ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೈವವನ್ನು ದೆವ್ವ ಎಂದು ಕರೆದ ರಣವೀರ್‌ ಸಿಂಗ್‌ ವಿರುದ್ಧ ಎಫ್‌ಐಆರ್

Ranveer Singh: ಗೋವಾದಲ್ಲಿ ನಡೆದ 56ನೇ ಇಂಟರ್‌ನ್ಯಾಷನಲ್​ ಫಿಲ್ಮ್​ ಫೆಸ್ಟಿವಲ್‌ನಲ್ಲಿ ಚಾವುಂಡಿ ದೈವವನ್ನು ದೆವ್ವ ಎಂದು ಕರೆದು ವಿವಾದ ಎಬ್ಬಿಸಿದ್ದ ಬಾಲಿವುಡ್ ನಟ ರಣವೀರ್‌ ಸಿಂಗ್‌ ವಿರುದ್ಧ ಬೆಂಗಳೂರಿನ ಹೈಗ್ರೌಂಡ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ರಣವೀರ್‌ ಸಿಂಗ್‌ (ಸಂಗ್ರಹ ಚಿತ್ರ)

ಬೆಂಗಳೂರು, ಡಿ. 3: ಇತ್ತೀಚೆಗೆ ಗೋವಾದಲ್ಲಿ ನಡೆದ 56ನೇ ಇಂಟರ್‌ನ್ಯಾಷನಲ್​ ಫಿಲ್ಮ್​ ಫೆಸ್ಟಿವಲ್‌ನಲ್ಲಿ (International Indian Film Festival in Goa) ಚಾವುಂಡಿ ದೈವವನ್ನು ದೆವ್ವ ಎಂದು ಕರೆದು ವಿವಾದ ಎಬ್ಬಿಸಿದ್ದ ಬಾಲಿವುಡ್ ನಟ ರಣವೀರ್‌ ಸಿಂಗ್‌ (Ranveer Singh) ಬಳಿಕ ಕ್ಷಮೆಯನ್ನೂ ಕೋರಿದ್ದಾರೆ. ಆದರೆ ಈ ಪ್ರಕರಣ ಇಲ್ಲಿಗೆ ಮುಕ್ತಾಯವಾದಂತೆ ಕಾಣುತ್ತಿಲ್ಲ. ಇದೀಗ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಹೌದು, ರಣವೀರ್‌ ಸಿಂಗ್‌ ವಿರುದ್ಧ ಬೆಂಗಳೂರಿನ ಹೈಗ್ರೌಂಡ್‌ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ ಎಂದು ವರದಿಯೊಂದು ತಿಳಿಸಿದೆ.

ಗೋವಾ ಫಿಲ್ಮ್​ ಫೆಸ್ಟಿವಲ್‌ನಲ್ಲಿ ಸ್ಯಾಂಡಲ್‌ವುಡ್‌ನ ನಟ ರಿಷಬ್‌ ಶೆಟ್ಟಿ ಕೂಡ ಭಾಗವಹಿಸಿದ್ದರು. ಅವರ ʼಕಾಂತಾರ ಚಾಪ್ಟರ್‌ 1' ಚಿತ್ರವನ್ನು ಹೊಗಳುವ ಭರದಲ್ಲಿ ರಣವೀರ್‌ ಸಿಂಗ್‌ ವೇದಿಕೆಯಲ್ಲಿ ತುಳುನಾಡ ದೈವವನ್ನು ದೆವ್ವ ಎಂದು ಕರೆದು ಎಡವಟ್ಟು ಮಾಡಿಕೊಂಡಿದ್ದರು. ಜತೆಗೆ ರಿಷಬ್‌ ಶೆಟ್ಟಿ ಬೇಡ ಎನ್ನುವ ಸೂಚನೆ ನೀಡುತ್ತಿದ್ದರೂ ದೈವವನ್ನು ಅನುಕರಿಸಲು ಹೋಗಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು.

