Rishab Shetty: ದೈವವನ್ನು ದೆವ್ವ ಎಂದು ಅಣಕಿಸಿದ್ದ ರಣವೀರ್ ಸಿಂಗ್; ಕೊನೆಗೂ ಕ್ಷಮೆ ಕೇಳಿದ ದೀಪಿಕಾ ಪಡುಕೋಣೆ ಪತಿ
Ravneet Singh Controversy: ಗೋವಾದಲ್ಲಿ ನಡೆದ 56ನೇ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು 'ಕಾಂತಾರ ಚಾಪ್ಟರ್ 1' ಚಿತ್ರವನ್ನು ಹೊಗಳುವ ಭರದಲ್ಲಿ 'ಚಾವುಂಡಿ ದೈವ' ವನ್ನು 'ದೆವ್ವ' ಎಂದು ಸಂಭೋಧಿಸಿ ವಿವಾದ ಸೃಷ್ಟಿಸಿದ್ದರು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ರಣವೀರ್ ಸಿಂಗ್ ಕ್ಷಮೆಯಾಚಿಸಿದ್ದಾರೆ.
-
ಈಚೆಗೆ ಗೋವಾದಲ್ಲಿ ನಡೆದ 56 ನೇ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಭಾಗವಹಿಸಿದ್ದರು. ಅದೇ ಸಮಾರಂಭದಲ್ಲಿ ಹಾಜರಿದ್ದ ಕಾಂತಾರ ಚಾಪ್ಟರ್ 1 ಸಿನಿಮಾದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಹೊಗಳುವ ಭರದಲ್ಲಿ ಕರಾವಳಿಯ ದೈವಗಳಿಗೆ ಅಪಮಾನ ಆಗುವಂತೆ ಮಾತನಾಡಿದ್ದರು. ಚಾವುಂಡಿ ದೈವವನ್ನು ದೆವ್ವ ಎಂದು ಕರೆದಿದ್ದರು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಆ ಬಗ್ಗೆ ರಣವೀರ್ ಸಿಂಗ್ ಅವರು ಕ್ಷಮೆ ಕೇಳಿದ್ದಾರೆ.
ಕ್ಷಮೆ ಕೇಳಿದ ನಟ ರಣವೀರ್ ಸಿಂಗ್
ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಂಚಿಕೊಂಡಿರುವ ರಣವೀರ್ ಸಿಂಗ್, "ಆ ಚಿತ್ರದಲ್ಲಿ ರಿಷಬ್ ಅವರ ಅದ್ಭುತ ಅಭಿನಯವನ್ನು ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿತ್ತು. ನಟನಿಂದ ನಟನಿಗೆ, ಆ ನಿರ್ದಿಷ್ಟ ದೃಶ್ಯವನ್ನು ಅವರು ಮಾಡಿದ ರೀತಿಯಲ್ಲಿ ನಿರ್ವಹಿಸಲು ಎಷ್ಟು ತೆಗೆದುಕೊಳ್ಳುತ್ತದೆ ಎಂದು ನನಗೆ ತಿಳಿದಿದೆ, ಅದಕ್ಕಾಗಿ ಅವರು ನನ್ನ ಅತ್ಯಂತ ಮೆಚ್ಚುಗೆಯನ್ನು ಹೊಂದಿದ್ದಾರೆ. ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಯನ್ನು ನಾನು ಯಾವಾಗಲೂ ಆಳವಾಗಿ ಗೌರವಿಸುತ್ತೇನೆ. ನಾನು ಯಾರ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ" ಎಂದು ರಣವೀರ್ ಸಿಂಗ್ ಹೇಳಿದ್ದಾರೆ.
ಅಂದು ರಣವೀರ್ ಸಿಂಗ್ ಹೇಳಿದ್ದೇನು?
ವೇದಿಕೆ ಮೇಲೆ ಮಾತನಾಡಿದ್ದ ರಣವೀರ್ ಸಿಂಗ್, "ಕಾಂತಾರ ಚಾಪ್ಟರ್ 1 ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದೆ ಮತ್ತು ಇದು ಅತ್ಯುತ್ತಮ ಪ್ರದರ್ಶನವಾಗಿತ್ತು, ವಿಶೇಷವಾಗಿ ಸ್ತ್ರೀ ದೆವ್ವ (ಚಾವುಂಡಿ ದೈವ) ರಿಷಬ್ ಶೆಟ್ಟಿ ದೇಹದೊಳಗೆ ಹೋದಾಗ, ಆ ಶಾಟ್ ಅದ್ಭುತವಾಗಿತ್ತು. ಇಲ್ಲಿ ಯಾರಾದರೂ ನನ್ನನ್ನು ಕಾಂತಾರ 3 ರಲ್ಲಿ ನೋಡಲು ಬಯಸುತ್ತೀರಾ? ಈ ವ್ಯಕ್ತಿಗೆ (ರಿಷಬ್) ಹೇಳಿ" ಎಂದು ಹೇಳಿದ್ದರು. ಚಾವುಂಡಿ ದೈವವನ್ನು ದೆವ್ವ ಎಂದು ಸಂಭೋದಿಸಿದ ರಣವೀರ್ ಸಿಂಗ್ ನಡೆಗೆ ವ್ಯಾಪಕ ಆಕ್ರೋಶ ಕೇಳಿಬಂದಿತ್ತು.
ರಣವೀರ್ ಸಿಂಗ್ ಕ್ಷಮೆ ಕೇಳಿರುವ ಪೋಸ್ಟ್
Power of hindus 💪
— Librandu Slayer (@librandu_slayer) December 2, 2025
Ranveer Singh finally apologised in fear of losing business of his new film! pic.twitter.com/WCIbGDZz59
ರಣವೀರ್ ಸಿಂಗ್ ನಡೆದುಕೊಂಡು ರೀತಿ ಸರಿ ಇಲ್ಲ, ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂಬ ಮಾತುಗಳು ಕೇಳಿಬಂದಿದ್ದವು. ಅಲ್ಲದೆ, ಆರಂಭದಲ್ಲೇ ರಿಷಬ್ ಶೆಟ್ಟಿ ಒಂದು ಸೂಚನೆ ನೀಡಿದ್ದರು. ವೇದಿಕೆಗೆ ಆಗಮಿಸಿದ ರಣವೀರ್ ಸಿಂಗ್, ವೇದಿಕೆ ಮುಂಭಾಗದಲ್ಲಿದ್ದ ರಿಷಬ್ ಶೆಟ್ಟಿಗೆ ಎದುರಾಗುತ್ತಾರೆ. ಆಗ ರಣವೀರ್ ಸಿಂಗ್ ಕಾಂತಾರ ಚಿತ್ರದಲ್ಲಿನ ರಿಷಬ್ ನಟನೆಯನ್ನು ಇಮಿಟೇಟ್ ಮಾಡುವ ಪ್ರಯತ್ನ ಮಾಡಿದ್ದರು. ಆಗ ತಕ್ಷಣವೇ, ಈ ರೀತಿ ಮಾಡಬೇಡಿ ಎಂಬಂತೆ ರಿಷಬ್ ಸೂಚನೆ ನೀಡಿದ್ದರು. ಆದರೆ ಆನಂತರ ವೇದಿಕೆ ಮೇಲೆ ಹೋದ ರಣವೀರ್ ಸಿಂಗ್ ದೈವದ ಬಗ್ಗೆ ಈ ರೀತಿ ಎಲ್ಲಾ ಮಾತನಾಡಿದ್ದು ವಿವಾದಕ್ಕೆ ಕಾರಣವಾಗಿತ್ತು.