಳೂರು ಪೊಲೀಸರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ, ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ನಡೆಯಿತು.
ಈ ವೇಳೆ ಹೈಕೋರ್ಟ್ ವಿಸ್ತೃತ ಆದೇಶ ಪ್ರಕಟಿಸಿ ಆರೋಪಿಗಳಿಗೆ ಜಾಮೀನು ನೀಡಿದೆ. ಮೆರಿಟ್ ಮೇಲೆ ಕೋರ್ಟ್ ಆದೇಶ ನೀಡಿದೆ. ಹೀಗಾಗಿ ಈ ಅರ್ಜಿಯ ವಿಚಾರಣೆಗೆ ಆರೋಪಿಗಳ ವಾದವನ್ನು ಕೇಳಬೇಕಾಗುತ್ತದೆ ಎಂದು ಹೇಳಿ, ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ ಕೋರ್ಟ್ ವಿಚಾರಣೆಯನ್ನು ಮುಂದೂಡಿತು.
ಈ ಸುದ್ದಿಯನ್ನೂ ಓದಿ | Cabinet Meeting: ಅರಮನೆ ಮೈದಾನ ಭೂಸ್ವಾಧೀನ ವಿವಾದ ಕುರಿತು ಇಂದು ತುರ್ತು ಸಂಪುಟ ಸಭೆ