ಕ್ಷಮೆ ಕೋರಿದ್ದ ರಣವೀರ್‌ ಸಿಂಗ್‌

ರಣವೀರ್‌ ಸಿಂಗ್‌ ಅವರ ಈ ನಡೆ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಹಲವರು ಅಕ್ರೋಶ ವ್ಯಕ್ತಪಡಿಸಿದ್ದರು. ಕೊನೆಗೂ ತಮ್ಮ ತಪ್ಪಿನ ಅರಿವಾಗಿ ರಣವೀರ್‌ ಕ್ಷಮೆಯನ್ನೂ ಕೋರಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಂಚಿಕೊಂಡ ರಣವೀರ್‌ ಸಿಂಗ್‌, "ಕಾಂತಾರ ಚಾಪ್ಟರ್‌ 1' ಚಿತರ್ರದಲ್ಲಿನ ರಿಷಬ್ ಅವರ ಅದ್ಭುತ ಅಭಿನಯವನ್ನು ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿತ್ತು. ಆ ನಿರ್ದಿಷ್ಟ ದೃಶ್ಯವನ್ನು ಅವರು ಮಾಡಿದ ರೀತಿಯಲ್ಲಿ ನಿರ್ವಹಿಸುವುದು ಎಷ್ಟು ಕಷ್ಟ ಎಂದು ನನಗೆ ತಿಳಿದಿದೆ. ಅದಕ್ಕಾಗಿ ನಾನು ಅವರು ಮೆಚ್ಚಿಕೊಂಡಿದ್ದೇನೆ. ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಯನ್ನು ನಾನು ಯಾವಾಗಲೂ ಆಳವಾಗಿ ಗೌರವಿಸುತ್ತೇನೆ. ನಾನು ಯಾರ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ" ಎಂದು ರಣವೀರ್‌ ಸಿಂಗ್‌ ಹೇಳಿದ್ದರು.

ದೈವವನ್ನು ದೆವ್ವ ಎಂದು ಅಣಕಿಸಿದ್ದ ರಣವೀರ್‌ ಸಿಂಗ್;‌ ಕೊನೆಗೂ ಕ್ಷಮೆ ಕೇಳಿದ ದೀಪಿಕಾ ಪಡುಕೋಣೆ ಪತಿ

ಏನಿದು ವಿವಾದ?

ವೇದಿಕೆ ಮೇಲೆ ಮಾತನಾಡಿದ್ದ ರಣವೀರ್‌ ಸಿಂಗ್‌, "ಕಾಂತಾರ ಚಾಪ್ಟರ್‌ 1ʼ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದೆ. ಈ ಚಿತ್ರ ನನ್ನನ್ನು ಬಹಳಷ್ಟು ಕಾಡಿದೆ. ವಿಶೇಷವಾಗಿ ಸ್ತ್ರೀ ದೆವ್ವ (ಚಾವುಂಡಿ ದೈವ) ರಿಷಬ್‌ ಶೆಟ್ಟಿ ದೇಹದೊಳಗೆ ಹೋಗುವ ದೃಶ್ಯ ಅದ್ಭುತವಾಗಿತ್ತು. ಇಲ್ಲಿ ಯಾರಾದರೂ ನನ್ನನ್ನು ʼಕಾಂತಾರ 3ʼ ಸಿನಿಮಾದಲ್ಲಿ ನೋಡಲು ಬಯಸುತ್ತೀರಾ?"‌ ಎಂದು ಕೇಳಿದ್ದರು.

ರಣವೀರ್‌ ಸಿಂಗ್‌ ನಡೆದುಕೊಂಡು ರೀತಿ ಸರಿ ಇಲ್ಲ, ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂಬ ಮಾತುಗಳು ಕೇಳಿಬಂದಿದ್ದವು. ಅವರು ಕರ್ನಾಟಕದ ಅಳಿಯ (ನಟಿ ದೀಪಿಕಾ ಪಡುಕೋಣೆ ಪತಿ). ಹಾಗಿದ್ದೂ ನಮ್ಮ ಸಂಸ್ಕೃತಿಯನ್ನು ವೇದಿಕೆ ಮೇಲೆ, ಸಾವರ್ಜನಿಕವಾಗಿ ಅವಮಾನಿಸಿದ್ದು ಸರಿಯಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.

‘ಧುರಂಧರ್’ ಚಿತ್ರದ ಬಿಡುಗಡೆಗೆ ದಿನಗಣನೆ

ಸದ್ಯ ರಣವೀರ್‌ ಸಿಂಗ್‌ ನಟನೆಯ ಬಾಲಿವುಡ್‌ ಚಿತ್ರ ‘ಧುರಂಧರ್’ ಬಿಡುಗಡೆಗೆ ಸಜ್ಜಾಗಿದೆ. ರ‘ಧರುಂಧರ್’ ಸಿನಿಮಾ ಡಿಸೆಂಬರ್ 5ರಂದು ತೆರೆಗೆ ಬರಲಿದೆ. ಸದ್ಯ ರಣವೀರ್‌ ಸಿಂಗ್‌ ಅವರ ದೈವದ ಕುರಿತಾದ ಹೇಳಿಕೆ ಈ ಚಿತ್ರದ ಕಲೆಕ್ಷನ್‌ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎನ್ನುವ ಆತಂಕ ನಿರ್ಮಾಪಕರಿಗೆ ಎದುರಾಗಿದೆ.